ಸಾರ್ವಜನಿಕ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಎರಡು ದಶಕಗಳ ಹಿಂದೆ ಜಾರಿಗೆ ತಂದ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (ಎಫ್ಆರ್ಬಿಎಂ) ಕಾಯ್ದೆಯನ್ನು ಮೋದಿ ಸರ್ಕಾರ ಅಪ್ರಸ್ತುತಗೊಳಿಸುತ್ತಿದೆಯೇ? ದೇಶದ ಆರ್ಥಿಕತೆ ಸಾಗಿರುವ ಹಾದಿ, ಸರ್ಕಾರದ ನಿರ್ವಹಣೆ ಸಾಮರ್ಥ್ಯವನ್ನು ಗಮನಿಸಿದರೆ ಈ ಪ್ರಶ್ನೆಗೆ ಉತ್ತರ ಹೌದು ಎಂದೇ ಹೇಳಬೇಕು. ಎಫ್ಆರ್ಬಿಎಂ ಕಾಯ್ದೆಯನ್ನು ರೂಪಿಸಿದ ಮುಖ್ಯ ಉದ್ದೇಶವೇ ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಮತ್ತು ಜವಾಬ್ದಾರಿಯನ್ನು ತರುವುದಾಗಿತ್ತು. ಮಿತಿ ಮೀರಿದ ವಿತ್ತೀಯ ಕೊರತೆಗೆ ಕಡಿವಾಣ ಹಾಕುವುದು ಮತ್ತು ಎಗ್ಗಿಲ್ಲದೇ ಸಾಲ ಮಾಡುವುದಕ್ಕೆ ನಿರ್ಬಂಧ ವಿಧಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶ. 90ರ ದಶಕದಲ್ಲಿ ಉತ್ತರದ ಕೆಲವು ರಾಜ್ಯಗಳು ವಿಪರೀತ ಸಾಲ ಮಾಡುತ್ತಿದ್ದವು. ಸಾಲದ ಪ್ರಮಾಣದ ಮಿತಿ ಮೀರಿ ದಿವಾಳಿಯಾಗುವ ಮಟ್ಟಕ್ಕೆ ಬಂದಿದ್ದವು. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಪಾಲನೆ ಕಡ್ಡಾಯಗೊಳಿಸುವ ಸಲುವಾಗಿ 2000 ರಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಮಸೂದೆಯನ್ನು ಅಂದಿನ ವಿತ್ತ ಸಚಿವ ಯಶವಂತ ಸಿನ್ಹಾ ಸಂಸತ್ತಿನಲ್ಲಿ ಮಂಡಿಸಿದ್ದರು.
ಸುಧೀರ್ಘ ಸಮಾಲೋಚನೆ, ರಾಜಕೀಯ ಪಕ್ಷಗಳ ಪರ ವಿರೋಧ ನಿಲುವುಗಳ ನಡುವೆ 2003ರಲ್ಲಿ ಮಸೂದೆ ಅಂಗೀಕಾರಗೊಂಡು ಕಾಯ್ದೆರೂಪ ಪಡೆಯಿತು. ಆಗ ರಾಜ್ಯಗಳು ಮಾಡುತ್ತಿದ್ದ ಸಾಲದ ಪ್ರಮಾಣವು ಆಯಾ ರಾಜ್ಯಗಳ ಜಿಡಿಪಿಯ ಶೇ.100ರಷ್ಟು ದಾಟುವ ಮಟ್ಟದಲ್ಲಿ ಮತ್ತು ವಿತ್ತೀಯ ಕೊರತೆ ತೀವ್ರ ಪ್ರಮಾಣದಲ್ಲಿತ್ತು ಏರಿತ್ತು. ಪರಿಸ್ಥಿತಿ ಕೈಮೀರಿ ಹೋದರೆ ಸಾಲದ ಪ್ರಮಾಣ ಜಿಡಿಪಿಯ ಶೇ.100ರಷ್ಟನ್ನು ದಾಟಿ, ವಿತ್ತೀಯ ಕೊರತೆಯು ಎರಡಂಕಿ ದಾಟುವ ಅಪಾಯ ಇದೆ ಎಂದರಿತೇ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಯಿತು.
ಸುಧೀರ್ಘ ಅವಧಿಯಲ್ಲಿ ಆಯಾ ರಾಜ್ಯ ಸರ್ಕಾರಗಳ ಮತ್ತು ಕೇಂದ್ರ ಸರ್ಕಾರದ ಸಾಲದ ಮಿತಿಯನ್ನು ಜಿಡಿಪಿಯ ಶೇ.40ಕ್ಕೆ ತಗ್ಗಿಸುವ ಮತ್ತು ವಿತ್ತೀಯ ಕೊರತೆ ಮಿತಿಯನ್ನು ಶೇ.3ಕ್ಕೆ ಕುಗ್ಗಿಸುವ ಗುರಿಯನ್ನು ಹೊಂದಲಾಯಿತು. 2004ರಲ್ಲಿ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ಸರ್ಕಾರ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿತು. ಆರ್ಥಿಕ ಶಿಸ್ತು ಪಾಲನೆ ಮಾಡಿತು. ತತ್ಪರಿಣಾಮ ದೇಶದ ಸಾಲದ ಪ್ರಮಾಣವು ನಿಯಂತ್ರಣಕ್ಕೆ ಬಂದಿದ್ದಲ್ಲದೇ ವಿತ್ತೀಯ ಕೊರತೆ ಪ್ರಮಾಣವು 2007ರಲ್ಲಿ ಶೇ.2.6ಕ್ಕೆ ತಗ್ಗಿ ದಾಖಲೆಯಾಗಿತ್ತು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ 1999ರಲ್ಲಿ ಕೇಂದ್ರ ಸರ್ಕಾರದ ಸಾಲದ ಪ್ರಮಾಣವು ಒಟ್ಟು ಜಿಡಿಪಿಯ ಶೇ.70.0.4ರಷ್ಟಿತ್ತು. ಐದು ವರ್ಷಗಳ ಆಡಳಿತ ನಡೆಸಿದ ವಾಜಪೇಯಿ ಅವರು ಅಧಿಕಾರ ತೊರೆಯುವ ಹೊತ್ತಿಗೆ ದೇಶದ ಒಟ್ಟು ಸಾಲದ ಪ್ರಮಾಣವು ಜಿಡಿಪಿಯ ಶೇ.83.40ಕ್ಕೆ ಜಿಗಿದಿತ್ತು. 2004ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಣಕಾಸು ನಿರ್ವಹಣೆಯಲ್ಲಿ ಕಠಿಣ ಶಿಸ್ತು ಪಾಲಿಸಿದ್ದರಿಂದಾಗಿ ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣ ಕುಗ್ಗುತ್ತಾ ಬಂತು. ಹತ್ತು ವರ್ಷಗಳ ಕಾಲದ ಆರ್ಥಿಕ ಶಿಸ್ತಿನ ಪರಿಣಾಮವಾಗಿ 2014ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಅಧಿಕಾರ ಬಿಟ್ಟಾಗ ದೇಶದ ಒಟ್ಟು ಸಾಲವು ಜಿಡಿಪಿಯ ಶೇ.67.10ಕ್ಕೆ ತಗ್ಗಿಸಿತ್ತು. ಸಾರ್ವಜನಿಕ ಹಣಕಾಸು ನಿರ್ವಹಣೆಯಲ್ಲಿ ಇದು ಮಹತ್ತರವಾದ ಸಂಗತಿ. ದೇಶದ ಸಾಲವನ್ನು ತಗ್ಗಿಸಿದ ಮನಮೋಹನ್ ಸಿಂಗ್ ಸರ್ಕಾರದ ಮೇಲೇ ಸಿಎಜಿ 2ಜಿ ಹಗರಣ ಇತ್ಯಾದಿಗಳ ಆರೋಪ ಹೊರೆಸಿತ್ತು. ಆ ಆರೋಪ ಮಾಡಿದ್ದ ಅಂದಿನ ಸಿಎಜಿ ವಿನೋದ್ ರಾಯ್ ನಂತರ ಮೋದಿ ಸರ್ಕಾರದಲ್ಲಿ ಬ್ಯಾಂಕಿಂಗ್ ಬೋರ್ಡ್ ಬ್ಯೂರೋ ಅಧ್ಯಕ್ಷತೆ ಗಿಟ್ಟಿಸಿಕೊಂಡಿದ್ದು ಬೇರೆಯದೇ ಕತೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಮತ್ತೆ ಸಾರ್ವಜನಿಕ ಹಣಕಾಸು ನಿರ್ವಹಣೆಯಲ್ಲಿ ಅಶಿಸ್ತು ಹೆಚ್ಚಾಯಿತು. ಕೋವಿಡ್ ಸಂಕಷ್ಟ ಅಪ್ಪಳಿಸುವ ಮುನ್ನವೇ ದೇಶದ ಸಾಲದ ಹೊರೆಯನ್ನು ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಮೋದಿ ಸರ್ಕಾರ ಏರಿಸುತ್ತಾ ಬಂದಿದೆ. 2014ರಲ್ಲಿ ಮನಮೋಹನ್ ಸಿಂಗ್ ಅವರು ಅಧಿಕಾರ ತ್ಯಾಜಿಸಿದಾಗ ಸಾಲದ ಪ್ರಮಾಣ ಜಿಡಿಪಿಎ ಶೇ.67.10ರಷ್ಟು ಇದ್ದದ್ದು ಮತ್ತೆ ಏರುಹಾದಿಯಲ್ಲಿ ಸಾಗಿದೆ. 2015ರಲ್ಲಿ ಜಿಡಿಪಿಯ ಶೇ.69.05ಕ್ಕೆ ಜಿಗಿದರೆ, 2017ರಲ್ಲಿ ಶೇ.69.68, 2018ರಲ್ಲಿ ಶೇ.70.44, 2019ರಲ್ಲಿ 74.09 2020ರಲ್ಲಿ 89.61ಕ್ಕೆ ಜಿಗಿದಿದೆ. 2021ರ ಅಂಕಿ ಅಂಶಗಳು ಏಪ್ರಿಲ್ ನಂತರ ಲಭ್ಯವಾಗಲಿವೆ. ಸಾಲದ ಪ್ರಮಾಣ ಜಿಡಿಪಿಯ ಶೇ.100ರಷ್ಟಕ್ಕೆ ಜಿಗಿದಿರುವ ಆಪಾಯವೂ ಇದೆ.
ಇದು ಏನನ್ನು ಸೂಚಿಸುತ್ತದೆ ಎಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ, ಮತ್ತು ಹಣಕಾಸು ನಿರ್ವಹಣೆಯಲ್ಲಿ ಶಿಸ್ತುಪಾಲನೆಯಾಗಿಲ್ಲ, ಪಾರದರ್ಶಕತೆಯನ್ನೂ ಕಾಯ್ದುಕೊಂಡಿಲ್ಲ. ಇದು ದೇಶದ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ.