ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡುವೆ ಏನೇನೂ ಸಮಸ್ಯೆ ಇಲ್ಲ ಎಂದು ಬಿಂಬಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಹಾಗೆ ಬಿಂಬಿಸುವ ಕಾರಣಕ್ಕಾಗಿಯೇ ಮೋದಿ-ಯೋಗಿ ಭೇಟಿಯೂ ಆಗಿದೆ. ಆದರೆ ಮೇಲ್ನೋಟಕ್ಕೆ ಮುಚ್ಚಿರುವಂತೆ ಕಂಡುಬರುತ್ತಿರುವ ಕಂದಕ ಕಡಿಮೆ ಆಗಿಲ್ಲ ಎನ್ನುತ್ತವೆ ಬಿಜೆಪಿ ಉನ್ನತ ಮೂಲಗಳು. ಜೊತೆಗೆ ಸದ್ಯದ ಪ್ರಕಾರ ಆರ್‌ಎಸ್‌ಎಸ್ ನಾಯಕರ ಮಧ್ಯಸ್ಥಿಕೆಯ ನಡುವೆಯೂ ಯೋಗಿ ಆದಿತ್ಯನಾಥ್ ಅವರೇ ಮೇಲುಗೈ ಸಾಧಿಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಯೋಗಿಯೇ ಸಿಎಂ ಅಭ್ಯರ್ಥಿ!
ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವುದು ಪಕ್ಷದ ಸಂಸದೀಯ ಮಂಡಳಿ ಸಭೆ. ಆದರೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬುಧವಾರ ‘ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ’ ಎಂದಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾದ, ದೆಹಲಿ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಅರುಣ್ ಸಿಂಗ್ ಇಂಥದೊಂದು ಹೇಳಿಕೆ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈವರೆಗೆ ಹಲವು ನಾಯಕರು ‘ಯೋಗಿ ಆದಿತ್ಯನಾಥ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದರೇ ವಿನಃ ಯಾರೂ ಕೂಡ ‘ಯೋಗಿ ಆದಿತ್ಯನಾಥ್ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ’ ಎಂದಿರಲಿಲ್ಲ. ಅರುಣ್ ಸಿಂಗ್ ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವುದು ಪಕ್ಷದ ಸಂಸದೀಯ ಮಂಡಳಿ ಸಭೆ, ಆದರೂ ಯೋಗಿ ಆದಿತ್ಯನಾಥ್ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ’ ಎಂದಿದ್ದಾರೆ. ಅರುಣ್ ಸಿಂಗ್ ಬಾಯಲ್ಲಿ ಈ ಮಾತು ಬಂದಿರುವ ಕಾರಣಕ್ಕೆ ಇದು ಹೇಳಿಕೆ ಮಾತ್ರವಾಗಿರದೆ ಪ್ರಕಟಣೆಯ ಸ್ವರೂಪ ಪಡೆದುಕೊಂಡಿದೆ.

ಇದಕ್ಕೆ ವ್ಯತಿರಿಕ್ತವಾಗಿ 2017ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರಾಗಿದ್ದ, ಗೆದ್ದ ಬಳಿಕ ಸಹಜವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆ ಹೊಂದಿದ್ದ, ಮೋದಿ – ಶಾ ಬೆಂಬಲಿಗ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹಾಗೂ ಹಿರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ‘ಚುನಾವಣೆಯ ನಂತರ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಬಿಜೆಪಿಯ ಕೇಂದ್ರ ನಾಯಕತ್ವವು ನಿರ್ಧರಿಸುತ್ತದೆ. ಅಷ್ಟೇಯಲ್ಲ ಚುನಾವಣೆ ಯಾರ ನಾಯಕತ್ವದಲ್ಲಿ ನಡೆಯಬೇಕು ಎಂಬುದನ್ನು ಕೂಡ ರಾಷ್ಟ್ರೀಯ ನಾಯಕರೇ ನಿರ್ಧರಿಸುತ್ತಾರೆ’ ಎಂದು ಹೇಳಿದ್ದರು. ಈ ಮೂಲಕ ‘ಯೋಗಿ ಆದಿತ್ಯನಾಥ್ ಅವರೇ ಎಲ್ಲಾ ಅಲ್ಲ’ ಎಂಬ ಸಂದೇಶ ಕೊಡುವ ಪ್ರಯತ್ನ ಮಾಡಿದ್ದರು.
ಎ.ಕೆ. ಶರ್ಮಾ ಪಕ್ಷಕ್ಕೆ ಸೀಮಿತ
ಯೋಗಿ ಸರ್ಕಾರದ ಮೇಲೆ ಮೋದಿ-ಶಾಗೆ ಹಿಡಿತ ಇಲ್ಲ ಎಂದು ಹೇಳಲಾಗುತ್ತಿದೆ. ಹಿಡಿತ ಸಾಧಿಸುವ ಉದ್ದೆಶದಿಂದಲೇ ಗುಜರಾತ್ ಮೂಲದ ತಮ್ಮ ಆಪ್ತ ನಿವೃತ್ತ ಅಧಿಕಾರಿ ಎ.ಕೆ. ಶರ್ಮಾ ಅವರನ್ನು ಇತ್ತೀಚೆಗೆ ಉತ್ತರ ಪ್ರದೇಶ ವಿಧಾನ ಪರಿಷತ್ ಗೆ ನಾಮಕರಣ ಆಗುವಂತೆ ನೋಡಿಕೊಂಡಿದ್ದರು. ಬಳಿಕ ಎ.ಕೆ. ಶರ್ಮಾ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂದು ಆರ್‌ಎಸ್‌ಎಸ್ ನಾಯಕರ ಮೇಲೆ ಭಾರೀ ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ ಮೋದಿ-ಶಾ ಉದ್ದೇಶವನ್ನರಿತ ಯೋಗಿ ‘ಯಾವ ಕಾರಣಕ್ಕೂ ಎ.ಕೆ. ಶರ್ಮಾ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂದು ಬಿಗಿಪಟ್ಟು ಹಿಡಿದಿದ್ದರು. ಇದೇ ವಿಷಯಕ್ಕೆ ಮೋದಿ-ಯೋಗಿ ನಡುವಿನ ಬಿರುಕು ದೊಡ್ಡದಾಗಿತ್ತು.

ಆದರೀಗ ಎ.ಕೆ. ಶರ್ಮಾ ಅವರನ್ನು ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸರ್ಕಾರದ ಮೇಲೆ ಹಿಡಿತ ಸಾಧಿಸಬೇಕೆಂಬ ವ್ಯಕ್ತಿಯನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿರುವ ಬೆಳವಣಿಗೆಯನ್ನು ‘ಯೋಗಿ ಆದಿತ್ಯನಾಥ್ ಗೆಲುವು, ಮೋದಿ-ಶಾ ಸೋಲು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅರುಣ್ ಸಿಂಗ್ ಅವರು ‘ಯೋಗಿ ಆದಿತ್ಯನಾಥ್ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುತ್ತಾರೆ’ ಎಂದು ಹೇಳಿರುವುದರಿಂದ ಯೋಗಿ ಹಾದಿ ಸಲೀಸಾದಂತಾಗಿದೆ. ಆದರೆ ಯೋಗಿಯ ಹಾದಿ 2022ರ ಚುನಾವಣೆಯಲ್ಲಿ ಗೆದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗುವುದಕ್ಕಷ್ಟೇ ಸೀಮಿತವಾಗಲಿದೆಯೋ ಅಥವಾ 2024ರ ಲೋಕಸಭಾ ಚುನಾವಣೆ ಬಳಿಕ ದೆಹಲಿ ಕಡೆಗೂ ಸಾಗಲಿದೆಯೋ ಎಂಬುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ.







