• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಮೋದಿ, ಅಂಬಾನಿ ಉಲ್ಲೇಖ: ಜೆಫ್ರೀ-ಯಾರು ಈ ಮಕ್ಕಳ ಕಾಮುಕ?

ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳ ಎರಡನೇ ಹಂತದ ಬಿಡುಗಡೆಯಲ್ಲಿ ಪ್ರಧಾನಿ ಮೋದಿ ಹೆಸರಿನ ಉಲ್ಲೇಖಗಳೊಂದಿಗೆ ಹೊರಬಿದ್ದಿದೆ. ಇದು ‘ಬ್ರಾಂಡ್ ಮೋದಿ’ ವರ್ಚಸ್ಸಿಗೆ ಗಂಭೀರ ಆಘಾತ..!

ಪ್ರತಿಧ್ವನಿ by ಪ್ರತಿಧ್ವನಿ
February 3, 2026
in ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ
0
ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಮೋದಿ, ಅಂಬಾನಿ ಉಲ್ಲೇಖ: ಜೆಫ್ರೀ-ಯಾರು ಈ ಮಕ್ಕಳ ಕಾಮುಕ?
Share on WhatsAppShare on FacebookShare on Telegram

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಎದುರಿಸುತ್ತಿರುವ ರಾಜಕೀಯ ಸವಾಲುಗಳು ಒಂದರ ನಂತರ ಒಂದಾಗಿ ಮುಂದುವರಿಯುತ್ತಿವೆ. ಈಗಾಗಲೇ ಯುಜಿಸಿ ಇಕ್ವಿಟಿ ಕಾನೂನು ಕುರಿತ ವಿವಾದದಿಂದ ಸರ್ಕಾರ ಹಿನ್ನಡೆಯನ್ನು ಅನುಭವಿಸಿರುವ ನಡುವೆಯೇ, ಮತ್ತೊಂದು ಅಂತರರಾಷ್ಟ್ರೀಯ ಮಟ್ಟದ ವಿಚಾರ ಆಡಳಿತ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳ ಎರಡನೇ ಹಂತದ ಬಿಡುಗಡೆಯಲ್ಲಿ ಪ್ರಧಾನಿ ಮೋದಿ ಹೆಸರಿನ ಉಲ್ಲೇಖಗಳೊಂದಿಗೆ ಹೊರಬಿದ್ದಿದೆ. ಇದು ‘ಬ್ರಾಂಡ್ ಮೋದಿ’ ವರ್ಚಸ್ಸಿಗೆ ಗಂಭೀರ ಆಘಾತ ಎಂಬಂತೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ADVERTISEMENT
Rahul Gandhi : ಸಂಸತ್‌ನಲ್ಲಿ ರಾಹುಲ್‌ ಗಾಂಧಿಗೆ ಬೆವರಿಳಿಸಿದ ತೇಜಸ್ವಿ #pratidhvani

ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ( US Department Of Justice ) ಬಿಡುಗಡೆ ಮಾಡಿದ ಈ ದಾಖಲೆಗಳ ಪ್ರಮಾಣವೇ ದೊಡ್ಡದು. ಸುಮಾರು 35 ಲಕ್ಷ ಪುಟಗಳ ದಾಖಲೆಗಳು, 2,000ಕ್ಕೂ ಹೆಚ್ಚು ವಿಡಿಯೋಗಳು ಮತ್ತು 1.8 ಲಕ್ಷ ಚಿತ್ರಗಳು ಈ ಬಿಡುಗಡೆಯಲ್ಲಿ ಹೊರಬಿದ್ದಿವೆ. ಈ ಎಲ್ಲ ದಾಖಲೆಗಳು ಜೆಫ್ರಿ ಎಪ್ಸ್ಟೀನ್ನ ಚಟುವಟಿಕೆಗಳಿಗೆ ಸಂಬಂಧಿಸಿದವು. ಎಪ್ಸ್ಟೀನ್ ಒಬ್ಬ ಅಮೆರಿಕನ್ ಬ್ಯಾಂಕರ್‌ ಆಗಿದ್ದು, ಅಪ್ರಾಪ್ತರ ಲೈಂಗಿಕ ಶೋಷಣೆ, ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ ಜಾಲದ ಸಂಚಾಲನೆ ಸೇರಿದಂತೆ ಗಂಭೀರ ಅಪರಾಧಗಳ ಆರೋಪ ಎದುರಿಸಿದ್ದ ವ್ಯಕ್ತಿ. 2019ರ ಆಗಸ್ಟ್ 10ರಂದು ಆತ ನ್ಯೂಯಾರ್ಕ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಘೋಷಿಸಿದ್ದರು. ಆದರೆ, ಆ ಸಾವಿನ ಕುರಿತು ಇಂದಿಗೂ ಅನೇಕ ಅನುಮಾನಗಳು ಉಳಿದಿವೆ.

ಈ ಬಾರಿ ಬಿಡುಗಡೆಯಾದ ದಾಖಲೆಗಳಲ್ಲಿ 2017ರ ಜುಲೈ 9ರಂದು ಎಪ್ಸ್ಟೀನ್ ಬರೆದಿದ್ದಾನೆ ಎನ್ನಲಾದ ಒಂದು ಇಮೇಲ್ ಪ್ರಮುಖ ಚರ್ಚೆಗೆ ಕಾರಣವಾಗಿದೆ. ಆ ಇಮೇಲ್ನಲ್ಲಿ, “ಭಾರತದ ಪ್ರಧಾನಮಂತ್ರಿ ಮೋದಿ ಅಮೆರಿಕದ ಅಧ್ಯಕ್ಷರ ಲಾಭಕ್ಕಾಗಿ ಇಸ್ರೇಲ್ನಲ್ಲಿ ಸಲಹೆ ಪಡೆದರು, ನೃತ್ಯ ಮಾಡಿದರು, ಹಾಡಿದರು. ಅವರು ಕೆಲವು ವಾರಗಳ ಹಿಂದೆ ಭೇಟಿಯಾಗಿದ್ದರು. ಇದು ಕೆಲಸ ಮಾಡಿತು!” ಎಂದು ಬರೆಯಲಾಗಿದೆ ಎಂದು ಬಿಡುಗಡೆಯಾದ ದಾಖಲೆ ಹೇಳುತ್ತದೆ. ಈ ಹೇಳಿಕೆ ನಿಜವೋ ಸುಳ್ಳೋ ಎಂಬುದನ್ನು ಬಿಟ್ಟುಬಿಟ್ಟರೂ, ಪ್ರಧಾನಿ ಹೆಸರು ಇಂತಹ ಪ್ರಕರಣದಲ್ಲಿ ಉಲ್ಲೇಖಗೊಂಡಿರುವುದು ಸಾಕಷ್ಟು ರಾಜಕೀಯ ತಲ್ಲಣ ಸೃಷ್ಟಿಸಿದೆ.

ಈ ಇಮೇಲ್ನ ಸಮಯವನ್ನು ಗಮನಿಸಿದರೆ, ಕೆಲವು ವಾಸ್ತವಿಕ ಸಂಗತಿಗಳು ಸ್ಪಷ್ಟವಾಗುತ್ತವೆ. ನರೇಂದ್ರ ಮೋದಿ ಅವರು 2017ರ ಜೂನ್ 25 ಮತ್ತು 26ರಂದು ವಾಷಿಂಗ್ಟನ್ಗೆ ಭೇಟಿ ನೀಡಿ ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ, ಜುಲೈ 4ರಂದು ಅವರು ಇಸ್ರೇಲ್ಗೆ ಐತಿಹಾಸಿಕ ಭೇಟಿ ನೀಡಿದ್ದರು. ಇದು ಭಾರತೀಯ ಪ್ರಧಾನಿಯೊಬ್ಬರು ಇಸ್ರೇಲ್ಗೆ ಭೇಟಿ ನೀಡಿದ ಮೊದಲ ಘಟನೆಯಾಗಿತ್ತು. ಎಪ್ಸ್ಟೀನ್ ಇಮೇಲ್ ಈ ಅಧಿಕೃತ ಭೇಟಿಗಳ ನಡುವೆ ಬಂದಿರುವುದರಿಂದ, ಸಹಜವಾಗಿಯೇ ರಾಜಕೀಯ ಪ್ರಶ್ನೆಗಳು ಉದ್ಭವಿಸಿದೆ.

ಇದನ್ನೂ ಓದಿ : ಬಾಯಿ ಕ್ಯಾನ್ಸರ್: ನಾಲಿಗೆ, ಒಸಡು ಮತ್ತು ಗಂಟಲಿನಲ್ಲಿ ಕಂಡುಬರುವ ಆರಂಭಿಕ ಲಕ್ಷಣಗಳಿವು!

ಈ ದಾಖಲೆಗಳು ಬಹಿರಂಗವಾದ ಕೂಡಲೇ, ಕಾಂಗ್ರೆಸ್ ಪಕ್ಷ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದೆ. ಜೆಫ್ರಿ ಎಪ್ಸ್ಟೀನ್ನಂತಹ ಅಪರಾಧಿಯಿಂದ ಪ್ರಧಾನಿ ಯಾವ ರೀತಿಯ ಸಲಹೆ ಪಡೆದರು ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಎತ್ತಿದೆ. ಮೋದಿ ಇಸ್ರೇಲ್ನಲ್ಲಿ ಮಾಡಿದ ನಡೆ ‘ಕಾರ್ಯಸಾಧಕ’ ಆಯಿತು ಎಂದು ಎಪ್ಸ್ಟೀನ್ ಹೇಳಿದ್ದಾನೆಂದರೆ, ಅದರಿಂದ ಯಾರು ಲಾಭ ಪಡೆದರು? ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಅದರಿಂದ ಏನು ಪ್ರಯೋಜನವಾಗಿತ್ತು? ಎಂಬ ಪ್ರಶ್ನೆಗಳನ್ನೂ ಕಾಂಗ್ರೆಸ್ ಮುಂದಿಟ್ಟಿದೆ. “ಪ್ರಧಾನಿ ಮೋದಿ, ದೇಶಕ್ಕೆ ಉತ್ತರ ಕೊಡಿ. ನಿಮ್ಮ ಮತ್ತು ಜೆಫ್ರಿ ಎಪ್ಸ್ಟೀನ್ ನಡುವಿನ ಸಂಬಂಧವೇನು?” ಎಂದು ಕಾಂಗ್ರೆಸ್ ಸಾರ್ವಜನಿಕವಾಗಿ ಆಗ್ರಹಿಸಿದೆ.

ಕಾಂಗ್ರೆಸ್ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಇನ್ನಷ್ಟು ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ. 2019ರ ಲೋಕಸಭೆ ಚುನಾವಣೆಯ ಸಮಯದಲ್ಲೂ ಮೋದಿ ಎಪ್ಸ್ಟೀನ್ರನ್ನು ಭೇಟಿಯಾಗಿದ್ದರು ಎಂಬ ಹೇಳಿಕೆಗಳನ್ನು ಅವರು ಮಾಡಿದ್ದಾರೆ. ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ, ಇಂತಹ ಅಪಖ್ಯಾತ ವ್ಯಕ್ತಿಯೊಂದಿಗೆ ಸಂಪರ್ಕ ಏಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಅಲ್ಲದೆ, ವಾಷಿಂಗ್ಟನ್ನಲ್ಲಿ ತಮ್ಮ ಪ್ರಭಾವದ ಬಗ್ಗೆ ಪ್ರಧಾನಿ ದೇಶವನ್ನು ತಪ್ಪು ದಾರಿಗೆಳೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಚಾರದ ಮಧ್ಯೆ, ಎಪ್ಸ್ಟೀನ್ ದಾಖಲೆಗಳ ಇನ್ನೊಂದು ಭಾಗವೂ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ದಿ ಹಿಂದೂ ವರದಿ ಪ್ರಕಾರ, 2017ರಲ್ಲಿ ಉದ್ಯಮಿ ಅನಿಲ್ ಅಂಬಾನಿ, ಜೆಫ್ರಿ ಎಪ್ಸ್ಟೀನ್ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಹಾಗೂ ಸಲಹೆಗಾರ ಜಾರೆಡ್ ಕುಶ್ನರ್ ಮತ್ತು ರಿಪಬ್ಲಿಕನ್ ನಾಯಕ ಸ್ಟೀವ್ ಬ್ಯಾನನ್ ಅವರನ್ನು ಭೇಟಿಯಾಗಿಸಲು ದಿಲ್ಲಿಯ ‘ನಾಯಕತ್ವ’ ಆಸಕ್ತಿ ತೋರಿತ್ತೆಂಬ ಸೂಚನೆಗಳಿವೆ. ಈ ಕುರಿತಾಗಿ ಎಪ್ಸ್ಟೀನ್ ಮತ್ತು ಅಂಬಾನಿ ನಡುವಿನ ಇಮೇಲ್ಗಳ ಉಲ್ಲೇಖಗಳು ದಾಖಲೆಗಳಲ್ಲಿ ಕಂಡುಬಂದಿವೆ. ಅಲ್ಲದೆ, 2019ರ ಮೇ 23ರಂದು ಅನಿಲ್ ಅಂಬಾನಿ ಎಪ್ಸ್ಟೀನ್ರನ್ನು ಭೇಟಿಯಾಗಿದ್ದಾರೆಯೆಂಬ ದಾಖಲೆಗಳೂ ಚರ್ಚೆಗೆ ಬಂದಿವೆ. ಅದಾಗ್ಯೂ, ಈ ಎಲ್ಲ ವಿಷಯಗಳಿಗೆ ಸಂಬಂಧವಿಲ್ಲವೆಂದು ಬಿಜೆಪಿ ಸ್ಪಷ್ಟನೆ ನೀಡಿದೆ.

ಈ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರವಾಗಿ ಪ್ರತಿಕ್ರಿಯಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಎಪ್ಸ್ಟೀನ್ ಇಮೇಲ್ನಲ್ಲಿನ ಉಲ್ಲೇಖಗಳನ್ನು ದೋಷಾರೋಪಿತ ಅಪರಾಧಿಯ ಅಸಂಬದ್ಧ ಪ್ರಲಾಪ ಎಂದು ಕರೆದಿದೆ. 2017ರ ಇಸ್ರೇಲ್ ಅಧಿಕೃತ ಭೇಟಿ ಹೊರತುಪಡಿಸಿ ಉಳಿದ ಎಲ್ಲ ಹೇಳಿಕೆಗಳನ್ನು ತಿರಸ್ಕರಿಸಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಇತ್ತೀಚಿನ ಕೆಲವು ಇಮೇಲ್ಗಳ ಕುರಿತು ಪ್ರತಿಕ್ರಿಯಿಸಲು ಸಚಿವಾಲಯ ನಿರಾಕರಿಸಿದೆ.
ಅಮೆರಿಕದ ಉಪ ಅಟಾರ್ನಿ ಜನರಲ್ ಟಾಡ್ ಬ್ಲಾಂಚ್, ಈ ಬಿಡುಗಡೆಯೊಂದಿಗೆ ಎಪ್ಸ್ಟೀನ್ಗೆ ಸಂಬಂಧಿಸಿದ ದಾಖಲೆಗಳ ಬಹಿರಂಗ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ಯಾರು ಈ ಜೆಫ್ರೀ ಎಪ್ಸ್ಟೀನ್?

ಜೆಫ್ರಿ ಎಪ್ಸ್ಟೀನ್ 1980ರ ದಶಕದಲ್ಲಿ ಅಮೆರಿಕದ ಒಂದು ಖಾಸಗಿ ಶಾಲೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಬೋಧಿಸುವ ಶಿಕ್ಷಕನಾಗಿದ್ದ. ಆ ಶಾಲೆಯಲ್ಲಿಯೇ ಅವನಿಗೆ ಒಬ್ಬ ಶ್ರೀಮಂತ ವಿದ್ಯಾರ್ಥಿಯ ತಂದೆಯ ಪರಿಚಯವಾಗುತ್ತದೆ. ಅದೇ ಪರಿಚಯ ಎಪ್ಸ್ಟೀನ್ನ ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಾಯಿಸಿ ತ್ತು. ಕೆಲವೇ ವರ್ಷಗಳಲ್ಲಿ, ವಾಲ್ಸ್ಟ್ರೀಟ್ನ ಹೂಡಿಕೆ ಜಗತ್ತಿಗೆ ಕಾಲಿಟ್ಟ ಎಪ್ಸ್ಟೀನ್, ಬ್ಯಾಂಕರ್ ಹಾಗೂ ಹಣಕಾಸು ಸಲಹೆಗಾರನಾಗಿ ಗುರುತಿಸಿಕೊಂಡನು.

1990ರ ವೇಳೆಗೆ, ಅಮೆರಿಕದ ಅತ್ಯಂತ ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಹಣವನ್ನು ನಿರ್ವಹಿಸುವ ವ್ಯಕ್ತಿಯಾಗಿ ಎಪ್ಸ್ಟೀನ್ ಹೆಸರು ಕೇಳಿಸತೊಡಗಿತು. ಸಿಎನ್ಎನ್ ವರದಿ ಪ್ರಕಾರ, ಒಂದು ಹಂತದಲ್ಲಿ ಆತ ತನ್ನ ಸಂಸ್ಥೆಯ ಮೂಲಕ ಒಂದು ಬಿಲಿಯನ್ ಡಾಲರ್ಗೂ ಹೆಚ್ಚು ಹಣದ ಹೂಡಿಕೆಯನ್ನು ನೋಡಿಕೊಳ್ಳುತ್ತಿದ್ದ. ಆದರೆ, ಆ ಹಣ ಎಲ್ಲಿಂದ ಬಂದಿತು, ಯಾವ ಸೇವೆಯ ಪ್ರತಿಫಲವಾಗಿ ಎಪ್ಸ್ಟೀನ್ಗೆ ಇಂತಹ ನಂಬಿಕೆ ದೊರಕಿತು ಎಂಬ ಪ್ರಶ್ನೆಗಳು ಆ ಕಾಲದಲ್ಲೇ ಸ್ಪಷ್ಟ ಉತ್ತರ ಕಂಡುಕೊಂಡಿರಲಿಲ್ಲ.

ಹಣದ ಜೊತೆಗೆ ಅಧಿಕಾರವೂ ಎಪ್ಸ್ಟೀನ್ ಬಳಿ ಸೇರತೊಡಗಿತು. ಅಮೆರಿಕದ ನ್ಯೂಯಾರ್ಕ್ನಲ್ಲಿ 8,000 ಚದರ ಅಡಿ ವಿಸ್ತೀರ್ಣದ ಟೌನ್ಹೌಸ್, ಫ್ಲೋರಿಡಾದ ಪಾಮ್ ಬೀಚ್ನಲ್ಲಿ ಭವ್ಯ ಮ್ಯಾನ್ಷನ್, ವರ್ಜಿನ್ ದ್ವೀಪಗಳಲ್ಲಿ ‘ಲಿಟಲ್ ಸೇಂಟ್ ಜೇಮ್ಸ್’ ಎಂಬ ಖಾಸಗಿ ದ್ವೀಪ, ನ್ಯೂ ಮೆಕ್ಸಿಕೋದಲ್ಲಿ ಸಾವಿರಾರು ಎಕರೆ ಜಮೀನು, ಪ್ಯಾರಿಸ್ನಲ್ಲಿ ಅಪಾರ್ಟ್ಮೆಂಟ್—ಹೀಗೆ ಅವನ ಆಸ್ತಿ ಸಾಮ್ರಾಜ್ಯ ಜಗತ್ತಿನಾದ್ಯಂತ ಹರಡಿತ್ತು. ಇದಕ್ಕಿಂತಲೂ ಹೆಚ್ಚು ಕುಖ್ಯಾತಿ ಪಡೆದಿದ್ದದ್ದು ಅವನ ಖಾಸಗಿ ಬೋಯಿಂಗ್ ವಿಮಾನ. ಅದಕ್ಕೆ ‘ಲೊಲಿಟಾ ಎಕ್ಸ್ಪ್ರೆಸ್’ ಎಂಬ ಅಡ್ಡಹೆಸರು ಇತ್ತು.

D. K. Suresh : ಡಿಕೆ ಭರ್ಜರಿ ಡಾನ್ಸ್‌ಗೆ ಜನ ಫಿದಾ  #pratidhvani

ಈ ಎಲ್ಲ ವೈಭವದ ಹಿಂದೆ, ಒಂದು ಭೀಕರ ಗುಟ್ಟು ಅಡಗಿತ್ತು ಎಂಬುದು 2005ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿತು. ಫ್ಲೋರಿಡಾದ ಪಾಮ್ ಬೀಚ್ನಲ್ಲಿ 14 ವರ್ಷದ ಬಾಲಕಿಯೊಬ್ಬಳು ಎಪ್ಸ್ಟೀನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಿದ್ದಂತೆ, ಪ್ರಕರಣ ದಾಖಲಾಗಿತು. ಸ್ಥಳೀಯ ಪೊಲೀಸರ ತನಿಖೆ ಮುಂದುವರಿದಂತೆ, ಇದು ಒಬ್ಬ ವ್ಯಕ್ತಿಯೊಬ್ಬರ ಮೇಲೆ ನಡೆದ ಅಪರಾಧವಲ್ಲ ಎಂಬುದು ಗೊತ್ತಾಯಿತು. ಎಪ್ಸ್ಟೀನ್ ತನ್ನ ನಿವಾಸಕ್ಕೆ ಅಪ್ರಾಪ್ತ ಬಾಲಕಿಯರನ್ನು ‘ಮಸಾಜ್’ ಎಂಬ ನೆಪದಲ್ಲಿ ಕರೆಸಿಕೊಂಡು, ಕ್ರಮೇಣ ಅವರನ್ನು ಲೈಂಗಿಕ ಶೋಷಣೆಗೆ ಒಳಪಡಿಸುತ್ತಿದ್ದ ಎಂಬ ಆರೋಪಗಳು ಹೊರಬಂದವು.

ಎಫ್ಬಿಐ ತನಿಖೆ ಆರಂಭಿಸಿದಾಗ, ಕನಿಷ್ಠ 36ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು ಈ ದಂಧೆಯ ಬಲಿಯಾಗಿರುವುದು ದಾಖಲಾಗಿತ್ತು. ಕೆಲವೊಂದು ಬಾಲಕಿಯರಿಗೆ ಇತರ ಹುಡುಗಿಯರನ್ನು ಕರೆತರುವ ಕೆಲಸಕ್ಕೆ ಹಣ ನೀಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿತು. ಅಂದರೆ, ಇದು ವ್ಯವಸ್ಥಿತ ಲೈಂಗಿಕ ಕಳ್ಳಸಾಗಣೆ ಜಾಲವಾಗಿತ್ತು.

ಆದರೆ, ಈ ಹಂತದಲ್ಲೇ ಅಮೆರಿಕದ ನ್ಯಾಯ ವ್ಯವಸ್ಥೆ ಮೇಲೆ ಗಂಭೀರ ಅನುಮಾನಗಳು ಹುಟ್ಟಿದವು. 2007–08ರಲ್ಲಿ ಎಪ್ಸ್ಟೀನ್ ವಕೀಲರು ಮತ್ತು ಆಗಿನ ಯುಎಸ್ ಅಟಾರ್ನಿ ಅಲೆಕ್ಸ್ ಅಕೋಸ್ಟಾ ಕಚೇರಿ ನಡುವೆ ರಹಸ್ಯ ಒಪ್ಪಂದವೊಂದು ನಡೆದಿತು. ಜೀವಾವಧಿ ಶಿಕ್ಷೆಗೂ ಒಳಪಡುವಂತಹ ಆರೋಪಗಳಿದ್ದರೂ, ಎಪ್ಸ್ಟೀನ್ ಕೇವಲ 18 ತಿಂಗಳ ಶಿಕ್ಷೆಯಿಂದ ತಪ್ಪಿಸಿಕೊಂಡನು. ಅದೂ ಕೂಡಾ ವಿಶೇಷ ಸೌಲಭ್ಯಗಳೊಂದಿಗೆ. ಜೈಲಿನಲ್ಲಿದ್ದರೂ, ದಿನಕ್ಕೆ ಹಲವು ಗಂಟೆಗಳ ಕಾಲ ಹೊರಗೆ ಹೋಗಿ ಕಚೇರಿ ಕೆಲಸ ಮಾಡುವ ಅವಕಾಶವನ್ನು ಅವನಿಗೆ ನೀಡಲಾಗಿತ್ತು.

ಇದನ್ನೂ ಓದಿ : ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

ಈ ಒಪ್ಪಂದವು ಎಪ್ಸ್ಟೀನ್ಗೆ ಎರಡನೇ ಜೀವನವನ್ನೇ ಕೊಟ್ಟಿತು. ಶಿಕ್ಷೆಯ ಅವಧಿಯಲ್ಲಿಯೇ, ಹಾಗೂ ನಂತರದ ವರ್ಷಗಳಲ್ಲಿಯೂ, ಅವನು ತನ್ನ ದಂಧೆಯನ್ನು ಮುಂದುವರೆಸಿದ್ದಾನೆ ಎಂಬ ಆರೋಪಗಳು ಮುಂದುವರಿದವು. ಆದರೆ, ಅವನ ಸಂಪರ್ಕ ಜಾಲ ಅಷ್ಟು ಬಲಿಷ್ಠವಾಗಿತ್ತು ಎಂಬ ಕಾರಣಕ್ಕೆ, ಪ್ರಕರಣಗಳು ಮೌನವಾಗಿ ಮುಚ್ಚಲ್ಪಡುತ್ತಲೇ ಹೋದವು.

ಈ ಮೌನವನ್ನು ಮುರಿದದ್ದು 2017ರಲ್ಲಿ ಮಿಯಾಮಿ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ತನಿಖಾ ವರದಿ. ಪತ್ರಕರ್ತೆ ಜೂಲಿ ಕೆ. ಬ್ರೌನ್ ಅವರು ರಹಸ್ಯ ಒಪ್ಪಂದಗಳನ್ನು ಬಯಲಿಗೆಳೆದ ನಂತರ, ಎಪ್ಸ್ಟೀನ್ ಹಗರಣ ಅಮೆರಿಕಾದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು. “ನ್ಯಾಯವನ್ನು ಹಣದಿಂದ ಖರೀದಿಸಬಹುದೇ?” ಎಂಬ ಪ್ರಶ್ನೆ ಮತ್ತೆ ಮತ್ತೆ ಕೇಳಿಸಲಾಯಿತು.

ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ, 2019ರ ಜುಲೈನಲ್ಲಿ ಎಪ್ಸ್ಟೀನ್ ಅನ್ನು ಮತ್ತೆ ಬಂಧಿಸಲಾಯಿತು. ಈ ಬಾರಿ ಅಪ್ರಾಪ್ತರ ಲೈಂಗಿಕ ಕಳ್ಳಸಾಗಣೆ ಮತ್ತು ಮಾನವ ಸಾಗಣೆ ಆರೋಪಗಳು ಗಂಭೀರವಾಗಿದ್ದವು. ವಿಚಾರಣೆ ಆರಂಭವಾದರೆ, ಅನೇಕ ದೇಶಗಳ ರಾಜಕಾರಣಿಗಳು, ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರುಗಳು ಹೊರಬೀಳುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇತ್ತು.

ಆದರೆ, ಆ ನಿರೀಕ್ಷೆ ಎಂದಿಗೂ ನಿಜವಾಗಲಿಲ್ಲ. ವಿಚಾರಣೆ ಆರಂಭವಾಗಬೇಕಿದ್ದ ಕೆಲವೇ ದಿನಗಳ ಮುನ್ನ, 2019ರ ಆಗಸ್ಟ್ 10ರಂದು, ಎಪ್ಸ್ಟೀನ್ ನ್ಯೂಯಾರ್ಕ್ ಜೈಲಿನೊಳಗೆ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಅಧಿಕೃತವಾಗಿ ಅದು ಆತ್ಮಹತ್ಯೆ ಎಂದು ಹೇಳಲಾಯಿತು. ಆದರೆ, ಭದ್ರತಾ ಕ್ಯಾಮೆರಾಗಳು ಕೆಲಸ ಮಾಡುತ್ತಿರಲಿಲ್ಲ, ಕಾವಲುಗಾರರು ಸಮಯಕ್ಕೆ ತಪಾಸಣೆ ನಡೆಸಿರಲಿಲ್ಲ ಎಂಬ ಅಂಶಗಳು ಅನುಮಾನಗಳನ್ನು ಮತ್ತಷ್ಟು ಗಟ್ಟಿಗೊಳಿಸಿದವು.
ಎಪ್ಸ್ಟೀನ್ ಸತ್ತೊಡನೆ, ಅವನೊಂದಿಗೆ ಸಂಪರ್ಕ ಹೊಂದಿದ್ದ ಅನೇಕ ಪ್ರಭಾವಿಗಳ ಹೆಸರುಗಳು ಶಾಶ್ವತವಾಗಿ ಮೌನಕ್ಕೆ ಜಾರಿದವು. ಈ ಕಾರಣಕ್ಕಾಗಿಯೇ, “ಎಪ್ಸ್ಟೀನ್ ಸಾಯಲಿಲ್ಲ, ಕೊಲ್ಲಲ್ಪಟ್ಟನು” ಎಂಬ ವಾದ ಇಂದಿಗೂ ಜೀವಂತವಾಗಿದೆ.

2021ರಲ್ಲಿ, ಎಪ್ಸ್ಟೀನ್ನ ದೀರ್ಘಕಾಲದ ಗೆಳತಿ ಗಿಸ್ಲೇನ್ ಮ್ಯಾಕ್ಸ್ವೆಲ್ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆಕೆ ಅಪ್ರಾಪ್ತರನ್ನು ಲೈಂಗಿಕ ದಂಧೆಗೆ ನೇಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಯಿತು. ಆದರೆ, ಎಪ್ಸ್ಟೀನ್ನ ಜಾಲದ ಸಂಪೂರ್ಣ ಚಿತ್ರ ಇನ್ನೂ ಸಾರ್ವಜನಿಕವಾಗಿ ಬಯಲಾಗಿಲ್ಲ. ಅದಕ್ಕಾಗಿಯೇ, ಎಪ್ಸ್ಟೀನ್ಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕು ಎಂಬ ಒತ್ತಡ ಅಮೆರಿಕದಲ್ಲಿ ವರ್ಷಗಳ ಕಾಲ ಮುಂದುವರಿದಿದೆ. ಇತ್ತೀಚಿನ ದಾಖಲೆಗಳ ಬಿಡುಗಡೆಯು ಆ ದೀರ್ಘ ಹೋರಾಟದ ಫಲವಾಗಿದ್ದು, ಅದೇ ವೇಳೆ, ಅನೇಕ ಹಳೆಯ ಪ್ರಶ್ನೆಗಳನ್ನು ಮತ್ತೆ ಜೀವಂತಗೊಳಿಸಿದೆ.

Tags: AmericaBJPcongressCongress leader Pawan KheraDonald TrumpEmail messageGovt of IndiaInternational Exposeinternational newsJeffrey Epsteinkarnataka newslatest newsPM Narendra Modipolitical newsPratidhvaniRahul Gandhisex offendersex scandalUS Department of Justice
Previous Post

ವಿಶ್ವ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಪಾಕ್‍ನ ಉದ್ದೇಶಕ್ಕೆ ಭಾರತ ಚೆಕ್‍ಮೆಟ್..!

Next Post

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

Related Posts

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ
ಇದೀಗ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

by ಪ್ರತಿಧ್ವನಿ
February 6, 2026
0

ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ‌ ಇಟ್ಟ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ಸ್ನೇಹಿತ ವೈಶಾಕ್ ಎಂಬಾತನನ್ನ HAL ಪೊಲೀಸರು ಬಂಧಿಸಿದ್ದಾರೆ. ಜ....

Read moreDetails
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

February 6, 2026
BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

February 6, 2026
Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

February 6, 2026
Next Post
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada