ಕೋವಿಡ್ ಸೋಂಕಿತರು ಉಸಿರಾಟದ ಗಂಭೀರ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಆಮ್ಲಜನಕ ಸಿಗದೆ, ಔಷಧ ಸಿಗದೆ, ಆಸ್ಪತ್ರೆಯಲ್ಲಿ ಪ್ರವೇಶ ಸಿಗದೆ ಹಾದಿ ಬೀದಿಯಲ್ಲಿ ಜೀವ ಬಿಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತೀರಾ ಗುರುತು ಪರಿಚಿತರೇ ಇಂತಹ ಜೀವ ಹಿಂಡುವ ದುರಂತಕ್ಕೆ ಈಡಾಗುತ್ತಿದ್ದಾರೆ.
ಇಂಥ ದುರವಸ್ಥೆಯ ನಡುವೆ ರಾಜ್ಯದ ಜನತೆ ಜೀವ ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯುತ್ತಿರುವಾಗ ಸರ್ಕಾರದ ಆದ್ಯತೆಗಳು ಏನಾಗಬೇಕಿತ್ತು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಆದ್ಯತೆ ಏನಾಗಿದೆ ಎಂಬುದಕ್ಕೆ ಇಂದಿನ ದಿನಪತ್ರಿಕೆಗಳ ಮುಖಪುಟ ಸಾಕ್ಷಿಯಾಗಿದೆ.

ಆಮ್ಲಜನಕದ ಸಿಲಿಂಡರ್ ಇಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ಸೇರಿಸಿಕೊಳ್ಳದೇ ಹೊರಹಾಕಲಾಗುತ್ತಿದೆ. ಆಮ್ಲಜನಕ ಉತ್ಪಾದನೆಗೆ, ಔಷಧಿ ಖರೀದಿಗೆ, ಕೋವಿಡ್ ಲಸಿಕೆ ಖರೀದಿಗೆ, ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ, ಅವರಿಗೆ ಅಗತ್ಯ ಜೀವರಕ್ಷಕ ಸಲಕರಣೆ, ಸೌಲಭ್ಯ ಒದಗಿಸಲು, ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ನೆಪ ಹೇಳಲಾಗುತ್ತಿದೆ. ಪರಿಣಾಮವಾಗಿ ದಿನಕ್ಕೆ ನೂರಾರು ಮಂದಿ ಸಕಾಲಿಕ ಚಿಕಿತ್ಸೆ ಸಿಗದೆ, ಆಮ್ಲಜನಕ ಸಿಗದೆ ಜೀವ ಬಿಡುತ್ತಿದ್ದಾರೆ.
ಆದರೆ, ಮತ್ತೊಂದು ಕಡೆ ಸುಮಾರು 14,800 ಕೋಟಿ ರೂಪಾಯಿ ಅಂದಾಜು ವೆಚ್ಚದ ಬೆಂಗಳೂರು ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ಪಡೆದುಕೊಂಡಿದೆ! ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಭವಿಷ್ಯದ ಸಂಚಾರ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂತಹದ್ದೊಂದು ಕಾಮಗಾರಿಯ ಅಗತ್ಯವನ್ನು ಯಾರೂ ನಿರಾಕರಿಸಲಾಗದು. ಆದರೆ, ಆ ಕಾಮಗಾರಿಗೆ ಸಾವಿರಾರು ಕೋಟಿ ಸುರಿದು ಈಗಲೇ ಕಾಮಗಾರಿ ಆರಂಭಿಸಬೇಕಾದ ತುರ್ತು ಏನಿತ್ತು ಎಂಬುದು ಪ್ರಶ್ನೆ. ಕರೋನಾದಿಂದ ಇಡೀ ರಾಜ್ಯದ ಜನರ ಜೀವವೇ ಅಪಾಯದಲ್ಲಿರುವಾಗ ಜನರ ಜೀವ ರಕ್ಷಣೆ ಮತ್ತು ಅದಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾದ ಸೌಲಭ್ಯ-ಸೇವೆಗಳಿಗೆ ಹಣದ ಕೊರತೆ ಇದೆ ಎನ್ನುವ ಸರ್ಕಾರ, ಅದೇ ಹೊತ್ತಿಗೆ ಹೀಗೆ ತೀರಾ ಒಂದೆರಡು ವರ್ಷ ವಿಳಂಬವಾದರೂ ಪ್ರಳಯವೇನೂ ಆಗದ ಇಂತಹ ರೈಲ್ವೆ ಯೋಜನೆಗೆ ಸಾವಿರಾರು ಕೋಟಿ ಹೂಡುತ್ತಿರುವುದು ಈ ಬಿಜೆಪಿ ಸರ್ಕಾರಕ್ಕೆ ಜನರ ಜೀವಕ್ಕಿಂತ ಬೃಹತ್ ಯೋಜನೆಗಳೇ ಆದ್ಯತೆ ಎಂಬುದನ್ನು ಸಾರಿ ಹೇಳುತ್ತಿದೆ.
ಬೃಹತ್ ಯೋಜನೆಗಳಿಗೆ ಹೀಗೆ ತರಾತುರಿಯಲ್ಲಿ ಅನುಮೋದನೆ ಪಡೆದು, ಹಣ ಹೂಡಲು ಕಾರಣ ಹಲವು. ಮುಖ್ಯವಾಗಿ ಬೃಹತ್ ಯೋಜನೆಗಳ ಕಾಮಗಾರಿಯಲ್ಲಿ ಸಿಗುವ ಪರ್ಸೆಂಟೇಜ್ ಕಮೀಷನ್ ಆಳುವ ಮಂದಿಯಿಂದ ಇಂತಹ ಅವಿವೇಕದ ಕೆಲಸ ಮಾಡಿಸುತ್ತದೆ. ಅದರ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರ ವಿಷವರ್ತುಲದ ಹುನ್ನಾರ ಅಡಗಿದೆ ಎಂಬುದು ಗುಟ್ಟೇನು ಅಲ್ಲ.
ಆ ಹಿನ್ನೆಲೆಯಲ್ಲಿ ಅನುಮೋದನೆ ಪಡೆದ ಸಿಎಂ ಯಡಿಯೂರಪ್ಪ, ಅನುಮೋದನೆ ಕೊಟ್ಟಿರುವ ಪ್ರಧಾನಿ ಮೋದಿ, ಬಿಜೆಪಿ ಪಕ್ಷಗಳಿಗೆ ಜನ ನಿಮ್ಮ ಆದ್ಯತೆ ಏನು ಎಂಬ ಪ್ರಶ್ನೆ ಮುಂದಿಟ್ಟು ತೀವ್ರ ಟೀಕೆಗೆ ಗುರಿಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಕನ್ನಡ ದಿನಪತ್ರಿಕೆಗಳಲ್ಲಿ ಇಂದು ಪ್ರಕಟವಾಗಿರುವ ಪೂರ್ಣಪುಟದ ಮುಖಪುಟ ಜಾಹೀರಾತಿನ ಚಿತ್ರಗಳನ್ನು ಹಂಚಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡದ ಪ್ರಜಾವಾಣಿ, ವಿಜಯವಾಣಿ, ವಿಜಯಕರ್ನಾಟಕ, ಕನ್ನಡಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಹೊಸದಿಗಂತ ಸೇರಿದಂತೆ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಚಿತ್ರಗಳೇ ತುಂಬಿದ್ದು, ಮೆಟ್ರೋ ಯೋಜನೆ ಎರಡನೇ ಹಂತಕ್ಕೆ ಅನುಮೋದನೆ ನೀಡಿದ್ದಕ್ಕಾಗಿ ಸಿಎಂ, ಪಿಎಂಗೆ ಧನ್ಯವಾದ ಅರ್ಪಿಸಲು ಈ ಜಾಹೀರಾತು ನೀಡಲಾಗಿದೆ. ಕೇಂದ್ರ ಸರ್ಕಾರವೊಂದು ರಾಜ್ಯ ಸರ್ಕಾರಕ್ಕೆ, ರೈಲ್ವೆಯಂತಹ ಕೇಂದ್ರದ ಪಟ್ಟಿಗೆ ಸೇರುವ ಕಾಮಗಾರಿಯ ಯೋಜನೆಗೆ ಅನುಮೋದನೆ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ ಮತ್ತು ಸಹಜ ಆಡಳಿತಾತ್ಮಕ ಪ್ರಕ್ರಿಯೆ. ಅದಕ್ಕಾಗಿ ಪ್ರಧಾನಿಗೆ ಧನ್ಯವಾದ ಹೇಳಲು ಕರ್ನಾಟಕವೇನೂ ಭಾರತದ ಒಕ್ಕೂಟ ವ್ಯವಸ್ಥೆಯಿಂದ ಹೊರಗಿರುವ ಯಾವುದೋ ದೇಶದ ಭಾಗವೇ? ಎಂದು ನೆಟ್ಟಿಗರು ಸಿಎಂ ಮತ್ತು ಕರ್ನಾಟಕ ಸರ್ಕಾರದ ಭಟ್ಟಂಗಿತನವನ್ನು ಪ್ರಶ್ನಿಸಿದ್ದಾರೆ.
ಇದೇ ಮಾತನ್ನೂ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡ ಪ್ರಸ್ತಾಪಿಸಿದ್ದು, ರಾಜ್ಯದ ಜನತೆ ಕರೋನಾ ಚಿಕಿತ್ಸೆ ಸಿಗದೆ ಸಾಯುತ್ತಿರುವಾಗ, ಇಡೀ ಸಮಾಜವೇ ಗಂಡಾಂತರದಲ್ಲಿ ಸಿಲುಕಿರುವಾಗ ಇಂತಹ ಯೋಜನೆಗೆ ಹಣ ಕೊಟ್ಟದ್ದನ್ನೇ ನೆಪ ಮಾಡಿಕೊಂಡು ಕೋಟ್ಯಂತರ ರೂಪಾಯಿ ಜಾಹೀರಾತು ನೀಡಿ ಪ್ರಧಾನಿ ಮೋದಿಯ ಗುಣಗಾನ ಮಾಡುವುದು ಹೊಣೆಗೇಡಿತನ. ಜನ ನೋವಿನಲ್ಲಿರುವಾಗ ಪ್ರಧಾನಿಯ ನಗುಮೊಗದ ಜಾಹೀರಾತು ನೀಡಿ, ಜನರ ನೋವನ್ನು ಅಣಕಿಸಲಾಗುತ್ತಿದೆ. ಇದು ಆತ್ಮಸಾಕ್ಷಿಯ ನಡೆಯಲ್ಲ” ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಜನ ಸಾವುನೋವಿನಲ್ಲಿ ನರಳುತ್ತಿರುವಾಗ, ಜನರ ಜೀವ ಉಳಿಸುವುದು ಆದ್ಯತೆಯಾಗಬೇಕಾದ ಹೊತ್ತಲ್ಲಿ ಸಾವಿರಾರು ಕೋಟಿ ಮೆಟ್ರೋ ಯೋಜನೆಗೆ ಅನುಮೋದನೆ ನೀಡಿ, ನೂರಾರು ರೂಪಾಯಿ ಔಷಧ, ಆಮ್ಲಜನಕಕ್ಕೆ ದುಡ್ಡಿಲ್ಲವೆಂದು ಜನರನ್ನು ಹಾದಿಬೀದಿ ಹೆಣ ಮಾಡುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಜನರ ಸಂಕಷ್ಟದ ನಡುವೆ ಮೂರ್ನಾಲ್ಕು ಕೋಟಿ ರೂ. ಜಾಹೀರಾತು ನೀಡಿ, ನಗುಮೊಗದ ಪೋಜು ಕೊಟ್ಟು ಬಡವರ ಸಂಕಷ್ಟ ಅಣಕಿಸುವುದು ಮತ್ತೊಂದು ಕಡೆ! ಇದು ಬಿಜೆಪಿಯ ಜನಪರ ಆಡಳಿತಕ್ಕೆ ಒಂದು ತಾಜಾ ನಿದರ್ಶನ ಎಂಬ ನೆಟ್ಟಿಗರ ಆಕ್ರೋಶಕ್ಕೆ ಎಚ್ ಡಿ ಕುಮಾರಸ್ವಾಮಿ ತಮ್ಮ ಟ್ವೀಟ್ ಮೂಲಕ ದನಿ ನೀಡಿದ್ದಾರೆ.












