ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಪಕ್ಷವು 12 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಸ್ಥಾನ ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪಕ್ಷವು 11 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವಿನ ನಗೆ ಬಿರಿದ್ದಾರೆ.
25 ಕ್ಷೇತ್ರಗಳಿಗೆ ಡಿ.10 ರಂದು ಚುನಾವಣೆ ನಡೆದು ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಪಕ್ಷವು 12 ಸ್ಥಾನ ಗೆಲ್ಲುವುದರೊಂದಿಗೆ ವಿಧಾನ ಪರಿಷತ್ ನಲ್ಲಿ ಬಹುಮತ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತವಾಗಿ ಬಿಜೆಪಿಯಲ್ಲಿ 32, ಕಾಂಗ್ರೆಸ್ ನಲ್ಲಿ 29 ಹಾಗೂ ಜೆಡಿಎಸ್ ನಲ್ಲಿ12 ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. 2022 ರ ಜನವರಿಯಲ್ಲಿ ವಿಧಾನ ಪರಿಷತ್ ನ ಸದಸ್ಯರ ಪೈಕಿ ಬಿಜೆಪಿಯಿಂದ 6, ಕಾಂಗ್ರೆಸ್ ನಿಂದ 14, ಜೆಡಿಎಸ್ ನಿಂದ 4 ಮತ್ತು 1 ಸ್ವತಂತ್ರ ಸ್ಥಾನಗಳು ತೆರವಾಗಲಿವೆ. ಪರಿಷತ್ ನಲ್ಲಿ ಬಹುಮತ ಸಾಧಿಸಲು ಒಟ್ಟು 75 ಸ್ಥಾನಗಳ ಪೈಕಿ ಕನಿಷ್ಠ 38 ಸ್ಥಾನ ಪಡೆಯಬೇಕು. ಚುನಾವಣೆ ನಡೆದ ಕ್ಷೇತ್ರಗಳ ಹೊರತು ಪಡಿಸಿದರೆ ಬಿಜೆಪಿ ಪ್ರಸ್ತುತ ಸದಸ್ಯರ ಬಲ 26 ಇದ್ದು, ಈಗ 12 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಬಹುಮತದ ಗುರಿ ಮುಟ್ಟಿದೆ ಎಂದೇ ಹೇಳಬಹುದು.
ಈ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಿ 11 ಸ್ಥಾನಗಳಲ್ಲಿ ಜಯ ಸಾಧಿಸಿದೆ. ದ್ವಿಸದಸ್ಯ ಕ್ಷೇತ್ರವಾದ ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಣತಂತ್ರ ಬುಡಮೇಲಾಗಿದ್ದು, ಬೆಳಗಾವಿಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ.
ಇತ್ತ ಬೊಮ್ಮಾಯಿ ಸರ್ಕಾರದಲ್ಲಿ ವಿಧಾನ ಪರಿಷತ್ ನಿಂದ ಏಕೈಕ ಸಚಿವರಾಗಿದ್ದ ಶ್ರೀನಿವಾಸ ಪೂಜಾರಿ ಮತ್ತೆ ಗೆಲವು ಸಾಧಿಸಿದ್ದು, ಸಭಾ ನಾಯಕರಾಗಿ ಅವರೇ ಮುಂದುವರೆಯುವ ಸಾಧ್ಯತೆ ಇದೆ. ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ವಂಶದ ಕುಡಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಅವರು ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆದ್ದು ಮೊದಲ ಬಾರಿಗೆ ಪರಿಷತ್ ಗೆ ಪ್ರವೇಶಿಸಿದ್ದಾರೆ.
ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಹೀನಾಯ ಸೋಲು
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಗೆ ಜಯ ಸಾಧಿಸಿದ್ದಾರೆ. ಇವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕಿರಿಯ ಸಹೋದರರಾಗಿದ್ದು ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ತಮ್ಮ ಹಾಗೂ ಬಿಜೆಪಿಯನ್ನು ಗೆಲ್ಲಿಸುವ ವಾಗ್ದಾನ ಮಾಡಿದ್ದರು. ಆದರೆ ಅವರ ರಣತಂತ್ರ ಬಿಜೆಪಿ ಮುಳುವಾಗಿದ್ದು ಪಕ್ಷದ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಪ್ರತಿಕ್ಷೆಯ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ.
3 ಮತಗಳಲ್ಲಿ ಸೋತ ಕಾಂಗ್ರೆಸ್!
ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಾಣೇಶ ಅವರು 1188 ಮತ ಪಡೆದು ಗೆಲವು ಕಂಡಿದ್ದಾರೆ. ಸಮೀಪದ ಸ್ಪರ್ಧಿ ಕಾಂಗ್ರೆಸ್ ನ ಗಾಯಿತ್ರಿ ಶಾಂತೇಗೌಡ ಅವರು 1186 ಮತ ಪಡೆದು ಕೇವಲ 3 ಮತಗಳಿಂದ ಸೋಲು ಕಂಡಿದ್ದಾರೆ. ಈಗ ಕಾಂಗ್ರೆಸ್ ಮರು ಎಣಿಕೆ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಕಾಂಗ್ರೆಸ್ ತಿಳಿಸಿದೆ.
ಉತ್ತರ ಕನ್ನಡಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲವು
ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಗೆಲವು ಕಂಡಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಸೋಲನುಭವಿಸಿದ್ದಾರೆ.
ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಕಾಂಗ್ರೆಸ್ ಅಭ್ಯರ್ಥಿ ಮಥರ್ ಗೌಡ ವಿರುದ್ಧ ಗೆಲುವಿನ ನಗೆ ಬಿರಿದ್ದಾರೆ. ಬೆಂಗಳೂರು ಗ್ರಾಮಾಂತರ-ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್ ರವಿ ಮರು ಆಯ್ಕೆ ಆಗಿದ್ದು, ಜೆಡಿಎಸ್ ಅಭ್ಯರ್ಥಿ ರಮೇಶ ಗೌಡ ಸೋಲು ಅನುಭವಿಸಿದ್ದಾರೆ. ಹಾಗೆಯೇ ಕಲಬುರಗಿ – ಯಾದಗಿರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಗೆಲವು ಕಂಡಿದ್ದರೆ , ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವವಿರುವ ಕ್ಷೇತ್ರವಾದ ಮೈಸೂರು – ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರು ನಿರೀಕ್ಷೆಯಂತೆ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲವು ಸಾಧಿಸಿದ್ದಾರೆ. ಈ ಕುರಿತು ತಿಮ್ಮಯ್ಯ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರ ಕಾರ್ಯತಂತ್ರ ವೇ ನನ್ನ ಗೆಲುವಿಗೆ ಕಾರಣ ಎಂದಿದ್ದಾರೆ.
ಕೆಜಿಎಫ್ ಬಾಬು ಸೋಲು
ಬೆಂಗಳೂರು ನಗರ ಕ್ಷೇತ್ರದ ಅಭ್ಯರ್ಥಿ ಎಚ್ ಎಸ್ ಗೋಪಿನಾಥ ಅವರು 400 ಮತಗಳ ಅಂತರಿಂದ ಗೆಲವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಾಬು ಅವರು ಸೋಲು ಕಂಡಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ಸಂತೋಷದಿಂದಲೇ ಬಂದ ಬಾಬು ಸೋತ ಸುದ್ದಿ ಕೇಳಿ ಆಟೋ ಹತ್ತಿ ಹೊರಟು ಹೋದರು. ಆ ವಿಡಿಯೋ ಚೂರು ವೈರಲ್ ಆಗಿದೆ.
ಇನ್ನು ಧಾರವಾಡದಲ್ಲಿ ಹೊರಗಿನ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರು ಗೆಲುವಿನ ನಗೆ ಕಂಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ಗೆಲುವು. ಸಿದ್ದಾಂತ ಮತ್ತು ನಾಯಕತ್ವಕ್ಕೆ ಸಿಕ್ಕ ಜಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್ ವಿರುದ್ಧ ಜಯ ಸಾಧಿಸಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, “ಇದು ಹಣಬಲ ಹಾಗೂ ಜನಬಲದ ನಡುವೆ ನಡೆದ ಚುನಾವಣೆಯಾಗಿದೆ. ಕ್ಷೇತ್ರದ ಹೊರಗಿನ ಅಭ್ಯರ್ಥಿ ಬದಲು ಮನೆ ಮಗನಿಗೆ ಮತದಾರರು ಮಣೆ ಹಾಕಿದ್ದಾರೆ ಎಂದಿದ್ದಾರೆ.