ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ(Winter session) ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಮುಖ್ಯಮಂತ್ರಿ(CM) ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದು ಘೋಷಣೆ ಕೂಗಿದ್ದಾರೆ.

ಅಲ್ಲದೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬೆಳಗಾವಿಗೆ ಸ್ವಾಗತ ಕೋರಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ನಲ್ಲಿ , ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ(Channaraj Hattiholi) ಕೂಡ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಎಂದು ಉಲ್ಲೇಖಸಿದ್ದಾರೆ. ಬಳಿಕ ಈ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ ಬದಲಾಯಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ಚನ್ನರಾಜ ಹಟ್ಟಿಹೊಳಿ, ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿರುವುದು ಟೈಪಿಂಗ್‌ನಲ್ಲಿ ಆದ ತಪ್ಪು, ಅದನ್ನು ಕೂಡಲೇ ಸರಿ ಪಡಿಸಿದ್ದೇವೆ ಎಂದಿದ್ದಾರೆ.

ಮಾತು ಮುಂದುವರಿಸಿ ಡಿ.ಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ ಅವರು, ʼಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿದ್ದಾರೆ. ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡುವ ಮೂಲಕ ಪಕ್ಷದ ಬದ್ಧತೆ ಮೆರೆದಿದ್ದಾರೆ. ಅವರು ಸಿಎಂ ಆಗಲಿ ಅಂತ ನನ್ನ ಸೇರಿದಂತೆ ಇಡೀ ರಾಜ್ಯದ ಜನರ ಆಸೆಯಾಗಿದೆ. ಆದರೆ ಈ ವಿಷಯದಲ್ಲಿ ಅಂತಿಮವಾಗಿ ಹೈಕಮಾಂಡ್ ನಿರ್ಧರಿಸಲಿದೆ.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಸಿಎಂ ಆಗಬೇಕೆಂದು ಡಿ.ಕೆ ಶಿವಕುಮಾರ್ ಯಾವತ್ತೂ ಅಪೇಕ್ಷೆ ಮಾಡಿಲ್ಲ. ಡಿಕೆ ಸಿಎಂ ಎನ್ನುವುದು ರಾಜ್ಯದ ಜನರ ಬಯಕೆಯಾಗಿದೆ ಎನ್ನುವ ಮೂಲಕ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಹೇಳಿಕೆ ನೀಡಿದ ಯತೀಂದ್ರ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.












