ಬೀದರ್:ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಸಚಿವರಾದ ಶರಣಬಸಪ್ಪ ದರ್ಶನಾಪುರ್ ಅವರನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಬಲ್ಲೂರ(ಜೆ) ನಲ್ಲಿ ನಿರ್ಮಿಸಬೇಕಿರುವ ಸಿಪೆಟ್ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಾಜಿ) ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕೆಂದು ಒತ್ತಾಯಿಸಿದರು.
ಕಾಮಗಾರಿ ಕುರಿತು ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಶಾಸಕರು, ಔರಾದ(ಬಿ) ಮತಕ್ಷೇತ್ರದಲ್ಲಿ ಯಾವುದೇ ಕೈಗಾರಿಕಾ ಕೇಂದ್ರಗಳು ಇಲ್ಲದಿರುವುದರಿಂದ ವಿದ್ಯಾಭ್ಯಾಸ ಮುಗಿದ ನಂತರ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ನಂತಹ ನಗರಗಳಲ್ಲಿ ಅಲೆದಾಡಬೇಕಾದ ಪರಿಸ್ಥಿತಿಯಿದೆ. ನಮ್ಮ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕೆಂದು ನಿರಂತರವಾಗಿ ಶ್ರಮಿಸುತ್ತಿದ್ದೇನೆ.
ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಸತತ ಪ್ರಯತ್ನಪಟ್ಟು ಔರಾದ(ಬಿ) ಕ್ಷೇತ್ರಕ್ಕೆ ಸಿಪೆಟ್ ಕೇಂದ್ರವನ್ನು ಮಂಜೂರು ಮಾಡಿಸಿ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಪಡೆದಿದ್ದೆ. ನಂತರ ಔರಾದ(ಬಿ) ತಾಲ್ಲೂಕಿನ ಬಲ್ಲೂರ(ಜೆ)ನಲ್ಲಿ ಅವಶ್ಯಕ ಜಮೀನು ಒದಗಿಸಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ. ಯುವಕರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಈ ಯೋಜನೆ ತುರ್ತಾಗಿ ಆರಂಭಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಕಾಮಗಾರಿಯ ಮಹತ್ವದ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಯುವಜನತೆಯ ಭವಿಷ್ಯದ ಹಿತದೃಷ್ಟಿಯಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾಮಗಾರಿ ಆರಂಭಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯ ಸರ್ಕಾರದಿಂದ ಆಗಬೇಕಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಔರಾದ(ಬಿ) ತಾಲ್ಲೂಕಿನಲ್ಲಿ ಸಿಪೆಟ್ ಕೇಂದ್ರ ಆರಂಭಿಸಬೇಕೆಂಬುದು ನನ್ನ ಬಹುದಿನಗಳ ಕನಸಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 90 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಳ್ಳಲಿದೆ. ಈ ಕೇಂದ್ರದಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದ್ದಾರೆ.