ಬೆಂಗಳೂರು : 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ದಾವಣಗೆರೆ ಜಿಲ್ಲೆ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಪ್ರಶಾಂತ್ ಸೇರಿದಂತೆ ಐವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿನ್ನೆ ಮಾಡಾಳ್ ಪ್ರಶಾಂತ್ರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ಇಂದು ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದರು.
ಬೆಂಗಳೂರು ಜಲಮಂಡಳಿಯಲ್ಲಿ ಚೀಫ್ ಅಕೌಂಟೆಂಟ್ ಆಗಿರುವ ಮಾಡಾಳು ಪ್ರಶಾಂತ್ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ (ಕೆಎಸ್ ಡಿಎಲ್) (KSDL) ಕೆಮಿಕಲ್ ಪೂರೈಸುವ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗುತ್ತಿಗೆಗದಾರರಿಗೆ ಕಾರ್ಯಾದೇಶ ನೀಡಲು ಲಂಚದ ರೂಪದಲ್ಲಿ ರೂ. 40 ಲಕ್ಷ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಕಚೇರಿಯಲ್ಲಿ ತಂದೆ ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಪ್ರಶಾಂತ್ನನ್ನು ಬಂಧಿಸಿದ್ದರು.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಮಾಡಾಳ್ ಪ್ರಶಾಂತ್ರನ್ನು ಜಲಮಂಡಳಿ ಚೀಫ್ ಅಕೌಂಟೆಂಟ್ ಆಗಿ ನಿಯೋಜನೆಗೊಳಿಸಲಾಗಿತ್ತು . ಟೆಂಡರ್ ಕೊಡಿಸಲು 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ವಿರೂಪಾಕ್ಷಪ್ಪ ಪರವಾಗಿ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸಲು ಪ್ರಶಾಂತ್ ತೆರಳಿದ್ದ ಸಂದರ್ಭದಲ್ಲಿ ಈ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದು ಇದುವರೆಗೂ 7.62 ಕೋಟಿ ರೂಪಾಯಿ ಮೊತ್ತದ ನಗದನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.