ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಹೇಳಿದ ಹೇಳಿಕೆ ವಿವಾದವಾಗುತ್ತಿದ್ದಂತೆ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಅವರು ಹೇಳಿದ ಹೇಳಿಕೆ ಸದ್ಯ ಭಾರೀ ವಿವಾದವಾಗಿ ಮಾರ್ಪಟ್ಟಿದೆ. ತಮ್ಮ ಘನತೆ ಮರೆತು ರಮೇಶ್ ಕುಮಾರ್ ಮಾತನಾಡಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ ೬೯ ರಡಿ ಚರ್ಚೆ ನಡೆಯುತ್ತಿತ್ತು. ಆ ವೇಳೆ ಸದನದಲ್ಲಿ ಹಲವು ಸದಸ್ಯರು ಒಮ್ಮಿಗಿಲೇ ಎದ್ದು ನಿಂತು ತಮ್ಮ ಭಾಗದ ಸಮಸ್ಯೆಗಳ ಕುರಿತು ಸದನದ ಗಮನಕ್ಕೆ ತರುತ್ತಿದ್ದರು. ಆ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಅವರು ಪ್ರತಿಕ್ರಿಯಿಸುತ್ತಾ, ಸದಸ್ಯರೆಲ್ಲ ಏಕಾಏಕಿ ಮಾತನಾಡಲು ಮುಂದಾಗುತ್ತಿದ್ದಾರೆ. ಒಮ್ಮಿಗಿಲೇ ಇವರ ದಾಳಿಯನ್ನ ಹೇಗೆ ಸಹಿಸುವುದು ಎಂದು ತಮಾಷೆಯ ದಾಟಿಯಲ್ಲಿ ಹೇಳಿದರು.
ಕಾಗೇರಿ ಅವರ ಈ ಹೇಳಿಕೆಗೆ ತಕ್ಷಣವೇ ಎದ್ದು ನಿಂತು ಪ್ರತಿಕ್ರಿಯಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, “ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ” (when repe is inevitable, lay back and enjoy) ಎಂದು ತಮಾಷೆಯಾಗಿ ಹೇಳಿ ಕುಳಿತರು. ಸದನ ನಗೆಗಡಲಲ್ಲಿ ತೇಲಿತು. ನಂತರ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ವಿವಾದವಾಗಿ ಮಾರ್ಪಟ್ಟಿತು.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಈ ಬಗ್ಗೆ ಟ್ವೀಟ್ ಮಾಡಿ, “ಅತ್ಯಾಚಾರದಂತಹ ಮಹಿಳೆಯರ ಮೇಲಿನ ಅಪರಾಧಗಳನ್ನು ತಮಾಷೆಯ ವಿಷಯವೆಂದು ಭಾವಿಸುವ ಈ ಶಾಸಕ ರಮೇಶ್ ಕುಮಾರ್ ಅವರನ್ನು ಸಂವಿಧಾನಿ ಸ್ಥಾನವಾದ ಅಸೆಂಬ್ಲಿಯ ಸ್ಪೀಕರ್ ಆಗಿ ಆಯ್ಕೆಮಾಡಲಾಗಿತ್ತು,” ಎಂದಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ರಮೇಶ್ ಕುಮಾರ್ ಕೂಡಲೇ ಅವರು ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾರೆ. ಅತ್ಯಾಚಾರ! ಕುರಿತು ವಿಧಾನಸಭಾ ಅಧಿವೇಶನದಲ್ಲಿ ನಾನು ಹೇಳಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಮಾತಿಗಾಗಿ ನಾನು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನನ್ನ ಉದ್ದೇಶವು ಕ್ಷುಲ್ಲಕಗೊಳಿಸುವುದು ಅಥವಾ ಘೋರ ಅಪರಾಧವನ್ನು ಹಗುರಗೊಳಿಸುವುದು ಅಲ್ಲ. ಆದರೆ ಒಂದು ತಮಾಷೆಯ ಹೇಳಿಕೆ ಅಷ್ಟೇ! ಇನ್ಮುಂದೆ ಎಚ್ಚರ ವಹಿಸಿ ಮಾತನಾಡುತ್ತೇನೆ ಎಂದಿದ್ದಾರೆ.
ಕಲಾಪದಲ್ಲೇ ಕ್ಷಮೇಯಾಚಿಸಿದ ಮಾಜಿ ಸ್ಪೀಕರ್
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ರಮೇಶ್ ಕುಮಾರ್ ಅವರು ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. “ಹೆಣ್ಣಿಗೆ ಅವಮಾನಿಸುವ, ಹಗುರವಾಗಿ ಮಾತಾಡುವ ಉದ್ದೇಶ ನನ್ನದಾಗಿರಲಿಲ್ಲ. ಮಾತನಾಡುವ ಭರದಲ್ಲಿ ನನ್ನಿಂದ ತಪ್ಪಾಗಿದೆ. ಇದಕ್ಕೆ ಕ್ಷಮೆ ಕೇಳಲು ನನಗೆ ಹಿಂಜರಿಯುವುದಿಲ್ಲ. ಗ್ರಹಚಾರಕ್ಕೆ ಸ್ಪೀಕರ್ ನನ್ನ ಹೆಸರು ಹೇಳಿದಾಗ ಪ್ರತಿಕ್ರಿಯಿಸಿದೆ. ಅದು ಹೆಸರಾಂತ ಇಂಗ್ಲಿಷ್ ಚಿಂತಕರ ಹೇಳಿಕೆ. ಅದನ್ನು ಉಲ್ಲೇಖಿಸಿದ್ದೆ ಅಷ್ಟೇ. ಈ ವಿಚಾರಕ್ಕೆ ಇಲ್ಲಿಗೇ ಅಂತ್ಯ ಹಾಡಿ ಕಲಾಪ ಮುಂದುವರಿಸೋಣ ಎಂದು ತಿಳಿಸಿದರು.