ಉತ್ತರಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಶಾಲಾ ಶಿಕ್ಷಕಿರೊಬ್ಬರು ಏಳು ವರ್ಷದ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಇತರೆ ಸಹಪಾಠಿ ವಿದ್ಯಾರ್ಥಿಗಳಿಗೆ ಆದೇಶಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಗು ಖುಬಾಪುರ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಶುವಿಹಾರದಲ್ಲಿ ಓದುತ್ತಿದ್ದು, ರೈತ ಇರ್ಷಾದ್ ತ್ಯಾಗಿ ಎಂಬವರ ಮಗುವಿಗೆ ಶಿಕ್ಷಕಿ ಹಲವು ವಿದ್ಯಾರ್ಥಿಗಳಿಂದ ಹೊಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಕ್ಕಳು ಸರದಿಯಂತೆ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದು, ಪೆಟ್ಟು ತಿನ್ನುತ್ತಿರುವ ಮಗು ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ.
ಶಿಕ್ಷಕಿಯನ್ನು ತೃಪ್ತ ತ್ಯಾಗಿ ಎಂದು ಗುರುತಿಸಲಾಗಿದೆ.
ಎಷ್ಟು ಮಹಮ್ಮದೀಯನ್ (ಮುಸ್ಲಿಂ) ಮಕ್ಕಳಿದ್ದಾರೋ ಅಷ್ಟು ಮಂದಿಗೆ (ಹೊಡೆಯಲು ಆದೇಶಿಸಿದ್ದೇನೆ). ಮುಸ್ಲಿಂ ತಾಯಂದಿರು ತಮ್ಮ ಮಕ್ಕಳಿಗೆ ಸರಿಯಾದ ಶಿಸ್ತು ಕಲಿಸಿಕೊಡುವುದಿಲ್ಲ. ಹಾಗಾಗಿ, ಅವರ ಮಕ್ಕಳಿಗೆ ಈ ರೀತಿ ಮಾಡಿಯೇ ಶಿಸ್ತು ಕಲಿಸಬೇಕಾಗುತ್ತದೆ ಎಂದು ಶಿಕ್ಷಕಿ ಸಮರ್ಥನೆಯನ್ನೂ ಕೂಡಾ ನೀಡಿದ್ದಾಳೆ.
ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಶಿಕ್ಷಕಿ, ʼಇದೊಂದು ಕ್ಷುಲ್ಲಕ ಸಂಗತಿ. ಆ ವಿದ್ಯಾರ್ಥಿ ಹೋಮ್ ವರ್ಕ್ ಮಾಡುತ್ತಿರಲಿಲ್ಲ. ನಾನು ಅಂಗವಿಕಲೆಯಾಗಿರುವುದರಿಂದ ನನಗೆ ಹೊಡೆಯಲು ಆಗಲಿಲ್ಲ. ಹಾಗಾಗಿ, ಕೆಲವು ವಿದ್ಯಾರ್ಥಿಗಳಿಂದ ಅವನಿಗೆ ಹೊಡೆಸಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಮನ್ಸೂರ್‌ಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್, ”ನಾವು ವೀಡಿಯೊವನ್ನು ನೋಡಿದ ನಂತರ ಆ ಮಗು ಮತ್ತು ಅವನ ಪೋಷಕರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಶಿಕ್ಷಕಿ ವಿರುದ್ಧ ಪ್ರಕರಣವನ್ನೂ ದಾಖಲಿಸುತ್ತೇವೆ” ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ ಕೂಡ ಪ್ರತಿಕ್ರಿಯಿಸಿದ್ದು, ”ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.
ಘಟನೆ ಬಗ್ಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವರುಣ್ ಗಾಂಧಿ ಸೇರಿದಂತೆ ಹಲವು ರಾಜಕಾರಣಿಗಳು, ಚಿಂತಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕಿಯ ಆಘಾತಕಾರಿ ವರ್ತನೆ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷಬೀಜ ಬಿತ್ತುವುದು, ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯಾಗಿ ಪರಿವರ್ತಿಸುವುದು- ಇದಕ್ಕಿಂತ ಹೆಚ್ಚಿನ ಕೇಡನ್ನು ಓರ್ವ ಶಿಕ್ಷಕಿ ದೇಶಕ್ಕೆ ಮಾಡಲು ಸಾಧ್ಯವಿಲ್ಲ. ಇದೇ ಸೀಮೆಎಣ್ಣೆಯನ್ನು ಭಾರತದ ಮೂಲೆ ಮೂಲೆಗೆ ಬಿಜೆಪಿ ಹರಡಿ ಬೆಂಕಿ ಹಚ್ಚಿದೆ. ಮಕ್ಕಳು ಭಾರತದ ಭವಿಷ್ಯ-ಅವರನ್ನು ದ್ವೇಷಿಸಬೇಡಿ, ನಾವೆಲ್ಲರೂ ಒಟ್ಟಾಗಿ ಪ್ರೀತಿಯನ್ನು ಕಲಿಸಬೇಕುʼ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಘಟನೆಗೆ ಪ್ರಿಯಾಂಕಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದು, “ನಮ್ಮ ಭವಿಷ್ಯದ ತಲೆಮಾರಿಗೆ ನಾವು ಯಾವ ರೀತಿಯ ಕ್ಲಾಸ್‌ರೂಮ್‌ಗಳನ್ನು ಹಾಗೂ ಸಮಾಜವನ್ನು ಕೊಡಲು ಬಯಸುತ್ತಿದ್ದೇವೆ? ಚಂದ್ರನಿಗೆ ಹೋಗುವ ತಂತ್ರಜ್ಞಾನದ ಬಗ್ಗೆ ಮಾತಾಡಬೇಕೋ ಅಥವಾ ದ್ವೇಷದ ಗೋಡೆಯನ್ನು ಕಟ್ಟಬೇಕೊ? ಆಯ್ಕೆ ಸ್ಪಷ್ಟವಾಗಿದೆ. ಪ್ರಗತಿಗೆ ದ್ವೇಷವೇ ದೊಡ್ಡ ಶತ್ರು. ನಮ್ಮ ದೇಶಕ್ಕಾಗಿ, ಪ್ರಗತಿಗಾಗಿ ಹಾಗೂ ಭವಿಷ್ಯದ ತಲೆಮಾರಿಗಾಗಿ ನಾವು ಒಗ್ಗಟ್ಟಾಗಬೇಕು. ಮತ್ತು ದ್ವೇಷದ ವಿರುದ್ಧ ಧ್ವನಿ ಎತ್ತಬೇಕು” ಎಂದು ಟ್ವೀಟ್ ಮಾಡಿದ್ದಾರೆ.
‘ಜ್ಞಾನದ ಮಂದಿರದಲ್ಲಿರುವ ಮಗುವಿನ ಮೇಲಿನ ದ್ವೇಷ ಭಾವನೆ ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ’ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.