ನಟ, ನಿರ್ದೇಶಕ ರಾಜ್ ಬಿ ಶೆಟ್ಟಿಯವರ ಬಹುನಿರೀಕ್ಷಿತ ಟೋಪಬಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ಚಿತ್ರ ಮಾಸ್ಟರ್ಪೀಸ್ ಎಂದು ಕರೆದರೆ, ಇನ್ನೂ ಕೆಲವರು ಚಿತ್ರ ನಿರೀಕ್ಷಿಸಿದ ಮಟ್ಟಕ್ಕೇನೂ ಇಲ್ಲ ಎಂದಿದ್ದಾರೆ.
ಶುಕ್ರವಾರ(ಆ.25) ರಾಜ್ಯಾದ್ಯಂತ ಬಿಡುಗಡೆಗೊಂಡಿರುವ ಚಿತ್ರದ ಬಗ್ಗೆ ಅಭಿಪ್ರಾಯಗಳನ್ನು ವೀಕ್ಷಕರ ಬಳಿ ಕೇಳುವಾಗ ಯುವತಿಯೊಬ್ಬಳು ಸಿನೆಮಾ ಇಷ್ಟವಾಗಿಲ್ಲ ಎಂದು ಹೇಳಿರುವುದನ್ನು ವ್ಯಕ್ತಿಯೊಬ್ಬ ವಿರೋಧಿಸಿದ್ದು, ಯುವತಿ ಎಂದೂ ನೋಡದರೆ, ಸಾರ್ವಜನಿಕವಾಗಿ ಬೈದಾಡಿದ್ದಾನೆ.
ಮೈಸೂರಿನ ಸಂಗಂ ಥಿಯೇಟರ್ ಎದುರು ‘ಟೋಬಿ ಚೆನ್ನಾಗಿಲ್ಲ’ ಎಂದು ಮಾಧ್ಯಮವೊಂದಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಯುವತಿಗೆ ಯುವಕ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
‘ಏನ್ ಚೆನ್ನಾಗಿಲ್ಲ ಹೇಳು, ಹೊಯ್ತಾ ಇರಬೇಕು ಆಚೆಗೆ. ನೋಡೋಕ್ಕಾಗೋದಾದರೆ ನೋಡು, ಇಲ್ಲಂತಾದರೆ ಮುಚ್ಕೊಂಡು ಹೊಯ್ತಾ ಇರಬೇಕು’ ಎಂದು ಯುವಕ ಬೆದರಿಸಿದ್ದಾನೆ.
ನೀನು ಕನ್ನಡದವರಿಗೆ ಹುಟ್ಟಿದ್ದರೆ ಚಿತ್ರದ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿರಲಿಲ್ಲ ಎಂದೂ ಯುವಕ ಅವಹೇಳನಕಾರಿಯಾಗಿ ಕೂಗಿದ್ದಾನೆ.
ಯುವಕ ಯುವತಿಯ ಮೈಮೇಲೆ ಏರಿ ಬಂದಂತೆ ಕೂಗಾಡುತ್ತಿದ್ದರೂ, ಸ್ಥಳದಲ್ಲಿದ್ದವರು ಆತನನ್ನು ತಡೆಯುವ ಬದಲು ಸುಮ್ಮನೆ ನೋಡಿದ್ದಾರೆ. ಇದೇ ವೇಳೆ ಓರ್ವ ರಿಕ್ಷಾ ಚಾಲಕ ಹಾಗೂ ಸಂಗಂ ಥಿಯೇಟರ್ನ ವ್ಯವಸ್ಥಾಪಕ ಕುಂಜಪ್ಪ ಎಂಬವರೂ ಕೂಡ ಯುವಕನಿಗೆ ಸಾಥ್ ನೀಡಿದ್ದು, ಯುವತಿ ವಿರುದ್ಧ ರೇಗಾಡಿದ್ದಾರೆ.
‘ಆ ಯುವತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು. ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಲು ಯಾರಾದರೂ ಇಲ್ಲಿಗೆ ಕಳುಹಿಸಿರಬಹುದುʼ ಎಂದು ಯುವತಿಯ ವಿರುದ್ಧವೇ ಸಂಗಂ ಥಿಯೇಟರ್ ವ್ಯವಸ್ಥಾಪಕ ಕುಂಜಪ್ಪ ಹೇಳಿಕೆ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಚಿತ್ರದ ಕಥೆ ಬರೆದ ಟಿ.ಕೆ. ದಯಾನಂದ್ ಕ್ಷಮೆ ಯಾಚಿಸಿದ್ದಾರೆ. ಆ ಹುಡುಗ ತಮ್ಮ ತಂಡದವನು ಅಲ್ಲ ಎಂದು ಸ್ಪಷ್ಟನೆಯನ್ನೂ ದಯಾನಂದ್ ನೀಡಿದ್ದಾರೆ. ರಾಜ್ ಬಿ ಶೆಟ್ಟಿಕೂಡ ಕ್ಷಮೆ ಕೇಳಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ʼಸಿನಿಮಾ ಕೂಡ ವಿಮರ್ಶೆ ಮಾಡುವ ಮಾಧ್ಯಮ. ಸಾವಿರಾರು ಕೋಟಿ ರೂಪಾಯಿ ಗಳಿಸಿದ ಸಿನಿಮಾಗಳು ಕೂಡ ಕೆಲವರಿಗೆ ಇಷ್ಟವಾಗಿರುವುದಿಲ್ಲ. ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಹಕ್ಕು ಇದೆ. ಯಾರನ್ನೂ ನಿಂದಿಸಬಾರದು. ಆ ಯುವತಿಗೆ ಬೈದ ಹುಡುಗ ನಮ್ಮ ತಂಡದವನು ಅಲ್ಲ. ಆದರೂ, ನಾನು ಆ ಹುಡುಗಿಗೆ ಕ್ಷಮೆ ಕೇಳುತ್ತೇನೆʼ ಎಂದು ರಾಜ್ ಬರೆದುಕೊಂಡಿದ್ದಾರೆ.
