
ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸುವರ್ಣಸೌಧದ ಮುಂಭಾಗ ವಿವಿಧ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿದ್ದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ಮಾಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ರೈತರು ಮತ್ತು ಪೊಲೀಸ್ ನಡುವೆ ಹೈಡ್ರಾಮಾವೇ ನಡೆದಿದೆ. ಪ್ರತಿಭಟನಾ ಸ್ಥಳಕ್ಕೆ ಸಚಿವರು ಬಾರದ ಹಿನ್ನೆಲೆ ರೈತರ ಆಕ್ರೋಶ ತುಸು ಹೆಚ್ಚಾಗಿಯೇ ಇತ್ತು. ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ ನಡೆಯುತ್ತಿದ್ದ ಪ್ರತಿಭಟನೆ ಕೈಬಿಟ್ಟಿ ಸುವರ್ಣ ಸೌಧ ಮುತ್ತಿಗೆಗೆ ಮುಂದಾಗಿದ್ದರು ರೈತರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೀತು. ಪೊಲೀಸರನ್ನ ತಳ್ಳಿ ಸುವರ್ಣಸೌಧಕ್ಕೆ ನುಗ್ಗಲು ರೈತರು ಯತ್ನಿಸಿದ್ರು.

ಆ ಬಳಿಕ ಬೆಳಗಾವಿ ಸುವರ್ಣ ಸೌಧದ ಬಳಿಯ ಸುವರ್ಣ ಗಾರ್ಡನ್ ಪ್ರತಿಭಟನಾ ಸ್ಥಳಕ್ಕೆ ಸಚಿವ ದಿನೇಶ ಗುಂಡುರಾವ್ ಭೇಟಿ ನೀಡಿದ್ರು. ಸಾಕಷ್ಟು ವಿಚಾರವಾಗಿ ಹಲವು ಪ್ರತಿಭಟನೆ ನಡೆಯುತ್ತಿದ್ದರಿಂದ ಸ್ಥಳಕ್ಕೆ ಆಗಮಿಸಿದ ಸಚಿವ ದಿನೇಶ್ ಗುಂಡೂರಾವ್, ಪ್ರತಿಭಟನಾ ನಿರತರ ಮನವಿ ಆಲಿಸಿದರು. ಕೊನೆಯಲ್ಲಿ ರೈತರ ಪ್ರತಿಭಟನಾ ಸ್ಥಳಕ್ಕೆ ಬಳಿ ಬಂದ ಸಚಿವ ದಿನೇಶ್ ಗುಂಡುರಾವ್‌ಗೆ ರೈತರು ಘೇರಾವ್ ಹಾಕಿದ್ರು. ಸಂಬಂಧ ಪಟ್ಟ ಸಚಿವರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ವೇಳೆ ರೈತರ ಮನವೊಲಿಸಲು ಹರಸಾಹಸ ಮಾಡಬೇಕಾಯ್ತು.
ಬೆಳಗಾವಿಯ ಸುವರ್ಣಾ ಗಾರ್ಡನ್‌ನಲ್ಲಿ ಪ್ರತಿಭಟನಾಕಾರರ ಮನವಿ ಆಲಿಸಿದ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ವಿವಿಧ ಸಂಘಟನೆಗಳ ಮನವಿ ಸ್ವೀಕರಿಸಲಾಗಿದೆ. ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಬಗ್ಗೆ ರೈತರು ಪ್ರಸ್ತಾವನೆ ನೀಡಿದ್ದಾರೆ. ಅದಕ್ಕಾಗಿ ಸರ್ಕಾರ ಸ್ಪಂದನೆ ನೀಡುತ್ತದೆ. KSRTC ಸಿಬ್ಬಂದಿಗಳ ಮನವಿ ಸ್ವೀಕರಿಸಲಾಗಿದೆ. ಹೂಗಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿ ನೀಡಿದ್ದಾರೆ. ರೈತರ ಸಮಸ್ಯೆ, ನೋಂದಣಿ ಮಾಡುವಲ್ಲಿ ಸಮಸ್ಯೆ, ಪಂಪ್ ಸೆಟ್‌ಗಳಲ್ಲಿ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಸಾಲ ಕಡಿತ ಮಾಡಿದೆ. ಅದನ್ನು ಸರಿಪಡಿಸುವ ಭರವಸೆ ನೀಡಿದ್ದೇನೆ. ಸಂಬಂಧಪಟ್ಟ ಇಲಾಖೆ, ಸಚಿವರ ಜೊತೆಗೆ ಚರ್ಚಿಸಿ, ವಿವಿಧ ಸಂಘಟನೆಗಳ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.

ಇನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಇರುತ್ತದೆ. ಎಲ್ಲ ಸರ್ಕಾರಗಳು ಎಲ್ಲ ಕೆಲಸಗಳನ್ನು ಮಾಡಲು ಆಗಲ್ಲ. ಯಾವ್ಯಾವ ಕೆಲಸ ಸಾಧ್ಯ ಆಗುತ್ತದೆ ಅವುಗಳನ್ನು ಮಾಡುತ್ತೇವೆ. ನ್ಯಾಯಯುತ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇಸುತ್ತೇವೆ. ಎಲ್ಲವೂ ನ್ಯಾಯಯುತ ಬೇಡಿಕೆಗಳು ಇದ್ದಾವೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಜೊತೆಗೆ ಎಲ್ಲಾ ವಿಷಯಗಳನ್ನು ತಿಳಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಟ್ಟಾರೆ, ಒಂದು ದಿನದ ಅಧಿವೇಶನ ಪ್ರತಿಭಟನೆ ಜೊತೆಗೆ ಅಂತ್ಯವಾಗಿದೆ.