ಧಾರವಾಡ: ಹುಬ್ಬಳ್ಳಿ ಧಾರವಾಡ ನಡುವೆ ಲೈಟ್ ಟ್ರಾಮ್ ಸಾರಿಗೆ ಅಳವಡಿಕೆ ಮಾಡಲು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ನ ವಾಹನ ತಯಾರಿಕಾ ಕಂಪನಿ ಹೆಸ್ (HESS) ನ ಫ್ರಾನ್ಸ್ ಕಚೇರಿಗೆ ಭೇಟಿ ನೀಡಿದ್ದರು.
ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ಅವಳಿ ನಗರಗಳಾಗಿ ಹೆಸರು ಪಡೆದಿದ್ದು, ಎರಡೂ ನಗರಗಳ ನಡುವೆ ಸಾಕಷ್ಟು ಪ್ರಯಾಣಿಕರು ಪ್ರತಿ ದಿನ ಪ್ರಯಾಣಿಸುತ್ತಾರೆ.ಇಲ್ಲಿ ಸುಸ್ಥಿರ ಸಾರಿಗೆ ಆರಂಭಿಸಿದರೆ ಸಾಕಷ್ಟು ಪ್ರಯೋಜನವಾಗಲಿದೆ ಎಂಬುದು ಸಂತೋಷ್ ಲಾಡ್ ಅವರ ಆಲೋಚನೆಯಾಗಿದೆ.
ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಇಂಧನ ಲಭ್ಯತೆ ಮೇರೆ ಕೇಂದ್ರಿಕರಿಸಿ, ಪ್ರಯಾಣಿಕರ ಅನುಕೂಲವನ್ನು ಮುಖ್ಯಗುರಿಯಾಗಿರಿಸಿಕೊಂಡು, ಪ್ರಯಾಣಿಕಸ್ನೇಹಿ ಮತ್ತು ಆದಾಯ ಮತ್ತು ಖರ್ಚುಗಳನ್ನು ನೋಡಿಕೊಂಡು ಸಾರಿಗೆ ವ್ಯವಸ್ಥೆ ಅಳವಡಿಸಬೇಕು ಎಂಬುದು ಲಾಡ್ ಅವರ ದೂರದೃಷ್ಟಿಯಾಗಿದೆ.ಈ ನಿಟ್ಟಿನಲ್ಲಿ ಅವರು ಫ್ರಾನ್ಸ್ ಪ್ರವಾಸದಲ್ಲಿ ಹೆಸ್ ಕಂಪನಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.
HESS ಸ್ವಿಟ್ಜರ್ಲೆಂಡ್‌ನ ವಾಹನ ತಯಾರಿಕಾ ಕಂಪನಿಯಾಗಿದ್ದು, ಇದು ಕಳೆದ 138 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ, ಟ್ರಾಮ್‌ಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳಂತಹ ಸಾರಿಗೆ ವಾಹನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.
ಸಾರಿಗೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳು ಪ್ರತಿ ದಿನ ನಡೆಯುತ್ತಿವೆ. ಎಲ್ಲಾ ನಗರಗಳಿಗೆ ಎಲ್ಲಾ ರೀತಿಯ ಸಾರಿಗೆ ಹೊಂದಿಕೆಯಾಗುವುದಿಲ್ಲ. ಇಂತಹ ತೊಡಕನ್ನು ಗಮನದಲ್ಲಿಟ್ಟುಕೊಂಡೇ ಸಚಿವ ಲಾಡ್ ಅವರು ಲೈಟ್ ಟ್ರಾಮ್ ನಂತಹ ಸಾರಿಗೆ ಆರಂಭಿಸಲು ಮುಂದಾಗಿದ್ದಾರೆ.
ಇಂತಹ ಸಾರಿಗೆ ಉಪಕ್ರಮಗಳು ಜನರಿಗೆ ಬೇಗ ದೊರೆಯಬೇಕು, ಸುರಕ್ಷತೆಗೆ ಆದ್ಯತೆ ನೀಡಬೇಕು, ಸರ್ಕಾರ ಮತ್ತು ಪ್ರಯಾಣಿಕರಿಗೆ ಹೊರೆಯಾಗಬಾರದು ಎಂಬುದು ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಲೈಟ್ ಟ್ರಾಮ್ ಹುಬ್ಬಳ್ಳಿ- ಧಾರವಾಡ ನಡುವೆ ಅತ್ಯಂತ ಸೂಕ್ತವಾಗಲಿದೆ ಎಂಬ ಚಿಂತನೆ ಸಚಿವ ಲಾಡ್ ಅವರದು. ಪ್ರಸ್ತುತ ಇರುವ ಬಿ ಆರ್ ಟಿಎಸ್ ವ್ಯವಸ್ಥೆ ಬಹಳ ಅವ್ಯವಸ್ಥೆಯನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ವಲಯದಲ್ಲಿ ಅಷ್ಟೊಂದು ಸಮಾಧಾನ ತಂದಿಲ್ಲ. ಹೀಗಾಗಿ ಹುಬ್ಬಳ್ಳಿ-ಧಾರವಾಡ ನಗರಗಳ ಮಧ್ಯೆ ಮೆಟ್ರೋ ರೈಲು, ಮೋನೋ ರೈಲು ಅಥವಾ ಟ್ರಾಮ್ ಸೇವೆ ಆರಂಭಿಸುವಂತೆ ಚರ್ಚೆಗಳು ಆರಂಭವಾಗಿವೆ.
ಲಾಡ್ ಅವರು ಭೇಟಿ ನೀಡಿದ್ದ HESS ಲೈಟ್ ಟ್ರಾಮ್ ಗಳು ವಿದ್ಯುತ್ ಮೂಲಕ ಚಲಿಸುತ್ತವೆ. ಇದು ಸಾಂಪ್ರದಾಯಿಕ ಡೀಸೆಲ್ ಚಾಲಿತ ಬಸ್‌ಗಳಿಗೆ ಹೋಲಿಸಿದರೆ ವಾಯಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಿ ವಾಯುಗುಣಮಟ್ಟಕ್ಕೆ ಧನಾತ್ಮಕ ಕೊಡುಗೆ ನೀಡುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಸಾರಿಗೆ ಎಂದಾಕ್ಷಣ ಹೇಗೆ ಮಾಲಿನ್ಯಕಾರಕವೊ ಅದೇ ರೀತಿ ಶಬ್ದವನ್ನೂ ಉಂಟು ಮಾಡುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲಿ ಬರುವುದು ಸಾಮಾನ್ಯ. ಆದರೆ ಲೈಟ್ ಟ್ರಾಮ್ ಆಂತರಿಕ ದಹನಕಾರಿ ಎಂಜಿನ್ ಹೊಂದಿರುವ ವಾಹನಗಳಿಗಿಂತ ನಿಶ್ಯಬ್ದವಾಗಿದೆ. ಇದು ನಗರ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಕಡಿಮೆ ಮಾಡುತ್ತದೆ. ಇದರಿಂದ ನಗರದ ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಗಳು, ವೈ-ಫೈ ಸಂಪರ್ಕ ಮತ್ತು ಶಕ್ತಿ-ಸಾಮರ್ಥ್ಯ HVAC ವ್ಯವಸ್ಥೆ ಇದರಲ್ಲಿವೆ. ವಿದೇಶಗಳಲ್ಲಿನ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಗಳನ್ನು ನೋಡಿದರೆ ನಮ್ಮಲ್ಲೂ ಇಂತಹದು ಇದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡುವುದು ಸಹಜ. ಆದರೆ ನಾವು ಅಂದುಕೊಂಡಷ್ಟು ಎಲ್ಲವೂ ಸುಲಭವಲ್ಲ. ಆದರೆ ಸರ್ಕಾರ ಮನಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಇದಕ್ಕೊಂದು ಒಳ್ಳೆಯ ಅಧ್ಯಯನ, ಪರಿಣತರ ಸಲಹೆ, ಸೂಕ್ತ ಮಾರ್ಗದರ್ಶನ ಸಿಕ್ಕರೆ ಎಲ್ಲವೂ ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಸಚಿವ ಸಂತೋಷ್ ಲಾಡ್ ಅವರ ಅಧ್ಯಯನ ಮತ್ತು ಅವರ ಮುಂದಾಲೋಚನೆ ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಮುಂದಿನ ದಿನದಲ್ಲಿ ಹೇಗೆ ಉಪಯೋಗವಾಗಲಿವೆ ಎಂಬ ನಿರೀಕ್ಷೆ ಮೂಡಿವೆ.