ಬೆಳಗಾವಿ: ಕಾರ್ಮಿಕ ಇಲಾಖೆ ವತಿಯಿಂದ ವಿವಿಧ ವೃತ್ತಿ ಮಾಡುತ್ತಿರುವ ರಾಜ್ಯದ ಕಾರ್ಮಿಕರಿಗೆ 7 ಲಕ್ಷ ಟೂಲ್ ಕಿಟ್ ವಿತರಿಸಲಾಗಿದೆ. ಒಮ್ಮೆ ಕಾರ್ಮಿಕ ಕಿಟ್ ಪಡೆದರೆ ಮತ್ತ್ತೊಮ್ಮೆ ಅದೇ ಕಾರ್ಮಿಕರಿಗೆ ಕಿಟ್ ನೀಡಲು ಸದ್ಯ ಇರುವ ನಿಯಮಗಳಲ್ಲಿ ಅವಕಾಶವಿಲ್ಲ. ಈ ನಿಯಮಕ್ಕೆ ಮಾರ್ಪಾಡು ತಂದು 5 ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ(Winter Session) ಶಾಸಕ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಶೇ.13ರಷ್ಟು ಕಾರ್ಮಿಕ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಬಂದಿದೆ. ಆದ್ದರಿಂದ ಸರ್ಕಾರ ಪೌಷ್ಠಿಕ ಆಹಾರದ ಕಿಟ್‍ಗಳನ್ನು ನೀಡಲು ಸಿದ್ಧತೆ ನಡೆಸಿದೆ.

ವ್ಯಾಸಾಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಶಾಲಾ ಕಿಟ್ ನೀಡಲಾಗುತ್ತಿತ್ತು. ಇದರ ಬದಲಾಗಿ ವಿದ್ಯಾರ್ಥಿ ವೇತನ ನೀಡುತ್ತಿರುವುದಾಗಿ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು. ಇದೇ ವೇಳೆ ರಾಣೆಬೆನ್ನೂರು ಇ.ಎಸ್.ಐ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರನ್ನು ನೇಮಿಸುವುದಾಗಿ ಸಚಿವ ಸಂತೋಷ್ ಲಾಡ್, ಶಾಸಕ ಪ್ರಕಾಶ್ ಕೆ.ಕೋಳಿವಾಡ ಅವರ ಪ್ರಶ್ನೆಗೆ ಉತ್ತರಿಸಿದರು.











