ಪಿಎಸ್ ಐ ಪರೀಕ್ಷಾ ಅಕ್ರಮದಲ್ಲಿ ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಅವರ ಸಂಬಂಧಿಕರಾದ ದರ್ಶನ್ ಗೌಡ ಮತ್ತು ನಾಗೇಶ್ ಗೌಡ ಪರೀಕ್ಷಾ ಅಕ್ರಮ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿಯ ದರ್ಶನ್ ಗೌಡ ಮತ್ತು ಕುಣಿಗಲ್ ನ ನಾಗೇಶ್ ಗೌಡ ಇಬ್ಬರೂ ಅಕ್ರಮ ನಡೆಸಿದ್ದಾರೆ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ ವಿಚಾರಣೆ ನಡೆಸದೇ ಹಾಗೆ ಬಿಟ್ಟು ಕಳುಹಿಸಿದ್ದಾರೆ. ಇವರ ಹೇಳಿಕೆಯನ್ನು ಯಾಕೆ ಪಡೆಯಲಿಲ್ಲ ಎಂದು ಪ್ರಶ್ನಿಸಿದರು.
ದರ್ಶನ್ ಗೌಡ ೫೦ ಅಂಕಗಳ ಲಿಖಿತ ಪರೀಕ್ಷೆಯಲ್ಲಿ 19 ಅಂಕ ಗಳಿಸಿದ್ದಾರೆ. ಆದರೆ ಮಲ್ಟಿಪಲ್ ಚಾಯ್ಸ್ ಪರೀಕ್ಷೆಯ 150 ಅಂಕಗಳಲ್ಲಿ 141 ಪಡೆದಿದ್ದಾರೆ. ನಾಗೇಶ್ ಗೌಡ 29.5 ಮತ್ತು 127.895 ಅಂಕಗಳನ್ನು ಪಡೆದಿದ್ದಾರೆ. ಇದು ಹೇಗೆ ಸಾಧ್ಯ? ದಿಢೀರನೆ ಇವರಿಬ್ಬರು ಒಂದು ಪರೀಕ್ಷೆಯಲ್ಲಿ ಕಡಿಮೆ ಮತ್ತೊಂದು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪರೀಕ್ಷಾ ಅಕ್ರಮದಲ್ಲಿ ಅಶ್ವಥ್ ನಾರಾಯಣ್ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.