ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವಂತೆ, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ʼಪ್ರಿಯಾಂಕ್ ಖರ್ಗೆʼಯ ಹೆಸರೇ ಆಸರೆ. ಅಪ್ರಸ್ತುತಗೊಳ್ಳುತ್ತಿದ್ದೇವೆ ಎನಿಸಿದಾಗ ನನ್ನ ಹೆಸರು ಹಿಡಿದುಕೊಂಡು ಚಾಲ್ತಿಗೆ ಬರುವ ಪ್ರಯತ್ನ ನಡೆಸಿದ್ದಾರೆ ಬಿಜೆಪಿಯ ಮಾಜಿ ಶಾಸಕರೊಬ್ಬರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಬಿಜೆಪಿ(BJP) ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಪ್ರಜ್ಞೆ ಇಲ್ಲದವರ ತರ್ಕವಿಲ್ಲದ ಮಾತುಗಳಿಗೆ ಉತ್ತರ ನೀಡುವುದು ಸಮಯ ವ್ಯರ್ಥವೇ ಸರಿ, ಆದರೆ ಸಚಿವನಾಗಿ ಕುತರ್ಕಗಳಿಗೂ ಉತ್ತರಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬಿಜೆಪಿ ಕಚೇರಿಯ ಮೂಲೆಯಲ್ಲಿ ಗುಜರಿಯ ತೂಕಕ್ಕೆ ಹಾಕಲು ಇಟ್ಟಿದ್ದ ಯಾವುದೋ ಪೇಪರ್ ಬಂಡಲ್‌ನ್ನು ಮುಂದೆ ಇಟ್ಟುಕೊಂಡು ತರ್ಕವಿಲ್ಲದ, ಹುರುಳಿಲ್ಲದ, ಮತ್ತು ಸತ್ಯಾಂಶವಿಲ್ಲದ ಆರೋಪಗಳನ್ನು ಮಾಡಿದ್ದಾರೆ, ಗುಡ್ಡ ಅಗೆಯುವವರಿಗೆ ಇಲಿಯನ್ನಾದರೂ ಹಿಡಿಯುವ ಗುರಿ ಇರಬೇಕು, ಇವರಿಗೆ ಜಿರಳೆ ಹಿಡಿಯಲೂ ಸಾಧ್ಯವಾಗಲಿಲ್ಲ. 15ನೇ ಹಣಕಾಸು ಆಯೋಗದ ಅನುದಾನದಲ್ಲಿ 90%ರಷ್ಟು ಜನಸಂಖ್ಯೆಯ ಆಧಾರದಲ್ಲಿ ಮತ್ತು 10%ರಷ್ಟು ಭೌಗೋಳಿಕ ಆಧಾರದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸುತ್ತೋಲೆ ಹಾಗೂ ಮಾರ್ಗಸೂಚಿಗಳ ಅನ್ವಯ ಬಿಡುಗಡೆ ಮಾಡಲಾಗುತ್ತದೆ, ಒಟ್ಟು ಅನುದಾನದಲ್ಲಿ 60% ನಿರ್ಬಂಧಿತ, 40% ಅನಿರ್ಬಂಧಿತ ಅನುದಾನವಾಗಿ ಬಿಡುಗಡೆ ಮಾಡಲಾಗುತ್ತದೆ.

ಈ ಅನುದಾನವನ್ನು ಗ್ರಾಮ ಪಂಚಾಯತಿಗಳು ಮಾರ್ಗಸೂಚಿ ಅನ್ವಯ ಗ್ರಾಮ ಸಭೆ ನಡೆಸಿ, ಕ್ರಿಯಾ ಯೋಜನೆ ತಯಾರಿಸಿಕೊಂಡು, ಗ್ರಾಮ ಪಂಚಾಯತಿಗಳ ಹಂತದಲ್ಲೇ ಕಾಮಗಾರಿ ಮಾಡಲಾಗುತ್ತದೆ, ಕ್ರಿಯಾಯೋಜನೆ ಮತ್ತು ಅನುಷ್ಠಾನದ ಮಾಹಿತಿಯನ್ನು ಇ- ಗ್ರಾಮ್ ಸ್ವರಾಜ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆಯೇ ಹೊರತು ಸರ್ಕಾರದಿಂದ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ, ಸಂವಿಧಾನದ 73, 74 ತಿದ್ದುಪಡಿಯ ಮೂಲ ಆಶಯದಂತೆ ಸ್ಥಳೀಯವಾಗಿಯೇ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ.

ಈ ಮೂಲಭೂತ ಪ್ರಜ್ಞೆ ಆರೋಪ ಮಾಡುವವರಿಗೆ ಇರಬೇಕಾಗಿದ್ದು ಅತ್ಯವಶ್ಯಕ. ಹೈಮಾಸ್ಕ್ ದೀಪಗಳನ್ನಾದರೂ ಹಾಕಬಹುದು, ಅಥವಾ ಇನ್ಯಾವುದೇ ಕಾಮಗಾರಿಗಳನ್ನಾದರೂ ಮಾಡಬಹುದು, ಅದು ಇದು ಸಂಪೂರ್ಣ ಗ್ರಾಮ ಪಂಚಾಯತಿಗಳ ವಿವೇಚನಾಧಿಕಾರ. 15ನೇ ಹಣಕಾಸು ಆಯೋಗದ ಅನುದಾನವನ್ನು ಬೇರೆಡೆ ವರ್ಗಾಯಿಸಲು ಸಾಧ್ಯವಿಲ್ಲ, ಈ ಅನುದಾನದ ಬಿಡುಗಡೆ ಮತ್ತು ಹಂಚಿಕೆಯಲ್ಲಿ ನನ್ನ ಪಾತ್ರ ಎಲ್ಲಿದೆ ಮತ್ತು ಹೇಗಿದೆ ಎನ್ನುವುದನ್ನು ದಾಖಲೆ ಸಮೇತ ನಿರೂಪಿಸಲು ಸಾಧ್ಯವಾಗದ ಮಾಜಿ ಶಾಸಕರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಅವರ ಗಾಳಿಯ ಗುಂಡು ಕೇವಲ ಶಬ್ದಕ್ಕಾಗಿ ಮಾತ್ರ ಎಂದು ಲೇವಡಿ ಮಾಡಿದ್ದಾರೆ.

15ನೇ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಪಿ. ರಾಜೀವ್ ಹೇಳುವ ಮಾದರಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಂದಿಲ್ಲ, ಹೀಗಿರುವಾಗ ಇವರ ಆರೋಪಕ್ಕೆ ಸಾಕ್ಷಿಗಳೇನು? 2020-21ರಿಂದ 2022-23ರವರೆಗೆ, ಬಿಜೆಪಿ ಆಡಳಿತದ ಅವಧಿಯಲ್ಲಿ 65,325.36 ಲಕ್ಷ ರೂಪಾಯಿಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿತ್ತು, ಇದರಲ್ಲಿ 4,586.63 ಲಕ್ಷ ರೂಪಾಯಿಗಳ ವಸೂಲಾತಿಗೆ ಸೂಚಿಸಲಾಗಿತ್ತು, ಇದಕ್ಕೆ ಉತ್ತರ ಹೇಳುವವರು ಯಾರು?

ಬಿಜೆಪಿ ಸರ್ಕಾರದಲ್ಲಿ ಕಾಡುತ್ತಿದ್ದ ಕಮಿಷನ್ ಪಿಡುಗಿಗಾಗಿ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಂತಹ ವಿಸ್ತಾರವಾದ ಮತ್ತು ಪ್ರಮುಖವಾದ ಇಲಾಖೆ ವರ್ಷಗಳ ಕಾಲ ಮಂತ್ರಿಯೇ ಇಲ್ಲದೆ ಸೊರಗಿತ್ತು, ಇಡೀ ಇಲಾಖೆಯ ವ್ಯವಸ್ಥೆಯನ್ನು ಹಳ್ಳ ಹಿಡಿಸಲಾಗಿತ್ತು, ಬಿಜೆಪಿ ಮಾಡಿ ಹೋಗಿದ್ದ ಅವಾಂತರಗಳನ್ನು ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ, ಈ ನಡುವೆ ಇವರ ಸುಳ್ಳು ಆರೋಪಗಳನ್ನೂ ಸಹ ಸಮರ್ಥವಾಗಿ ಎದುರಿಸುತ್ತೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.











