ಕಾರವಾರ : ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಸಚಿವ ನಾರಾಯಣ ಗೌಡ ಕಾಂಗ್ರೆಸ್ಗೆ ಮರಳಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಈ ವಿಚಾರವಾಗಿ ಇಂದು ಕಾರವಾರದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ನಾರಾಯಣ ಗೌಡ ಸೇರಿ ಉಳಿದವರೆಲ್ಲರೂ ನಮ್ಮ ಪಕ್ಷಕ್ಕೆ ಬೆನ್ನೆಲುಬಾಗಿ, ಗೆದ್ದು ಅಧಿಕಾರ ನಡೆಸಿದ್ದಾರೆ. ಅವರು ಬಿಜೆಪಿಯನ್ನು ಬಿಟ್ಟು ಹೋಗಲ್ಲ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ , ನಾವು ಒಟ್ಟಾಗಿ ಸರ್ಕಾರವನ್ನು ನಡೆಸುತ್ತಿದ್ದೇವೆ. ಮತ್ತೆ ಮುಂದಿನ ಚುನಾವಣೆಯಲ್ಲಿ ಬಹುಮತವನ್ನು ಪಡೆಯುತ್ತೇವೆ. ಯಾರೂ ಪಕ್ಷವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಕೇವಲ ಮಾಧ್ಯಮಗಳಲ್ಲಿ ಈ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಎಲ್ಲವೂ ಸರಿಯಾಗುತ್ತದೆ. ಅವರೆಲ್ಲ ನಮ್ಮ ಜೊತೆಗೆ ಇದ್ದಾರೆ. ಮುಂದೆಯೂ ಇರ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರ ಶಾಸಕಿ ರೂಪಾಲಿ ನಾಯ್ಕ್ಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಯಾರು ಯಾವ ಬೆದರಿಕೆಗೆ ಬಗ್ಗಬಾರದು. ಅವರು ಬಗ್ಗುವುದೂ ಇಲ್ಲ. ಒಬ್ಬ ಮಹಿಳೆಯಾಗಿ ಬಡವರ ಹಾಗೂ ದುರ್ಬಲರ ಪರವಾಗಿ ಅವರು ಕೆಲಸ ಮಾಡ್ತಿದ್ದಾರೆ. ಅವರ ರಾಜಕೀಯ ಚಟುವಟಿಕೆಗಳನ್ನು ಕಂಡು ವಿಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ಆದರೆ ಕಾರವಾರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬುದ್ರಲ್ಲಿ ಯಾವುದೇ ಸಂಶಯವಿಲ್ಲ ಎಂಧು ಹೇಳಿದ್ದಾರೆ.
ಅತೀ ಹೆಚ್ಚು ಬಾರಿ ಶಾಸಕರಾದವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಮಾಧ್ಯಮಗಳ ವರದಿಗಳ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಕ್ಷೇತ್ರಗಳಲ್ಲಿಯೂ ಅನೇಕ ಟಿಕೆಟ್ ಆಕಾಂಕ್ಷಿಗಳು ಇರ್ತಾರೆ. ಈ ಬಗ್ಗೆ ರಾಜ್ಯಾಧ್ಯಕ್ಷರು ಹಾಗೂ ಹೈಕಮಾಂಡ್ ಸಮೀಕ್ಷೆ ಮಾಡುತ್ತಲೇ ಇದೆ. ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಬಹುದು..? ಎಂಬುದರ ಆಧಾರದ ಮೇಲೆ ಟಿಕೆಟ್ ಹಂಚಿಕೆಯಾಗುತ್ತೆ. ಹೀಗಾಗಿ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆ ಉಳಿಸಿಕೊಂಡವರು ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.