ಬೆಂಗಳೂರು: ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಒಳಗೆ ಯಾವುದೇ ಗೊಂದಲ್ಲ ಇಲ್ಲ. ನನಗೆ ಐದು ವರ್ಷ ಅವಕಾಶ ಕೊಟ್ಟಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ತನಕ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ನನಗೆ ಐದು ವರ್ಷ ಅವಕಾಶ ಕೊಟ್ಟಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದು ಒಂದು ಭಾಗವಾದರೆ, ಇನ್ನೊಂದು ಭಾಗ ಅಂದರೆ ಯಾವುದೇ ವಿಚಾರ ಇದ್ದರೂ ಕೂಡ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಹೈಕಮಾಂಡ್ ಬಿಟ್ಟು ನಮ್ಮಲ್ಲಿ ಏನೂ ನಡೆಯುವುದಿಲ್ಲ. ನಾವು ಯಾರೇ ಏನೇ ಹೇಳಿಕೆ ಕೊಟ್ಟರೂ ಅದು ನಡೆಯಲ್ಲ. ಒಂದು ವೇಳೆ ಗೊಂದಲ ಇದ್ದರೆ ಹೈಕಮಾಂಡ್‌ನವರು ನೋಡಿಕೊಳ್ಳುತ್ತಾರೆ ಎಂದರು.

ನಿನ್ನೆಯ ಡಿನ್ನರ್ ಸಭೆ ಬಗ್ಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಮನೆಯಲ್ಲಿ ಊಟ ಮಾಡಿದೆವು ಅಷ್ಟೇ. ನಾನು, ದಿನೇಶ್ ಗುಂಡೂರಾವ್, ಮಹಾದೇವಪ್ಪ, ವೆಂಕಟೇಶ್ ನಾವೆಲ್ಲಾ ಭೇಟಿ ಮಾಡಿ ಚೆನ್ನಾಗಿ ಊಟ ಮಾಡಿದ್ದೇವೆ. ಅದನ್ನು ಬಿಟ್ಟು ದೆಹಲಿಗೆ ಹೋಗಿರುವವರ ಬಗ್ಗೆ ಏನೂ ಚರ್ಚೆ ಮಾಡಲಿಲ್ಲ.ಯಾರ್ಯಾರು ದೆಹಲಿಗೆ ಹೋಗಿದ್ದಾರೆ, ಯಾಕೆ ಹೋಗಿದ್ದಾರೆ ಅಂತ ಅವರೇ ಹೇಳಿದ್ದಾರೆ. ರಾಜಕಾರಣಕ್ಕೆ ಬಂದಿಲ್ಲ, ನಮ್ಮ ನಮ್ಮ ಕೆಲಸಕ್ಕೆ ಬಂದಿದ್ದೇವೆ ಅಂತ ಅವರೇ ಹೇಳಿದ ಮೇಲೆ ನಾವು ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.













