• Home
  • About Us
  • ಕರ್ನಾಟಕ
Wednesday, December 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಮಿಲೆನಿಯಲ್‌ ಮಕ್ಕಳೊಡನೆ ನಾವು ಸಂವಾದಿಸಿದ್ದೇವೆಯೇ ?

ನಾ ದಿವಾಕರ by ನಾ ದಿವಾಕರ
July 4, 2024
in Uncategorized
0
ಮಿಲೆನಿಯಲ್‌ ಮಕ್ಕಳೊಡನೆ ನಾವು ಸಂವಾದಿಸಿದ್ದೇವೆಯೇ ?
Share on WhatsAppShare on FacebookShare on Telegram

ಇತಿಹಾಸ-ವರ್ತಮಾನ ಎರಡನ್ನೂ ಗ್ರಹಿಸಲಾರದ ಎಳೆಯರ ಬಳಿಗೆ ನಾವು ಹೋಗಿಯೇ ಇಲ್ಲವಲ್ಲಾ !

ADVERTISEMENT

ಕಳೆದ ಹತ್ತು ವರ್ಷಗಳ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸಂಕಥನಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾದ ಒಂದು ಸಮಾನ ಎಳೆ ಎಂದರೆ ಮಿಲೆನಿಯಂ ಜನತೆ ಎಂದು ಪರಿಗಣಿಸಲಾಗುವ 21ನೆಯ ಶತಮಾನದ ಯುವ ಸಮೂಹವನ್ನು ಕುರಿತಾದ ವ್ಯಾಖ್ಯಾನ-ವಿಶ್ಲೇಷಣೆ-ನಿರೂಪಣೆಗಳು. ಒಂದು ಅಂದಾಜಿನ ಪ್ರಕಾರ ಭಾರತದ ಶೇಕಡಾ 50ರಷ್ಟು ಜನತೆ 25 ವರ್ಷಕ್ಕಿಂತಲೂ ಕಡಿಮೆ ಇರುವವರಾಗಿದ್ದಾರೆ. ಈ ಅಂಕಿಅಂಶಗಳೇನೇ ಇದ್ದರೂ, ಸಾರ್ವಜನಿಕ ಬದುಕಿನಲ್ಲಿ ಹಾಗೂ ಶಿಕ್ಷಣದ ಮಾರುಕಟ್ಟೆಯಿಂದ ಉದ್ಯೋಗದ ಮಾರುಕಟ್ಟೆಗೆ ಜಿಗಿಯುತ್ತಿರುವ ಜನಸಮೂಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ವಯೋಮಾನದ ಮಿಲೆನಿಯಂ ಮಕ್ಕಳು ಪ್ರಧಾನವಾಗಿ ಕಾಣುತ್ತಾರೆ. ಬದಲಾಗುತ್ತಿರುವ ಭಾರತದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಆವರಣದಲ್ಲಿ ಕ್ರಿಯಾಶೀಲವಾಗಿರುವ ಒಂದು ಹಿರಿಯ ತಲೆಮಾರಿಗೆ ಈ ಮಕ್ಕಳು ಸದಾ ಜಿಜ್ಞಾಸೆಯಾಗಿಯೇ ಕಾಣುವುದು ಸಹಜ.

ಏಕೆಂದರೆ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಆರ್ಥಿಕತೆಯ ಜೀವನ ವಿಧಾನಗಳಿಂದ ಪ್ರಭಾವಿಸಲ್ಪಟ್ಟಿರುವ ಈ ಯುವಸಮೂಹ ಒಂದು ಸುಭದ್ರ ತಳಪಾಯದ ಮೇಲೆ ಭವಿಷ್ಯದತ್ತ ಸಾಗುತ್ತಿದೆ. ಹೀಗೆ ಹೇಳುವಾಗ ನಾವು ಸಾಮಾನ್ಯವಾಗಿ ನಗರೀಕರಣಕ್ಕೊಳಗಾದ ಅಥವಾ ಆರ್ಥಿಕ ಅಭಿವೃದ್ಧಿಯ ನೇರ ಫಲಾನುಭವಿಗಳಾದ ಜನತೆಯನ್ನು ಮಾತ್ರ ಪರಿಗಣಿಸುತ್ತಿದ್ದೇವೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು. ಏಕೆಂದರೆ ಇಂದಿಗೂ ಸಹ ಆಧುನಿಕ ತಂತ್ರಜ್ಞಾನದ ಸಲಕರಣೆಗಳ ಸಂಪರ್ಕವಿಲ್ಲದೆ, ಸಂವಹನ ಮಾಧ್ಯಮಗಳ ಒಡನಾಟವಿಲ್ಲದೆ, ಮುಂದುವರೆದ ಶಿಕ್ಷಣದ ಸೌಲಭ್ಯವಿಲ್ಲದೆ ಇರುವ ಮಿಲೆನಿಯಂ ಸಮೂಹ ನಮ್ಮ ನಡುವೆ ಇದೆ. ಕಾರ್ಪೋರೇಟ್‌ ಆರ್ಥಿಕತೆಯ ಫಲಾನುಭವಿ ಸಮೂಹವು ಮಾರುಕಟ್ಟೆ ಶಕ್ತಿಗಳೊಡನೆ ಅನುಸಂಧಾನ ನಡೆಸಿ ಒಂದು ನೆಲೆ ಕಂಡುಕೊಳ್ಳುತ್ತಿರುವಾಗಲೇ ಮತ್ತೊಂದು ಬದಿಯಲ್ಲಿ ಅಲ್ಲಿಗೆ ಪ್ರವೇಶಿಸುವ ಅವಕಾಶಗಳೂ ಇಲ್ಲದೆ ನಿರ್ವಾತದಲ್ಲಿ ಬದುಕು ನಡೆಸುತ್ತಿರುವ ಸಮೂಹವೂ ಇದೆ.

ಈ ಸಾಮಾಜಿಕ ನಿರ್ವಾತದಲ್ಲಿರುವವರನ್ನು ಸಾಂಸ್ಕೃತಿಕವಾಗಿ ಬಳಸಿಕೊಳ್ಳುವುದರಲ್ಲಿ ನಮ್ಮ ರಾಜಕೀಯ ವಲಯ ಯಶಸ್ವಿಯಾಗಿದೆ. ಇದು ಎರಡು ನೆಲೆಗಳಲ್ಲಿ ನಡೆಯುತ್ತದೆ. ಮೊದಲನೆಯದು ಶೈಕ್ಷಣಿಕ ಮಾರುಕಟ್ಟೆಯ ಫಲಾನುಭವಿಗಳನ್ನು ಬೌದ್ಧಿಕ ನೆಲೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಎರಡನೆಯದು ಇಲ್ಲಿನ ಅವಕಾಶವಂಚಿತರನ್ನು ಭೌತಿಕ ನೆಲೆಯಲ್ಲಿ, ಕಾವಲುಪಡೆಗಳಾಗಿ, ಕಾಲಾಳುಗಳಾಗಿ ಅಥವಾ ಬೆಂಗಾವಲು ಕಾರ್ಯಕರ್ತರಾಗಿ ದುಡಿಸಿಕೊಳ್ಳಲಾಗುತ್ತದೆ. ಈ ಎರಡೂ ಪ್ರವರ್ಗಗಳ ನಡುವೆ ಇರುವ ಸಮಾನ ಎಳೆ ಎಂದರೆ ʼ ಭ್ರಮಾಧೀನ ಮನಸ್ಥಿತಿ ʼ. ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ ಮತ್ತು ನವ ಉದಾರವಾದದ ಅಭಿವೃದ್ಧಿಯ ಮಾದರಿ ಸೃಷ್ಟಿಸುವ ಜಾಗತಿಕ ಭ್ರಮಾಲೋಕದಲ್ಲಿ ಸದಾ ವಿಹರಿಸುವ ಈ ಯುವ ಸಮೂಹವನ್ನು ಮಾರುಕಟ್ಟೆ ನಿಯಂತ್ರಿತ ಸಂವಹನ ಮಾಧ್ಯಮಗಳೇ ಹೆಚ್ಚು ಪ್ರಭಾವಿಸುವುದರಿಂದ, ಸತ್ಯ-ಸುಳ್ಳಿನ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸದಾಗುತ್ತಾರೆ. ಕಾರ್ಪೋರೇಟ್‌ ನಿಯಂತ್ರಿತ ಮುಖ್ಯವಾಹಿನಿ ಮಾಧ್ಯಮ-ಸುದ್ದಿವಾಹಿನಿಗಳು ಹಾಗೂ ಐಟಿ ಸೆಲ್‌ಗಳು ಉತ್ಪಾದಿಸುವ ವಾಟ್ಸಾಪ್‌ ವಿಶ್ವವಿದ್ಯಾಲಯದ ಮಾಹಿತಿ ಸರಕುಗಳು ಈ ಸಮೂಹವನ್ನು ಸಮ್ಮೋಹನಕ್ಕೊಳಪಡಿಸುತ್ತವೆ.

ಹಿರೀಕರ ಜಿಜ್ಞಾಸೆಗಳ ಸುತ್ತ

ಈ ನೆಲೆಯಲ್ಲಿ ನಿಂತು ನೋಡಿದಾಗ ಹಿರಿಯ ತಲೆಮಾರಿನ ಚಿಂತಕರನ್ನು “ ಈ ಯುವ ಸಮೂಹಕ್ಕೆ ಹಿಂದಿನ ಆದರ್ಶ ಮಾದರಿಗಳೇಕೆ ಒಪ್ಪಿಗೆಯಾಗುತ್ತಿಲ್ಲ ” ಎಂಬ ಜಿಜ್ಞಾಸೆ ಸಹಜವಾಗಿಯೇ ಕಾಡುತ್ತದೆ. ಇದರೊಟ್ಟಿಗೇ ಕಾಡಬೇಕಾದ ಆದರೆ ಕಾಡದಿರುವ ಪ್ರಶ್ನೆ ಎಂದರೆ “ ಸ್ವತಂತ್ರ ಭಾರತ ತನ್ನ ಮಿಲೆನಿಯಂ ಮಕ್ಕಳಿಗೆ ಮಾದರಿಯಾಗಬಹುದಾದ ಆದರ್ಶಪ್ರಾಯ ವ್ಯಕ್ತಿತ್ವಗಳನ್ನು ಏಕೆ ಸೃಷ್ಟಿಸಲಾಗಿಲ್ಲ ? ” ಈ ಎರಡನೆ ಪ್ರಶ್ನೆಗೆ ನಾವು ಉತ್ತರ ಶೋಧಿಸುವಾಗ ಮತ್ತಷ್ಟು ಪ್ರಶ್ನೆಗಳು ಉಧ್ಬವಿಸುತ್ತವೆ. 76 ವರ್ಷಗಳ ರಾಜಕಾರಣವು ಭವಿಷ್ಯದ ಪೀಳಿಗೆಯ ಕೈಹಿಡಿದು ನಡೆಸುವಂತಹ ಎಷ್ಟು‌ ಜೀವನಾದರ್ಶ ಮಾದರಿಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ ? ಸ್ವಾತಂತ್ರ್ಯಪೂರ್ವ ಮಾದರಿ ವ್ಯಕ್ತಿತ್ವಗಳನ್ನು ಈ ಪೀಳಿಗೆಗೆ ಸಮರ್ಪಕವಾಗಿ ಪರಿಚಯಿಸುವ ಪ್ರಯತ್ನಗಳು ಎಷ್ಟು ನಡೆದಿವೆ ? ರಾಜಕೀಯವನ್ನು ಬದಿಗಿಡೋಣ, ಸಾಂಸ್ಕೃತಿಕ-ಸಾಹಿತ್ಯ ವಲಯದಲ್ಲಿ ಎಂತಹ ಮೌಲ್ಯಗಳನ್ನು ನಾವು ಅವರ ಮುಂದಿಡುತ್ತಿದ್ದೇವೆ ? ಇಲ್ಲಿ ಯಾವುದಾದರೂ ಅನುಸರಿಸುವ-ಅನುಕರಿಸುವ ಮಾದರಿಗಳನ್ನು ಸಮಾಜದ ನಡುವೆ ಕೊಂಡೊಯ್ಯಲು ನಮಗೆ ಸಾಧ್ಯವಾಗಿದೆಯೇ ?

ಇಲ್ಲಿ ನಮಗೆ ಎರಡನೆ ಪ್ರಶ್ನೆ ಎದುರಾಗುತ್ತದೆ. ಸಾಹಿತ್ಯ-ಇತಿಹಾಸ-ಪರಂಪರೆಯ ಅರಿವು ಮತ್ತು ಅದರಿಂದ ಮೂಡಬಹುದಾದ ಸ್ವಂತಿಕೆಯ ಪ್ರಶ್ನೆ. ವಾಟ್ಸಾಪ್‌ ವಿಶ್ವವಿದ್ಯಾಲಯಗಳ ಮಿಥ್ಯಾ ಲೋಕವನ್ನೇ ಅವಲಂಬಿಸುವ ಒಂದು ಬೃಹತ್‌ ಯುವ ಸಮೂಹ ನಮ್ಮ ನಡುವೆ ಇರುವಾಗ, ಇಲ್ಲಿರುವ ಸರಕುಗಳೆಲ್ಲವೂ ಬೌದ್ಧಿಕವಾಗಿ ಕೊಳೆತುಹೋಗಿವೆ ಎಂದು ಈ ಪೀಳಿಗೆಗೆ ಅರಹುವ ಪ್ರಯತ್ನಗಳು ನಮ್ಮಿಂದ ನಡೆದಿದೆಯೇ ? ನಡೆದಿದ್ದರೆ ಯಾವ ನೆಲೆಯಲ್ಲಿ, ಯಾವ ಪ್ರಮಾಣದಲ್ಲಿ ನಡೆದಿದೆ ? ಇತಿಹಾಸ ಎಂದಾಗ ನೈಜ ಎಂಬ ಪದಕ್ಕಿಂತಲೂ ವಾಸ್ತವ ಎಂಬ ಪದವನ್ನು ಬಳಸಿ, ವೈಜ್ಞಾನಿಕ ನೆಲೆಯಲ್ಲಿ ವೈಚಾರಿಕ ದೃಷ್ಟಿಯಿಂದ ಚರಿತ್ರೆಯ ಪುಟಗಳನ್ನು ತಿರುವಿ ಹಾಕುವ ವ್ಯವಧಾನವನ್ನು ಯುವ ಸಮೂಹದಲ್ಲಿ ನಾವು ಮೂಡಿಸಿದ್ದೇವೆಯೇ ? ಇತಿಹಾಸ ಮತ್ತು ಪರಂಪರೆಯ ಪುಟಗಳಲ್ಲಿ ಏನನ್ನು ನೋಡಬೇಕು ಎನ್ನುವುದಕ್ಕಿಂತಲೂ ಹೇಗೆ ನೋಡಬೇಕು ಎಂಬ ಅರಿವನ್ನು ಮೂಡಿಸಲು ಸಾಧ್ಯವಾಗಿದೆಯೇ ?

ಬಹುಶಃ ಇದು ನಮ್ಮಿಂದ, ಅಂದರೆ ಹಿರಿಯ ತಲೆಮಾರಿನಿಂದ, ಸಾಧ್ಯವಾಗಿಲ್ಲ. ಏಕೆಂದರೆ ನಾವು ಸಂಘಟನಾತ್ಮಕವಾಗಿ, ಅಸ್ಮಿತೆಗಳನ್ನಾಧರಿಸಿ ನಮ್ಮದೇ ಆದ ಅಸ್ತಿತ್ವಗಳನ್ನರಸಿ ವಿಘಟಿತವಾಗಿದ್ದೇವೆ. ವಿಷಯಾಧಾರಿತವಾಗಿ ಒಗ್ಗೂಡುವ ಬೌದ್ಧಿಕ ಚಿಂತನೆಗಳೆಲ್ಲವೂ ಒಂದು ಹಂತದಲ್ಲಿ ಅಸ್ಮಿತೆಯ ನೊಗಭಾರಕ್ಕೆ ಸಿಲುಕಿ ಛಿದ್ರವಾಗಿಬಿಡುವುದನ್ನು ಕಳೆದ ಐವತ್ತು ವರ್ಷಗಳಿಂದಲೂ ನೋಡುತ್ತಲೇ ಬಂದಿದ್ದೇವೆ. ಹಾಗಾಗಿ ಒಂದು ಘಟನೆ ಅಥವಾ ಪ್ರಸಂಗಕ್ಕೆ ಥಟ್ಟನೆ ಪ್ರತಿಕ್ರಯಿಸುವ ಮನಸುಗಳು ಮರುಕ್ಷಣದಲ್ಲೇ ಗಾಢ ಮೌನಕ್ಕೆ ಜಾರಿಬಿಡುತ್ತವೆ. ಹಿರಿಯ ತಲೆಮಾರಿನ ಸಂಘಟನಾತ್ಮಕ ವೈಫಲ್ಯವನ್ನು ಬದಿಗಿಟ್ಟು ನೋಡಿದಾಗಲೂ, ಸಾಮಾನ್ಯವಾಗಿ ವರ್ತಮಾನ ಭಾರತದ ಮಿಲೆನಿಯಂ ಮಕ್ಕಳ ಮುಂದೆ ನಾವು ಬುದ್ಧ-ಬಸವ-ಗಾಂಧಿ-ಅಂಬೇಡ್ಕರ್-ಲೋಹಿಯಾ-ಮಾರ್ಕ್ಸ್‌-ಪೆರಿಯಾರ್‌ ಮುಂತಾದ ದೊಡ್ಡ ತಂಡವನ್ನೇ ಇರಿಸುತ್ತೇವೆ. ಈ ದಾರ್ಶನಿಕರು ಏನನ್ನು-ಏತಕ್ಕಾಗಿ ಹೇಳಿದರು ಎನ್ನುವುದನ್ನು ಸುಸ್ಪಷ್ಟವಾಗಿ ಹೇಳುತ್ತಲೇ  ಇರುತ್ತೇವೆ. ಆದರೆ ಸಮಕಾಲೀನ ಸಮಾಜಕ್ಕೆ ಅನ್ವಯಿಸುವ ರೀತಿಯಲ್ಲಿ ಈ ದರ್ಶನಗಳನ್ನು ನಿರ್ವಚಿಸುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಈ ಉದಾತ್ತ ಆಲೋಚನೆಗಳ ಪ್ರಸ್ತುತತೆಯನ್ನು ಸಾಂಧರ್ಭಿಕವಾಗಿ ಮಿಲೆನಿಯಂ ಮಕ್ಕಳಿಗೆ ಮನದಟ್ಟು ಮಾಡುತ್ತಿಲ್ಲ.

ಸಾಂಸ್ಕೃತಿಕ ಜಿಜ್ಞಾಸೆಗಳ ಸುತ್ತ

ಸಾಹಿತ್ಯ, ರಂಗಭೂಮಿ ಮತ್ತು ಇತರ ಸಾಂಸ್ಕೃತಿಕ ವಲಯಗಳನ್ನು ಸಮಕಾಲೀನಗೊಳಿಸುವ ನಿಟ್ಟಿನಲ್ಲಿ ಹಿರಿಯ ತಲೆಮಾರು ವಿಫಲವಾಗುತ್ತಿರುವುದನ್ನು ಗಂಭೀರವಾಗಿ ವಿಮರ್ಶೆಗೊಳಪಡಿಸಬೇಕಿದೆ. ಇತ್ತೀಚಿನ ಉದಾಹರಣೆ ಎಂದರೆ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ-ನಿರಂಕುಶಮತಿಗಳಾಗಿ ಎಂಬ ಕರೆಯನ್ನು ಸಮಾಜಕ್ಕೆ ಮರುಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ 50 ವರ್ಷಗಳ ಹಿಂದಿನ ಈ ಕರೆಯನ್ನು ಮಿಲೆನಿಯಂ ಮಕ್ಕಳು ವರ್ತಮಾನದ ಭ್ರಮಾಧೀನ ಪರಿಸ್ಥಿತಿಯಲ್ಲಿ ಹೇಗೆ ಪರಾಮರ್ಶಿಸಬೇಕು  ಎಂದು ಎಲ್ಲಿಯೂ ಹೇಳಲಾಗುತ್ತಿಲ್ಲ. ಕುವೆಂಪು ಈ ಕರೆ ನೀಡಿದಾಗ ಸಮಾಜದಲ್ಲಿ ವೈಚಾರಿಕತೆ ಆಳವಾಗಿ ಬೇರೂರಿತ್ತು, ವೈಜ್ಞಾನಿಕ ಚಿಂತನೆಗಳು ಮನೆ ಮಾಡಿದ್ದವು, ತಳಸಮಾಜದಲ್ಲಿ ಪ್ರಜಾಪ್ರಭುತ್ವದ ಆಶಯಗಳು ದಟ್ಟವಾಗಿದ್ದವು. ಆದರೆ ಇವೊತ್ತಿನ ಮಿಲೆನಿಯಂ ಮಕ್ಕಳ ನಡುವೆ ಇದು ಯಾವ ಪ್ರಮಾಣದಲ್ಲಿದೆ ? ಇದನ್ನು ತಿಳಿದುಕೊಳ್ಳದೆ ಹೋದರೆ ನಮಗೆ ಕುವೆಂಪು ಅವರ ಸಂದೇಶವನ್ನು ಮುಟ್ಟಿಸಲಾಗುವುದೇ ಇಲ್ಲ.

ಈ ಹಾದಿಯಲ್ಲಿ ಮಿಲೆನಿಯಂ ಮನಸುಗಳನ್ನು ಒಳಹೊಕ್ಕು ತಿಳಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆಯೇ ? ಸಾಹಿತ್ಯಾಧ್ಯಯನ ಅಥವಾ ಸಾಂಸ್ಕೃತಿಕ ಪುನರ್‌ ವಿಮರ್ಶೆಯೊಂದಿಗೇ ಈ ಆಲೋಚನೆಗಳನ್ನು, ಅವುಗಳ ಔದಾತ್ಯವನ್ನು ಇಂದಿನ ಯುವ ಸಮೂಹ ಯಾವ ನೆಲೆಯಲ್ಲಿ ನಿಂತು ಗ್ರಹಿಸಬೇಕು ? ಈ ಪ್ರಶ್ನೆಗೆ ಸಾಹಿತ್ಯಕವಾಗಿ, ರಂಗಪ್ರಯೋಗಗಳ ಮುಖಾಂತರ ಉತ್ತರ ಹೇಳಲು ನಾವು ಹೊರಟಿದ್ದೇವೆಯೇ ? ಇಲ್ಲ ಎಂದಾದರೆ ಮಿಲೆನಿಯಂ ಮಕ್ಕಳನ್ನು ದೂಷಿಸುವ ಮುನ್ನ ಆತ್ಮವಿಮರ್ಶೆ ಮಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕಲ್ಲವೇ ? ಕಳೆದ 35 ವರ್ಷಗಳಲ್ಲಿ ಭಾರತೀಯ ಸಮಾಜ-ರಾಜ್ಯದ ಜನತೆ ಎದುರಿಸಿರುವ ಭಯೋತ್ಪಾದನೆ, ಮತೀಯವಾದ, ಮತಾಂಧತೆ, ದ್ವೇಷರಾಜಕಾರಣ, ಕೋಮು ಧೃವೀಕರಣ, ಕಾರ್ಮಿಕರ ಶೋಷಣೆ, ಮಹಿಳಾ ದೌರ್ಜನ್ಯ , ಕೋವಿದ್‌ ಸಂದರ್ಭದ ದುರಂತಗಳು ಹಾಗೂ ಇವೆಲ್ಲವನ್ನೂ ಪೋಷಿಸುವ ನವಉದಾರವಾದ-ಬಲಪಂಥೀಯ ಸಾಂಸ್ಕೃತಿಕ ರಾಜಕಾರಣ, ಈ ಗಂಭೀರ ವಿಷಯಗಳು ಕನ್ನಡ ಸಾಹಿತ್ಯ-ರಂಗಭೂಮಿ ವಲಯದ ಆದ್ಯತೆ ಏಕಾಗಿಲ್ಲ ?

ಈ ಜಟಿಲ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳನ್ನು ಮಿಲೆನಿಯಂ ಮಕ್ಕಳಿಗೆ ತಲುಪಿಸುವಂತಹ ಸಾಹಿತ್ಯ ರಚನೆಯಾಗಿದೆಯೇ ? ಮಿಲೆನಿಯಂ ಮಕ್ಕಳಿಗೆ ಸಾಹಿತ್ಯ-ಇತಿಹಾಸ-ಪರಂಪರೆಯ ಅರಿವು ಇಲ್ಲ ಎನ್ನುವುದು ದಿಟ ಆದರೆ ಈ ಯುಗಧರ್ಮಕ್ಕೆ ಅನುಗುಣವಾಗಿ ಅವರಿಗೆ ಸತ್ಯೋತ್ತರ ಪರಿಭಾಷೆಯಲ್ಲಿ ಅರ್ಥಮಾಡಿಸುವಂತಹ ಪ್ರಯತ್ನಗಳು ನಡೆದಿವೆಯೇ ? ಇಲ್ಲ ಎಂದಾದರೆ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ವಲಯ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಸಹಜವಾಗಿಯೇ ಮಿಲೆನಿಯಲ್‌ ಮಕ್ಕಳಿಗೆ ತಮ್ಮ ಆರ್ಥಿಕ ಭವಿಷ್ಯ ಪ್ರಥಮ ಆದ್ಯತೆಯಾಗುತ್ತದೆ. ನವ ಉದಾರವಾದದ ಫಲಾನುಭವಿ ಪೋಷಕರು ಪ್ರತಿನಿಧಿಸುವ ಹಿತವಲಯದ ಸಮಾಜದಲ್ಲಿ ಈ ಮಕ್ಕಳಿಗೆ ಸಾಂಸ್ಕೃತಿಕ-ಸಾಮಾಜಿಕ ಪರಂಪರೆಯನ್ನು ಪರಿಚಯಿಸುವ ಜವಾಬ್ದಾರಿ ಪೋಷಕರ ಮೇಲಿರುವಷ್ಟೇ ಸಾಂಸ್ಕೃತಿಕ ಪರಿಚಾರಕರ ಮೇಲೂ ಇರುತ್ತದೆ. 1970ರ ದಶಕದ ಸ್ವಾವಲಂಬಿ ಅಭಿವೃದ್ಧಿಯ ಫಸಲಿನ ಮೇಲೆ ಹಿರಿಯ ತಲೆಮಾರು ತನ್ನ ಭದ್ರಕೋಟೆಯನ್ನು ನಿರ್ಮಿಸಿಕೊಂಡು, ಅದರೊಳಗೇ ತನ್ನ ಕಿರಿಯ ಪೀಳಿಗೆಯನ್ನು ಪೋಷಿಸಿದೆ. ಆದರೆ ಇದೇ ತಲೆಮಾರಿನ ಸುಶಿಕ್ಷಿತ ಫಲಾನುಭವಿಗಳು ಸಾಂಸ್ಕೃತಿಕ ಜಗತ್ತಿನ ಅಧಃಪತನಕ್ಕೆ ಮೂಕ ಸಾಕ್ಷಿಯಾಗಿಯೂ ಇದ್ದಾರೆ.

ಮಿಲೆನಿಯಂ ಮಕ್ಕಳ ಬೌದ್ಧಿಕ ಪ್ರಜ್ಞೆಯನ್ನು ನಾಶಪಡಿಸುತ್ತಿರುವ ವಾಟ್ಸಾಪ್‌ ವಿಶ್ವವಿದ್ಯಾಲಯದ ಮುಖ್ಯ ಪ್ರಾಯೋಜಕರು, ಈ ಮಕ್ಕಳ ಪೋಷಕರೇ ಆಗಿರುವುದು ದುರಂತ ಅಲ್ಲವೇ ? ಇಲ್ಲಿ ಸಮಾಜವೂ ಸಹ ನೈತಿಕ ಹೊಣೆ ಹೊರಬೇಕಾಗುತ್ತದೆ. ತಳಸಮಾಜದ ಅವಕಾಶವಂಚಿತ ಮಕ್ಕಳನ್ನು ಸಾಂಸ್ಕೃತಿಕ ರಾಜಕಾರಣದ ಬೆಂಗಾವಲು ಪಡೆಗಳನ್ನಾಗಿ ಮಾಡಿ, ಹಿತವಲಯದ ಮಕ್ಕಳನ್ನು ಕಾರ್ಪೋರೇಟ್‌ ಮಾರುಕಟ್ಟೆಯ ಅಡಿಯಾಳುಗಳನ್ನಾಗಿ ಮಾಡುತ್ತಿರುವ ವರ್ತಮಾನದ ಸಮಾಜ ತನ್ನ ನೈತಿಕತೆಯನ್ನು ಮರೆತಿರುವುದರಿಂದಲೇ ಸಂಸ್ಕೃತಿ ಮತ್ತು ಪರಂಪರೆ ಎಂಬ ಉದಾತ್ತ ಚಿಂತನೆಗಳು ನೆನೆಗುದಿಗೆ ಬಿದ್ದಿವೆ. ಎರಡೂ ಬದಿಯಿಂದ ಮಿಲೆನಿಯಂ ಮಕ್ಕಳು ಅಂಧಕಾರದ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ. ಕನ್ನಡದ ಸಾಂಸ್ಕೃತಿಕ ವಲಯ ಸಾಹಿತ್ಯಕವಾಗಿ, ರಂಗಪ್ರಯೋಗಗಳ ಮೂಲಕ ಈ ಕೂಪದಿಂದ ಮಕ್ಕಳನ್ನು ಹೊರಕ್ಕೆ ತೆಗೆಯಲು ಬೌದ್ಧಿಕ ಸರಕುಗಳನ್ನು ಉತ್ಪಾದಿಸಬೇಕಿದೆ. ಸಮಾಜದ ವೈಫಲ್ಯ ಇಲ್ಲಿ ಎದ್ದುಕಾಣುವಂತಿದೆ, ಅಲ್ಲವೇ ?

ರಾಜಕಾರಣದ ಜಿಜ್ಞಾಸೆಯ ಸುತ್ತ

ಕಳೆದ ಒಂದು ದಶಕದಲ್ಲಿ ಭಾರತೀಯ ಸಮಾಜವನ್ನು ಆವರಿಸಿರುವ ಹಿಂದುತ್ವ ರಾಜಕಾರಣವು ಸಮಾಲೋಚನೆ-ಚರ್ಚೆ-ಸಂವಾದ ಮುಂತಾದ ಉದಾತ್ತ ಆಲೋಚನೆಗಳನ್ನು ನಿರರ್ಥಕಗೊಳಿಸಿದೆ. ಮಿಲೆನಿಯಂ ಮಕ್ಕಳಲ್ಲಿ ಸಮಕಾಲೀನ ಸಮಾಜದ ಬಗ್ಗೆ ಅರಿವು ಮೂಡಿಸುವಂತಹ ಚರ್ಚಾಕೂಟಗಳು, ಪ್ರಬಂಧ ಸ್ಪರ್ಧೆಗಳು, ಸಾರ್ವಜನಿಕ ಸಂವಾದಗಳು ಏಕೆ ನಡೆಯುತ್ತಿಲ್ಲ ಎಂದು ನಾವು ಯೋಚಿಸಬೇಕಿದೆ. ನಾಲ್ಕೂ ದಿಕ್ಕುಗಳಿಂದ ಈ ಯುಗದ ಸಮಾಜವನ್ನು ಅಪ್ಪಳಿಸುವ ಸಾಮಾಜಿಕ ಮಾಧ್ಯಮಗಳ ಹಳಸಲು ಬೌದ್ಧಿಕ ಸರಕುಗಳು ಮಿಲೆನಿಯಂ ಮಕ್ಕಳನ್ನು ಕೇವಲ ಆಲಿಸುವುದಕ್ಕೆ ಸೀಮಿತಗೊಳಿಸಿವೆ. ಪ್ರಶ್ನಿಸಿ, ಚರ್ಚಿಸುವ ವ್ಯವಧಾನವನ್ನು ಶಾಲಾಕಾಲೇಜು ಹಂತದಲ್ಲೂ ಸಹ ಕಲಿಸಲಾಗುತ್ತಿಲ್ಲ. ಪ್ರಶ್ನಿಸುವುದು ಮಾನವನ ಬೌದ್ಧಿಕ ಬೆಳವಣಿಗೆಗೆ ಇಂಧನ ಎಂಬ ವಾಸ್ತವವನ್ನು ಈ ಮಕ್ಕಳಿಗೆ ತಿಳಿಸಿಹೇಳಬೇಕಿದೆ. ವ್ಯತಿರಿಕ್ತವಾಗಿ, ವರ್ತಮಾನ ಭಾರತದಲ್ಲಿ ಪ್ರಶ್ನಿಸುವುದೇ ಅಪರಾಧವಾಗಿದೆ. ಇಲ್ಲಿ ನಮಗೆ ಬುದ್ಧರಾದಿಯಾಗಿ ಎಲ್ಲ ದಾರ್ಶನಿಕರ ಬೋಧನೆಗಳನ್ನು ಸಮಕಾಲೀನಗೊಳಿಸಿ ಮಿಲೆನಿಯಂ ಮಕ್ಕಳಿಗೆ ತಲುಪಿಸುವುದು ಮುಖ್ಯವಾಗುತ್ತದೆ.

ಯಾವುದೇ ಸಿದ್ದಾಂತವಾಗಲಿ, ಎಷ್ಟೇ ಉದಾತ್ತ ಚಿಂತನೆಯಾಗಲಿ, ಎಂತಹುದೇ ಸೈದ್ಧಾಂತಿಕ ನೆಲೆಯಲ್ಲಿದ್ದರೂ ಅವು ಪ್ರಶ್ನಾತೀತವಾಗುವುದಿಲ್ಲ ಎಂಬ ವಿವೇಕವನ್ನು ಮಿಲೆನಿಯಂ ಮಕ್ಕಳಲ್ಲಿ ಮೂಡಿಸಬೇಕಿದೆ. ವಿಪರ್ಯಾಸವೆಂದರೆ ಇಂದು ಪ್ರಗತಿಪರ ಎಂದು ಹೇಳಲಾಗುವ ಬೌದ್ಧಿಕ ವಲಯದಲ್ಲೂ ದಾರ್ಶನಿಕರನ್ನು , ಅವರ ಆಲೋಚನೆಗಳನ್ನು ಪ್ರಶ್ನಾತೀತಗೊಳಿಸಲಾಗುತ್ತಿದೆ. ಇದು ಮಿಲೆನಿಯಂ ಮಕ್ಕಳ ಬೌದ್ಧಿಕ ವಿಕಾಸಕ್ಕೆ ದೊಡ್ಡ ತೊಡಕಾಗುತ್ತದೆ. ಈ ವಿಕಾಸದ ಹಾದಿಯಲ್ಲಿರುವ ಭೌತಿಕ ತಡೆಗೋಡೆಗಳನ್ನು ಕೆಡವಿ, ಸತ್ಯೋತ್ತರ ಯುಗದ ಮಿಲೆನಿಯಂ ಮಕ್ಕಳನ್ನು ಅಸ್ಮಿತೆಗಳ ಆವರಣದಿಂದ ಹೊರತಂದು, ಮಾನವೀಯ ಮೌಲ್ಯಗಳ ಮೈದಾನದಲ್ಲಿ ನಿಲ್ಲಿಸುವ ಜವಾಬ್ದಾರಿ ಸಮಾಜದ ಮೇಲಿದೆ, ಈ ಸಮಾಜವನ್ನು ಪ್ರತಿನಿಧಿಸುವ ಪೋಷಕರ ಮೇಲಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಈ ಜವಾಬ್ದಾರಿಯನ್ನು ಸಾಂಸ್ಕೃತಿಕ ವಲಯ ಹೊರಬೇಕಿದೆ. ಅಧಿಕಾರ ಕೇಂದ್ರದಲ್ಲಿ ಕೈಕಟ್ಟಿ ನಿಲ್ಲುವ ಸಾಂಸ್ಕೃತಿಕ ಸಂಸ್ಥೆಗಳ ಪ್ರತಿನಿಧಿಗಳು ಈ ನೈತಿಕ ನೆಲೆಯನ್ನು ಕಂಡುಕೊಳ್ಳಬೇಕಿದೆ.

ಇಲ್ಲಿ ಮೂಲ ಪ್ರಶ್ನೆ ಇರುವುದು ಪೇರೆಂಟ್ಸ್ vs ಮಿಲೆನಿಯಲ್ಸ್‌ ಅಲ್ಲ. ಬದಲಾಗಿ ಹಿರಿಯ ತಲೆಮಾರು vs ಮಿಲೆನಿಯಲ್ಸ್.‌ ಈ ಸವಾಲನ್ನು ಎದುರಿಸಲು ಪ್ರಜ್ಞಾವಂತ ಸಮಾಜ ಸಜ್ಜಾಗಬೇಕಿದೆ.

( ಕೃಪೆ  : ಸಮಾಜಮುಖಿ ಮಾಸಪತ್ರಿಕೆ ಜುಲೈ 2024)

Previous Post

ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ “ಮಾಫಿಯಾ”

Next Post

ಡೆಂಗಿ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಸೂಚನೆ..!

Related Posts

ಗ್ರಾಮೀಣ ಉದ್ಯೋಗದ ಮೇಲೆ ಅಂತಿಮ ಪ್ರಹಾರ..!
Top Story

ಗ್ರಾಮೀಣ ಉದ್ಯೋಗದ ಮೇಲೆ ಅಂತಿಮ ಪ್ರಹಾರ..!

by ಪ್ರತಿಧ್ವನಿ
December 27, 2025
0

ಸಂದಿಗ್ಧ ಸಮಯದಲ್ಲಿ, ಸಂಕಟದ ಹೊತ್ತಿನಲ್ಲಿ ಜೀವ ರಕ್ಷಕ ಅವಕಾಶವಾಗಿ ತನ್ನ ಪಯಣ ನಡೆಸಿದ್ದ MNREGA (ನರೇಗಾ) ಯೋಜನೆಯನ್ನು ಅಕಾಲಿಕ ಸಾವಿಗೀಡುಮಾಡಿರುವುದು, ಭಾರತದ ಅತ್ಯಂತ ಕೆಳಸ್ತರದ ಶ್ರಮಜೀವಿಗಳ ಪಾಲಿಗೆ...

Read moreDetails

ಕಷ್ಟದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ಸಾರ್ಥಕ: ಸಿಎಂ ಸಿದ್ದರಾಮಯ್ಯ

December 26, 2025
ಉದ್ಯೋಗ ಖಾತರಿಯೂ.. ಮಾರುಕಟ್ಟೆಯ ತಂತ್ರವೂ..!

ಉದ್ಯೋಗ ಖಾತರಿಯೂ.. ಮಾರುಕಟ್ಟೆಯ ತಂತ್ರವೂ..!

December 21, 2025
ಲ್ಯಾಂಡ್ ಲಾರ್ಡ್ ಚಿತ್ರದ ʼನಿಂಗವ್ವ ನಿಂಗವ್ವʼ ಸಾಂಗ್‌ ರಿಲೀಸ್: ಹೇಗಿದೆ ನಿಂಗವ್ವ- ರಾಚಯ್ಯನ ಡ್ಯುಯೆಟ್?

ಲ್ಯಾಂಡ್ ಲಾರ್ಡ್ ಚಿತ್ರದ ʼನಿಂಗವ್ವ ನಿಂಗವ್ವʼ ಸಾಂಗ್‌ ರಿಲೀಸ್: ಹೇಗಿದೆ ನಿಂಗವ್ವ- ರಾಚಯ್ಯನ ಡ್ಯುಯೆಟ್?

December 20, 2025
ಎಲ್ಲವೂ ಸರಿಯಾಗಬೇಕು: ಜೈಲಾಧಿಕಾರಿಗಳಿಗೆ ಅಲೋಕ್ ಕೊಟ್ಟ ಡೆಡ್ ಲೈನ್ ಏನು..?

ಎಲ್ಲವೂ ಸರಿಯಾಗಬೇಕು: ಜೈಲಾಧಿಕಾರಿಗಳಿಗೆ ಅಲೋಕ್ ಕೊಟ್ಟ ಡೆಡ್ ಲೈನ್ ಏನು..?

December 16, 2025
Next Post

ಡೆಂಗಿ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಸೂಚನೆ..!

Recent News

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!
Top Story

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!

by ಪ್ರತಿಧ್ವನಿ
December 30, 2025
ಕ್ರೀಡಾ ಲೋಕದಲ್ಲಿ 2025 ಎಷ್ಟು ಮಹತ್ವ ಪಡೆದಿತ್ತು..? ಯಾವೆಲ್ಲ ಮೊದಲುಗಳಿಗೆ ಕ್ರೀಡಾ ಕ್ಷೇತ್ರ ಸಾಕ್ಷಿಯಾಗಿತು? ಆಟಗಳ ಜಗತ್ತಿನಲ್ಲಿ ಏನೆಲ್ಲ ನಡೆಯಿತು ಎನ್ನುವುದರ ಹಿನ್ನೋಟ..
Top Story

ಕ್ರೀಡಾ ಲೋಕದಲ್ಲಿ 2025 ಎಷ್ಟು ಮಹತ್ವ ಪಡೆದಿತ್ತು..? ಯಾವೆಲ್ಲ ಮೊದಲುಗಳಿಗೆ ಕ್ರೀಡಾ ಕ್ಷೇತ್ರ ಸಾಕ್ಷಿಯಾಗಿತು? ಆಟಗಳ ಜಗತ್ತಿನಲ್ಲಿ ಏನೆಲ್ಲ ನಡೆಯಿತು ಎನ್ನುವುದರ ಹಿನ್ನೋಟ..

by ಪ್ರತಿಧ್ವನಿ
December 30, 2025
ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
Top Story

ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 30, 2025
ಡೆವಿಲ್‌ ಸೂಪರ್‌ ಹಿಟ್‌.. ಬಿಡುಗಡೆ ಬಳಿಕ ದರ್ಶನ್‌ ಮುಂದಿನ ಸಿನಿಮಾ ಯಾರ ಜೊತೆ..?
Top Story

ಡೆವಿಲ್‌ ಸೂಪರ್‌ ಹಿಟ್‌.. ಬಿಡುಗಡೆ ಬಳಿಕ ದರ್ಶನ್‌ ಮುಂದಿನ ಸಿನಿಮಾ ಯಾರ ಜೊತೆ..?

by ಪ್ರತಿಧ್ವನಿ
December 30, 2025
ʼನೀನಾದೆ ನಾʼ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ದಿಢೀರ್‌ ಸಾವಿಗೆ ಕಾರಣವೇನು..?
Top Story

ʼನೀನಾದೆ ನಾʼ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ದಿಢೀರ್‌ ಸಾವಿಗೆ ಕಾರಣವೇನು..?

by ಪ್ರತಿಧ್ವನಿ
December 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಬಿ-ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ತಡೆ ಹಿಡಿಯುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದ ಅಂಶಗಳು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಬಿ-ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ತಡೆ ಹಿಡಿಯುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದ ಅಂಶಗಳು:

December 30, 2025
K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!

December 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada