ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಮತ್ತೆ ಹಾಲಿನ ದರ ಪರಿಷ್ಕರಣೆ ಮಾಡಲು ಕೆಎಂಎಫ್ ಮುಂದಾಗಿದೆ.
ಹೌದು, ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ನಡೆಸಿಕೊಳ್ಳುತ್ತಿದೆ. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು KMF ಸಿದ್ಧವಾಗಿದೆ.
ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟದಿಂದ ಕೆಎಂಎಫ್ ಗೆ ಮನವಿ ಬಂದಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆದಿದೆ ಎನ್ನಲಾಗಿದೆ.
ಕೆಎಂಎಫ್ ಆರ್ಥಿಕ ನಷ್ಟದ ಹಿನ್ನಲೆ 5 ರೂಪಾಯಿ ಪ್ರತಿ ಲೀಟರ್ ಗೆ ದರ ಹೆಚ್ಚಿಸುವಂತೆ ಮನವಿ ಮಾಡಲು KMF ಎಂಡಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಳೆದ ಆಗಸ್ಟ್ 1 ರಿಂದ ನಂದಿನಿ ಪ್ರತೀ ಲೀಟರ್ಗೆ 5ರೂ ಹೆಚ್ಚಳ ಮಾಡಲು ಮನವಿ ಮಾಡಿದ್ದಕ್ಕೆ ಕೇವಲ 3 ರೂಪಾಯಿ ಹೆಚ್ಚಳ ಮಾಡಿತ್ತು. ಹೀಗಾಗಿ ಲೀಟರ್ಗೆ 3ರೂ ಹೆಚ್ಚುವರಿ ಹಣ ರೈತರಿಗೆ ಕೆಎಂಎಫ್ ನೀಡಿತ್ತು.