ಅತ್ಯಾಧುನಿಕ ಸೇನಾ ಹೆಲಿಕಾಪ್ಟರ್ ಎಂಐ17ವಿ5 ಬುಧವಾರ ತಮಿಳುನಾಡಿನ ಕೂನೂರಿನ ಬಳಿ ಪತನಗೊಂಡು; ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಸೇರಿದಂತೆ 13 ಜನ ಮೃತಪಟ್ಟ ಘಟನೆ ಭಾರತೀಯ ಸೇನಾ ವಾಹನಗಳ ಸುರಕ್ಷತೆಯ ಸುತ್ತ ಹೊಸ ಚರ್ಚೆಯೊಂದನ್ನು ಮುನ್ನೆಲೆಗೆ ತಂದಿದೆ.
ಖುದ್ದು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರೇ ಪ್ರಯಾಣಿಸುತ್ತಿದ್ದ ಎಂಐ17ವಿ5 ಹೆಲಿಕಾಪ್ಟರ್ ಪತನಗೊಂಡಿದ್ದು ಕಂಡಾಗ ಅತ್ಯಾಧುನಿಕ ಎಂದು ಕರೆಯಲ್ಪಡುವ ಭಾರತೀಯ ಸೇನಾ ವಾಹನಗಳು ನಿಜಕ್ಕೂ ಸುರಕ್ಷಿತವಾಗಿವೆಯೇ ಎಂಬ ಪ್ರಶ್ನೆ ಈಗ ದೇಶದ ಮುಂದಿದೆ. ಭಾರತೀಯ ಸೇನಾ ವ್ಯವಸ್ಥೆ ಮೇಲೆ ವಿಶೇಷ ಅಭಿಮಾನ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಪ್ರಮುಖ ಮುಖಂಡರು ಸದಾ ಸೇನೆಯ ವಿಮಾನ ಹಾಗೂ ಹೆಲಿಕಾಪ್ಟರ್ ಬಳಸಿ ಸಂಚರಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪದೇ ಪದೇ ಸೇನಾ ಹೆಲಿಕಾಪ್ಟರ್ ಗಳು ಅವಘಡಕ್ಕೀಡಾಗುತ್ತಿರುವುದು ಕಂಡಾಗ ಭಾರತೀಯ ಸೇನಾ ಹೆಲಿಕಾಪ್ಟರ್ ಗಳನ್ನು ಹತ್ತುವ ಮುನ್ನ ಒಂದು ಹೆಜ್ಜೆ ಹಿಂದಿಡಬೇಕಾದ ಯೋಚನೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲ ನಾಯಕರ ತಲೆಯಲ್ಲಿ ಬಂದರೂ ಆಶ್ಚರ್ಯಪಡಬೇಕಿಲ್ಲ.
ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೂಡ ಸೇನಾ ವಾಹನಗಳ ಸುರಕ್ಷತೆ ಬಗ್ಗೆ ಪ್ರತಿಕ್ರಿಯಿಸಿದ್ದು, “ದೇಶದ ಸುರಕ್ಷತೆಯ ದೃಷ್ಟಿಯಿಂದ ಸೇನಾ ಹೆಲಿಕಾಪ್ಟರ್ ಪತನವಾಗಿರುವುದು ಗಂಭೀರ ವಿಷಯ. ಈ ಘಟನೆಯಿಂದ ದೇಶಕ್ಕೆ ಆಘಾತವಾಗಿದೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಸಾಮಾನ್ಯ ತನಿಖೆ ನಡೆಸುವ ಬದಲು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಹೆಲಿಕಾಪ್ಟರ್ ದುರಂತದ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ದೇಶದ ಜನತೆಗೆ ಸೂಕ್ತ ವಿವರ ನೀಡಬೇಕು” ಎಂದು ಆಗ್ರಹಿಸಿರುವುದು ಗಮನಾರ್ಹ.
ಅವಘಡದ ಸುಳಿಯಲ್ಲಿ ಎಂಐ17ವಿ5
2012 ಆಗಷ್ಟ್ 30 ರಂದು ಗುಜರಾತ್ ನ ಜಾಮ್ ನಗರದ ವಾಯು ನೆಲೆಯ ಹತ್ತಿರ ಎರಡು ಎಂಐ-17ವಿ5 ಹೆಲಿಕಾಪ್ಟರ್ ಮುಖಾಮುಖಿಯಾಗಿ 9 ಸೈನಿಕರು ಮೃತ ಪಟ್ಟಿದ್ದರು. 2013 ರ ಜೂನ್ 15 ರಂದು ಉತ್ತರಾಖಂಡದ ಕೇದಾರನಾಥ್ ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದವರನ್ನು ಏರ್ ಲಿಫ್ಟ್ ಮಾಡುವಾಗ ಇದೇ ಮಾದರಿಯ ಹೆಲಿಕಾಪ್ಟರ್ ಪತನಗೊಂಡು 8 ಜನರು ಸಾವಿಗೀಡಾಗಿದ್ದರು.
2017 ರ ಅಕ್ಟೋಬರ್ 7 ರಂದು ಅರುಣಾಚಲ ಪ್ರದೇಶದ ತವಾಂಗ್ ಬಳಿ ಹಾಗೂ 2018 ರ ಏಪ್ರಿಲ್ 3 ರಂದು ಉತ್ತರಾಖಂಡದಲ್ಲಿ ಎಂಐ17ವಿ5 ಹೆಲಿಕಾಪ್ಟರ್ ಪತನಗೊಂಡಿತ್ತು. ಆ ವೇಳೆ ಯಾವುದೇ ಸಾವು ಸಂಭವಿಸಿರಲಿಲ್ಲ. ಇನ್ನು, 2019 ಫೆಬ್ರವರಿಯಲ್ಲಿ ಶ್ರೀನಗರದಲ್ಲಿ ಎಂಐ17ವಿ5 ಹೆಲಿಕಾಪ್ಟರ್ ಪತನಗೊಂಡು ವಾಯು ಪಡೆಯ ಆರು ಸಿಬ್ಬಂದಿ ಮೃತರಾಗಿದ್ದನ್ನು ಇಲ್ಲಿ ಗಮನಿಸಬಹುದು.
ಎಂಐ17ವಿ5 ಹಿನ್ನೆಲೆ ಹಾಗೂ ವೈಶಿಷ್ಟ್ಯತೆ
ಭಾರತೀಯ ವಾಯುಪಡೆಯಲ್ಲಿ 2012 ರಿಂದ ಎಂಐ17ವಿ5 ಹೆಲಿಕಾಪ್ಟರ್ ಬಳಕೆಯಲ್ಲಿದೆ. ಮುಖ್ಯವಾಗಿ ವಿಪತ್ತು ನಿರ್ವಹಣಾ ಕಾರ್ಯಾದಲ್ಲಿ ಮತ್ತು ಸೇನಾ ಸಲಕರಣೆ ಸಾಗಣೆಗಾಗಿ ಈ ಹೆಲಿಕಾಪ್ಟರ್ ಬಳಸಲಾಗುತ್ತದೆ. 2008 ರಲ್ಲಿ ರಷ್ಯಾದೊಂದಿಗೆ ಭಾರತವು 80 ಎಂಐ17ವಿ5 ಹೆಲಿಕಾಪ್ಟರ್ ಹೊಂದುವ ಉದ್ದೇಶದಿಂದ ರೊಸೊಬೊರೊನ್ ಎಕ್ಸ್ ಪೋರ್ಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ಹಂತದದಲ್ಲಿ 2011 ರ ಸೆಪ್ಟೆಂಬರ್ ನಲ್ಲಿ ಎಂಐ17ವಿ5 80 ಹೆಲಿಕಾಪ್ಟರ್ ಗಳು ದೇಶಕ್ಕೆ ಬಂದವು. ಜೊತೆಗೆ ಈ ಒಪ್ಪಂದ 151 ಹೆಲಿಕಾಪ್ಟರ್ ತರಿಸಿಕೊಳ್ಳುವಲ್ಲಿಗೆ ವಿಸ್ತರಣೆಯಾಯಿತು.
ಈ ಹೆಲಿಕಾಪ್ಟರ್ ಸುಮಾರು 13 ಸಾವಿರ ಕೆಜಿ ತೂಕ ಹೊರುವ ಸಾಮರ್ಥ್ಯ ಹೊಂದಿದ್ದು, ಪಿಕೆವಿ-8 ಆಟೋ ಪೈಲಟ್ ವ್ಯವಸ್ಥೆ ಹಾಗೂ ಪಥಗಮನ ನಿಯಂತ್ರಣ ವಹಿಸುವ ಏವಿಯಾನಿಕ್ಸ್ ಸ್ಯೂಟ್ ಇದರಲ್ಲಿದೆ. ಸೇನಾ ಸಿಬ್ಬಂದಿಯನ್ನು ಹೊತ್ತು ಸಾಗಿಸಲು ಹಾಗೂ ಎತ್ತರದ ಪ್ರದೇಶಗಳಿಗೆ ಅಗತ್ಯ ಸರಕು ಸಾಗಿಸುವ ನಿಟ್ಟಿನಲ್ಲಿ ಎಂಐ17ವಿ5 ಹೆಲಿಕಾಪ್ಟರ್ ಬಳಸಲಾಗುತ್ತಿದೆ.
ಜಗತ್ತಿನ ಅತ್ಯಾಧುನಿಕ ಸರಕು ಸಾಗಣೆಯ ಹೆಲಿಕಾಪ್ಟರ್ ಇದಾಗಿದ್ದು, ರಾತ್ರಿ ಪ್ರಯಾಣಕ್ಕೆ ಸಹಕಾರಿಯಾಗುವ ನೈಟ್ ವಿಷನ್ ಸಾಧನ ಹಾಗೂ ವಾತಾವರಣದ ಸಮಗ್ರ ಮಾಹಿತಿ ನೀಡುವ ವೆದರ್ ರೇಡಾರ್ ಅನ್ನು ಇದು ಒಳಗೊಂಡಿದ್ದಾಗಲೂ ಇದು ಪತನವಾಗಿದ್ದು ಕಂಡರೆ ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
1963 ರಲ್ಲೂ ನಡೆದಿತ್ತು ಅವಘಡ
ತಮಿಳುನಾಡಿನ ಈ ಎಂಐ17ವಿ5 ಹೆಲಿಕಾಪ್ಟರ್ ಪತನವು 1963 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ನಡೆದ ದುರ್ಘಟನೆಯನ್ನು ನೆನಪಿಸುವಂತಿದೆ. ಆ ಅವಘಡದಲ್ಲಿ ಲೆಪ್ಟಿನೆಂಟ್ ಜನರಲ್ ವಿಕ್ರಮ್ ಸಿಂಗ್, ಲೆಪ್ಟಿನೆಂಟ್ ಜನರಲ್ ದೌಲತ್ ಸಿಂಗ್, ಮೇಜರ್ ಜನರಲ್ ಕೆಎನ್‌ಡಿ ನಾನಾವತಿ, ಏರ್ ವೈಸ್ ಮಾರ್ಷಲ್ ಇ.ಡಬ್ಲ್ಯೂ ಪಿಂಟೋ, ಪ್ಲೈಟ್ ಲೆಪ್ಟಿನೆಂಟ್ ಎಸ್ ಎಸ್ ಬೋದೆ ಹಾಗೂ ಬ್ರಿಗೇಡಿಯರ್ ಎಸ್ ಆರ್ ಒಬೆರಾಯ್ ಮೃತಪಟ್ಟಿದ್ದರು. 58 ವರ್ಷಗಳ ಹಿಂದೆ ಆ ದುರಂತವನ್ನು ಮಿಲಟರಿಯ ದೊಡ್ಡ ವೈಮಾನಿಕ ದುರಂತ ಎಂದೇ ವ್ಯಾಖ್ಯಾನಿಸಲಾಗಿತ್ತು.
ಎಂಐ17ವಿ5 ಹೆಲಿಕಾಪ್ಟರ್ ದುರಂತದಿಂದಾಗಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ ಸೇನೆಯ 11 ಸದಸ್ಯರ ನಿಗೂಢ ಸಾವಿನ ಸುತ್ತ ಹಲವಾರು ಪ್ರಶ್ನೆಗಳು ಎದ್ದಿವೆ. ಭಾರತೀಯ ಸೇನೆಯ ಬಗ್ಗೆ ಅಪಾರ ಮೆಚ್ಚುಗೆಯನ್ನು ಸದಾ ತೋರ್ಪಡಿಸುವ ಮೋದಿ ಅವರು ಈ ಸಾವುಗಳಿಗೆ ಸೂಕ್ತ ತನಿಖೆ ನಡೆಸಿ ದುರಂತದ ಹಿಂದಿರುವ ಸತ್ಯವನ್ನು ದೇಶದ ಮುಂದಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಜೊತೆಗೆ ಸೇನೆ ಮತ್ತು ದೇಶಭಕ್ತಿಯ ವಿಷಯದಲ್ಲಿ ಸದಾ ಎದೆತಟ್ಟಿಕೊಂಡು ಮಾತನಾಡುವ ಪ್ರಧಾನಿ ಮೋದಿಯವರ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ಸೇನೆಯ ಆಧುನೀಕರಣಕ್ಕೆ ಭಾರೀ ಮೊತ್ತದ ಹಣಕಾಸು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ವ್ಯಯ ಮಾಡಿಯೂ, ಇಂತಹದ್ದೊಂದು ಭೀಕರ ದುರಂತ ನಡೆದದ್ದು ಹೇಗೆ ಮತ್ತು ಅದಕ್ಕೆ ಹೊಣೆ ಯಾರು ಎಂಬುದು ಕೂಡ ಕೇಳಬೇಕಾಗಿರುವ ಪ್ರಶ್ನೆ