ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಕೈಗವಸು ತಯಾರಿಕಾ ಕಂಪೆನಿಯಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಬೆಂಕಿ ಅನಾಹುತದಲ್ಲಿ ಕನಿಷ್ಠ ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಭಯಾನಕ ಅವಘಡದಲ್ಲಿ ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕೂಡಲೇ ಅಗ್ನಿ ಶಾಮಕ ವಾಹನಗಳು ಆಗಮಿಸಿದ್ದು, ಕಟ್ಟಡದ ಒಳಗೆ ಸಿಲುಕಿದ್ದ ಕಾರ್ಮಿಕರನ್ನು ಹೊರಗೆ ಕರೆತರಲು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಬೆಳಗಿನ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದು ಸಾಧ್ಯವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ್ಯಾಕ್ಟರಿಯನ್ನು ರಾತ್ರಿ ಬಂದ್ ಮಾಡಲಾಗಿತ್ತು. ಯಾವುದೇ ಉತ್ಪಾದನಾ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಆದರೆ ತಾವು ಒಳಗೆ ಮಲಗಿದ್ದ ಸಂದರ್ಭದಲ್ಲಿ ನಸುಕಿನ 2.15ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ ಎಂದು ಈ ಘಟನೆಯಲ್ಲಿ ಬದುಕುಳಿದ ಕಾರ್ಮಿಕರು ತಿಳಿಸಿದ್ದಾರೆ. ಬೆಂಕಿಯ ಜ್ವಾಲೆಗಳು ಆವರಿಸಿದ ವೇಳೆ ಕಾರ್ಖಾನೆ ಒಳ ಭಾಗದಲ್ಲಿ ಸುಮಾರು 10 – 15 ಜನರು ಸಿಲುಕಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.






