ಬೆಂಗಳೂರಿನಲ್ಲಿ ಡಿಸೆಂಬರ್ 20ರಿಂದ ಮೆಟ್ರೋ ರೈಲು ಬೆಳ್ಳಗ್ಗೆ 5ರಿಂದ ಕಾರ್ಯ ನಿರ್ವಹಿಸಲಿದೆ ಎಂದು BMRCL ಅಧಿಕಾರಿಗಳು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪರಿಷ್ಕೃತ ಸಮಯವು ಸೋಮವಾರದಿಂದ ಅನ್ವಯವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಭಾನುವಾರಗಳನ್ನು ಹೊರತುಪಡಿಸಿ, ವಾರದ ಎಲ್ಲಾ ದಿನಗಳಲ್ಲಿ (ಸೋಮವಾರದಿಂದ ಶನಿವಾರದವರೆಗೆ) ನಮ್ಮ ಮೆಟ್ರೋ ಸೇವೆಗಳ ಕಾರ್ಯಾಚರಣೆಯ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ’ ಎಂದು BMRCL ಪ್ರಕಟಣೆ ತಿಳಿಸಿದೆ.
ಹಸಿರು ಮತ್ತು ನೇರಳೆ ಎರಡೂ ಮಾರ್ಗದಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ರೈಲುಗಳು ಬೆಳಗಿನ ಜಾವ 5ಕ್ಕೆ ಸಂಚಾರ ಆರಂಭಿಸಿದರೆ ರಾತ್ರಿ 11:30ರ ವರೆಗೂ ನಿಯೋಜನೆಗೊಂಡಿರುವ ಮಾರ್ಗದಲ್ಲಿ ಸಂಚರಿಸಲಿವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನವೆಂಬರ್ ತಿಂಗಳಲ್ಲಿ ಸಂಸ್ಥೆಯು ಸಮಯದ ಬದಲಾವಣೆಯನ್ನು ಮಾಡಿತ್ತು. ಈ ಹಿಂದೆ ಎರಡನೇ ಅಲೆ ಲಾಕ್ಡೌನ್ ಅನ್ನು ಸರ್ಕಾರ ತೆರವುಗೊಳಿಸಿದ ನಂತರ ನೈಟ್ ಕರ್ಪೂ ಇದ್ದ ಕಾರಣ ಮೆಟ್ರೋ ರೈಲುಗಳು ನಿಗದಿತ ಸಮಯದಲ್ಲಿ ಸಂಚರಿಸುತ್ತಿದ್ದವು.
ಬೆಂಗಳೂರು ಮೆಟ್ರೋ ಪ್ರಸ್ತುತ ಎರಡು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ನೇರಳೆ ಮಾರ್ಗವು ಬಯ್ಯಪ್ಪನಹಳ್ಳಿಯಿಂದ ಕೆಂಗೇರಿವರೆಗೆ ಸಂಚರಿಸುತ್ತದೆ. ಹಸಿರು ಮಾರ್ಗವು ನಾಗಸಂದ್ರದಿಂದ ಟಾಟಾ ಸಿಲ್ಕ್ ಇನ್ಸ್ಟಿಟ್ಯೂಟ್ ನಿಲ್ದಾಣವರೆಗೂ ಸಂಪರ್ಕಿಸುತ್ತದೆ. ನಮ್ಮ ಮೆಟ್ರೋ ಒಟ್ಟು 55.6 ಕಿ.ಮೀ ಮಾರ್ಗವನ್ನು ಕ್ರಮಿಸುತ್ತದೆ ಮತ್ತು ಇದು ದೇಶದ ಮೂರನೇ ಅತಿ ದೊಡ್ಡ ರೈಲ್ವೆ ಸಂಪರ್ಕವಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.