ಬೆಂಗಳೂರಿಗರ ಮನಗೆದ್ದಿರುವ ನಮ್ಮ ಮೆಟ್ರೋ, ಎರಡನೇ ಹಂತದ ಕಾಮಗಾರಿಯ ಜೊತೆಗೆ ಮೂರನೇ ಹಂತ ಆರಂಭಿಸಲು ಸಿದ್ದತೆ ನಡೆಸುತ್ತಿದೆ. ಜೊತೆಗೆ ಈ ವರ್ಷದೊಳಗೆ ಎರಡು ಮೆಟ್ರೋ ಮಾರ್ಗವನ್ನ ಉದ್ಘಾಟಿಸಲು ಮುಂದಾಗಿದೆ. ನಮ್ಮ ಮೆಟ್ರೋದ ಮುಂದಿನ ಪ್ರಾಜೆಕ್ಟ್ ಏನು..? ಆರಂಭವಾಗುತ್ತಿರುವ ಮಾರ್ಗಗಳ್ಯಾವು..?
ಮೆಟ್ರೋ ಮೂರನೆ ಹಂತದ 34 ಕಿಲೋಮೀಟರ್ ಗೆ ಡಿಪಿಆರ್ ಸಿದ್ದ
ನಮ್ಮ ಮೆಟ್ರೋ ಒಂದನೇ ಹಂತ ಸಂಪೂರ್ಣ ಕಂಪ್ಲೀಟ್ ಆಗಿ, ಎರಡನೇ ಹಂತದ ಕಾಮಗಾರಿ ಮುಂದುವರೆಯುತ್ತಿದೆ. 72 ಕಿಲೋಮೀಟರ್ ಉದ್ದದ ಎರಡನೇ ಹಂತದಲ್ಲಿ ಸುರಂಗ ಮಾರ್ಗ ಕೊರೆಯುವ ಕೆಲಸ ಬಹುತೇಕ ಮುಗಿದಿದ್ದು, ಎಲಿವೇಡೆಟ್ ಕಾಮಗಾರಿಯೂ ಭರದಿಂದ ಸಾಗ್ತಾಯಿದೆ. ಇದರ ಜೊತೆಗೆ 34 ಕಿಲೋ ಮೀಟರ್ ಉದ್ದದ ಮೂರನೇ ಹಂತವನ್ನೂ ಆರಂಭ ಮಾಡಲು ಮೆಟ್ರೊ ನಿಗಮ ಸಿದ್ದತೆ ಮಾಡಿಕೊಳುತ್ತಿದೆ. ಜೆಪಿ ನಗರ ದಿಂದ – ಔಟರ್ ರಿಂಗ್ ರೋಡ್ – ಯಶವಂತಪುರ – ಹೆಬ್ಬಾಳ – ಏರ್ ಪೋರ್ಟ್ ಮಾರ್ಗ ಹಾಗೂ ಹೊಸಹಳ್ಳಿ – ಮಾಗಡಿ ಮಾರ್ಗದಲ್ಲಿ ಮೂರನೇ ಹಂತದ ಮೆಟ್ರೊ ಸಂಚಾರ ಮಾಡಲಿದೆ. ಈ ಸಂಬಂಧ ರೈಟ್ಸ್ ಸಂಸ್ಥೆ ಡಿಪಿಆರ್ ಸಿದ್ದಮಾಡಿದ್ದು, ಮೆಟ್ರೋ ನಿಗಮ ಕೆಂದ್ರ ಸರ್ಕಾರಕ್ಕೆ ರಿಪೋರ್ಟ್ ಸಲ್ಲಿಕೆ ಮಾಡಿ ಅನುಮೋದನೆ ಪಡೆಯಲಿದೆ.
ಡಿಸೆಂಬರ್ ನಲ್ಲಿ ಕೆಂಗೇರಿ – ಚಲಘಟ್ಟ, ಬಯ್ಯಪ್ಪನಹಳ್ಳಿ – ವೈಟ್ ಫೀಲ್ಡ್ ಮಾರ್ಗ ಉದ್ಘಾಟನೆ
ಸದ್ಯ ನಗರದಾದ್ಯಂತ ಎರಡನೇ ಹಂತದ ಕಾಮಗಾರಿಗಳು ಭರದಿಂದ ಸಾಗ್ತಾಯಿದ್ದು, 14 ನಿಲ್ದಾಣಗಳುಳ್ಳ 15 ಕಿಲೋಮೀಟರ್ ಉದ್ದದ ಬಯ್ಯಪ್ಪನಹಳ್ಳಿ – ವೈಟ್ ಫೀಲ್ಡ್ ಮಾರ್ಗ ಹಾಗೂ 1.8 ಕಿಲೋಮೀಟರ್ ಉದ್ದದ ಕೆಂಗೇರಿ – ಚಲಘಟ್ಟ ಮಾರ್ಗದಲ್ಲಿ ಡಿಸೆಂಬರ್ ನಲ್ಲಿ ವಾಣಿಜ್ಯ ಸಂಚಾರ ಆರಂಭ ಮಾಡಲು ನಿಗಮ ನಿರ್ಧರಿಸಿದ್ದು ಈಗಾಗಲೇ ಸ್ಟೇಷನ್ ಅಂಡ್ ಟ್ರ್ಯಾಕ್ ವರ್ಕ್ ನಡೆಯುತ್ತಿದೆ.
ಮತ್ತಷ್ಟು ವಿಸ್ತರಣೆ ಕಾಣಲಿರುವ ನಮ್ಮ ಮೆಟ್ರೋ.. ಈ ಮಾರ್ಗದ ಜನರಿಗೆ ಟ್ರಾಫಿಕ್ ನಿಂದ ಮುಕ್ತಿ
ಮುಂದುವರೆದು, ನಾಗಸಂದ್ರದಿಂದ ಅಂತರರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಮಾರ್ಗದ ಕಾಮಗಾರಿಯನ್ನ ಸಿಂಪ್ಲೆಕ್ಸ್ ಕಂಪನಿಯಿಂದ ತೆರವು ಮಾಡಿ ಗೋದ್ರೇಜ್ ಕಂಪನಿಗೆ ನೀಡಲಾಗಿದೆ.ನೈಸ್ ರಸ್ತೆಯನ್ನೂ ದಾಟಿ ಮೆಟ್ರೋ ಮಾರ್ಗ ಮುಂದುವರೆಯಬೇಕಿದ್ದು ಮಾಸ್ಟರ್ ಪ್ಲಾನ್ ಪ್ರಕಾರ ಕಾಮಗಾರಿ ಆರಂಭಿಸಲಾಗುತ್ತದೆ. ನೆಲಮಂಗಲ ಸೇರಿದಂತೆ ನಗರದ ಹೊರವಲಯಗಳಲ್ಲಿ ಉಪ ನಗರ ರೈಲು ಯೋಜನೆ ಆರಂಭವಾಗಲಿದೆ. ಒಟ್ನಲ್ಲಿ ಮುಂದಿನ ದಿನಗಳಲ್ಲಿ ಮೆಟ್ರೋ ಹಾಗೂ ಉಪ ನಗರ ರೈಲಿನ ಸಂಚಾರ ಆರಂಭವಾಗುವುದರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.