ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ(Winter session) ಸೆಡ್ಡು ಹೊಡೆದು ನಾಡದ್ರೋಹಿ ಎಂಇಎಸ್(MES) ಮಹಾಮೇಳಾವ್ ನಡೆಸುವ ಸಾಧ್ಯತೆ ಇದೆ.

ಅಧಿವೇಶನದ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಧಿವೇಶನದ ವೇಳೆ ಎಂಇಎಸ್ ಈ ವಿಫಲ ಯತ್ನಕ್ಕೆ ಕೈ ಹಾಕುತ್ತಲೇ ಬಂದಿದೆ. ಅದೇ ರೀತಿ ಈ ಅಧಿವೇಶನದಲ್ಲಿಯೂ ಈ ದುಸ್ಸಾಹಸ್ಸಕ್ಕೆ ನಾಡದ್ರೋಹಿಗಳು ಮುಂದಾಗಿದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ನಗರಕ್ಕೆ ಆಗಮಿಸುತ್ತಿದ್ದ ಪುಂಡ ಶಿವಸೇನೆಯ ಮುಖಂಡರನ್ನು ಖಾನಾಪುರದಲ್ಲಿ ಬೆಳಗಾವಿ ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ.

ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಪುಂಡರಿಂದ ಮಹಾಮೇಳಾವ್ ನಡೆಸಲು ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಪುಂಡಾಟ ಮೆರೆದು ಮಹಾಮೇಳಾವ್ ನಡೆಸಲು ಆಗಮಿಸುತ್ತಿದ್ದ ಮಹಾರಾಷ್ಟ್ರದ ಪುಂಡ ನಾಯಕರಿಗೆ ಪೊಲೀಸರು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ. ನಾಡದ್ರೋಹಿಗಳ ಉಪಟಳ ಹಾಗೂ ರಾಜ್ಯ ವಿರೋಧಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸರು ಗಡಿಭಾಗದಲ್ಲಿ ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದರು.

ಇತ್ತ ಬೆಳಗಾವಿ ನಗರದ ಸಂಭಾಜಿ ವೃತ್ತದಲ್ಲಿ ನೂರಕ್ಕೂ ಅಧಿಕ ಪೊಲೀಸರಿಂದ ಭದ್ರತೆ ಮಾಡಲಾಗಿದೆ. ಒಂದು ವೇಳೆ ಜಿಲ್ಲಾಡಳಿತ ಕಣ್ತಿಪ್ಪಿಸಿ ಎಂಇಎಸ್ ಪುಂಡರು ನಗರಕ್ಕೆ ಬಂದರೆ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆಯಲ್ಲಿದ್ದು, ನಾಲ್ಕು ಕಡೆಗಳಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಮಾಡಿಕೊಂಡಿದ್ದರು. ಬೆಳಗಾವಿ ಖಡೇಬಜಾರ್, ಕ್ಯಾಂಪ್, ಟಿಳಕವಾಡಿ, ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ. ಬೆಳಗಾವಿ, ನಿಪ್ಪಾಣಿ ಗಡಿಯಲ್ಲಿ ಬೀಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

ಅಲ್ಲದೇ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ ಮಾಡಬೇಕೆಂಬ ಬೇಡಿಕೆ ಹಲವು ದಿನಗಳಿಂದ ಇದ್ದರೂ ಇದುವರೆಗೂ ಯಾವುದೇ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತಲೇ ಇವೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.











