ಯೋಜನೆ ಆರಂಭಿಸಿದಾಗಿನಿಂದಲೂ ವಿವಾದವೇ ಆಗಿರುವ, ಅದೇ ಕಾರಣಕ್ಕೆ ತಡ ಆಗುತ್ತಿರುವ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ವಿವಾದದ ಚೆಂಡನ್ನು ಈಗ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಒಕ್ಕೂಟ ಸರ್ಕಾರದ ಅಂಗಳಕ್ಕೆ ತಳ್ಳಲಿವೆ. ಕರ್ನಾಟಕದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ‘ಮೇಕೆದಾಟು ಯೋಜನೆ ಜಾರಿಗೆ ಇರುವ ಅಡೆತಡೆಗಳನ್ನು ನಿವಾರಿಸಿಕೊಡಿ’ ಎಂದು ಮನವಿ ಮಾಡಿದ್ದಾರೆ. ಇನ್ನೊಂದೆಡೆ ತಮಿಳುನಾಡಿನ ಕಡೆಯಿಂದ ಅಲ್ಲಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ನೇತೃತ್ವದ ಸರ್ವಪಕ್ಷಗಳ ನಿಯೋಗವು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ‘ಮೇಕೆದಾಟು ಬಳಿ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಅಣೆಕಟ್ಟು ಕಟ್ಟಲಾಗುತ್ತಿದೆ. ಇದಕ್ಕೆ ಸಹಕಾರ ನೀಡಬೇಡಿ’ ಎಂದು ವಿನಂತಿಸಿಕೊಂಡಿದೆ.
ಇವರೆಡು ಮೇಲುನೋಟಕ್ಕೆ ಮನವಿ ಅಥವಾ ವಿನಂತಿಗಳ ರೀತಿ ಕಾಣುತ್ತಿವೆ. ಆಂತರ್ಯದಲ್ಲಿ ಒತ್ತಡ ಹೇರುವ ತಂತ್ರಗಳು. ಅದಕ್ಕೂ ಮಿಗಿಲಾಗಿ ತಮ್ಮ ಅಸ್ತಿತ್ವಕ್ಕಾಗಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಅನುಸರಿಸುತ್ತಿರುವ ರಾಜಕೀಯ ಕುತಂತ್ರಗಳು. ಇತ್ತೀಚೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ (NGT) ದಕ್ಷಿಣ ಭಾರತದ ಪೀಠವು ಸ್ವಯಂ ದೂರು ದಾಖಲಿಸಿಕೊಂಡು ವಿವಾದದ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಿತ್ತು. ಆಗ ಮಧ್ಯಪ್ರವೇಶ ಮಾಡಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಧಾನ ಪೀಠವು ದಕ್ಷಿಣ ಪೀಠದ ಆದೇಶವನ್ನು ವಜಾಗೊಳಿಸಿತ್ತು. ಈ ಮೂಲಕ ಮತ್ತೆ ‘ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ವಿವಾದ ಸುಪ್ರೀಂ ಕೋರ್ಟಿನಲ್ಲೇ ಬಗೆಹರಿಯಬೇಕು’ ಎಂಬ ಹಂತಕ್ಕೆ ತಲುಪಿತ್ತು.
ಈ ಹಂತದಲ್ಲಿ ಎಂ.ಕೆ. ಸ್ಟಾಲಿನ್ ತಮಿಳುನಾಡಿಗೆ ಹೊಸದಾಗಿ ಮುಖ್ಯಮಂತ್ರಿ ಆದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ ಮೇಕೆದಾಟು ವಿಷಯ ಪ್ರಸ್ತಾಪಿಸಿದರು. ಮೇಕೆದಾಟು ವಿಷಯ ಅಥವಾ ವಿವಾದ ಸುಪ್ರೀಂ ಕೋರ್ಟಿನಲ್ಲಿ ಇರುವುದರಿಂದ ಸದ್ಯ ಒಕ್ಕೂಟ ಸರ್ಕಾರ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಇದು ತಮಿಳುನಾಡು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದ ವಿಷಯವೂ ಅಲ್ಲ. ಆದರೂ ಎಂ.ಕೆ. ಸ್ಟಾಲಿನ್ ಅನಗತ್ಯವಾಗಿ ಪ್ರಧಾನಿ ಭೇಟಿ ಬಳಿ ವಿಷಯ ಪ್ರಸ್ತಾಪಿಸಿದರು.
ಇನ್ನೊಂದೆಡೆ ಸ್ಟಾಲಿನ್ ಅವರ ಈ ನಡೆ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಚ್ಚು ಮಹತ್ವ ಕೊಡುವ ಅಗತ್ಯ ಇರಲಿಲ್ಲ. ಸ್ಟಾಲಿನ್ ಅವರಿಗೆ ಪತ್ರ ಬರೆದು ಅದರಲ್ಲಿ ‘ಮೇಕೆದಾಟು ಯೋಜನೆ ಆರಂಭಿಸಲು ಸಹಕಾರ ಕೊಡಿ’ ಎಂದು ಕೇಳುವ ಅಗತ್ಯ ಇರಲಿಲ್ಲ. ತಮಿಳುನಾಡಿನಿಂದ ಅಂತಹ ಯಾವ ಸಹಕಾರ ಸಿಗುವುದಿಲ್ಲ ಎನ್ನುವುದು ಕಾವೇರಿ ವಿವಾದ ಹುಟ್ಟುಕೊಂಡಾಗಿನಿಂದಲೂ ಪದೇ ಪದೇ ಸಾಬೀತಾಗುತ್ತಾ ಬಂದಿದೆ. ಮೇಲಾಗಿ ದೇಶದ ಯಾವುದೇ ಅಂತರರಾಜ್ಯ ಜಲ ವಿವಾದ ಇತ್ತೀಚಿನ ವರ್ಷಗಳಲ್ಲಿ ಮಾತುಕತೆ ಮೂಲಕ ಬಗೆಹರಿದಿಲ್ಲ. ಸೌಹಾರ್ದತೆ, ಸಹಕಾರ ಎಂಬ ಪದಗಳಿಗೆ ಜಲ ವಿವಾದದ ಡಿಕ್ಷನರಿಯಲ್ಲಿ ಅರ್ಥವೇ ಇಲ್ಲ. ಆದರೂ ಯಡಿಯೂರಪ್ಪ ಪತ್ರ ಬರೆದರು.
ಯಡಿಯೂರಪ್ಪ ಪತ್ರ ಬರೆದ ಬಳಿಕ ಆಗಿದ್ದಾದರೂ ಏನು. ತಮಿಳುನಾಡು ಸರ್ಕಾರ ಇನ್ನಷ್ಟು ತೀವ್ರವಾಗಿ ವಿರೋಧಿಸಲು ಆರಂಭಿಸಿತು. ಜುಲೈ 7ರಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿದ್ದ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ‘ಮೇಕೆದಾಟು ವಿವಾದದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಯೋಜನೆಗೆ ಒಪ್ಪಿಗೆ ನೀಡಬೇಡಿ. ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕರ್ನಾಟಕವು ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುತ್ತಿದೆ. ಇದರಿಂದ ತಮಿಳುನಾಡಿನ ರೈತರಿಗೆ ದೊಡ್ಡ ಮಟ್ಟದಲ್ಲಿ ಅನ್ಯಾಯ ಆಗಲಿದೆ’ ಎಂದು ದೂರು ನೀಡಿದ್ದರು.
ಇದಾದ ಬಳಿಕ ಜುಲೈ 12ರಂದು ಸರ್ವ ಪಕ್ಷಗಳ ಸಭೆ ನಡೆಸಿದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರೋಧಿಸಿ 3 ನಿರ್ಣಯ ತೆಗೆದುಕೊಂಡಿದೆ.
ಆ ನಿರ್ಣಯಗಳು ಈ ರೀತಿ ಇವೆ.
1) ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಕರ್ನಾಟಕದ ಯೋಜನೆಯನ್ನು ವಿರೋಧಿಸುವುದು.
2) ಯೋಜನೆ ಜಾರಿಗೆ ಅವಕಾಶ ನೀಡದಂತೆ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರುವುದು.
3) ಮೇಕೆದಾಟು ಯೋಜನೆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಕಾನೂನು ಸಮರವನ್ನು ತೀವ್ರಗೊಳಿಸುವುದು.
ಈ ನಿರ್ಣಯಗಳ ಪ್ರಕಾರ ಒಕ್ಕೂ,ಟ ಸರ್ಕಾರದ ಮೇಲೆ ಒತ್ತಡ ಹೇರಲೆಂದು ಈಗ ತಮಿಳುನಾಡಿನ ಸರ್ವಪಕ್ಷಗಳ ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದೆ. ಇನ್ನೊಂದೆಡೆ ತಮಿಳುನಾಡಿನ ನಡೆಗಳಿಂದ ವಿಚಲಿತರಾಗಿರುವ ಯಡಿಯೂರಪ್ಪ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದಾರೆ. ಮುಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತೊಮ್ಮೆ ಪ್ರಧಾನಿ ಮತ್ತು ರಾಷ್ಟ್ರಪತಿ ಭೇಟಿ ಮಾಡುವ ಸಾಧ್ಯತೆಯೂ ಇದೆ. ಈ ಮುಖಾಂತರ ಕಾನೂನು ಸಮರದಿಂದ ಬಗೆಹರಿಯಬೇಕಾದ ಜಲ ವಿವಾದವು ರಾಜಕೀಯ ಕುತಂತ್ರಕ್ಕೆ ಬಲಿಯಾಗಿದೆ.