ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 13,500 ಕೋಟಿ ರೂಪಾಯಿಯಷ್ಟು ದೊಡ್ಡ ಹಗರಣದ ಆರೋಪಿ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಸದ್ಯ ಭಾರತದಲ್ಲಿ ಅತ್ಯಂತ ಸುದ್ದಿಯಲ್ಲಿರುವ ವ್ಯಕ್ತಿ. ಆತನೀಗ ಸುದ್ದಿಯಲ್ಲಿರುವುದು ಆತನ ಹಗರಣದ ಕಾರಣದಿಂದ ಅಲ್ಲ. ಬದಲಿಗೆ, ತಲೆಮರೆಸಿಕೊಂಡಿರುವ ದೇಶದಲ್ಲಿ ಅಪಹರಣ ಪ್ರಹಸನದ ಕಾರಣಕ್ಕಾಗಿ. ಈ ಬೆಳವಣಿಗೆಗಳು ಒಂದು ಹಾಲಿವುಡ್ ಥ್ರಿಲ್ಲರ್ ಸಿನಿಮಾದಂತೆ ರಸವತ್ತಾಗಿದೆ.
ಮೆಹುಲ್ ಚೋಕ್ಸಿ, ನಮ್ಮ ದೇಶದ ಬ್ಯಾಂಕ್ ಗೆ ವಂಚಿಸಿ ದೇಶ ಬಿಟ್ಟು ಪರಾರಿಯಾದ ಮೇಲೆ, ವೆಸ್ಟ್ ಇಂಡೀಸ್ ಸಮೀಪದ ಆಂಟಿಗುವಾ ಮತ್ತು ಬರ್ಬುಡಾದಲ್ಲಿ ತಲೆಮರೆಸಿಕೊಂಡಿದ್ದ. 2018ರಲ್ಲಿ ಆ ದೇಶದ ಪೌರತ್ವ ಪಡೆದ ಬಳಿಕ ಅಲ್ಲಿನ ಪ್ರಜೆಯಾಗಿರುವ ಚೋಕ್ಸಿ, ‘ರಾಜ್’ ಎಂಬ ನಕಲಿ ಹೆಸರಿನಲ್ಲಿ ಅಲ್ಲೇ ಸೆಟಲ್ ಆಗಿದ್ದ. ವಂಚಿಸಿದ ದುಡ್ಡಲ್ಲಿ ಸಖತ್ ಮೋಜು ಮಸ್ತಿ ಮಾಡುತ್ತ, ಆಸ್ತಿಪಾಸ್ತಿ ಖರೀದಿಸಿ, ವ್ಯಾಪಾರ ಮಾಡುತ್ತ ಮಜವಾಗಿ ದಿನದೂಡುತ್ತಿದ್ದ. ಆತ ಆಂಟಿಗುವಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಬಹಿರಂಗವಾಗಿದ್ದೇ ಒಂದು ರೋಚಕ ಸನ್ನಿವೇಶದಲ್ಲಿ! ಆ ಘಟನೆ ನಡೆಯದೇ ಇರುತ್ತಿದ್ದರೆ ಆತ ಆ ದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಚಾರ ನಮ್ಮ ಯಾವ ಸುದ್ದಿ ಮಾಧ್ಯಮಕ್ಕೂ ಗೊತ್ತಾಗುತ್ತಿರಲಿಲ್ಲ.

ಮೆಹುಲ್ ಚೋಕ್ಸಿಯ ಅಪಹರಣದ ಬ್ರೇಕಿಂಗ್ ನ್ಯೂಸ್:
ಮೇ 23 ರಂದು ‘ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬರ್ಬುಡಾದಿಂದ ನಿಗೂಢವಾಗಿ ನಾಪತ್ತೆ’ ಎಂಬ ಸುದ್ದಿ ಭಾರತದ ಮಾಧ್ಯಮಗಳಲ್ಲೂ ಭರ್ಜರಿ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರವಾಗಿತ್ತು. ಮರುದಿನವೇ, ‘ಅತ ಆಂಟಿಗುವಾದಿಂದ ಡೊಮಿನಿಕಾಗೆ ಪಯಣಿಸುವಾಗ ಸಿಕ್ಕಿಬಿದ್ದಿದ್ದಾನೆ, ಡೊಮಿನಿಕಾ ಪೊಲೀಸರ ವಶದಲ್ಲಿ ಇದ್ದಾನೆ’ ಎಂಬ ಮಾಹಿತಿ ಪ್ರಕಟವಾಗತೊಡಗಿತು. ಬಳಿಕ ಚೋಕ್ಸಿಯ ಫೋಟೋ ಕೂಡ ಟಿವಿ ಪರದೆಗಳಲ್ಲಿ ಕಾಣಿಸಲಾರಂಭಿಸಿತ್ತು. ಆತನ ಮೈಕೈಗಳ ಮೇಲೆ ಸಿಕ್ಕಸಿಕ್ಕಲ್ಲಿ ಹಲ್ಲೆ ನಡೆಸಿದ ಗುರುತುಗಳು, ಮುಖಮೂತಿಯಲ್ಲಿ ಬಾಸುಂಡೆಗಳು, ಕೈಗೆ ಬ್ಯಾಂಡೇಜು ಮಾಡಿದ್ದು ಎದ್ದು ಕಾಣಿಸುತ್ತಿದ್ದವು. ಕೋಟ್ಯಾಧಿಪತಿಯಾಗಿ ಮೆರೆದಾಡಿದ್ದ ಚೋಕ್ಸಿಯನ್ನು ವೀಲ್ ಚೇರಿನಲ್ಲಿ ಕಂಡು ಎಲ್ಲರಿಗೂ ಶಾಕ್ ಹಾಗೂ ಅಚ್ಚರಿ ಉಂಟಾಗಿತ್ತು.
ಚೋಕ್ಸಿ ಡೊಮಿನಿಕಾದಲ್ಲಿ ಸಿಕ್ಕಿಬಿದ್ದ ಮಾಹಿತಿ ಬಿತ್ತರವಾಗತೊಡಗಿದಂತೆ, ಭಾರತ ಸರಕಾರ ಕಾರ್ಯೋನ್ಮುಖವಾಗಿ ಆತನನ್ನು ಭಾರತಕ್ಕೆ ಕರೆತರಲು ಅಲ್ಲಿನ ಸರಕಾರದ ಜತೆ ಮಾತುಕತೆಗಳನ್ನು ಆರಂಭಿಸಿತು. ಆಗ ಹಬ್ಬಿತ್ತು ಗುಸುಗುಸು ಸುದ್ದಿ. ಆತ ಬೋಟ್ ನಲ್ಲಿ ಪರಾರಿಯಾಗಿದ್ದು ತನ್ನ ಗರ್ಲ್ ಫ್ರೆಂಡ್ ಜತೆಗಂತೆ. ಆಕೆಯ ಹೆಸರು ಬಾರ್ಬರಾ ಜಾರಬಿಕಾ ಅಂತೆ. ಹೀಗೆ ಅಂತೆಕಂತೆಗಳು ಮಾಧ್ಯಮದಲ್ಲಿ ಹರಿದಾಡುತ್ತಿದ್ದಾಗಲೇ, ಆಂಟಿಗುವಾದ ಪ್ರಧಾನಿ ಗಾಸ್ಟನ್ ಬ್ರೌನ್ ಅವರೇ ಜಾರಬಿಕಾ ಅವರನ್ನು ಮೆಹುಲ್ ಚೋಕ್ಸಿಯ ‘ಗರ್ಲ್ ಫ್ರೆಂಡ್’ ಎಂದು ಹೇಳಿದ್ದರಲ್ಲದೆ, ಆಕೆಯೊಂದಿಗೆ ‘ಒಳ್ಳೆಯ ಸಮಯ’ ಕಳೆಯಲು ಡೊಮಿನಿಕಾಗೆ ತೆರಳಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಬಹಿರಂಗ ಪಡಿಸಿದ್ದರು.

ಹೋಗಿದ್ದಲ್ಲ,ಹನಿಟ್ರ್ಯಾಪ್ ಮಾಡಿ ಅಪಹರಿಸಿದರು ಎಂದ ಚೋಕ್ಸಿ ಪತ್ನಿ:
ಇಷ್ಟೆಲ್ಲ ಬೆಳವಣಿಗೆಗಳಾದಾಗ ಮಾಧ್ಯಮದ ಮುಂದೆ ಬಂದು ಪತಿಯ ಪರವಾಗಿ ಬ್ಯಾಟ್ ಬೀಸತೊಡಗಿದ್ದು ಮೆಹುಲ್ ಚೋಕ್ಸಿ ಪತ್ನಿ ಪ್ರೀತಿ. “ನನ್ನ ಪತಿಯನ್ನು ‘ಹನಿಟ್ರ್ಯಾಪ್’ ಮಾಡಿ ಅಪಹರಿಸಲಾಗಿದೆ” ಎಂದು ನೇರವಾಗಿ ಭಾರತದ ಮಾಧ್ಯಮಗಳಿಗೆ ಸಂದರ್ಶನ ನೀಡಿ ಅಲವತ್ತುಕೊಳ್ಳತೊಡಗಿದ್ದರು ಪ್ರೀತಿ.

“ಚೋಕ್ಸಿ ಅವರು ಮುಂಜಾನೆಯ ವಾಕಿಂಗ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾರ್ಬರಾ ಜಾರಬಿಕಾಳ ಪರಿಚಯವಾಗಿತ್ತು. ಮೇ 23ರಂದು ಆಕೆ, ಮೆಹುಲ್ ಚೋಕ್ಸಿಯನ್ನು ಆಂಟಿಗುವಾದ ಜಾಲಿ ಬಂದರಿನ ಬಳಿ ಇರುವ ತನ್ನ ಮನೆಗೆ ಡಿನ್ನರ್ಗೆಂದು ಕರೆದಿದ್ದಳು. ಅಲ್ಲಿಂದ 8-10 ಪುರುಷರು ಚೋಕ್ಸಿಯ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಎಳೆದೊಯ್ದಿದ್ದಾರೆ” ಎಂದು ಪ್ರೀತಿ ಆರೋಪಿಸಿದ್ದರು.
“ಬಾರ್ಬರಾ ಜಾರಬಿಕಾ ಎಂಬುದು ಆಕೆಯ ಅಸಲಿ ಹೆಸರು ಆಗಿರಲಾರದು. ಆಕೆ ಆಂಟಿಗುವಾವಕ್ಕೆ ಆಗೊಮ್ಮೆ ಈಗೊಮ್ಮೆ ಭೇಟಿ ಮಾಡುತ್ತಿದ್ದಳು. ನನ್ನ ಪತಿಯ ಅಪಹರಣ ನಂತರ ಆಕೆಯೂ ನಾಪತ್ತೆಯಾಗಿರುವುದನ್ನು ಕಂಡರೆ ಆಕೆ ಬಗ್ಗೆಯೇ ಅನುಮಾನ ಮೂಡುತ್ತದೆ. ಇಂಥ ಗಂಭೀರ ಘಟನೆ ನಡೆದರೂ ಆಕೆ ಪೊಲೀಸರಲ್ಲಿ ದೂರು ದಾಖಲಿಸಿಲ್ಲ. ಬಹಿರಂಗವಾಗಿ ಕಾಣಿಸಿಕೊಂಡೂ ಇಲ್ಲ” ಎಂದು ಗಂಭೀರ ಆರೋಪ ಮಾಡಿದ್ದರು.
ಅತ್ತ, ಮೆಹುಲ್ ಚೋಕ್ಸಿಯ ‘ಗರ್ಲ್‍ಫ್ರೆಂಡ್’ ಎನ್ನಲಾದ ಬಾರ್ಬರಾ ಜಾರಬಿಕಾ ಎಂಬ ಅಜ್ಞಾತ ಮಹಿಳೆಯೇ ಆತನನ್ನು ಆಂಟಿಗುವಾದಿಂದ ‘ಹನಿಟ್ರ್ಯಾಪ್’ ಮಾಡಿ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲು ಸಹಕರಿಸಿದ್ದು ಎಂದು ಚೋಕ್ಸಿ ಅವರ ವಕೀಲ ವಿಜಯ್ ಅಗರ್ವಾಲ್ ಕೂಡ ಮಾಧ್ಯಮಗಳಲ್ಲಿ ಹೇಳಿಕೆ ನೀಡತೊಡಗಿದ್ದರು.
ದೂರು ನೀಡಿದ ಚೋಕ್ಸಿ ಪರ ವಕೀಲರು:
“ನನ್ನನ್ನು ಮೇ 23ರಂದು ಹನಿಟ್ರ್ಯಾಪ್ ಮಾಡಿ ಡೊಮಿನಿಕಾಗೆ ಅಪಹರಿಸಲಾಗಿದೆ. ನನಗೀಗ 62 ವರ್ಷಗಳಾಗಿದ್ದು, ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಜತೆಗೆ ಮಧುಮೇಹ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಸಮಸ್ಯೆಗಳಿವೆ. ಹೃದಯದ ಕಾಯಿಲೆಯೂ ಕಾಡುತ್ತಿದೆ. ನಾನು ಕಾನೂನು ಪಾಲಿಸುವ ವ್ಯಕ್ತಿ. ಭಾರತದ ತನಿಖಾದಳಗಳು 2018ರವರೆಗೂ ನನ್ನ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸಿರಲಿಲ್ಲ. ನನ್ನ ವಿರುದ್ಧ ಯಾವುದೇ ವಾರೆಂಟ್ ಜಾರಿಯಾಗಿರಲಿಲ್ಲ. ಅನಾರೋಗ್ಯವಿತ್ತು. ಹೀಗಾಗಿ ನನ್ನ ವೈದ್ಯಕೀಯ ಚಿಕಿತ್ಸೆಗಾಗಿ 2018 ರಲ್ಲಿ ಅಮೆರಿಕಕ್ಕೆ ಹೋಗಿದ್ದೆ ಅಷ್ಟೇ.” ಎಂದು ಮೆಹುಲ್ ಚೋಕ್ಸಿ ತಮ್ಮ ವಕೀಲರ ಮೂಲಕ 8 ಪುಟಗಳ ಅಫಿಡವಿಟ್ ಸಲ್ಲಿಸಿದ್ದ.
“ನನ್ನನ್ನು ಆಂಟಿಗುವಾಕ್ಕೆ ಮರಳಿಸಿ. ಅಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳಲಿ. ಭಾರತದ ಅಧಿಕಾರಿಗಳು ಅಲ್ಲಿಗೆ ಬಂದು ನನ್ನ ವಿಚಾರಣೆ ನಡೆಸುವುದಿದ್ದರೆ ನನ್ನ ಆಕ್ಷೇಪವೇನಿಲ್ಲ.” ಎಂದು ಹೇಳಿಕೆಯನ್ನೂ ನೀಡಿದ್ದ.
ಈ ಬೆಳವಣಿಗೆ ಹಲವು ಸಂಶಯಗಳಿಗೆ ಕಾರಣವಾಗಿತ್ತು. ಒಂದೆಡೆ ಮೆಹುಲ್ ಚೋಕ್ಸಿ ತಮ್ಮ ಆರೋಗ್ಯ ಭಾರಿ ಹದಗೆಟ್ಟಿದೆ ಎನ್ನುತ್ತಿದ್ದರೆ, ಇನ್ನೊಂದೆಡೆ ತಾನು ಮಹಿಳೆಯಿಂದ ಹನಿಟ್ರ್ಯಾಪ್ ಆಗಿದ್ದೇನೆ ಎನ್ನುತ್ತಿದ್ದಾರೆ. ಈ ಪರಿ ಅನಾರೋಗ್ಯವಂತನನ್ನು ಹನಿಟ್ರ್ಯಾಪ್ ಮಾಡುವುದು ಹೇಗೆ? ಆರೋಗ್ಯದ ಕತೆ ಸುಳ್ಳಾ ಅಥವಾ ಹನಿಟ್ರ್ಯಾಪ್ ಕತೆ ಸುಳ್ಳಾ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿತ್ತು.

ಪ್ರತ್ಯಕ್ಷಳಾದ ಬಾರ್ಬರಾ ಜಾರಬಿಕಾ:
ಇಷ್ಟೆಲ್ಲ ಬೆಳವಣಿಗೆಗಳಾದ ಬಳಿಕ ಮಾಧ್ಯಮಗಳ ಮುಂದೆ ಪ್ರತ್ಯಕ್ಷಳಾದ ಮೆಹುಲ್ ಚೋಕ್ಸಿಯ ‘ಪ್ರೇಯಸಿ’ ಎನ್ನಲಾಗುವ ಮಹಿಳೆ ಬೇರೆಯೇ ಕತೆ ಬಿಚ್ಚಿಡತೊಡಗಿದರು. ಚೋಕ್ಸಿ ಒಬ್ಬ ಸುಳ್ಳುಗಾರ. ನನಗೆ ಸುಳ್ಳು ಹೆಸರು ಹೇಳಿ ಮೋಸ ಮಾಡಿದ್ದಾನೆ. ಆತ ಗಿಫ್ಟ್ ಕೊಟ್ಟ ಉಂಗುರ, ಬ್ರೇಸ್ ಲೆಟ್ ಗಳಲ್ಲಿದ್ದ ಡೈಮಂಡ್ ಕೂಡ ಆತನಂತೆ ನಕಲಿ ಎಂದು ಅಲವತ್ತುಕೊಂಡಿದ್ದಾರೆ.
“ಕಳೆದ ವರ್ಷ ಆಂಟಿಗುವಾದಲ್ಲಿ ನನ್ನ ಹೆಸರು ರಾಜ್ ಎಂದು ಪರಿಚಯಿಸಿಕೊಂಡಿದ್ದ. ನಾನು ರಿಯಲ್ ಎಸ್ಟೇಟ್ ಸಂಬಂಧಿ ವ್ಯವಹಾರಗಳಲ್ಲಿ ಇರುವುದನ್ನು ತಿಳಿದುಕೊಂಡ ಮೇಲೆ ಹಲವು ವಹಿವಾಟಿನ ಬಗ್ಗೆ ಪ್ರಸ್ತಾಪಿಸಿದ್ದ. ಆಂಟಿಗುವಾದಲ್ಲಿ ಬೊಟಿಕ್ ಹೋಟೆಲ್ ಗಳು, ಕ್ಲಬ್‍ಗಳನ್ನು ತೆರೆಯಲು ಸಹಕರಿಸುವುದಾದರೆ ಅದಕ್ಕೆ ಎಷ್ಟು ದುಡ್ಡು ಬೇಕೋ ಕೊಡುವುದಾಗಿ ತಿಳಿಸಿದ್ದ. ಹೀಗೆ ಶುರುವಾದ ಪರಿಚಯ ಮುಂದೆ ಸ್ನೇಹಕ್ಕೆ ತಿರುಗಿತು. ಆತನ ಬಳಿ ಸುಮಾರು ಆರರಿಂದ ಎಂಟು ಮೊಬೈಲ್ ನಂಬರ್ ಗಳಿದ್ದವು. ವಾಟ್ಸ್ ಆಪ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಚಾಟ್ ಮಾಡುವಾಗಲೆಲ್ಲ ಆತ ರಾಜ್ ಎಂದೇ ಸಂಬೋಧಿಸಿಕೊಳ್ಳುತ್ತಿದ್ದ. ನನ್ನಂತೆ, ದ್ವೀಪದ ಜನರು ಹಾಗೂ ಸಿಬ್ಬಂದಿಗಳಿಗೂ ಆತನ ಅಸಲಿ ಹೆಸರು ತಿಳಿದಿಲ್ಲ.ಎಲ್ಲರಿಗೂ ಆತ ರಾಜ್ ಎಂದೇ ಪರಿಚಿತ.” ಎಂದು ಆಕೆ ಮಾಧ್ಯಮಗಳ ಮುಂದೆ ಚೋಕ್ಸಿ ಬಣ್ಣ ಬಯಲು ಮಾಡಿದ್ದಾಳೆ.
ಕೊಟ್ಟಿದ್ದು ನಕಲಿ ವಜ್ರದ ಉಂಗುರ, ಬ್ರಾಸ್ ಲೆಟ್:
ಭಾರತ ದೇಶದ ಬ್ಯಾಂಕ್ ಗೆ ವಂಚಿಸಿದ ಮೆಹುಲ್ ಚೋಕ್ಸಿ, ಕೊನೆಗೆ ತನಗೂ ವಂಚಿಸಿರುವುದು ಬರ್ಬರಾಳ ಸಂದರ್ಶನದಿಂದ ತಿಳಿದು ಬಂದಿದೆ. “ನನಗೆ ಆತನ ಸ್ನೇಹ ಮಾತ್ರ ಸಾಕಿತ್ತು. ಹೆಚ್ಚೆಂದರೆ ಆತನ ಜತೆಗೆ ಕಾಫಿ ಶಾಪ್ ಗಳಲ್ಲಿ ಭೇಟಿ, ಸಂಜೆ ವೇಳೆ ಜತೆ ಜತೆಗೆ ವಾಕಿಂಗ್ ಹಾಗೂ ರಾತ್ರಿ ಯಾವತ್ತಾದರೂ ಡಿನ್ನರ್, ಇವಿಷ್ಟೇ ನನಗೆ ಸಾಕಿತ್ತು. ಆದರೆ ಚೋಕ್ಸಿಗೆ ಇನ್ನೂ ಏನೇನೋ ಬೇಕಿತ್ತು. ಆತ ನನಗೆ ಹೋಟೆಲ್ ನಲ್ಲಿ ವಾಸ್ತವ್ಯದ, ವಿಮಾನದ ಟಿಕೆಟ್ ಗಳ ಆಮಿಷ ಒಡ್ಡುತ್ತಿದ್ದ. ಆದರೆ ಈ ಕೊಡುಗೆಗಳನ್ನು ನಾನು ತಿರಸ್ಕರಿಸಿದ್ದೆ. ನಾನು ಕೇವಲ ಗೆಳತನ ಹಾಗೂ ಬ್ಯಸಿನೆಸ್ ಗೆ ಮಾತ್ರ ಸೀಮಿತವಾಗಿರಲು ಬಯಸಿದ್ದೆ. ಸ್ನೇಹ ಗಟ್ಟಿಯಾದ ಬಳಿಕ ಆತ ವಜ್ರದ ಉಂಗುರಗಳು, ಬ್ರೇಸ್ ಲೆಟ್ ಗಳನ್ನು ಉಡುಗೊರೆ ಕೊಟ್ಟಿದ್ದ. ಇಷ್ಟೆಲ್ಲಾ ಆದ ಮೇಲೆ ನಾನು ಅವುಗಳನ್ನು ಪರೀಕ್ಷಿಸಲು ಕೊಟ್ಟೆ. ಅವೆಲ್ಲ ನಕಲಿ ಎಂದು ಗೊತ್ತಾಯಿತು” ಎಂದು ಬಾರ್ಬರಾ ಜಾರಬಿಕಾ, ರಾಜ್ ಅಲಿಯಾಸ್ ಮೆಹುಲ್ ಚೋಕ್ಸಿಯ ಬಗ್ಗೆ ಹೇಳಿದ್ದಾಳೆ.

ರಹಸ್ಯವಾಗಿ ಕರೆದೊಯ್ದಿಲ್ಲ, ದಾಖಲೆ ಪರಿಶೀಲಿಸಿಯೇ ಒಯ್ದಿದ್ದು ಎಂದ ಕ್ಯಾಪ್ಟನ್:
ತನ್ನ ಅಪಹರಣವಾಗಿದೆ ಎಂಬ ಮೆಹುಲ್ ಚೋಕ್ಸಿಯ ಆರೋಪದಲ್ಲಿ ಹುರುಳಿಲ್ಲ. ನಾನು ಆತನನ್ನು ಎಲ್ಲ ಕಸ್ಟಮ್ಸ್ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಮೇ 23ರ ಬೆಳಗ್ಗೆ 10ಕ್ಕೆ ಆಂಟಿಗುವಾದಿಂದ ಡೊಮಿನಿಕಾಗೆ ಕರೆದೊಯ್ದಿದ್ದೆ. ಖಂಡಿತವಾಗಿಯೂ ಆತನನ್ನು ರಹಸ್ಯವಾಗಿ ಕರೆದೊಯ್ದಿಲ್ಲ ಎಂದು ಚೋಕ್ಸಿಯನ್ನು ಒಯ್ದಿದ್ದ ‘ಕಾಲಿಯೊಪ್ ಆಫ್ ಆರ್ನೆ’ ನಾವೆಯ ಕ್ಯಾಪ್ಟನ್ ಹೇಳಿದ್ದಾನೆ. ಕ್ಯಾಪ್ಟನ್ ನೀಡಿರುವ ಈ ಹೇಳಿಕೆ ಚೋಕ್ಸಿಗೆ ದೊಡ್ಡ ಹಿನ್ನಡೆಯಾಗುವ ಸಂಭವವಿದೆ.
ಅಪಹರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಬಾರ್ಬರಾ:
“ಚೋಕ್ಸಿ ಅಪಹರಣಕ್ಕೂ ನನಗೂ ಸಂಬಂಧವಿಲ್ಲ. ದ್ವೀಪದಲ್ಲಿ ಎಷ್ಟೋ ಬಾರಿ ಆತನ ಜತೆಗೆ ವಾಕಿಂಗ್ ಮಾಡಿದ್ದೆ, ಒಂಟಿಯಾಗಿ ಆತನ ಜತೆಗೆ ಲಾಂಗ್ ಡ್ರೈವ್ ಹೋಗಿದ್ದೆ. ಅಪಹರಿಸುವುದಾದರೆ ಆಗ ಅಪಹರಿಸಬಹುದಿತ್ತು. ಹಾಡಹಗಲಲ್ಲಿ, ನನ್ನ ಮನೆಯಲ್ಲೇ ಅಪಹರಣ ಮಾಡುವ ಅಗತ್ಯವಿತ್ತೇ? ಆತನ ಕುಟುಂಬದ ಸದಸ್ಯರು ಹಾಗೂ ವಕೀಲರು ವೃಥಾ ನನ್ನ ಹೆಸರನ್ನು ಇದರಲ್ಲಿ ಎಳೆದು ತಂದಿದ್ದಾರೆ. ಈ ಬೆಳವಣಿಗೆಯಿಂದ ನನ್ನ ಕುಟುಂಬ ನೊಂದಿದೆ ಹಾಗೂ ತುಂಬ ಒತ್ತಡದಲ್ಲಿದೆ” ಎಂದು ಮೆಹುಲ್ ಚೋಕ್ಸಿ ಪರ ವಕೀಲರ ಆರೋಪಗಳನ್ನು ಬಾರ್ಬರಾ ಜಾರಬಿಕಾ ತಳ್ಳಿ ಹಾಕಿದ್ದಾಳೆ.

ಚೋಕ್ಸಿ ಜಾಮೀನು ಅರ್ಜಿ ವಿಚಾರಣೆ ಜೂನ್11 ಕ್ಕೆ ಮುಂದೂಡಿಕೆ:
“ನನ್ನನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲಾಗಿತ್ತು. ಅದರ ಹಿಂದೆ ನನ್ನ ಗೆಳತಿ ಬಾರ್ಬರಾ ಜಾರಬಿಕಾ ಕೈವಾಡ ಇದೆ. ಆಕೆ ಭಾರತೀಯ ಏಜೆಂಟ್ ಆಗಿ ಪ್ರಮುಖ ಪಾತ್ರ ವಹಿಸಿದ್ದಾಳೆ. ಅಪಹರಣದಲ್ಲಿ ಭಾರತದ ಅಧಿಕಾರಿಗಳ ಪಾತ್ರವಿದೆ. ಈ ಪ್ರಕರಣದಲ್ಲಿ ನನಗೆ ಜಾಮೀನು ನೀಡಿ. ತನಿಖೆಗೆ ಸಹಕರಿಸುವೆ” ಎಂದು ಮೆಹುಲ್ ಚೋಕ್ಸಿ, ಆಂಟಿಗುವಾದಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದರು.
ಜಾಮೀನು ಕೋರಿ ಮೆಹುಲ್ ಚೋಕ್ಸಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿರುವ, ಡೊಮಿನಿಕಾದ ಮಾಜಿಸ್ಟ್ರೇಟ್ ಕೋರ್ಟ್, ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಚೋಕ್ಸಿ ಅಲ್ಲಿಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಜೂನ್ 11 ಕ್ಕೆ ಮುಂದೂಡಿದೆ.
ಮುಂದೇನಾಗುವುದು ಎನ್ನುವುದು ಈ ರೋಚಕ ಕಹಾನಿಯ ಮುಂದಿನ ದೃಶ್ಯಗಳಾಗಿರಲಿದೆ!











