
ಬೆಂಗಳೂರು: ಕರ್ನಾಟಕದಲ್ಲಿ 63 ಪರ್ಸೆಂಟ್ ಭ್ರಷ್ಟಾಚಾರ ಇದೆ ಎಂದು ಉಪಲೋಕಾಯುಕ್ತ ವೀರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣಸಲ್ಲಿ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಭಾರೀ ಭ್ರಷ್ಟಾಚಾರವಾಗಿದೆ ಎಂದು ಕೆ ಆರ್ ಪೇಟೆ ಶಾಸಕ ಮಂಜು ಗಂಭೀರ ಆರೋಪ ಮಾಡಿದ ಮೇಲೆ ಸಚಿವರ ಎಂ ಬಿ ಪಾಟೀಲ್ ಕಿಕ್ ಬ್ಯಾಕ್ ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದರಿಂದ ಸಚಿವ ಎಂಪಿ ಪಾಟೀಲ್ ಗರಂ ಆಗಿ, ಮಂಜುರವರ ಆರೋಪವನ್ನು ತಿಳಿದು ಅದಕ್ಕೆ ಸ್ಪಷ್ಟೀಕರಣ ಕೊಡುತ್ತೇವೆ. KSDIL ನಲ್ಲಿ ಏನಾದರೂ ಅವ್ಯವಹಾರ ಆಗಿದ್ರೆ, ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ. ಇದು ಮಾಡಾಳ್ ವಿರೂಪಾಕ್ಷ ನವರ ಸರ್ಕಾರ ಅಲ್ಲ, ಇದು ನಮ್ಮ ಸರ್ಕಾರ. ಕಿಕ್ ಬ್ಯಾಕ್ ಅಂತಾ ಸಚಿವರ ಹೆಸರು ತಗೊಂಡು ಹೇಳಿದ್ರೆ ಅವನನ್ನು ಒದ್ದು ಒಳಗೆ ಹಾಕ್ತೀನಿ. ಅಲ್ಲಿ ಎಂಡಿ ಇರುತ್ತಾರೆ, ಏನೇ ಆದರೂ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ.ಸಚಿವರು ತನಕ ಏನು ಬರುವುದಿಲ್ಲ. ಏನಾದರೂ ಇದ್ದರೆ ಅದಕ್ಕೆ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಆದರೆ ಸುಖಾ ಸುಮ್ಮನೆ ಆರೋಪ ಮಾಡೋದು ಸರಿಯಲ್ಲ.ಅವರು ಆರೋಪಕ್ಕೂ ತಕ್ಕ ಉತ್ತರ ಕೊಡುತ್ತೇವೆ. ಸುಳ್ಳು ಆಪಾದನೆ ಮಾಡಿದ್ರೆ ಅವನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರದ ಆರೋಪ ಆಧಾರರಹಿತ: ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಸ್ಪಷ್ಟೀಕರಣ. ಕೆಎಸ್ಡಿಎಲ್ ಟೆಂಡರ್ ಸಂಪೂರ್ಣ ಪಾರದರ್ಶಕ
ಸರಕಾರಿ ಸ್ವಾಮ್ಯದ ಕೆಎಸ್ಡಿಎಲ್ ಸಂಸ್ಥೆಯು ಕಪ್ಪು ಪಟ್ಟಿಯಲ್ಲಿ ಇರುವ ಕರ್ನಾಟಕ ಅರೋಮಾಸ್ ಎನ್ನುವ ಸಂಸ್ಥೆಗೆ ಕಚ್ಚಾ ಸಾಮಗ್ರಿ ಖರೀದಿ ಟೆಂಡರ್ ನೀಡುವ ಮೂಲಕ ಅವ್ಯವಹಾರ ಎಸಗಿದೆ ಎಂದು ಕೆ.ಆರ್.ಪೇಟೆ ಶಾಸಕರೂ ಆದ ವಿಧಾನಮಂಡಲದ ಕಾಗದ ಪತ್ರ ಸಮಿತಿ ಸದಸ್ಯರಾದ ಎಚ್.ಟಿ.ಮಂಜು ಮಾಡಿರುವ ಆರೋಪ ನಿರಾಧಾರವಾದುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಎಂ.ಪ್ರಶಾಂತ್ ಹೇಳಿದ್ದಾರೆ.
ಕಚ್ಚಾ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಗೆ ಈ ವರ್ಷದ ಏ.25, ಮೇ 25, ಸೆ. 26ರಂದು ಮತ್ತು ಸರಕಾರಕ್ಕೆ ನ.27ರಂದು 1,500 ಪುಟಗಳಷ್ಟು ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಅರೋಮಾಸ್ ಸಂಸ್ಥೆಯು ಲೋಕಾಯುಕ್ತ ನ್ಯಾಯಾಲಯದಲ್ಲಿ ನಿರ್ದೋಷಿ ಎಂದು ಸಾಬೀತಾಗಿದೆ. ಈ ಸಂಬಂಧದ ದೂರನ್ನು ಅದು ವಜಾಗೊಳಿಸಿದೆ. ಹೀಗಾಗಿ ಈ ಸಂಸ್ಥೆಯು ಕಪ್ಪುಪಟ್ಟಿಯಲ್ಲೇನೂ ಇಲ್ಲ. ಕೆಟಿಟಿಪಿ ನಿಯಮಾವಳಿಗಳ ಪ್ರಕಾರ ಪಾರದರ್ಶಕವಾಗಿ ಈ ಸಂಸ್ಥೆಗೆ ಟೆಂಡರ್ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಗಂಧದ ಎಣ್ಣೆ ಖರೀದಿಯಲ್ಲಿ ‘ಎಲೆಕ್ಟ್ರಾನಿಕ್ ರಿವರ್ಸ್ ಹರಾಜು’ ಪ್ರಕ್ರಿಯೆಗೆ ಅವಕಾಶವಿದೆ. ಇದರಿಂದಾಗಿ ಕೆಎಸ್ಡಿಎಲ್ ಸಂಸ್ಥೆಗೆ 88 ಕೋಟಿ ರೂಪಾಯಿ ಉಳಿತಾಯವಾಗಿದೆ. ಏತನ್ಮಧ್ಯೆ ಕೆಲವು ಬಿಡ್ ದಾರರು ದುರುದ್ದೇಶದಿಂದ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲೂ ಸಹ ಅ.9ರಂದು ಸಂಸ್ಥೆಯ ಪರವಾಗಿಯೇ ಆದೇಶ ಬಂದಿದೆ ಎಂದು ಅವರು ನುಡಿದಿದ್ದಾರೆ.

ಆಧಾರ ರಹಿತ ಆರೋಪದಿಂದ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಈ ಆರೋಪಗಳನ್ನು ಸಂಸ್ಥೆಯು ಸಾರಾಸಗಟಾಗಿ ನಿರಾಕರಿಸುತ್ತದೆ ಎಂದು ಪ್ರಶಾಂತ್ ಅವರು ತಿಳಿಸಿದ್ದಾರೆ.

