2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಗೆಲ್ಲಲು ಬಹುಜನ ಸಮಾಜವಾದಿ ಪಕ್ಷ ಭಾರೀ ಸರ್ಕಸ್ ನಡೆಸುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೇಗಾದರೂ ಸರಿಯೇ ಸೋಲಿಸಬೇಕು ಎಂದು BSP ಮುಖ್ಯಸ್ಥೆ ಮಾಯಾವತಿ ದಲಿತ-ಬ್ರಾಹ್ಮಣ ಸೂತ್ರದ ಮೊರೆ ಹೋಗಿದ್ದಾರೆ. ಸದ್ಯ ಉತ್ತರ ಪ್ರದೇಶದಲ್ಲಿ ರಾಜಕೀಯ ಸ್ಥಿತ್ಯಂತರ ಶುರುವಾಗಿದೆ. ಇದೇ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆ ಗೆಲ್ಲಲು ಅಗ್ಯವಿರುವ ಎಲ್ಲಾ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಮಾಯಾವತಿ ಮುಂದಾಗಿದ್ದಾರೆ.
ಪ್ರಸ್ತುತ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಬ್ರಾಹ್ಮಣ ಸಮುದಾಯ ಮುನಿಸಿಕೊಂಡಿದೆ. ಈ ಬ್ರಾಹ್ಮಣ ಸಮುದಾಯದ ಮತಗಳನ್ನು ಬಿಎಸ್ಪಿಯತ್ತ ಸೆಳೆಯಲು ಎಂದು ಮಾಯಾವತಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಮಾಯಾವತಿ ಅವರು, ಮುಂದಿನ ಚುನಾವಣೆಯಲ್ಲಿ ಬ್ರಾಹ್ಮಣರು ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ಹಾಕುವುದಿಲ್ಲ. ಬದಲಿಗೆ ನಮ್ಮ ಪಕ್ಷವನ್ನೇ ಬೆಂಬಲಿಸಲಿದ್ದಾರೆ ಎಂದಿದ್ದಾರೆ.

ಹೀಗೆ ಮುಂದುವರಿದ ಅವರು, ಬ್ರಾಹ್ಮಣರನ್ನು ತಲುಪುವ ಸಲುವಾಗಿಯೇ BSP ಪ್ರಧಾನ ಕಾರ್ಯದರ್ಶಿ ಎಸ್ಸಿ ಮಿಶ್ರಾ ನೇತೃತ್ವದಲ್ಲಿ ಸಮ್ಮೇಳನವೊಂದು ನಡೆಸುತ್ತಿದ್ದೇವೆ. ಜುಲೈ 23ರಂದು ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಮ್ಮೇಳನ ಆಯೋಜಿಸಿದ್ದೇವೆ. ಇಲ್ಲಿ ಬ್ರಾಹ್ಮಣರ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದಿದ್ದಾರೆ. ಜತೆಗೆ ತನ್ನ ಪಕ್ಷದ ಸಂಸದರಿಗೂ ಮುಂದಿನ ಮುಂಗಾರು ಅಧಿವೇನದಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತೆ ಆದೇಶಿಸಿದ್ದಾರೆ ಮಾಯಾವತಿ.
2017ರಲ್ಲಿ ಭರ್ಜರಿ ಜಯ ದಾಖಲಿಸಿದ ಬಿಜೆಪಿ ವಿರುದ್ಧ ಬ್ರಾಹ್ಮಣ ಸಮುದಾಯ ಗರಂ ಆಗಿದೆ. ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತವಹಿಸಿದ ಬ್ರಾಹ್ಮಣ ಸಮುದಾಯ ಈಗ ಯೋಗಿ ಆದಿತ್ಯನಾಥ್ ಆಡಳಿತ ವೈಖರಿಗೆ ಬೇಸತ್ತಿದೆ. ತಮ್ಮ ಸಮುದಾಯಕ್ಕೆ ಸರ್ಕಾರರಿಂದ ಹೆಚ್ಚಿನ ಮಹತ್ವವೇನು ಸಿಕ್ಕಿಲ್ಲ ಎಂದು ದೂರಿದೆ.
20 ಕೋಟಿ ಜನಸಂಖ್ಯೆಯಲ್ಲಿ ಶೇ. 12ರಷ್ಟಿರುವ ಸಮುದಾಯವು ಪ್ರಮುಖ ಮತಬ್ಯಾಂಕ್ ಆಗಿ ಪರಿಣಮಿಸಿದೆ. ಕೇವಲ ಸಂಖ್ಯೆಯಿಂದ ಮಾತ್ರವಲ್ಲದೆ, ಇತರೆ ಸಮುದಾಯದ ಮೇಲೂ ಪ್ರಭಾವ ಬೀರುವ ಸಾಮರ್ಥ್ಯ ನಾಯಕರು ಬ್ರಾಹ್ಮಣ ಸಮುದಾಯದವರೇ. ಮತದಾನ ನಡವಳಿಕೆ ಸಮುದಾಯದ ಮತಗಳು ಸರ್ಕಾರದ ಭವಿಷ್ಯ ನಿರ್ಧರಿಸುತ್ತವೆ ಎಂಬುದು ನಿರ್ವಿವಾದವಾಗಿದೆ. ಶೇ. 80ರಷ್ಟು ಬ್ರಾಹ್ಮಣರು 2017ರಲ್ಲಿ ಬಿಜೆಪಿ ಪರ ಮತ ಹಾಕಿದ್ದಾರೆ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಶೇ.72 ಹಾಗೂ ಶೇ. 82ರಷ್ಟು ಬ್ರಾಹ್ಮಣ ಮತಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಹೀಗಾಗಿ ಗೆಲುವು ಸುಲಭವಾಗಿತ್ತು.
2007 ಹಾಗೂ 2012ರಲ್ಲಿ ಬಿಎಸ್ಪಿ ಹಾಗೂ ಎಸ್ಪಿ ಗೆಲುವು ಸಾಧಿಸಿದ್ದವು. ಆಗ ಕ್ರಮವಾಗಿ ಶೇ 40 ಹಾಗೂ ಶೇ. 38 ರಷ್ಟು ಬ್ರಾಹ್ಮಣ ಮತಗಳನ್ನು ಮಾತ್ರ ಕೇಸರಿ ಪಡೆ ಪಡೆದುಕೊಂಡಿತ್ತು. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಬ್ರಾಹ್ಮಣ ಮತಗಳು ಬೀಳೋದು ಡೌಟ್ ಎನ್ನಲಾಗುತ್ತಿದೆ.
ಈ ಮಧ್ಯೆಯೇ ಸಮೀಕ್ಷೆಯೊಂದರ ಪ್ರಕಾರ ಮುಂಬರುವ ಚುನಾವಣೆಯಲ್ಲಿ ಶೇ. 43.1ರಷ್ಟು ಮಂದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆ ಇದೆ. ಅದೇ ರೀತಿ ಶೇ. 29.6ರಷ್ಟು ಮಂದಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಬಹುದು. ಬಿಎಸ್‌ಪಿ ಪರ ಶೇ. 10.1ರಷ್ಟು ಮಂದಿ ಹಾಗೂ ಕಾಂಗ್ರೆಸ್ ಪಕ್ಷದ ಪರ ಶೇ. 8.1 ರಷ್ಟು ಮಂದಿ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.