ಶ್ರೀ ಗುರು ಸಿದ್ಧರಾಮೇಶ್ವರರ 852ನೇ ಜಯಂತಿ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆಶಯ
ಶರಣರ ನಡೆ ನುಡಿ ಸದಾ ಅನುಕರಣೀಯ
ಬೆಂಗಳೂರು: ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದ್ದು ಸಂತರು ಮತ್ತು ಶರಣರ ಮಾರ್ಗದರ್ಶನದಲ್ಲಿ ಅವೆಲ್ಲವೂ ಪುನರುದ್ಧಾರ ಆಗಬೇಕಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಶ್ರೀ ಗುರು ಸಿದ್ಧರಾಮೇಶ್ವರರ 852ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಪ್ರತಿದಿನವೂ ಕೆಟ್ಟ ಸುದ್ದಿಗಳು, ಅಪರಾಧಗಳು ವಿಜೃಂಭಿಸುತ್ತಿವೆ. ಅವೆಲ್ಲವನ್ನೂ ಮಾಧ್ಯಮಗಳಲ್ಲಿ ಕಂಡರೆ ಕಳವಳವಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಸಂತರು, ಶರಣರೇ ದಾರಿ ತೋರಬೇಕು ಎಂದರು.
ವಿಶ್ವದ ಮುಂದುವರೆದ ರಾಷ್ಟ್ರಗಳಿಗೆ ಸರಿಸಮನಾಗಿ ನಮ್ಮ ದೇಶ ಮುಂದುವರಿಯುತ್ತಿದೆ. ದೇಶದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಪಡೆದಿದ್ದೇವೆ. ಹಳ್ಳಿಗಳಿಗೆ ರಸ್ತೆ, ವಿದ್ಯುತ್ ಎಲ್ಲವೂ ಬಂದಿದೆ. ಇಂಥ ಯಾವ ಅನುಕೂಲಗಳು ಇಲ್ಲದೇ ಇದ್ದಾಗ ಅನ್ಯೋನ್ಯವಾಗಿ, ನೆಮ್ಮದಿಯಾಗಿ ಇದ್ದೆವು. ಎಲ್ಲವೂ ಬಂದ ಮೇಲೆ ಇದ್ದ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದು ಬಹಳ ದುಃಖಕರ ಎಂದು ಸಚಿವರು ಹೇಳಿದರು.
ಉತ್ತರ ಕರ್ನಾಟಕದಲ್ಲಿ ನಾಲ್ಕು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನೇ ತಂದೆಯನ್ನು ಕೊಳ್ಳುವಂತ ಪರಿಸ್ಥಿತಿ. ಆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅವರ ಪರಿಸ್ಥಿತಿ ಎಲ್ಲಿಗೆ ಬಂದಿರಬಹುದು? ಸಮಾಜದ ಒಳಿತಿಗಾಗಿ ಅಕ್ಕಮಹಾದೇವಿ, ಬಸವಣ್ಣನವರ ಹೇಳಿದ ಜೀವನದ ಆದರ್ಶಗಳನ್ನು ನಾವೆಲ್ಲಾ ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಸಚಿವರು ಪ್ರತಿಪಾದಿಸಿದರು.
12ನೇ ಶತಮಾನದಲ್ಲಿ ಶರಣರು ಕಾಯಕದ ಸಂದೇಶ ಕೊಟ್ಟಿದ್ದಾರೆ. ಸಮಾಜದ ಒಗ್ಗೂಡುವಿಕೆಯನ್ನು ಸರಿಪಡಿಸುವ ಬಗ್ಗೆ ಬಸವಣ್ಣನವರ ಆದರ್ಶಗಳ ಬಗ್ಗೆ ಶರಣರು ಹೇಳಿರುವ ಸಂದೇಶ ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಸಚಿವರು ಒತ್ತಿ ಹೇಳಿದರು.
ನಾವ್ಯಾರು ನಡೆ ನುಡಿಗಳಲ್ಲಿ ಪರಿಶುದ್ಧವಾಗಿದ್ದೇವೆ ಎನ್ನುವ ಬಗ್ಗೆ ಆಲೋಚನೆ ಮಾಡಬೇಕು. ಶರಣರ ನುಡಿಯಲ್ಲಿ ನಾವು ಸ್ವಲ್ಪವಾದರೂ ಅಳವಡಿಸಿಕೊಂಡರೆ ಶರಣರಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕೆರಗೋಡು-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುಪರದೇಶಿಕೇಂದ್ರ ಸ್ವಾಮಿಗಳು, ಸಾಣೇಹಳ್ಳಿಯ ಶ್ರೀ ತರಳಬಾಳು ಶಾಖಾಮಠದ ಪರಮಪೂಜ್ಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಕುಪ್ಪೂರು – ತಮ್ಮಡಿಹಳ್ಳಿಯ ವಿರಕ್ತಮಠದ ಅಧ್ಯಕ್ಷರಾದ ಪರಮಪೂಜ್ಯ ಡಾ. ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಈಶ್ವರ ಖಂಡ್ರೆ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಶಾಸಕ ಜ್ಯೋತಿ ಗಣೇಶ್, ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ನೊಳಂಬ ಲಿಂಗಾಯಿತ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.