ಇತ್ತೀಚಿಗೆ ನಡೆದ ತೋತಾಪುರಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ನಟ ಕಿಚ್ಚ ಸುದೀಪ ತಮ್ಮ ಅಭಿಪ್ರಯವನ್ನು ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ನಾವೆಲ್ಲರು ಅದನ್ನು ಗೌರವಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಅಜಯ್ ದೇವಗನ್ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಇದಕ್ಕೆ ಬಾಲಿವುಡ್ ತಾರೆಯರು ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾ ನಾಯಕರು, ರಾಜಕೀಯ ನಾಯಕರು ಪ್ರತಿಕ್ರಿಯಿಸಿ ಕಿಡಿಕಾರಿದ್ದರು.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ, ದಕ್ಷಿಣ ಭಾರತದ ಚಿತ್ರಗಳ ಯಶಸ್ಸಿನ ಪರಿಣಾಮ ಹಿಂದಿ ಚಿತ್ರರಂಗದ ಮೇಲೆ ದೊಡ್ಡ ಪ್ರಮಾಣದ ಪರಿಣಾಮ ಬೀರಿದೆ. ದಕ್ಷಿಣದ ಸಿನಿಮಾಗಳನ್ನು ನೋಡಿ ಬಾಲಿವುಡ್ ನಿರ್ಮಾಪಕರು ಭಯ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿಗೆ ಸುದ್ದಿ ಮಾಧ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮನೋಜ್ ಕೋವಿಡ್ ಸಾಂಕ್ರಾಮಿಕದ ನಂತರ ದಕ್ಷಿಣದ ಚಿತ್ರಗಳಾದ ಪುಷ್ಟ, ಆರ್ ಆರ್ ಆರ್ ಹಾಗೂ ಕೆಜಿಎಫ್-2 ಚಿತ್ರಗಳು ಹಿಂದಿ ಭಾಷಿಕ ಪ್ರದೇಶಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಕಲೆಕ್ಷನ್ನಲ್ಲಿ ಮುಂದಿವೆ. ಇತ್ತೀಚಿಗೆ ಈ ಕುರಿತು ರಾಮ್ ಗೋಪಾಲ್ ವರ್ಮಾ ಸೇರಿದಂತೆ ಅನೇಕರು ಈ ಬಗ್ಗೆ ಮಾತನಾಡಿದ್ದರು.
ದಕ್ಷಿಣದ ಸಿನಿಮಾಗಳು ಬಾಲಿವುಡ್ ಮೇಲೆ ಯಾವ ರೀತಿಯ ಪರಿಣಾಮ ಬೀರಿವೆ ಎಂದರೆ ಬಾಲಿವುಡ್ ನಿರ್ಮಾಪಕರು ಹೊಡೆತಕ್ಕೆ ನಲುಗಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಭಾರತದಲ್ಲಿ 200 ಕೋಟಿ ಕ್ಲಬ್ ಸೇರಲು ತಿಣುಕಾಡುತ್ತಿರುವ ಹೊತ್ತಲ್ಲಿ ಕೆಜಿಎಫ್-2 ಹಿಂದಿ ಅವತರಣಿಕೆಯೊಂದರಲ್ಲೇ 300 ಕೋಟಿಗೂ ಅಧಿಕ ಗಳಿಸಿ ಮುನ್ನುಗ್ಗುತ್ತಿದೆ ಎಂದು ಹೇಳಿದ್ದಾರೆ.
ಈ ಸಿನಿಮಾಗಳ ಯಶಸ್ಸು ಬಾಲಿವುಡ್ಗೆ ಒಂದು ದೊಡ್ಡ ಪಾಠವಾಗಿದೆ ಆದಷ್ಟು ಬೇಗ ಚಿತ್ರರಂಗ ಇದನ್ನು ಅರಿತುಕೊಳ್ಳಬೇಕು ಎಂದು ಸಲಹೆಯನ್ನ ನೀಡಿದ್ದಾರೆ.
			
                                
                                
                                






