ಆಳ್ವಿಕೆಯ ಕೇಂದ್ರಗಳಲ್ಲಿರುವ ಮಹಿಳೆಯರೂ ಸ್ತ್ರೀ ಸಂವೇದನೆ ಕಳೆದುಕೊಂಡಿರುವುದು ದುರಂತ
ಜನಾಂಗೀಯ ದ್ವೇಷ ಮತ್ತು ಮತ ದ್ವೇಷದ ಜ್ವಾಲೆಯಲ್ಲಿ ಜ್ವಲಿಸುತ್ತಿರುವ ಮಣಿಪುರದ ಘಟನೆಗಳು ಇಡೀ ದೇಶದ ಸೂಕ್ಷ್ಮ ಮನಸುಗಳನ್ನು ಪ್ರಕ್ಷುಬ್ಧಗೊಳಿಸಿದೆ. ಆದರೆ ಈ ಸೂಕ್ಷ್ಮ ಮನಸುಗಳ ಸಂಖ್ಯೆಯನ್ನು ಗಮನಿಸಿದಾಗ ಸೂಕ್ಷ್ಮತೆಯ ವ್ಯಾಖ್ಯಾನವನ್ನೇ ಮರುವಿಮರ್ಶೆಗೊಳಪಡಿಸಬೇಕಾಗುತ್ತದೆ. ಏಕೆಂದರೆ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಮನುಜ ಸಂಬಂಧಗಳಲ್ಲಿನ ತರತಮಗಳೊಡನೆ ಕಳೆದ ಐದಾರು ದಶಕಗಳಿಂದ ತೀವ್ರತೆ ಪಡೆಯುತ್ತಿರುವ ಮತೀಯ-ಮತದ್ವೇಷದ ಸಾಂಸ್ಕೃತಿಕ ರಾಜಕಾರಣದ ಪರಿಣಾಮವಾಗಿ ಭಾರತದ ಸಾರ್ವಜನಿಕ ಬೌದ್ದಿಕ ವಲಯದಲ್ಲೂ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯ ನೆಲೆಗಳು ವರ್ಗೀಕರಣಕ್ಕೊಳಗಾಗಿವೆ. ಹಾಗಾಗಿಯೇ ಮಣಿಪುರದಲ್ಲಿ ನಡೆಯುತ್ತಿರುವ ಭಯಾನಕ ಘಟನೆಗಳಿಗೆ ಸಾರ್ವಜನಿಕ ವಲಯ ಅಥವಾ ಇದನ್ನು ಪ್ರತಿನಿಧಿಸುವ ಪ್ರಧಾನ ಮಾಧ್ಯಮಗಳು ಮನುಜ ಸೂಕ್ಷ್ಮತೆಯೊಂದಿಗೆ ಮುಖಾಮುಖಿಯಾಗಲು ನಿರಾಕರಿಸುತ್ತಿದೆ.
ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಿರುವುದು, ಕೆಲವೊಮ್ಮೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಿರುವುದು ನಿತ್ಯ ಸುದ್ದಿಯಾಗಿರುವ 21ನೆಯ ಶತಮಾನದ ಭಾರತದಲ್ಲಿ ಹಲ್ಲೆಗೊಳಗಾದ ಮಹಿಳೆಯರ ಬೆತ್ತಲೆ ಮೆರವಣಿಗೆಯೂ ಸಹ ಪರಸ್ಪರ ರಾಜಕೀಯ ಕೆಸರೆರಚಾಟದ ವಸ್ತುವಾಗುವ ದುರಂತವನ್ನು ಮಣಿಪುರದ ಘಟನೆಗಳು ತೆರೆದಿಟ್ಟಿವೆ. 77 ದಿನಗಳ ನಂತರ ಸಾರ್ವಜನಿಕರ ಗಮನಕ್ಕೆ ಬಂದ ಒಂದು ಅಮಾನುಷ ಘಟನೆಯ ಬಗ್ಗೆ ಮೂಲತಃ ದೇಶದ ಸುಶಿಕ್ಷಿತ ಸಮಾಜ ಸಿಡಿದೇಳಬೇಕಿತ್ತು. ಈ ಘಟನೆಯ ಪೂರ್ವಾಪರಗಳಾಗಲೀ, ರಾಜಕೀಯ ಉದ್ದೇಶಗಳಾಗಲೀ ಅಥವಾ ಮಣಿಪುರವನ್ನು ಆವರಿಸಿರುವ ಸಾಮುದಾಯಿಕ ಕ್ಷೋಭೆಯಾಗಲೀ ಮುಖ್ಯವಾಗದೆ, ಈ ಆಧುನಿಕ ಕಾಲಘಟ್ಟದಲ್ಲೂ ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಪ್ರಾಚೀನ ಸಮಾಜದ ಕ್ರೌರ್ಯದ ನೆಲೆಯಲ್ಲೇ ನಡೆಸಿಕೊಳ್ಳುವ ಒಂದು ವರ್ತನೆ ನಮ್ಮ ನಾಗರಿಕ ಪ್ರಜ್ಞೆಯನ್ನು ಕಾಡಬೇಕಿತ್ತು.

ರಾಜಕೀಯ ಅಸ್ತ್ರವಾಗಿ ಮಹಿಳೆ
ಭಾರತದ ಹೆಣ್ಣುಮಗಳು ಕೇವಲ ಜನಾಂಗೀಯ ದ್ವೇಷಕ್ಕೆ ತುತ್ತಾಗುತ್ತಿಲ್ಲ ಅಥವಾ ಜಾತಿ-ಮತದ್ವೇಷಕ್ಕೆ ಬಲಿಯಾಗುತ್ತಿಲ್ಲ. ಸಾಮಾನ್ಯ ಜನಜೀವನದ ನಡುವೆಯೂ ಶಾಲೆಗಳಲ್ಲಿ, ಹಾಸ್ಟೆಲುಗಳಲ್ಲಿ, ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳ ಸುತ್ತ, ಕುಟುಂಬಗಳಲ್ಲಿ ಮಹಿಳೆ ಮತ್ತೊಮ್ಮೆ ಅಸಹಾಯಕಳಾಗಿ ಕಾಣತೊಡಗಿದ್ದಾಳೆ. ಜನಾಂಗೀಯ ಕಲಹಗಳ ಸಂದರ್ಭಗಳಲ್ಲಿ ಅಥವಾ ಕೋಮು ಗಲಭೆಗಳಲ್ಲಿ ಅಸಹಾಯಕ ಮಹಿಳೆಯೇ ಹಲ್ಲೆಕೋರರ ಮುಖ್ಯ ಗುರಿಯಾಗುವುದು ಜಾಗತಿಕ ವಿದ್ಯಮಾನವಾಗಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲೂ ಇದರ ವಿವಿಧ ಅವತಾರಗಳನ್ನು ಕಂಡಿದ್ದೇವೆ. ಸಾಮಾಜಿಕ ಕ್ಷೋಭೆ ಹಾಗೂ ಪ್ರಕ್ಷುಬ್ಧ ವಾತಾವರಣದಲ್ಲಿ ಹಲ್ಲೆಗೊಳಗಾಗುವ ಮಹಿಳೆ ತನ್ನ ಎಲ್ಲ ಅಸ್ಮಿತೆಗಳನ್ನೂ ಕಳೆದುಕೊಂಡು ಕೇವಲ ಪುರುಷಾಹಮಿಕೆಗೆ ಬಲಿಯಾಗುವ ದೇಹವಾಗಿ ಮಾತ್ರ ಕಾಣುತ್ತಾಳೆ. ಆಕೆಯ ದೇಹ ಯಾವುದೋ ಒಂದು ಪಂಥದ ಅಥವಾ ಮತಧರ್ಮದ ಅಥವಾ ಜಾತಿಯ ಮೇಲರಿಮೆಯನ್ನು ನಿರೂಪಿಸಲು ಬಳಸುವ ವಸ್ತುವಾಗಿ ಕಾಣುತ್ತದೆ. ಒಂದು ಗುಂಪಿನ ಅಥವಾ ಸಮುದಾಯದ ಸ್ವತ್ತಿನಂತೆ ಕಾಣುವ ಮಹಿಳೆಯ ದೇಹ ಮತ್ತೊಂದು ಗುಂಪಿಗೆ ಅಥವಾ ಸಮಾಜಕ್ಕೆ ಸೇಡು ತೀರಿಸಿಕೊಳ್ಳಲು ಬಳಸಬಹುದಾದ ಆಯುಧದಂತೆಯೋ ಅಥವಾ ಸಾಧನದಂತೆಯೋ ಕಾಣುತ್ತದೆ.
ಇದನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದಾಗ ಆರೋಗ್ಯವಂತ ಸಮಾಜದಲ್ಲೇ ಢಾಳಾಗಿ ಕಾಣುವ ಸ್ತ್ರೀದ್ವೇಷದ ಮೂಲ ಸೆಲೆಗಳನ್ನು ಗ್ರಹಿಸಲು ಸಾಧ್ಯ. ಪಿತೃಪ್ರಧಾನ ಧೋರಣೆಯಿಂದ ಇಂದಿಗೂ ಮುಕ್ತವಾಗದ ಒಂದು ಸಮಾಜ ಈ ಮೂಲ ಸೆಲೆಯನ್ನು ಸಂರಕ್ಷಿಸುತ್ತಲೇ ಅಸೂಕ್ಷ್ಮತೆಯ ನೆಲೆಗಳನ್ನೂ ಪೋಷಿಸುತ್ತಲೇ ಹೋಗುತ್ತದೆ. ಹಾಗಾಗಿಯೇ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ ಅತ್ಯಾಚಾರಗಳು ಪುರುಷಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ Competitive Politics ( ಸ್ಪರ್ಧಾತ್ಮಕ ರಾಜಕಾರಣ) ನ ಒಂದು ಪ್ರಬಲ ವೇದಿಕೆಯಾಗಿ ಪರಿಣಮಿಸುತ್ತವೆ. ಮಣಿಪುರದ ಘಟನೆಯ ನಂತರದಲ್ಲಿ ಕಾಣಲಾಗುತ್ತಿರುವ ರಾಜಕೀಯ ಪ್ರತಿಕ್ರಿಯೆಗಳಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. ಮಹಿಳೆಯ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯಗಳನ್ನು “ ಹೆಣ್ತನದ ಘನತೆ ”ಯ ಮೇಲೆ ನಡೆದ ಆಕ್ರಮಣ ಎಂದು ಪರಿಗಣಿಸಬೇಕಾದ ಸುಶಿಕ್ಷಿತ ಸಮಾಜವೂ, ಅತ್ಯಾಚಾರ-ದೌರ್ಜನ್ಯಕ್ಕೊಳಗಾದ ಮಹಿಳೆಯಲ್ಲಿ ಸ್ವಾಭಾವಿಕವಾಗಿ ಅಂತರ್ಗತವಾಗಿರುವ ಒಂದು ಹೆಣ್ತನವನ್ನು ಗುರುತಿಸಲು ವಿಫಲವಾಗುತ್ತದೆ.
ಹಾಗಾಗಿಯೇ ರಾಜಕೀಯ ಚರ್ಚೆಗಳಲ್ಲಿ “ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಇದು ನಡೆದಿರಲಿಲ್ಲವೇ,,,,, ” ಅಥವಾ “ ನೀವು ಆಳುತ್ತಿರುವ ರಾಜ್ಯಗಳಲ್ಲಿ ಇದು ನಡೆಯುತ್ತಿಲ್ಲವೇ ,,,,,” ಎಂಬ ವಾದಗಳ ತುಣುಕುಗಳು ಕೇಳಿಬರುತ್ತವೆ. ನಾಗರಿಕ ವಲಯದಲ್ಲೂ ಸಹ ಹಿತವಲಯದ ಬೌದ್ಧಿಕ ನೆಲೆಗಳಲ್ಲಿ ಮಹಿಳಾ ದೌರ್ಜನ್ಯದ ಪ್ರಕರಣಗಳನ್ನು “ ಹೆಣ್ತನದ ಘನತೆ ”ಯ ವ್ಯಾಪ್ತಿಯಿಂದ ಹೊರತಾಗಿಯೇ ಚರ್ಚೆಗೊಳಪಡಿಸಲಾಗುತ್ತದೆ. ಮತೀಯ ದೃಷ್ಟಿಕೋನ ಅಥವಾ ಜಾತಿ ಕೇಂದ್ರಿತ ದೃಷ್ಟಿಕೋನದ ನೆಲೆಯಲ್ಲಿ ಕಳೆದು ಹೋಗುವ “ ಹೆಣ್ತನದ ಘನತೆ ” ಸಂತ್ರಸ್ತ ಮಹಿಳೆಯನ್ನು ಅಸ್ಮಿತೆಗಳ ಸರಳುಗಳ ನಡುವೆ ಬಂಧಿಸಿಬಿಡುತ್ತದೆ. ಕಾಶ್ಮೀರದಲ್ಲಿ ಅತ್ಯಾಚಾರಕ್ಕೊಳಗಾದ ಎಂಟು ವರ್ಷದ ಆಸಿಫಾಳನ್ನು ಉಲ್ಲೇಖಿಸಿದ ಕೂಡಲೇ “ ಅಲ್ಲಿ ಉಗ್ರವಾದಿಗಳಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಸಂತ್ರಸ್ತರು ಕಾಣುವುದಿಲ್ಲವೇ ? ” ಎಂಬ ಕೋಪೋದ್ರಿಕ್ತ ಪ್ರಶ್ನೆಗಳು ಎದುರಾಗುತ್ತವೆ.
ಮುಂದುವರೆಯುತ್ತದೆ,,,,