ಅಲ್ಲಿನ ಬೆಂಕಿಯನ್ನು ನಂದಿಸಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ದೆಹಲಿಯು ತನ್ನ ದೂತರನ್ನು ಕಳುಹಿಸಿತು. ಪಕ್ಷದ ಇಬ್ಬರು ಪ್ರಬಲ ನಾಯಕರು, ಈಶಾನ್ಯ ಬಿಜೆಪಿಯ ಸಂಯೋಜಕರಾದ ಸಂಬಿತ್ ಪಾತ್ರ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿವಿಧ ಪಕ್ಷಗಳು ಮತ್ತು ಸಣ್ಣ ಗುಂಪುಗಳೊಂದಿಗೆ ಸಭೆಗಳನ್ನು ನಡೆಸಿದರು, ಆದರೆ ಅಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆದಾಗ್ಯೂ, ಚುನಾವಣಾ ಸಭೆಗಳ ಸಮಯದಲ್ಲಿ ಸರಕಾರ ಮತ್ತು ತನ್ನ ನಡುವಿನ ಮಹಾನ್ ಒಡಂಬಡಿಕೆಯ ಲಾಭದ ಬಗ್ಗೆ ಪದೇ ಪದೇ ಹೆಮ್ಮೆಪಡುತ್ತಿದ್ದ ಕೇಂದ್ರ ನಾಯಕತ್ವವು ತಮ್ಮದು “ಡಬಲ್ ಇಂಜಿನ್” ಸರ್ಕಾರ ಎಂದು ಕರೆದುಕೊಂಡು ಇಂತಹ ಸಂದಿಗ್ಧ ಸಂದರ್ಭದಲ್ಲೂ ಗೊಂದಲಮಯ ಮೌನಕ್ಕೆ ಶರಣಾಯಿತು. ಅಂತಿಮವಾಗಿ, ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ ಭಾರತದ ಗೃಹ ಮಂತ್ರಿ, ಮಣಿಪುರಕ್ಕೆ ಭೇಟಿಕೊಟ್ಟು ಅಲ್ಲಿನ ವಿವಿಧ ಗುಂಪುಗಳು ಮತ್ತು ಸ್ಥಳೀಯ ನಾಯಕರನ್ನು ಭೇಟಿಮಾಡಿದರು. ಆದರೆ ಈ ತಂತ್ರವು ಅಲ್ಲಿನ ವಾತಾವರಣದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎನ್ನುತ್ತಾರೆ ಲೇಖಕಿ.

ಅಷ್ಟಾದರೂ ಅಲ್ಲಿ ಹಿಂಸಾಚಾರವು ಹೆಚ್ಚುತ್ತಲೇ ಇತ್ತು ಮತ್ತು ಒಂದು ಸಮುದಾಯ ಮತ್ತೊಂದು ಸಮುದಾಯದ ಮೇಲೆ ಸಶಸ್ತ್ರ ದಾಳಿ ಮಾಡುತ್ತಲೆ ಇತ್ತು. ಮಣಿಪುರದ ಜನರು ಬಹುಶಃ, ಬಿಜೆಪಿಗೆ ಹಾಕುವ ಪ್ರತಿ ಮತವೂ ತನಗೆ ಹಾಕಿದಂತೆ ಎಂದು ಚುನಾವಣಾ ಸಮಯದಲ್ಲಿ ಹೇಳಿದ್ದ ಪ್ರಧಾನಿ ಮೋದಿಯವರು ರಾಜ್ಯವನ್ನು ವೈಭವದತ್ತ ಕೊಂಡೊಯ್ಯುತ್ತಾರೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಬಿಜೆಪಿಯ ಎಂಟು ಜನ ಮತ್ತು ಒಬ್ಬ ಸ್ವತಂತ್ರ, ಹೀಗೆ ಒಟ್ಟು ಒಂಬತ್ತು ಜನ ಹಿಂದೂ ಮೈತೇಯಿ ಸಮುದಾಯದ ಶಾಸಕರ ನಿಯೋಗವು ದಿಲ್ಲಿಯಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ಪ್ರಯತ್ನಿಸಿತು. ಆಗ ಪ್ರಧಾನಿಯವರು ಯುಎಸ್ ಪ್ರವಾಸದ ಪ್ರಚಾರದಲ್ಲಿ ನಿರತರಾಗಿದ್ದರು. ಈ ನಿಯೋಗಕ್ಕೆ ಪ್ರಧಾನಿಯವರ ಕಛೇರಿಯಿಂದ ಭೇಟಿಯ ಅವಕಾಶವನ್ನು ನಿರಾಕರಿಸಿತು. ಮಾಮೂಲಿನಂತೆ ನಮ್ಮ ಮಾಧ್ಯಮಗಳು ಮೋದಿಯವರ ಅಮೇರಿಕಾ ಭೇಟಿಯನ್ನು ಅತಿರಂಜಿಸುವ ಹಾಗು ವೈಭವೀಕರಿಸುವ ಕೃತಾರ್ಥ ಕಾರ್ಯದಲ್ಲಿ ನಿರತವಾಗಿದ್ದವು ಎನ್ನುತ್ತಾರೆ ಲೇಖಕಿ.
ಅದರ ಪರಿಣಾಮವಾಗಿ, ಮಣಿಪುರವು ಅತ್ಯಂತ ಹಿಂಸೆಗೆ ತುತ್ತಾಗಿಹೋಯ್ತು. ಅಲ್ಲಿನ ಸ್ಥಳೀಯ ನಾಯಕರ ದುರಹಂಕಾರ ಮತ್ತು ದುರಾಶೆ, ಜೊತೆಗೆ ಅವರನ್ನು ಆಯ್ಕೆ ಮಾಡಿದ ಮತದಾರರ ಮೌಢ್ಯಗಳು ರಾಜ್ಯವನ್ನು ಮೋಸಗೊಳಿಸಿತು. ಚುನಾವಣೆಯ ಸಮಯದಲ್ಲಿ ಅಲ್ಲಿನ ವಂಚಿತ ಅಲ್ಪಸಂಖ್ಯಾತರಲ್ಲಿ ತೀವ್ರವಾದ ಕೋಪವನ್ನು ಹೊತ್ತಿಸದಂತೆ ಈಡೇರಿಸಲು ಅಸಾಧ್ಯವಾದ ಅಪಾಯಕಾರಿ ವಿಭಜಕ ಭರವಸೆಗಳು ಬಿಜೆಪಿ ನೀಡಿದ್ದರ ಪರಿಣಾಮದಿಂದ ಮಣಿಪುರ ಈಗ ಹೊತ್ತಿ ಉರಿಯಲು ಕಾರಣವಾಗಿದೆ ಎನ್ನುವುದು ಲೇಖಕಿಯ ಅಭಿಮತವಾಗಿದೆ. ಇದು ಜಾಗತಿಕ ರಾಜಕೀಯ ಅಶಾಂತಿಗೆ ಕಾರಣವಾಗಿದೆ. ಮಣಿಪುರವು ಒಂದು ರೀತಿಯಲ್ಲಿ ಜಾಗತೀಕರಣದ ಜಗತ್ತಿನಲ್ಲಿ ಸ್ಥೂಲಕಾಯದ ಸೂಕ್ಷ್ಮರೂಪವಾಗಿದೆ. ಅಂತರ್ಯುದ್ಧಗಳಿಂದ ಛಿದ್ರಗೊಂಡಿದ್ದ ಅಂದಿನ ಯುಎಸ್ಎಸ್ಆರ್ ವಿಘಟನೆಗೆ ಮೊದಲು ತಾನು ಹೊಂದಿದ್ದ ಪ್ರದೇಶವನ್ನು ಮರಳಿ ಪಡೆಯಲು ತನ್ನ ನೆರೆಹೊರೆಯವರ ಮೇಲೆ ಪರಮಾಣು ಬಾಂಬ್ ಸ್ಫೋಟಿಸಿಸಿತ್ತು.

ಜಗತ್ತಿನಲ್ಲಿ ಇದರಿಂದ ಅಂದು ಪರಿಸರ ನಾಶ, ವಿನಾಶಕಾರಿ ಪ್ರವಾಹಗಳು, ಬರಗಾಲ ಮತ್ತು ಚಂಡಮಾರುತಗಳನ್ನು ತಲೆದೋರಿದ್ದವು. ಇದು ತೃತೀಯಾ ಜಗತ್ತಿನ ಬಡ ರಾಷ್ಟ್ರಗಳ ನಡುವೆ ಜನರ ಸಾಮೂಹಿಕ ವಲಸೆಗೆ ಹಾದಿ ಮಾಡಿಕೊಟ್ಟಿತು ಎಂದು ಲೇಖಕಿ ಮಣಿಪುರವನ್ನು ಅಂದಿನ ಷೋವಿಯತ್ ರಷ್ಯಾದ ಘಟನೆಗೆ ಹೋಲಿಸಿದ್ದಾರೆ. ಇಂತಹ ಸಂಕಟದ ನಡುವೆಯೂ ಸರಕಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಿದ್ದಕ್ಕೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಎಂದು ಲೇಖಕಿ ಕಟಕಿಯಾಡಿದ್ದಾರೆ. ವಿಶ್ವ ಯೋಗ ದಿನದಂದು ಪ್ರಪಂಚದ ಪರಿಸರ ಮತ್ತು ಹಸಿರು ಇಂಧನದ ಸಂರಕ್ಷಣೆಯ ಕುರಿತು ಚರ್ಚಾಗೋಷ್ಠಿಗಳು ನಡೆಸುತ್ತಾ ಯೋಗವನ್ನು ಮಾಡುತ್ತಿರುವ ಕೊಬ್ಬು ತುಂಬಿರುವ ಯರ್ರಾಬಿರ್ರಿ ಆಕಾರದ ಮೋದಿಯವರ ಪಕ್ಷದ ಮಂತ್ರಿಗಳು, ಸೈನಿಕರು ಮತ್ತು ರಾಜತಾಂತ್ರಿಕರ ಫೋಟೋ ಗ್ಯಾಲರಿ ಜನರಲ್ಲಿ ಹೇಸಿಗೆಯನ್ನುಂಟು ಮಾಡಿತ್ತು ಎನ್ನುತ್ತಾರೆ ಲೇಖಕಿ. ನಿಜವಾಗಿಯೂ ಮಣಿಪುರ ಹೊತ್ತಿ ಉರಿಯುವಾಗ ಮೋದಿ ಮೋಜು ಮಾಡುತ್ತಿರುವುದು ಒಬ್ಬ ನಾಯಕನ ಬೇಜವಾಬ್ದಾರಿತನ ತೋರುತ್ತದೆ.
ನಿಜ ಹೇಳಬೇಕೆಂದರೆ, ಕೆಟ್ಟ ರಾಜಕೀಯ ತೀರ್ಮಾನಗಳು ಮತ್ತು ಕಾರ್ಪೊರೇಟ್ ದುರಾಶೆಯಿಂದ ಉಂಟಾದ ನಿಜವಾದ ನೋವಿನ ಬಗ್ಗೆ ಜಗತ್ತು ಅರ್ಥಮಾಡಿಕೊಳ್ಳುತ್ತಿಲ್ಲ. ಕಾರ್ಪೊರೇಟ್ ಕಳ್ಳೋದ್ಯಮಿಗಳು ಮತ್ತು ನಿರಂಕುಶ ಹಾಗು ಸರ್ವಾಧಿಕಾರಿಗಳು ಈ ಭೂಮಿಯನ್ನು ಲೂಟಿ ಮಾಡುವಾಗ ಮತ್ತು ಬಡವರ ದುಸ್ಥಿತಿಯನ್ನು ಅಲಕ್ಷಿಸುವಾಗ ವಿಶ್ವ ಸಂಸ್ಥೆ ಮತ್ತು ಹಲವಾರು ರಾಷ್ಟ್ರಗಳ ಗುಂಪುಗಳು ನಿರಾಸಕ್ತಿಯಿಂದ ನಿಂತಿವೆ. ಕಾಲಕಾಲಕ್ಕೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕ ಸೌಹಾರ್ದ ಸಭೆಗಳು ನಡೆಯಬೇಕು. ಆದರೆ ಪ್ರಬಲ ಹೊಣೆಗಾರಿಕೆಯನ್ನು ನಿಭಾಯಿಸುವ ಬದಲು, ಈ ಸಭೆಗಳಲ್ಲಿ ಭಾಗವಹಿಸಲು ತಮ್ಮ ಖಾಸಗಿ ವಿಮಾನಗಳಲ್ಲಿ ಆಗಮಿಸುವ ನಾಯಕರು/ಅವರ ರಾಯಭಾರಿಗಳ ಆತಿಥ್ಯವನ್ನು ವಿಶ್ವಸಂಸ್ಥೆ ವಹಿಸುತ್ತಿರುವುದು ದುರಂತದ ಸಂಗತಿಯಾಗಿದೆ.

ರಾಷ್ಟ್ರ ಮತ್ತು ಅಂತರಾಷ್ಟ್ರೀಯ ನಾಯಕರು ಯೋಗದ ಬಗ್ಗೆ ಭಾಷಣ ಹೊಡೆಯುತ್ತಾ, ಮಿಲಿಟರಿ ಶಸ್ತ್ರಾಸ್ತ್ರಗಳ ವಿವಿಧ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾ, ಕೋಟ್ಯಂತರ ಮೌಲ್ಯದ ಮಿಲಿಟರಿ ಯಂತ್ರಾಂಶಗಳನ್ನು ಖರೀದಿಸಿ ಮಾರಾಟ ಮಾಡುತ್ತಿರುವ ಇಂತಹ ಹರ್ಷದ ವಾತಾವರಣದಲ್ಲಿ ಪುಟ್ಟ ರಾಜ್ಯವೊಂದರ ಬುಡಕಟ್ಟು ನಾಯಕರು, ಅಲ್ಲಿನ ಲಕ್ಷಾಂತರ ಬಡವರು ಮತ್ತು ತುಳಿತಕ್ಕೊಳಗಾದವರ ನೋವನ್ನು ಪಟ್ಟಿ ಅರ್ಥ ಮಾಡಿಕೊಳ್ಳಲು ಇವರಿಗೆ ಸಮಯವೆಲ್ಲಿದೆ? ಒಂದು ಕಾಲದಲ್ಲಿ, ನಾವೆಲ್ಲರೂ ಜಾತ್ಯತೀತ ನಾಗರಿಕ ಗಣರಾಜ್ಯದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿರುತ್ತಾರೆ ಎಂದು ನಂಬಿದ್ದೇವು. ಜನರು ತಮ್ಮ ಧಾರ್ಮಿಕ ಅಸ್ಮಿತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೂ ಕೂಡ ಅವರೆಲ್ಲರೂ ಹೆಮ್ಮೆಯ ಭಾರತೀಯರು. ಆದರೆ ಕಾಲಾನಂತರದಲ್ಲಿ, ಅಧಿಕಾರದ ಹಸಿವಿನ ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳು ಜನಾಂಗೀಯ, ಭಾಷಿಕ ಮತ್ತು ಧಾರ್ಮಿಕ ದೋಷಗಳನ್ನು ಚಲನೆಗೆ ತರುತ್ತಿವೆ ಎನ್ನುತ್ತಾರೆ ಲೇಖಕಿ.
ಈ ರಾಜಕೀಯ ಮತ್ತು ಕಾರ್ಪೋರೇಟ್ ಹಿತಾಸಕ್ತಿಗಳು ಸಾರ್ವಜನಿಕವಾಗಿ ಮುನ್ನೆಲೆಗೆ ಬಂದಾಗ ಭೂಗತವಾಗಿರುವ ಮನುಷ್ಯನೊಳಗಿನ ಮೃಗೀಯ ಗುಣಗಳು ನಿಜವಾಗಿಯೂ ಮರು-ಹೊರಹೊಮ್ಮುತ್ತದೆ ಎಂಬುದನ್ನು ನಾವು ಮರೆತಿದ್ದೇವೆ. ಮಣಿಪುರದಲ್ಲಿ ನಡೆಯುತ್ತಿರುವುದು ಯಾವುದೊ ದೂರದ ಮೂಲೆಯಲ್ಲಿ ನಡೆಯುತ್ತಿರುವ ಮತ್ತೊಂದು ವಿಲಕ್ಷಣ ಪ್ರದರ್ಶನವಲ್ಲ ಎನ್ನುವುದನ್ನು ನಾವು ಮರೆಯಬಾರದು. ವಿವಿಧ ಸಮುದಾಯಗಳ ನಡುವೆ ತೀವ್ರವಾದ ಭಯ ಮತ್ತು ಅಸಾಹಯಕತೆ ರಾಜ್ಯದ ಚುನಾವಣೆಯ ಸಮಯದಲ್ಲಿ ಉಲ್ಬಣಗೊಂಡಿದೆ. ಇಂತಹ ಸಂದರ್ಭದಲ್ಲಿ ಭಾರತವು ಹಿಂಸಾತ್ಮಕ ಜನಾಂಗೀಯ ವಿಘಟನೆಯ ಗುಪ್ತ ಬೆದರಿಕೆಗಳನ್ನು ಎದುರಿಸುತ್ತಿದೆ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸಕಾಲಿಕ, ನಯವಾದ ಮತ್ತು ಅಷ್ಟೇ ಸ್ಪಷ್ಟವಾದ ಎಚ್ಚರಿಕೆಯ ಮಾತುಗಳ ವಿರುದ್ಧ ಅಸ್ಸಾಂ ಮುಖ್ಯಮಂತ್ರಿಯು ಕಿಡಿಕಾರಬಹುದು. ಇದು ಬಿಜೆಪಿ ಪುಢಾರಿಗಳ ಬೇಜವಾಬ್ದಾರಿಯ ಹೇಸಿಗೆ ಪ್ರದರ್ಶನವಷ್ಟೆ.

ಆದರೆ ಮಣಿಪುರದ ಪರಿಸ್ಥಿತಿಯನ್ನು ಗಮನಿಸಿದರೆ, ಒಬಾಮಾ ಅವರ ಎಚ್ಚರಿಕೆಯ ಮಾತುಗಳು ಬುದ್ಧಿವಂತಿಕೆಯ ಮತ್ತು ಅಷ್ಟೇ ಗಂಭೀರವಾಗಿ ಪರಿಗಣಿಸಲು ಅರ್ಹವಾಗಿದೆ ಎನ್ನುತ್ತಾರೆ ಮೃಣಾಲ ಪಾಂಡೆಯವರು. ಲೇಖಕರು ಸೂಕ್ತವಾದ ವಿಶ್ಲೇಷಣೆಯನ್ನು ಮಾಡಿದ್ದಾರೆ. ಬಿಜೆಪಿ, ಅದರ ಹಿಂದಿನ ಜನಸಂಘ ಹಾಗು ಅವುಗಳ ಮಾತೃಸಂಸ್ಥೆಯಾಗಿರುವ ಸಂಘ ಯಾವತ್ತು ಈ ದೇಶದ ಬಡ ಬಹುಜನರ ಕಷ್ಟಗಳಿಗೆ ಸ್ಪಂದಿಸಿದ ಉದಾಹರಣೆಗಳಿಲ್ಲ. ಅವು ಕೇವಲ ಮೇಲ್ವರ್ಗದ ಬ್ರಾಹ್ಮಣ, ಬನಿಯಾ, ಕ್ಷತ್ರಿಯರ ಹಾಗು ಕಾರ್ಪೋರೇಟ್ ಕಳ್ಳೋದ್ಯಮಿಗಳ ಪರವಾಗಿದೆ ಎನ್ನುವುದು ಸದಾ ರುಜುವಾತಾಗುತ್ತಾ ಬಂದಿದೆ. ಇನ್ನು ಮೋದಿ ಒಬ್ಬ ಸಂಘ ಪರಿವಾರದ ಹಾಗು ಕಾರ್ಪೋರೇಟ್ ಉದ್ಯಮಿಗಳ ಕೈಗೊಂಬೆಯಾಗಿ ಯಾವ ಜವಾಬ್ದಾರಿಯೂ ಇಲ್ಲದೆ ವರ್ತಿಸುತ್ತಿರುವುದು ಆಶ್ಚರ್ಯದ ಸಂಗತಿಯಂತೂ ಖಂಡಿತ ಅಲ್ಲ. ಇನ್ನೊಂದು ಅವಧಿಗೆ ಮೋದಿ ನೇತೃತ್ವದ ಬಿಜೆಪಿ ಅಧಿಕಾರದ ಗದ್ದುಗೆ ಏರಿದರೆ ದೇಶ ಖಂಡಿತವಾಗಿ ಉಳಿಯುವುದಿಲ್ಲ.
~ಡಾ. ಜೆ ಎಸ್ ಪಾಟೀಲ.


