
ರಾಜ್ಯ ಕಾಂಗ್ರೆಸ್ನಲ್ಲಿ ಅಸಮಾಧಾನದ ಬುಗ್ಗೆ ಆಗ್ಗಿಂದ್ದಾಗೆ ಹೊಗೆ ಆಡುತ್ತಲೇ ಇದೆ. ಸಿಎಂ ಕುರ್ಚಿಗಾಗಿ ತೆರೆಮರೆಯಲ್ಲಿ ಒಂದು ಕಡೆ ಕುಸ್ತಿ ನಡೆಯುತ್ತಿದ್ದರೆ, ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರಿಬ್ಬರು ಮಾತಿನ ಸಮರ ನಡೆಸಿದ್ದು ಸುದ್ದಿಯಾಗಿತ್ತು. ಇದೀಗ ಶಾಸಕಾಂಗ ಪಕ್ಷದ ಮತ್ತೊಂದು ಘಟನೆ ಮಾಧ್ಯಮಗಳ ಮುಂದೆ ತೆರೆದುಕೊಂಡಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಮಂಡ್ಯ ಶಾಸಕ ಗಣಿಗ ರವಿ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ. ಸಿಎಲ್‌ಪಿ ಸಭೆಯಲ್ಲಿ ಅಸಮಧಾನ ಹೊರಹಾಕಿದ್ದಾರೆ. ಲೋಕೋಪಯೋಗಿ ಇಲಾಖೆಯ ಹಳೆಯ ಬಿಲ್ ಕ್ಲಿಯರ್ ಬಗ್ಗೆ ಪ್ರಸ್ತಾಪ ಮಾಡಿದ್ದು, ನಮ್ಮ ಹಳೆಯ ಬಿಲ್ ಕ್ಲಿಯರ್ ಮಾಡ್ತಿಲ್ಲ. ಆದರೆ ಜೆಡಿಎಸ್, ಬಿಜೆಪಿಯವರ ಬಿಲ್ ಕ್ಲಿಯರ್ ಆಗ್ತಿವೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲೇ ಬಹಿರಂಗವಾಗಿ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಮಂಡ್ಯ ಶಾಸಕ ಗಣಿಗ ರವಿ ಕುಮಾರ್ ಗುಡುಗುತ್ತಿದ್ದ ಹಾಗೆ ಹಿರಿಯ ನಾಯಕರ ವಿರುದ್ಧ ಬೇಸರ ಹೊರಹಾಕಿದ್ದಾರೆ ಅಪ್ಪಾಜಿ ನಾಡಗೌಡ. ಸರ್ಕಾರ ಬಂದು ಎರಡು ವರ್ಷ ಆಗಿದೆ. ಇಲ್ಲಿಯವರೆಗೆ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟಿಲ್ಲ ಎಂದು ದೂರಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕಿದೆ.. ಆದರೆ ಸ್ಥಳೀಯ ನಾಯಕರಿಗೆ ಅಧಿಕಾರವನ್ನೇ ನೀಡದೆ ಪಕ್ಷ ಸಂಘಟನೆ ಮಾಡುವುದು ಹೇಗೆ..? ಎಂದು ಪ್ರಶ್ನಿಸಿದ್ದಾರೆ. ಆದಷ್ಟು ಬೇಗ ನಿಗಮ ಮಂಡಳಿಗಳಿಗೆ ನಿರ್ದೇಶಕರ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಒಕ್ಕೋರಲ ಆಗ್ರಹ ಕೇಳಿ ಬಂದಿದೆ.

ಇನ್ನೂ ಆಶ್ರಯ ಮನೆಗಳ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕಳೆದ ಎರಡು ವರ್ಷದಿಂದ ಆಶ್ರಯ ಮನೆಗಳನ್ನ ಕೊಟ್ಟಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಕ್ಷೇತ್ರದಲ್ಲಿ ಬಡವರಿಗೆ ನ್ಯಾಯ ಕೊಡೋದ ಹೇಗೆ..? ಎಂದು ಪ್ರಶ್ನಿಸಿದ್ದಾರೆ. 2 ವರ್ಷದಿಂದ ಒಂದೇ ಒಂದು ಮನೆ ಕಟ್ಟಿಲ್ಲ. ಇನ್ಮೇಲಾದ್ರೂ ಆಶ್ರಯ ಮನೆಗಳನ್ನ ಕೊಡಿ ಎಂದು ಆಗ್ರಹ ಮಾಡಿದ್ದಾರೆ.
