Mamata has no son or daughter, so she cannot understand the pain of losing a child: victim’s mother
Kolkata CM
- ಕುಟುಂಬಕ್ಕೆ ನ್ಯಾಯ ಬೇಡವಾಗಿದೆ ಎಂದಿದ್ದ ದೀದಿ ವಿರುದ್ಧ ಮೃತ ವೈದ್ಯೆಯ ತಾಯಿ ಕಿಡಿ
By: ರೇಣುಕಾ ಪ್ರಸಾದ್
ಕೋಲ್ಕತ್ತಾ: “ ಪಶ್ಚಿಮ ಬಂಗಾಳ ಮುಖ್ಯಮಂತ್ರಿ (CM Mamatha Banerjee) ಮಮತಾ ಬ್ಯಾನರ್ಜಿ ಅವರಿಗೆ ಮಕ್ಕಳಿಲ್ಲ ಹಾಗಾಗಿ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಸಂಕಟ ಅವರಿಗೆ ಅರ್ಥವಾಗಲ್ಲ ” ಎಂದು ಸಿಎಂ ಮಮತಾ ವಿರುದ್ಧ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆಯ ತಾಯಿ ಕಿಡಿಕಾರಿದ್ದಾರೆ.
ಇತ್ತೀಚೆಗೆ ಸರ್ವಜನಿಕ ಸಮಾರಂಭವೊಂದರಲ್ಲಿ “ ಆರ್‌ಜಿ ಕಾರ್ ಆಸ್ಪತ್ರೆಯ (RG kar hospital rape and murder case ) ಮೃತ ಟ್ರೈನಿ ವೈದ್ಯೆಯ ಸಂಬಂಧಿಕರಿಗೆ ಬೇಕಿರುವುದು ನ್ಯಾಯವಲ್ಲ,ತನಿಖೆಯ ವಿಳಂಬ ಮಾತ್ರ” ಎಂದು ಮಮತಾ ಹೇಳಿದ್ದರು.
ಇದಕ್ಕೀಗ ಟ್ರೈನಿ ವೈದ್ಯೆಯ ತಾಯಿ ತಿರುಗೇಟು ನೀಡಿದ್ದು, ಮಮತಾರ ಹೇಳಿಕೆ ಸರಿ ಇಲ್. ಇಡೀ ಜಗತ್ತು ನನ್ನ ಮಗಳೊಂದಿಗೆ ನಿಂತು ಅವಳಿಗೆ ನ್ಯಾಯ ಸಿಗಲಿ ಎಂದು ಆಗ್ರಹಿಸುತ್ತಿದೆ. ಆದರೆ, ಸಿಎಂ ನಮಗೆ ನ್ಯಾಯ ಬೇಡವಾಗಿದೆ ಎಂಬಂಥ ಹೇಳಿಕೆ ನೀಡುತ್ತಾರೆ. ನನ್ನ ಮಗಳಿಗೆ ನ್ಯಾಯ ದೊರೆಯುವ ವರೆಗೂ ಈ ಪ್ರತಿಭಟನೆಗಳು ನಡೆಯಬೇಕು ಎಂಬುದೇ ನಮ್ಮ ಮನವಿಯೂ ಆಗಿದೆ ಎಂದಿದ್ದಾರೆ. ಜತೆಗೆ ಮಮತಾ ಅವರಿಗೆ ಮಗನೋ, ಮಗಳೋ ಇದ್ದಿದ್ದರೆ. ಅವರಿಗೆ ಮಕ್ಕಳನ್ನು ಕಳೆದುಕೊಂಡವರ ಸಂಕಟ ಅರ್ಥವಾಗುತ್ತಿತ್ತು ಎಂದೂ ವೈದ್ಯೆಯ ತಾಯಿ ಚಾಟಿ ಬೀಸಿದ್ದಾರೆ.
ಮಮತಾ ಏನು ಹೇಳಿದ್ದರು?
“ ಘಟನೆ ನಡೆದ 2 ದಿನದಲ್ಲೇ ಮೃತ ವೈದ್ಯೆಯ ಪೋಷಕರಿಗೆ ನಾನು ಕರೆ ಮಾಡಿದ್ದೆ. 5 ದಿನಗಳ ಸಮಯ ಕೊಡಿ ಎಂದೂ ಕೇಳಿದ್ದೆ. ಆದರೆ, ಪ್ರಕರಣವನ್ನು ಅವರು ಸಿಬಿಐಗೆ (CBI) ನೀಡಲು ಕೋರಿದರು. ಆದರೆ, ಸಿಬಿಐಗೆ (CBI) ತನಿಖೆವಹಿಸಿ 16 ದಿನವಾದರೂ ಪ್ರಯೋಜನವಾಗಿಲ್ಲ. ಈಗ ನ್ಯಾಯ ಎಲ್ಲಿ ಸಿಕ್ಕಿದೆ? ಅವರಿಗೆ ಬೇಕಿದಿದ್ದು ನ್ಯಾಯವಲ್ಲ, ತನಿಖೆಯ ವಿಳಂಬ ಮಾತ್ರ” ಎಂದು ಮಮತಾ ಆರೋಪಿಸಿದ್ದರು.
ಫೋನ್ ಕಾಲ್ ಸೋರಿಕೆ ಹೇಗಾಯ್ತು ಗೊತ್ತಿಲ್ಲ: ವೈದ್ಯೆ ತಂದೆ
ಟ್ರೈನಿ ವೈದ್ಯೆಯ ಶವ ಪತ್ತೆಯಾದ ದಿನ ಆಸ್ಪತ್ರೆಯ ಆಡಳಿತದ ವತಿಯಿಂದ ಮಹಿಳೆಯೊಬ್ಬರು ಮೃತ ವೈದ್ಯೆಯ ಪೋಷಕರಿಗೆ 3 ಬಾರಿ ಕರೆ ಮಾಡಿ, ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಆ ಆಡಿಯೋ ಈಗ ವೈರಲ್ ಆಗಿದೆ. ಆದರೆ, ಆ ಆಡಿಯೋ ಸೋರಿಕೆಯಾಗಿದ್ದು ಹೇಗೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ವೈದ್ಯೆಯ ತಂದೆ ಗುರುವಾರ ಸ್ಷಷ್ಟನೆ ನೀಡಿದ್ದಾರೆ.ಆಡಿಯೋದಲ್ಲಿ ಆಸ್ಪತ್ರೆ ಸಿಬ್ಬಂದಿ ಮೊದಲಿಗೆ ನಿಮ್ಮ ಮಗಳಿಗೆ ಹುಷಾರಿಲ್ಲವೆಂದು, ನಂತರದಲ್ಲಿ ಆಕೆ ಸೀರಿಯಸ್ ಆಗಿದ್ದಾರೆ ಎಮರ್ಜೆನ್ಸಿ ವಾರ್ಡ್‌ನಲ್ಲಿ ಇದ್ದಾರೆಂದೂ, ಕಡೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದೂ ಮಾಹಿತಿ ನೀಡಿದ್ದರು. ಈ ರೀತಿ ಹೇಳಿಕೆ ಬದಲಿಸಿರುವುದು ಹೊಸ ಸಂಶಯ ಮೂಡಿಸಿತ್ತು. ಪ್ರಕರಣ ಮುಚ್ಚಿಹಾಕಲು ಆಸ್ಪತ್ರೆ ಯತ್ನಿಸಿದೆ ಎಂಬುದಕ್ಕೆ ಇದೂ ಪುರಾವೆ ಎಂದು ಪ್ರತಿಭಟನಾ ನಿರತ ವೈದ್ಯರೂ ಆರೋಪಿಸಿದ್ದಾರೆ.