ಕೋಲಾರ: ಮತ ಎಣಿಕೆಯಲ್ಲಿ ಲೋಪವಾದ ಆರೋಪದ ಮೇಲೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ನಿನ್ನೆ ನಡೆದಿದ್ದು, ಮರು ಎಣಿಕೆಯ ಫಲಿತಾಂಶ ಇನ್ನೂ ಪ್ರಕಟಗೊಂಡಿಲ್ಲ. ಫಲಿತಾಂಶಕ್ಕೂ ಮೊದಲೇ ಮರು ಎಣಿಕೆಗೆ ಆಗ್ರಹಿಸಿದ್ದ ಮಾಜಿ ಶಾಸಕ ಮಂಜುನಾಥ ಗೌಡ ಈ ಮತಎಣಿಕೆ ಸಮಾಧಾನ ತಂದಿಲ್ಲ ಎಂದಿದ್ದಾರೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ ನಂಜೇಗೌಡ 248 ಮತಗಳಿಂದ ಗೆಲುವು ಸಾಧಿಸಿದ್ದರು. ತಮ್ಮ ಸೋಲಿನಿಂದ ಅಸಮಾಧಾನಗೊಡಿದ್ದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಿದ್ದು, ಮರು ಮತ ಎಣಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ನಿನ್ನೆ ಮರು ಮತ ಎಣಿಕೆ ನಡೆದಿದ್ದು, ಸದ್ಯ ಫಲಿತಾಂಶ ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ತಲುಪಿದೆ. ಈ ಬಾರಿಯ ಮತ ಎಣಿಕೆಯಲ್ಲೂ ಕಾಂಗ್ರೆಸ್ನ ಹಾಲಿ ಶಾಸಕಗೆ ಬಹುತೇಕ ಗೆಲುವು ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದೆ.
ಇನ್ನು ಮರು ಮತ ಎಣಿಕೆ ಬಗ್ಗೆ ಮಾಜಿ ಶಾಸಕ ಮಂಜುನಾಥ ಗೌಡ ಪ್ರತಿಕ್ರಿಯಿಸಿದ್ದು, ಈ ಬಾರಿ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಲಾಗಿದೆ. ನನ್ನ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಚುನಾವಣೆ ಮರುಎಣಿಕೆ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.


