ಬೆಂಗಳೂರು: ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಗ್ರಾಮಗಳ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಹಾಗೂ ಜೆಜೆಎಂ ಅಡಿಯಲ್ಲಿ ಶೇ 50 ಅನುದಾನ ಬಿಡುಗಡೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರಿಗೆ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಪತ್ರ ಬರೆದಿದ್ದಾರೆ.

ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಸಮಗ್ರ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ ಅನುಮೋದನೆ ಹಾಗೂ ಜಲ್ ಜೀವನ್ ಮೀಷನ್ ಯೋಜನೆಯಡಿಯಲ್ಲಿ 50% ಕೇಂದ್ರ ಸರ್ಕಾರದ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಮಂತ್ರಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಕೋರಿದ್ದಾರೆ.
ಈ ಕುರಿತು ಡಿಸೆಂಬರ್ 9ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಖರ್ಗೆ ಅವರು ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಎಲ್ಲಾ ಗ್ರಾಮೀಣ ಜನವಸತಿಗಳಿಗೆ DBOT ( Design, Build, Operation and Transfer – ಡಿಬಿಒಟಿ- ವಿನ್ಯಾಸ, ನಿರ್ಮಾಣ, ಕಾರ್ಯ ಹಾಗೂ ವರ್ಗಾವಣೆ) ಆಧಾರದ ಮೇಲೆ 7,200.00 ಕೋಟಿ ರೂ. ಅಂದಾಜು ಯೋಜನಾ ವೆಚ್ಚದಲ್ಲಿ ಸಮಗ್ರ ಬಹು-ಗ್ರಾಮ ನೀರು ಸರಬರಾಜು ಯೋಜನೆಯ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಲಬುರಗಿ ಜಿಲ್ಲೆಯ 11 ತಾಲೂಕುಗಳ 859 ಗ್ರಾಮಗಳು, 1,259 ಜನವಸತಿಗಳಲ್ಲಿ ವಾಸಿಸುತ್ತಿರುವ 25,74,434 ಜನರಿಗೆ ಹಾಗೂ ಬೀದರ್ ಜಿಲ್ಲೆಯ 8 ತಾಲೂಕುಗಳ 597 ಗ್ರಾಮಗಳು 17,61,931 ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ.
ಕಲಬುರಗಿ ಮತ್ತು ಬೀದರ್ ಜಿಲ್ಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಪ್ರಧಾನವಾಗಿ ಎಸ್‌ಸಿ ಜನಸಂಖ್ಯೆ -28.60% ಮತ್ತು ಎಸ್‌ಟಿ ಜನಸಂಖ್ಯೆ -7.90% ಹೊಂದಿವೆ. ಈ ಜಿಲ್ಲೆಗಳು ಪ್ರಸ್ತುತ ತೀವ್ರ ನೀರಿನ ಗುಣಮಟ್ಟದ ಸಮಸ್ಯೆಗಳನ್ನು ಮತ್ತು ಹೆಚ್ಚು ಏರಿಳಿತದ ಅಂತರ್ಜಲ ಮಟ್ಟವನ್ನು ಎದುರಿಸುತ್ತಿವೆ. ಈ ಸವಾಲುಗಳನ್ನು ಎದುರಿಸಲು, ವಿಜಯಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ನಾರಾಯಣಪುರ ಜಲಾಶಯದಿಂದ ದೀರ್ಘಕಾಲಿಕ ಮತ್ತು ಸುಸ್ಥಿರ ನೀರಿನ ಮೂಲವನ್ನು ಗುರುತಿಸಲಾಗಿದೆ.

ಅದರಂತೆ, ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಭಾರತ ಸರ್ಕಾರದಿಂದ 50% ಬಂಡವಾಳ ವೆಚ್ಚದ ಬೆಂಬಲದ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರವು PSR ( Project Status Report – ಪಿ ಎಸ್ ಆರ್ – ಯೋಜನಾ ಸ್ಥಿತಿ ವರದಿ) ತಯಾರಿಕೆ ಪ್ರಾರಂಭಿಸಿದೆ. ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ & ಎಂ) ಸೇರಿದಂತೆ ಉಳಿದ 50% ರಾಜ್ಯ ಹೊಂದಾಣಿಕೆಯ ಪಾಲನ್ನು ಪೂರೈಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಹಣವನ್ನು ಬಳಸಿಕೊಳ್ಳಲು ರಾಜ್ಯ ಸಚಿವ ಸಂಪುಟವು ಸ್ಪಷ್ಟವಾಗಿ ಅನುಮೋದನೆ ನೀಡಿದೆ.

ಈ ಎರಡು ಜಿಲ್ಲೆಗಳ ಎಲ್ಲಾ ಗ್ರಾಮೀಣ ವಾಸಸ್ಥಳಗಳಿಗೆ ಸುಸ್ಥಿರ ಕುಡಿಯುವ ನೀರಿನ ಪರಿಹಾರವನ್ನು ಒದಗಿಸುವ ಈ ಯೋಜನೆಯು ಬಹಳ ದೀರ್ಘ ಕಾಲದವರೆಗೆ ಅನುಕೂಲವಾಗಲಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರದಿಂದ 50% ಹೊಂದಾಣಿಕೆಯ ಕೊಡುಗೆಯೊಂದಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಪ್ರಸ್ತಾವಿತ ಯೋಜನೆಗೆ ಆರಂಭಿಕ ಅನುಮೋದನೆಗಾಗಿ ಮಧ್ಯೆ ಪ್ರವೇಶಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಅವರಿಗೆ ಪತ್ರದಲ್ಲಿ ಕೋರಿದ್ದಾರೆ.












