• Home
  • About Us
  • ಕರ್ನಾಟಕ
Friday, October 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮೇಕ್‌ ಇನ್‌ ಇಂಡಿಯಾ- ಏಕೆ  ಕುಂಟುತ್ತಾ ಸಾಗುತ್ತಿದೆ ?

ನಾ ದಿವಾಕರ by ನಾ ದಿವಾಕರ
October 14, 2024
in Top Story, ಇದೀಗ, ಜೀವನದ ಶೈಲಿ, ದೇಶ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್, ಸಿನಿಮಾ, ಸೌಂದರ್ಯ, ಸ್ಟೂಡೆಂಟ್‌ ಕಾರ್ನರ್
0
ಮೇಕ್‌ ಇನ್‌ ಇಂಡಿಯಾ- ಏಕೆ  ಕುಂಟುತ್ತಾ ಸಾಗುತ್ತಿದೆ ?
Share on WhatsAppShare on FacebookShare on Telegram

—-ನಾ ದಿವಾಕರ—-

ADVERTISEMENT

2014ರಲ್ಲಿ ಮೋದಿ ಸರ್ಕಾರ ಘೋಷಿಸಿದ ಮಹತ್ವಾಕಾಂಕ್ಷೆ ಯೋಜನೆ ಕುಂಟುತ್ತಲೇ ಸಾಗಿದೆ

=======

ಮೇಕ್‌ ಇನ್‌ ಇಂಡಿಯಾ , ಅಂದರೆ ಕೈಗಾರಿಕೋದ್ಯಮದ ತಯಾರಿಕಾ ವಲಯದಲ್ಲಿ ವಸ್ತುಗಳನ್ನು-ಸರಕುಗಳನ್ನು ಭಾರತದಲ್ಲೇ ತಯಾರಿಸುವ ಒಂದು ಬೃಹತ್‌ ಮಹತ್ವಾಕಾಂಕ್ಷಿ ಯೋಜನೆ. 2014ರ ಸೆಪ್ಟಂಬರ್‌ 25ರಂದು ಘೋಷಿಸಲಾದ ಈ ಯೋಜನೆಗೆ ಈಗ ಹತ್ತು ವರ್ಷಗಳು ತುಂಬಿವೆ. 2008ರ ಆರ್ಥಿಕ ಹಿಂಜರಿತ ಹಾಗೂ ಹಣಕಾಸು ಬಂಡವಾಳದ ಬಿಕ್ಕಟ್ಟುಗಳ ಪರಿಣಾಮವಾಗಿ ಕಂಡ ಕುಸಿತವನ್ನು ನೀಗಿಸಿ, ಭಾರತವನ್ನು ವಿಶ್ವದ ಪ್ರಮುಖ ತಯಾರಿಕಾ ಕೇಂದ್ರವನ್ನಾಗಿ ಮಾಡುವ ಒಂದು ಮಹತ್ತರ ಉದ್ದೇಶದಿಂದ ಈ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರ ಘೋಷಿಸಿತ್ತು.  ಮೂಲತಃ ಭಾರತವು ಇಂದಿಗೂ ಅವಲಂಬಿಸುತ್ತಿರುವ ಚೀನಾದ ಮಾರುಕಟ್ಟೆಯ ಹಿಡಿತದಿಂದ ಪಾರಾಗುವುದು ಸರ್ಕಾರಕ್ಕೆ ಸವಾಲಿನ ಪ್ರಶ್ನೆಯಾಗಿತ್ತು.

ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶ ಮತ್ತು ಗುರಿ ಎರಡು ನೆಲೆಗಳಲ್ಲಿ ರೂಪಿತವಾಗಿತ್ತು. ಮೊದಲನೆಯದು ಉತ್ಪಾದನಾ ವಲಯ ( Manufacturing Sector ) ವನ್ನು ಉತ್ತೇಜಿಸುವ ಮೂಲಕ, ದೇಶದ ಒಟ್ಟು ಜಿಡಿಪಿಯಲ್ಲಿ ಈ ವಲಯದ ಪಾಲನ್ನು 2014-15ರಲ್ಲಿದ್ದ ಶೇಕಡಾ 14-15 ರಿಂದ 2030ರ ವೇಳೆಗೆ ಶೇಕಡಾ 25ಕ್ಕೆ ಹೆಚ್ಚಿಸುವುದು. ಎರಡನೆಯ ಗುರಿ, ಅದೇ ಅವಧಿಯಲ್ಲಿ 6 ಕೋಟಿ ಇದ್ದ  ಕೈಗಾರಿಕಾ ಉದ್ಯೋಗದ ಪ್ರಮಾಣವನ್ನು 2025ರ ವೇಳೆಗೆ 10 ಕೋಟಿಗೆ ಏರಿಸುವುದು. ಈ ಯೋಜನೆಯು ಹೊಸ ಪರಿಕಲ್ಪನೆಯೇನೂ ಆಗಿರಲಿಲ್ಲ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ-2 ಸರ್ಕಾರವು 2012ರಲ್ಲಿ ರೂಪಿಸಿದ್ದ ಹೊಸ ಉತ್ಪಾದನಾ ನೀತಿಯ ರೂಪಾಂತರವಾಗಿತ್ತು. ಈ ನೀತಿಯನ್ನು ಯೋಜನಾಬದ್ಧವಾಗಿ ಜಾರಿಗೊಳಿಸಲು ಯುಪಿಎ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. 2014ರಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದೂ ಒಂದು ಕಾರಣವಾಗಿತ್ತು.

ಯೋಜನೆಯ ಉದ್ದೇಶ ಮತ್ತು ಮುನ್ನಡೆ

ಈ ಮೂಲ ಯೋಜನೆಯ ಹಿಂದೆ ಇದ್ದ ಉದ್ದೇಶ ಎಂದರೆ, 2004-14ರ ಅವಧಿಯಲ್ಲಿ ದೇಶದ ವಾರ್ಷಿಕ ನೈಜ ಜಿಡಿಪಿ ದರದ ಬೆಳವಣಿಗೆಯು ( ಹಣದುಬ್ಬರವನ್ನು ಹೊರತುಪಡಿಸಿ) ಶೇಕಡಾ 7 ರಿಂದ ಶೇಕಡಾ 8ರಷ್ಟು ದಾಖಲಾಗಿದ್ದರೂ, ವಿಶೇಷವಾಗಿ 2003-08ರ ಅವಧಿಯಲ್ಲಿ ರಫ್ತು ವಹಿವಾಟುಗಳಲ್ಲಿ ಉತ್ತಮ ವೃದ್ಧಿ ಕಂಡಿದ್ದರೂ, ಉತ್ಪಾದನಾ ವಲಯದ ಸಾಧನೆ ತಕ್ಕಮಟ್ಟಿಗೆ ಸಾಧ್ಯವಾಗಿತ್ತು.  ನಿವ್ವಳ ಆಮದುಗಳ ಪ್ರಮಾಣ ಹೆಚ್ಚಾಗಿದ್ದು, ಉದ್ಯೋಗಾವಕಾಶಗಳ ವಿಸ್ತರಣೆಯು ಕುಂಠಿತವಾಗಿತ್ತು.  ಈ ಹಿನ್ನೆಲೆಯಲ್ಲಿ ಮನಮೋಹನ್‌ ಸಿಂಗ್‌ ರೂಪಿಸಿದ್ದ ಹೊಸ ಉತ್ಪಾದನಾ ನೀತಿಗೆ 2014ರಲ್ಲಿ ಮರುನಾಮಕರಣ ಮಾಡುವ ಮೂಲಕ, ವಸ್ತು/ಸರಕುಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಘೋಷಿಸಲಾಯಿತು. Vocal for Local ಎಂಬ ಆಕರ್ಷಕ ಘೋಷಣೆಯೂ ಸಹ ಇದಕ್ಕೆ ಪೂರಕವಾಗಿ ಸೃಷ್ಟಿಯಾಗಿತ್ತು. ( ಅಂದರೆ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುವ ವಚನಬದ್ಧತೆ ).

ಮೇಕ್‌ ಇನ್‌ ಇಂಡಿಯಾ ಉತ್ಕರ್ಷ ಪಡೆದುಕೊಂಡು ಬೆಳವಣಿಗೆಯನ್ನು ಸಾಧಿಸಲು ಕೊಂಚ ಸಮಯ ಬೇಕಾಗುತ್ತದೆ ಎಂಬುದು ಅಂದಿನ ಸರ್ಕಾರದ ಅಭಿಪ್ರಾಯವಾಗಿತ್ತು. ಇದು ಸಹಜವೂ ಹೌದು. ಏಕೆಂದರೆ ನವ ಉದಾರವಾದ ಸೃಷ್ಟಿಸಿದ್ದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಚೀನಾದಂತಹ ದೈತ್ಯ ಮಾರುಕಟ್ಟೆಯೊಡನೆ ಪೈಪೋಟಿ ನಡೆಸಿಕೊಂಡು, ಸ್ವದೇಶಿ ಉತ್ಪನ್ನವನ್ನು ಉತ್ತೇಜಿಸಿ, ವಿಸ್ತರಿಸುವುದು ಸುಲಭವಾಗಿರಲಿಲ್ಲ. ಆದರೆ ಸರ್ಕಾರದ ಯೋಜನೆಯಂತೆ ಸಾಧನೆಯನ್ನು ದಾಖಲಿಸಲು ಹತ್ತು ವರ್ಷಗಳು ಸಾಲದಾಯಿತೇ ಎಂಬ ಪ್ರಶ್ನೆ ಈಗ ಸರ್ಕಾರವನ್ನು, ಆರ್ಥಿಕ ತಜ್ಞರನ್ನು ಕಾಡುತ್ತಿದೆ. ಏಕೆಂದರೆ ಹತ್ತು ವರ್ಷಗಳ ನಂತರವೂ ದೇಶದ ಏರುತ್ತಿರುವ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು ಹೆಚ್ಚಳ ಕಂಡಿಲ್ಲ. ಇದನ್ನು ಸರ್ಕಾರಿ ಸಂಸ್ಥೆಗಳ ಸಮೀಕ್ಷೆಗಳೇ ಬಹಿರಂಗಪಡಿಸಿವೆ.

2013-14ರಲ್ಲಿ ದೇಶದ ಜಿಡಿಪಿಯಲ್ಲಿ  ಉತ್ಪಾದನಾ ವಲಯದ ಪಾಲು ಶೇಕಡಾ 16.75ರಷ್ಟಿತ್ತು. 2023-24ರಲ್ಲಿ ಅದು ಶೇಕಡಾ 15.9ರಷ್ಟಿದೆ. ಅಂದರೆ ಬಹುತೇಕ ಶೇಕಡಾ 1ರಷ್ಟು ಕುಸಿತ ಕಂಡಿದೆ. ಅಂದರೆ ದೇಶದ ಕೈಗಾರಿಕೋದ್ಯಮ-ಉತ್ಪಾದನಾ ವಲಯವು ತನ್ನ ಉತ್ಪಾದನೆಯ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದು ನಿಚ್ಚಳವಾಗುತ್ತದೆ. ಉತ್ಪಾದನಾ ವಲಯದ ಜಿಡಿಪಿ ಪಾಲು ಶೇಕಡಾ 30ರಷ್ಟು ಹೆಚ್ಚಿಸುವ 2030ರ ಗುರಿಯನ್ನು ತಲುಪಲು ಇನ್ನೂ ಸಾಕಷ್ಟು ಆವೇಗ ಪಡೆದುಕೊಳ್ಳಬೇಕಿದೆ ಎಂದು “ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ”ಯ (DPIIT) ನಿರ್ದೇಶಕ ಅಮರ್‌ದೀಪ್‌ ಸಿಂಗ್‌ ಭಾಟಿಯಾ ಹೇಳುತ್ತಾರೆ. ( ಇಂಡಿಯನ್‌ ಎಕ್ಸ್‌ಪ್ರೆಸ್‌ -26 ಸೆಪ್ಟಂಬರ್‌  2024).

ದತ್ತಾಂಶಗಳ ಭಿನ್ನ ಚಿತ್ರಣ

National Accounts Statistics (NAS) ಸಂಸ್ಥೆಯು ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಅನುಸಾರ ಒಟ್ಟು ನೈಜ ಮೌಲ್ಯ ವರ್ಧನೆ (Gross Value Addition) ಬೆಳವಣಿಗೆಯಲ್ಲಿ ಉತ್ಪಾದನಾ ವಲಯದ ಪಾಲು 2001-02ರಲ್ಲಿ ಶೇಕಡಾ 8.1ರಷ್ಟಿದ್ದುದು 2012-13ರ ವೇಳೆಗೆ ಶೇಕಡಾ 5.5ಕ್ಕೆ ಕುಸಿದಿತ್ತು.  ಕಳೆದ ಮೂರು ದಶಕಗಳ ಅವಧಿಯಲ್ಲಿ ಉತ್ಪಾದನಾ ವಲಯದ ಜಿಡಿಪಿ ಪಾಲು ಶೇಕಡಾ 15 ರಿಂದ ಶೇಕಡಾ 17ರ ನಡುವೆ ಸ್ಥಗಿತಗೊಂಡಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ ಪ್ರಕಟಿಸಲಾದ ಜಿಡಿಪಿ ಸರಣಿಯಲ್ಲಿ ಇದು ಕೊಂಚ ಹೆಚ್ಚಾಗಿರುವಂತೆ ಕಂಡರೂ ಅದಕ್ಕೆ ಕಾರಣ ಈ ಸೂಚ್ಯಂಕಗಳನ್ನು ಮಾಪನ ಮಾಡುವ ವಿಧಾನಗಳಲ್ಲಿ ಬದಲಾವಣೆಯನ್ನು ಮಾಡಿರುವುದು. ಕೆಲವು ಕ್ಷೇತ್ರಗಳಲ್ಲಿ ಬಂಡವಾಳಹೂಡಿಕೆಯ ಅಡೆತಡೆಗಳು ಪ್ರಧಾನವಾಗಿದ್ದರೂ, ತಂತ್ರಜ್ಞಾನ ಹೂಡಿಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ತರುವುದು, ಸಾಮರ್ಥ್ಯ ಮತ್ತು ಕೌಶಲವನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯವಾಗುತ್ತದೆ ಎಂದು ಹೇಳುವ ಶ್ರೀಯುತ ಭಾಟಿಯಾ ಮೇಕ್‌ ಇನ್‌ ಇಂಡಿಯಾ ಕುಂಠಿತವಾಗಿರಲು ಇವುಗಳೇ ಪ್ರಧಾನ ಕಾರಣ ಎಂದೂ ಭಾಟಿಯಾ ಹೇಳುತ್ತಾರೆ. ( ಇಂಡಿಯನ್‌ ಎಕ್ಸ್‌ಪ್ರೆಸ್‌ -26 ಸೆಪ್ಟಂಬರ್‌  2024).

ಇತ್ತೀಚಿನ NSSO ಸ್ಯಾಂಪಲ್‌ ಸಮೀಕ್ಷೆಯ ಅನುಸಾರ ಉತ್ಪಾದನಾ ವಲಯದ ಉದ್ಯೋಗ ಪ್ರಮಾಣ 2011-12ರಲ್ಲಿ ಶೇಕಡಾ 12.6ರಷ್ಟಿದ್ದುದು 2022-23ರ ವೇಳೆಗೆ ಶೇಕಡಾ 11.4ಕ್ಕೆ ಕುಸಿದಿದೆ. ಲಭ್ಯವಾಗಿರುವ ಉದ್ಯೋಗಾವಕಾಶಗಳೂ ಸಹ ಬಹುತೇಕವಾಗಿ ಅಸಂಘಟಿತ ಅಥವಾ ಅನೌಪಚಾರಿಕ                ( Unorganised or Informal ) ಕ್ಷೇತ್ರದಲ್ಲಿ ಕಂಡುಬರುತ್ತದೆ.  ಸಂಯೋಜಿತವಾಗದ ಕ್ಷೇತ್ರದ ಔದ್ಯೋಗಿಕ ಸಮೀಕ್ಷೆಯ ಪ್ರಕಾರ ಈ ಎರಡು ವಲಯಗಳಲ್ಲಿ ಉದ್ಯೋಗದ ಪ್ರಮಾಣ 2015-16ರ 38.8  ದಶಲಕ್ಷದಿಂದ 2022-23ರ ವೇಳೆಗೆ 30.6 ದಶಲಕ್ಷಕ್ಕೆ ಕುಸಿದಿದೆ. ಅಂದರೆ 82 ಲಕ್ಷ ಉದ್ಯೋಗಗಳು ನಷ್ಟವಾಗಿವೆ. ಮತ್ತೊಂದೆಡೆ ಒಟ್ಟು ಕಾರ್ಯಪಡೆಯಲ್ಲಿ ( Workforce)̧  ಆಂದರೆ ದುಡಿಮೆಗಾರರ ಪೈಕಿ, ಕೃಷಿ ಕ್ಷೇತ್ರದ ಪಾಲು  2018-19ರ ಶೇಕಡಾ 42.5ರಿಂದ 2022-23ರ ವೇಳೆಗೆ ಶೇಕಡಾ 45.8ಕ್ಕೆ ಏರಿದೆ.

ಹಿನ್ನಡೆಯ ಕಾರಣ ಮತ್ತು ಪರಿಣಾಮ

ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕ ನಡಿಗೆಯಲ್ಲಿ ಹೆಚ್ಚಿನ ಉತ್ಪಾದಕೀಯ ವಲಯದಿಂದ ಕಡಿಮೆ ಉತ್ಪಾದಕೀಯತೆಯೆಡೆಗೆ ಉಂಟಾಗಿರುವ ನೇತ್ಯಾತ್ಮಕ ರಾಚನಿಕ ಬದಲಾವಣೆ ಅಭೂತಪೂರ್ವ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಇದಕ್ಕೆ ಮೂಲ ಕಾರಣ ಎಂದರೆ ಕೈಗಾರಿಕೋದ್ಯಮವು ತನ್ನ ಪರಿಪೂರ್ಣ ಸಾಮರ್ಥ್ಯವನ್ನು ಪಡೆದುಕೊಳ್ಳುವ ಮುನ್ನವೇ ಔದ್ಯೋಗೀಕರಣಕ್ಕೆ ವಿಮುಖವಾಗುತ್ತಿರುವುದು. (de-industrialisation) ಭಾರತ ಈ ಕ್ರಮಕ್ಕೆ ಏಕೆ ತೆರೆದುಕೊಂಡಿತು ? ಜಿಡಿಪಿಯ ಬೆಳವಣಿಗೆ ದರ ವಾರ್ಷಿಕ ಶೇಕಡಾ 6-7ರಷ್ಟಿದ್ದಾಗಲೂ ಸಹ ಏಕೆ ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದೆ ? ವಾಸ್ತವವಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಸ್ಘಿರ ಬಂಡವಾಳ ಹೂಡಿಕೆ ಸಂಪೂರ್ಣ ಕುಸಿತ ಕಂಡಿದೆ. 2012-13 ರಿಂದ 2019-20ರ ಅವಧಿಯಲ್ಲಿ ನಿವ್ವಳ ಮೌಲ್ಯ ವರ್ಧನೆಯ (Gross Value Addition) ಪ್ರಮಾಣ ಮತ್ತು ನಿವ್ವಳ ಸ್ಥಿರಬಂಡವಾಳ ಸಂಗ್ರಹ ( Gross Fixed Capital Formation) ಎರಡೂ ಸಹ ಕುಸಿದಿರುವುದನ್ನು ಕೈಗಾರಿಕೆಗಳ ವಾರ್ಷಿಕ ಸಮೀಕ್ಷಾ (Annual Suvey of Industrites) ವರದಿ ಸ್ಪಷ್ಟಪಡಿಸುತ್ತದೆ.

ಬಂಡವಾಳ ಮತ್ತು ಉತ್ಪಾದನೆಯಲ್ಲಿನ ಈ ಕುಸಿತದ ನೇರ ಪರಿಣಾಮವನ್ನು ಚೀನಾದಿಂದ ಆಮದಾಗಿರುವ ಸರಕುಗಳ ಪ್ರಮಾಣದಲ್ಲಿ ಗುರುತಿಸಬಹುದು. ವಿಶ್ವಬ್ಯಾಂಕ್‌ ಪ್ರಸ್ತುತಪಡಿಸಿದ ಸುಗಮ ವ್ಯಾಪಾರ ನಡೆಸುವ ಸೂಚ್ಯಂಕದಲ್ಲಿ ( Ease of Doing Business) ಭಾರತ ಉತ್ತಮ ಸಾಧನೆಯನ್ನು ಬಿಂಬಿಸಿದ್ದು 2014-15ರಲ್ಲಿದ್ದ 145ನೆಯ ಶ್ರೇಣಿಯಿಂದ 2019-20ರ ವೇಳೆಗೆ 63ಕ್ಕೆ ಏರಿದ್ದರೂ ಭಾರತದಲ್ಲಿ ಉತ್ಪಾದನಾ ವಲಯ ಏಕೆ ಹಿನ್ನಡೆ ಕಾಣುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೂಲತಃ ವಿಶ್ವಬ್ಯಾಂಕ್‌ ನಡೆಸುವ ಈ ಸಮೀಕ್ಷೆಯೇ ರಾಜಕೀಯ ಪ್ರೇರಿತವಾಗಿದ್ದು ಯಾವುದೇ ಪ್ರಾಯೋಗಿಕ ಆಧಾರವನ್ನು ಅವಲಂಬಿಸುವುದಿಲ್ಲ. ಈ ಸೂಚ್ಯಂಕ ಬಿಂಬಿಸಿದ ಸನ್ನಿವೇಶವನ್ನೇ ಉತ್ತಮ ಎಂದು ಭಾವಿಸಿದ ಭಾರತ ಸರ್ಕಾರ ಆರು ವರ್ಷಗಳ ಕಾಲ ಉದಾಸೀನ ತೋರಿರುವುದು ಮೇಕ್‌ ಇನ್‌ ಇಂಡಿಯಾ ವೈಫಲ್ಯಕ್ಕೆ ಮೂಲ ಕಾರಣವಾಗಿದೆ.

ಆದರೆ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸೆಮಿ ಕಂಡಕ್ಟರ್‌ ಉತ್ಪಾದನೆಗಾಗಿ 76 ಸಾವಿರ ಕೋಟಿ ರೂಗಳನ್ನು ಹೂಡಿಕೆ ಮಾಡುವ ಸೆಮಿಕಾನ್‌ ಇಂಡಿಯಾ ಯೋಜನೆಗೆ ಚಾಲನೆ ನೀಡಿದೆ. ಇದಲ್ಲದೆ 14 ಉತ್ಪಾದನಾ ಕ್ಷೇತ್ರಗಳಲ್ಲಿ ಉತ್ಪಾದನಾ ಸಂಬಂಧಿತ ಯೋಜನೆ ( Production linked scheme) ಜಾರಿಗೊಳಿಸಿದೆ. ರಾಷ್ಟ್ರೀಯ ಏಕ ಗವಾಕ್ಷ ಕಾರ್ಯಕ್ರಮದ ( National Single Window Programme) ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ 32 ಕೈಗಾರಿಕಾ ಸಚಿವಾಲಯಗಳ ಮೂಲಕ ಸಮನ್ವಯತೆಯೊಂದಿಗೆ , ಶೀಘ್ರ ವಿಲೇವಾರಿ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಉತ್ಪಾದನಾ ವಲಯದಲ್ಲಿ ವಿಶ್ವದ ಪ್ರಮುಖ ಉತ್ಪಾದಕ ರಾಷ್ಟ್ರಗಳಾದ ಮೆಕ್ಸಿಕೋ, ವಿಯಟ್ನಾಂ ಮತ್ತು ಬಾಂಗ್ಲಾದೇಶ ಮುಂತಾದ ದೇಶಗಳಿಗೆ ಹೋಲಿಸಿದರೆ ಭಾರತ ಹಿನ್ನಡೆ ಸಾಧಿಸಿರುವುದಕ್ಕೆ ಕಾರಣ ಭಾರತದಲ್ಲಿ ಮೂಲ ವ್ಯವಸ್ಥಾಪನಾ ವೆಚ್ಚಗಳು (Logistics) ದುಬಾರಿಯಾಗಿರುವುದೇ ಆಗಿದೆ ಎಂದು ಆರ್ಥಿಕತಜ್ಞರು ಹೇಳುತ್ತಾರೆ. ಈ ಕೊರತೆಯನ್ನು ಸರಿಪಡಿಸಲು ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಮುನ್ನಡೆಯ ಹಾದಿಯ ಪ್ರಮಾದಗಳು

2020ರಲ್ಲಿ PLI ಯೋಜನೆಯನ್ನು ಜಾರಿಗೊಳಿಸಿದ ನಂತರದಲ್ಲಿ 1.4 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸಾಧ್ಯವಾಗಿದ್ದು, ಉತ್ಪಾದನಾ ವಲಯದ ಒಟ್ಟು ಉತ್ಪಾದನೆ 12 ಲಕ್ಷ ಕೋಟಿ ರೂಗಳಷ್ಟಾಗಿದೆ. ಈ ಪ್ರಕ್ರಿಯೆಯಲ್ಲಿ 8.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ ಉದ್ದೇಶಿತ ಗುರಿಯಿಂದ ಇದು ಬಹಳ ದೂರ ಇರುವುದನ್ನು ಆರ್ಥಿಕ ತಜ್ಞರು ಕಳವಳದಿಂದ ಗುರುತಿಸುತ್ತಾರೆ. ಇದರ ನೇರ ಪರಿಣಾಮವನ್ನು ಭಾರತದ ಅರ್ಥಿಕತೆ ಬೆಳೆಯುತ್ತಿರುವ ಮಾದರಿಯಲ್ಲಿ ಗುರುತಿಸಬಹುದು. ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಭಾರತದ ಆರ್ಥಿಕ ಪ್ರಗತಿ K ಆಕಾರದಲ್ಲಿ ಸಾಗುತ್ತಿದೆ. ಅಂದರೆ ಸಮಾಜದ ಶ್ರೀಮಂತ ವರ್ಗಗಳು ತಳಮಟ್ಟದ ಅರ್ಧದಷ್ಟು ಜನತೆಗಿಂತಲೂ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿ ಕಾಣುತ್ತಿದ್ದಾರೆ. ಸರ್ಕಾರದ ದತ್ತಾಂಶಗಳೇ ನಿರೂಪಿಸುವಂತೆ ತಳಸ್ತರದ ಜನತೆಯ ಆದಾಯ ಸತತವಾಗಿ ಕುಸಿಯುತ್ತಲೇ ಇದೆ.

ಜಿಡಿಪಿ ಬೆಳವಣಿಗೆಯನ್ನೇ ಮಾನದಂಡವಾಗಿ ಬಳಸಲಾಗುವ ಭಾರತದ ಆರ್ಥಿಕ ಅಭಿವೃದ್ಧಿಯ ಮಾದರಿಯು ಮೂಲ ಸೌಕರ್ಯಗಳಲ್ಲಿ ಹೂಡಲಾಗುವ ಬಂಡವಾಳ ವೆಚ್ಚವನ್ನೇ (Capital Expenditure) ಅವಲಂಬಿಸುವುದರಿಂದ ಮೇಲ್ಮಟ್ಟದ ಕೈಗಾರಿಕೋದ್ಯಮಗಳು ಪ್ರಗತಿಯನ್ನು ಕಂಡರೂ ತಳಮಟ್ಟದಲ್ಲಿ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಹಿನ್ನಡೆ ಕಾಣುತ್ತಿವೆ.  ಇಲ್ಲಿ ಅರ್ಥಶಾಸ್ತ್ರಜ್ಞರು ಬಿಜೆಪಿ ಆಳ್ವಿಕೆಯ ಎರಡು ಮಹಾಪ್ರಮಾದಗಳನ್ನು ಗುರುತಿಸುತ್ತಾರೆ. ಮೊದಲನೆಯದು ನೋಟು ಅಮಾನ್ಯೀಕರಣ ಮತ್ತೊಂದು ಅವಸರದಲ್ಲಿ ಜಾರಿಯಾದ ಜಿಎಸ್‌ಟಿ ನಿಯಮಗಳು. ಈ ಎರಡೂ ಯೋಜನೆಗಳು ಬೃಹತ್‌ ಉದ್ದಿಮೆಗಳಿಗೆ ಉತ್ತೇಜಕವಾಗಿದ್ದರೆ, ತಳಮಟ್ಟದ ಸಣ್ಣ ಉದ್ದಿಮೆಗಳ ಹಿನ್ನಡೆಗೆ ಕಾರಣವಾಗಿದ್ದವು. ಕಳೆದ ಹತ್ತು ವರ್ಷಗಳಲ್ಲಿ ಬೃಹತ್‌ ಉದ್ದಿಮೆಗಳಿಗೆ ವಿಧಿಸುವ ತೆರಿಗೆ ದರಗಳಲ್ಲಿ ಇಳಿಕೆಯಾಗುತ್ತಿದ್ದು ಸಣ್ಣ ಉದ್ದಿಮೆದಾರರಿಂದ ಹೆಚ್ಚು ತೆರಿಗೆ ವಸೂಲಿಯಾಗುತ್ತಿರುವುದು ಮತ್ತೊಂದು ಕಾರಣವಾಗಿದೆ.

ಅರ್ಥಶಾಸ್ತ್ರಜ್ಞರು ಗುರುತಿಸುವ ಮತ್ತೊಂದು ಲೋಪ ಎಂದರೆ ದೊಡ್ಡ ಉದ್ದಿಮೆಗಳ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿರುವ ಸರ್ಕಾರದ ಆರ್ಥಿಕ ನೀತಿಗಳು ತಳಮಟ್ಟದ ಶೇಕಡಾ 50ರಷ್ಟು ಜನರ ಬಳಕೆಯ, ಖರ್ಚು ಮಾಡುವ ಸಾಮರ್ಥ್ಯ ಸತತವಾಗಿ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉದಾಹರಣೆಗೆ ಗ್ರಾಮೀಣಾಭಿವೃದ್ಧಿ, ಕೃಷಿ ವಲಯ, ಗ್ರಾಮೀಣ ಮೂಲ ಸೌಕರ್ಯಗಳು ಮುಂತಾದ ವಲಯಗಳಲ್ಲಿ ವೆಚ್ಚಗಳನ್ನು ಹೆಚ್ಚಿಸುವ ಮೂಲಕ ಸಣ್ಣ ಉದ್ದಿಮೆದಾರರು ಬೆಳವಣಿಗೆಯ ಚಾಲಕಶಕ್ತಿಯಾಗಿ ರೂಪುಗೊಳ್ಳುವ ಸಾಧ್ಯತೆಗಳಿದ್ದವು. ಆದರೆ ಸರ್ಕಾರ ಈ ವಲಯಗಳನ್ನು ನಿರ್ಲಕ್ಷಿಸುತ್ತಲೇ ಬಂದಿದೆ.  ಸಣ್ಣ ಉದ್ದಿಮೆದಾರರನ್ನು ಕಡೆಗಣಿಸಿ ಬೃಹತ್‌ ಕಾರ್ಪೋರೇಟ್‌ ಉದ್ದಿಮೆಗಳನ್ನೇ ಉತ್ತೇಜಿಸುವ ಆರ್ಥಿಕ ನೀತಿಗಳು ಮಾರಕವಾಗಿ ಪರಿಣಮಿಸುತ್ತಿದ್ದು, ಕೆಳಸ್ತರದ ಆರ್ಥಿಕತೆಯಲ್ಲಿ ಸೃಷ್ಟಿಯಾಗಬಹುದಾಗಿದ್ದ ಉದ್ಯೋಗಾವಕಾಶಗಳು, ಮಾರುಕಟ್ಟೆ ಬೇಡಿಕೆ ಮತ್ತು ಬಂಡವಾಳ ಹೂಡಿಕೆಯ ಹೆಚ್ಚಳಕ್ಕೆ ಕಡಿವಾಣ ಹಾಕಿದಂತಾಗಿದೆ.  ಇತ್ತೀಚಿನ ದತ್ತಾಂಶಗಳ ಪ್ರಕಾರ ಬೃಹತ್‌ ಕಾರ್ಪೋರೇಟ್‌ ಉದ್ಯಮಗಳು ಶೇಕಡಾ 20ರಷ್ಟು ತೆರಿಗೆ ಪಾವತಿಸುತ್ತಿದ್ದರೆ, ಕೆಳಸ್ತರದ ಸಣ್ಣ ಉದ್ದಿಮೆಗಳು ಶೇಕಡಾ 26ರಷ್ಟು ತೆರಿಗೆ ಪಾವತಿ ಮಾಡುತ್ತಿವೆ.

ಈ ತಾರತಮ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಮೊಟ್ಟಮೊದಲು ಯೋಚಿಸಬೇಕಾದ ಸಂಗತಿ ಎಂದರೆ ದೇಶದ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಕೊರತೆ ಹೆಚ್ಚಾಗುತ್ತಿದೆ ಎನ್ನುವುದನ್ನು ಮಾನ್ಯಮಾಡುವುದು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲು ನೆರವಾಗುವುದು ತಳಸ್ತರದ ಬಹುಸಂಖ್ಯಾತ ಜನತೆಯೇ ಎನ್ನುವುದು ಅರ್ಥಶಾಸ್ತ್ರದಲ್ಲಿ ಗುರುತಿಸಲಾಗುವ ಒಂದು ಅಂಶ. ಇದನ್ನು ಗುರುತಿಸುವುದೇ ಆದರೆ ಸೂಕ್ತ ಪರಿಹಾರೋಪಾಯ ಮಾರ್ಗಗಳು ಹೊಳೆಯುತ್ತವೆ. ಗ್ರಾಮೀಣ ಆರ್ಥಿಕತೆಯಲ್ಲಿ ಜನತೆಯ ಆದಾಯವನ್ನು ಹೆಚ್ಚಿಸುವುದು, ಈ ಸ್ತರದಲ್ಲೇ ಹೆಚ್ಚಿನ ಹಣ ವ್ಯಯ ಮಾಡುವಂತೆ ಉತ್ತೇಜಿಸುವುದು ಬಹಳ ಮುಖ್ಯವಾಗಿದ್ದು ಇದರಿಂದ ಸಣ್ಣ ಹಾಗೂ ಮಧ್ಯಮ ಸ್ತರದ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.  ಸಾಮಾಜಿಕ ಪಿರಮಿಡ್ಡಿನ ತಳಸ್ತರದಲ್ಲಿರುವ ಜನತೆಯ ದುಡಿಯುವ ಜನತೆಯ ಆದಾಯವನ್ನು ಹೆಚ್ಚಿಸಲೂ ಇದು ನೆರವಾಗುತ್ತದೆ. ತಳಸ್ತರದ ಔದ್ಯೋಗಿಕ ವಲಯಕ್ಕೆ ಸುಲಭ-ಸುಗಮ ಸಾಲ ಸೌಲಭ್ಯಗಳನ್ನು ಒದಗಿಸುವುದೂ ಸಹ ಉಪಯುಕ್ತವಾಗುತ್ತದೆ.

ಇದು ಸಾಧ್ಯವಾಗಬೇಕಾದರೆ ಭಾರತದ ಆರ್ಥಿಕತೆಯನ್ನು ಹಾಗೂ ಸರ್ಕಾರದ ಆರ್ಥಿಕ ನೀತಿಗಳನ್ನು ನಿರ್ದೇಶಿಸುವ ಅರ್ಥಶಾಸ್ತ್ರ ತಜ್ಞರು ಹಾಗೂ ಆಳ್ವಿಕೆಯಲ್ಲಿರುವವರು ಇಡೀ ಸಮಸ್ಯೆ ಇರುವುದು ತಳಸ್ತರದ ಸಮಾಜದ ಆರ್ಥಿಕ ನೆಲೆಗಳಲ್ಲೇ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯ.

( ಈ ಲೇಖನಕ್ಕೆ ಆಧಾರ : ದ ಹಿಂದೂ 27-09-2024- ಆರ್ಥಿಕ ತಜ್ಞರಾದ ಹಿಮಾಂಶು ಮತ್ತು ರೀತೇಶ್‌ ಕುಮಾರ್‌ ಸಿಂಗ್‌ ಅವರೊಡನೆ ಸಂದರ್ಶನ- Is Indiaʼs growth story benefitting only big Capital ? ಹಾಗೂ What has Make In India achieved ? – ಆರ್‌ ನಾಗರಾಜ್‌ – ದ ಹಿಂದೂ 02-10-2024)

–೦-೦-೦-೦-

Tags: best tea in indiaBJPCongress Partyeconomics project work viva on make in india 2021 latesteconomics viva on make in india 2021IndiaIndia EconomyIndian EconomyMake in Indiamake in india programmemake in india scheme in hindimake in india viva class 12thmake in india viva questionsmanufacture in indiamanufacturing in indiamodi make in indiaoverview of make in indiapm modi make in indiawhat is make in india schemeಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದರ್ಶನ್‌ಗೆ ಬೇಲಾ – ಜೈಲಾ ?! ಇಂದು ನಿರ್ಧಾರವಾಗಲಿದೆ ಆರೋಪಿಗಳ ಭವಿಷ್ಯ !

Next Post

ಬಿಗ್‌ಬಾಸ್ ಗೆ ಕಿಚ್ಚ ಗುಡ್ ಬೈ – ಈ ನಿರ್ಧಾರದ ಹಿಂದಿನ ಕಾರಣವೇನು ?!

Related Posts

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
0

"ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, 'ಬಿ' ಖಾತೆಯಿಂದ 'ಎ' ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು....

Read moreDetails

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

October 30, 2025

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

October 30, 2025
Next Post
ಬಿಗ್‌ಬಾಸ್ ಗೆ ಕಿಚ್ಚ ಗುಡ್ ಬೈ – ಈ ನಿರ್ಧಾರದ ಹಿಂದಿನ ಕಾರಣವೇನು ?!

ಬಿಗ್‌ಬಾಸ್ ಗೆ ಕಿಚ್ಚ ಗುಡ್ ಬೈ - ಈ ನಿರ್ಧಾರದ ಹಿಂದಿನ ಕಾರಣವೇನು ?!

Recent News

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
Top Story

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

by ಪ್ರತಿಧ್ವನಿ
October 30, 2025
Top Story

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

by ಪ್ರತಿಧ್ವನಿ
October 30, 2025
Top Story

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

by ಪ್ರತಿಧ್ವನಿ
October 30, 2025
Top Story

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
October 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

October 30, 2025

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada