ದೇಶಾದ್ಯಂತ ಸಂಚಲನ ಮೂಡಿಸಿದ್ದ ಡ್ರಗ್ಸ್ ಆನ್ ಕ್ರೂಸ್ (ಕ್ರೂಸ್ ಹಡಗಿನಲ್ಲಿ ಡ್ರಗ್ಸ್) ಪ್ರಕರಣದಲ್ಲಿ ಭಾರೀ ತಿರುವು ಲಭಿಸಿದೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ರ ಪುತ್ರ ಆರ್ಯನ್ ಖಾನ್ ಪ್ರಮುಖ ಆರೋಪಿಯಾಗಿದ್ದ ಪ್ರಕರಣದಲ್ಲಿ ಹಲವಾರು ಅಕ್ರಮಗಳು ನಡೆದಿದೆ ಎಂದು ಎನ್‌ಸಿಬಿ ನಡೆಸಿದ ಆಂತರಿಕ ಇಲಾಖಾ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಪ್ರಕರಣದ ತನಿಖೆಯಲ್ಲಿ ಹಲವಾರು ಅಕ್ರಮಗಳು ನಡೆದಿದ್ದು, ತನಿಖಾ ಏಜೆನ್ಸಿಯ ಏಳೆಂಟು ಅಧಿಕಾರಿಗಳ ಕಡೆಯಿಂದ ಅನುಮಾನಾಸ್ಪದ ವರ್ತನೆ ಕಂಡುಬಂದಿರುವುದಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಆಂತರಿಕ ವರದಿ ಹೇಳಿದೆ.
ಮೂರು ವಾರಗಳ ಜೈಲಿನಲ್ಲಿ ಕಳೆದ ಬಳಿಕ ಆರ್ಯನ್ ಖಾನ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿತ್ತು. ಪ್ರಕರಣದ ಕೇಂದ್ರ ಬಿಂದುವಾಗಿದ್ದ ಆರ್ಯನ್ ಖಾನ್ ಹಾಗೂ ಇತರ ಐವರ ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳನ್ನು ಹುಡುಕಲು ತಮಗೆ ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದ ಎನ್‌ಸಿಬಿಗೆ ಆ ಮೂಲಕ ಎರಡನೇ ಮುಜುಗರ ಎದುರಾಗಿದೆ.

ಆರ್ಯನ್ ಖಾನ್ ಪ್ರಕರಣದ ನಿರ್ವಹಣೆಯಲ್ಲಿ ಅಧಿಕಾರಿಗಳು ನಡೆಸಿದ ಅವ್ಯವಹಾರದ ಆರೋಪಗಳ ಬಗ್ಗೆ ತನಿಖೆ ನಡೆಸಲು ಎನ್‌ಸಿಬಿ ರಚಿಸಿರುವ ವಿಶೇಷ ತನಿಖಾ ತಂಡ ತನ್ನ ವಿಜಿಲೆನ್ಸ್ ವರದಿಯನ್ನು ದೆಹಲಿಯಲ್ಲಿರುವ ತನ್ನ ಕೇಂದ್ರ ಕಚೇರಿಗೆ ಕಳುಹಿಸಿದೆ. ತನಿಖೆಯಲ್ಲಿ ಹಲವು ಅಕ್ರಮಗಳು ನಡೆದಿರುವುದು ಕಂಡುಬಂದಿದೆ. ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಉದ್ದೇಶದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ ಎಂದು ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ 65 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಕೆಲವರು ಮೂರ್ನಾಲ್ಕು ಬಾರಿ ಹೇಳಿಕೆ ಬದಲಾಯಿಸಿದ್ದಾರೆ. ಆಂತರಿಕ ವಿಚಾರಣೆಯು ಇತರ ಕೆಲವು ಪ್ರಕರಣಗಳ ತನಿಖೆಯಲ್ಲಿ ಲೋಪಗಳನ್ನು ಬಹಿರಂಗಪಡಿಸಿದ್ದು, ಈ ಎಲ್ಲಾ ಪ್ರಕರಣಗಳ ಬಗ್ಗೆ ವರದಿಗಳನ್ನು ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
“ಈ ಪ್ರಕರಣದಲ್ಲಿ 7 ರಿಂದ 8 ಎನ್‌ಸಿಬಿ ಅಧಿಕಾರಿಗಳ ವರ್ತನೆ ಅನುಮಾನಾಸ್ಪದವಾಗಿದ್ದು, ಇಲಾಖಾ ವಿಚಾರಣೆ ಆರಂಭಿಸಲಾಗಿದೆ. ಎನ್‌ಸಿಬಿ ಹೊರಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಂದ ಅನುಮತಿ ಕೋರಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.