ಭಾರತೀಯ ನಾರಿಯನ್ನು ಪೂಜ್ಯ ಸ್ಥಾನದಲ್ಲಿ ಇಡುತ್ತೇವೆ ಎನ್ನುವ ಬಿಜೆಪಿ ಈ ವಿಚಾರದಲ್ಲಿ ನಡೆದುಕೊಂಡಿದ್ದು ಎಷ್ಟು ಸರಿ..? ಅನ್ನೋ ಚರ್ಚೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಎಷ್ಟು ಸರಿ..? ಅನ್ನೋದನ್ನು ನ್ಯಾಯಾಲಯ ನಿರ್ಧಾರ ಮಾಡಬೇಕಿದೆ. ಆದರೆ ದೇಶಾದ್ಯಂತ ‘ಬೇಟಿ ಬಚಾವೋ ಬೇಟಿ ಪಡಾವೋ’ ಅನ್ನೋ ಘೋಷ ವಾಕ್ಯ ಹೇಳಿಕೊಂಡು ಸುತ್ತುವ ಪ್ರಧಾನಿ ನರೇಂದ್ರ ಮೋದಿ ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಥ್ ಕೊಟ್ಟರು ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ.
ಮೆಹುವಾ ಉಚ್ಛಾಟನೆ ಮಾಡಿದ್ದಕ್ಕೆ ವಿರೋಧ ಯಾಕೆ..?
ಸಂಸದೆ ಸ್ಥಾನದಿಂದ ಟಿಎಂಸಿ ಸಂಸದೆ ಮೆಹುವಾ ಮೊಯಿತ್ರಾ ಅವರನ್ನ ಲೋಕಸಭೆ ಸ್ಪೀಕರ್ ಉಚ್ಛಾಟನೆ ಮಾಡಿದ್ದಾರೆ. ಸಂಸತ್ನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಹೊತ್ತಿದ್ದ ಮೆಹುವಾ ಉಚ್ಛಾಟನೆ ಮಾಡುವ ಶಿಸ್ತು ಸಮಿತಿ ಶಿಫಾರಸ್ಸನ್ನು ಲೋಕಸಭೆ ಒಪ್ಪಿಕೊಂಡಿದೆ. ಆ ಮೂಲಕ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಆಗಿದ್ದ ಮೆಹುವಾ ಅವರನ್ನು ಉಚ್ಛಾಟನೆ ಮಾಡುವ ಮೂಲಕ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಾಡಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೆಹುವಾ ಉಚ್ಛಾಟನೆ ಪ್ರಕ್ರಿಯೆ ಹೇಗಿತ್ತು ಗೊತ್ತಾ..?
ಲೋಕಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ರು. ಮೆಹುವಾ ಮೇಲಿನ ಆರೋಪ ತನಿಖೆಯಲ್ಲಿ ಸಾಬೀತಾಗಿದೆ. ಲೋಕಸಭೆ ಸದಸ್ಯ ಸ್ಥಾನದಿಂದ ಮೊಹುವಾ ಮೊಯಿತ್ರಾ ಅವರನ್ನ ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದರು. ಆ ಬಳಿಕ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ಮೊಹುವಾ ಮೊಯಿತ್ರಾ ಅವ್ರ ಕೆಲಸ ಅನೈತಿಕವಾಗಿದೆ. ಸಂಸದರಾಗಿ ಮಾಡಿದ ತಪ್ಪು ಶೋಭೆ ತರುವುದಿಲ್ಲ. ಹೀಗಾಗಿ ಮೆಹುವಾ ಮೊಯಿತ್ರಾರನ್ನ ಸಂಸದ ಸ್ಥಾನದಿಂದ ಉಚ್ಛಾಟಿಸಲಾಗುತ್ತಿದೆ. ಇದಕ್ಕೆ ಸದನದ ಸದಸ್ಯರ ಒಪ್ಪಿಗೆ ಇದ್ಯಾ..? ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಂಸದರು ಕೈ ಎತ್ತಿ ಒಪ್ಪಿಗೆ ಸೂಚಿಸಿದ್ದಾರೆ. ಸಂಸದರ ಪರವಾಗಿ ಯಾರೂ ಮತ ಹಾಕಿಲ್ಲ. ವರದಿ ಅಂಗೀಕರಿಸಲಾಗಿದೆ ಎಂದು ಒಪ್ಪಿಗೆ ಆಗಿದೆ ಎಂದು ಷರಾ ಬರೆದಿದ್ದಾರೆ.
ಉಚ್ಛಾಟನೆಗೂ ಮುನ್ನ ಮೆಹುವಾ ಕೇಳಿಕೊಂಡಿದ್ದೇನು..?
ಮೆಹುವಾ ಮೊಹಿತ್ರಾ ವಿರುದ್ಧ ತನಿಖೆಗೆ ನೀತಿ ಸಮಿತಿಗೆ ವಹಿಸಿದಾಗಲೇ ಉಚ್ಛಾಟನೆ ಮಾಡುವ ಸೂಚನೆ ಸಿಕ್ಕಿತ್ತು. ನವೆಂಬರ್ 10ರಂದೇ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಮೆಹುವಾ, ಏಕಪಕ್ಷೀಯವಾಗಿ ನನ್ನ ಸಂಸತ್ ಸ್ಥಾನ ಕಿತ್ತುಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಉಚ್ಛಾಟನೆ ಮಾಡಿದ್ರೆ ಇತಿಹಾಸದ ಪುಟದಲ್ಲಿ ಮೊದಲ ವ್ಯಕ್ತಿಯಾಗಿ ಸೇರುತ್ತೇನೆ ಎಂದಿದ್ದರು. ಇದೀಗ ಉಚ್ಛಾಟನೆ ಮಾಡಲಾಗಿದೆ. ಆದರೆ ಯಾವುದೇ ಓರ್ವ ಕೊಲೆಗಾರನಿಗೂ ನ್ಯಾಯಾಲಯ ತನ್ನ ವಾದ ಮಂಡಿಸಲು ಅವಕಾಶ ನೀಡುತ್ತದೆ. ಲೋಕಸಭೆಯಲ್ಲಿ ವರದಿ ಮಂಡನೆ ಮಾಡಿ ಒಪ್ಪಿಗೆ ಪಡೆಯುವ ಮುನ್ನ, ಮೆಹುವಾ ಮೊಹಿತ್ರಾ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಬಿಜೆಪಿ ಸರ್ಕಾರಕ್ಕೆ ಇರಲಿಲ್ಲ. ಮೋದಿ ಸರ್ಕಾರದ ಆತುರಕ್ಕೆ ಸ್ಪೀಕರ್ ಕೂಡ ಕುಣಿದುಬಿಟ್ರಾ..? ಅನ್ನೋ ಶಂಕೆ ವ್ಯಕ್ತವಾಗ್ತಿದೆ.
ಮಹುವಾ ಮೊಯಿತ್ರಾ ಹೇಳ್ತಿರೋದ್ರಲ್ಲಿ ಸತ್ಯ ಇದ್ಯಾ..?
ನನ್ನ ಮೇಲೆ ಆರೋಪಕ್ಕೆ ಯಾವುದೇ ಸಾಕ್ಷಿಗಳೂ ಇಲ್ಲ. ಯಾವುದೇ ಹಣ, ಗಿಫ್ಟ್ ಪಡೆದಿದ್ದಕ್ಕೆ ದಾಖಲೆಯಿಲ್ಲ. ನರೇಂದ್ರ ಮೋದಿ ಸರ್ಕಾರಕ್ಕೆ ನನ್ನ ಬಾಯಿ ಮುಚ್ಚಿಸಬೇಕು. ಉದ್ಯಮಿ ಗೌತಮ್ ಅದಾನಿ ಪ್ರಕರಣದ ಬಗ್ಗೆ ನಾವು ಮಾತಾಡಬಾರದು. ಅದೇ ಕಾರಣಕ್ಕೆ ಆತುರದಿಂದ ನನ್ನ ಬಗ್ಗೆ ನಿಂದನೆ ಮಾಡಿದ್ದಾರೆ. ಪ್ರಜಾಪ್ರಭುತ್ವವನ್ನೇ ಧಿಕ್ಕರಿಸಿ ಉದ್ಯಮಿ ಅದಾನಿ ಬೆನ್ನಿಗೆ ನಿಂತಿದ್ದು, ಮಹಿಳಾ ಸಂಸದೆಗೆ ನೋಡದೇ ಕಿರುಕುಳ ಕೊಟ್ಟಿದ್ದಾರೆ. ಬಿಜೆಪಿಯವರ ಅಂತ್ಯ ಇವತ್ತಿನಿಂದ್ಲೇ ಆರಂಭ ಆಗಿದೆ ಎಂದಿದ್ದಾರೆ.
ಸದನದಲ್ಲಿ ಮೆಹುವಾ ಅದಾನಿ ಬಗ್ಗೆ ಹೇಳಿದ್ದೇನು..?
ಫೆಬ್ರವರಿಯಲ್ಲಿ ನಡೆದ ಲೋಕಸಭಾ ಅಧಿವೇಶನದಲ್ಲಿ ಗೌತಮ್ ಅದಾನಿ ಬಗ್ಗೆ ವಾಗ್ದಾಳಿ ಮಾಡಿದ್ದ ಮೆಹುವಾ ಮೊಯಿತ್ರಾ, ಇವತ್ತು ಈ ದೇಶದ ಪ್ರತಿಷ್ಠಿತ ವ್ಯಕ್ತಿಯ ಬಗ್ಗೆ ಮಾತಾಡ್ತಿದ್ದೀನಿ. ಇದು ದುರಾದೃಷ್ಟ.. ಈ ಸದನದಲ್ಲಿ ಇವತ್ತು ಪ್ರಧಾನಮಂತ್ರಿಗಳಿಲ್ಲ, ಆದರೆ ನಾನು ಮಾತನಾಡುವ ವ್ಯಕ್ತಿಯ ಹೆಸರು A ಯಿಂದ ಶುರುವಾಗಿ I ಮೂಲಕ ಕೊನೆ ಆಗುತ್ತದೆ. ಎಲ್ಲರಿಗೂ ಗೊತ್ತು ಇದು, ಇದು ಅಡ್ವಾಣಿ ಹೆಸರಲ್ಲ ಎಂದಿದ್ದರು. ಆ ಬಳಿಕ ಪ್ರಧಾನಮಂತ್ರಿಗಳೇ, A ಹೆಸರಿನ ವ್ಯಕ್ತಿ ನಿಮಗೆ ಟೋಪಿ ಹಾಕಿದ್ದಾರೆ. ನಿಮ್ಮ ಜೊತೆ ವಿದೇಶಗಳಿಗೂ ಬಂದಿದ್ದಾರೆ. ವಿದೇಶಿ ಗಣ್ಯರನ್ನ ಭೇಟಿಯಾಗಿದ್ದಾರೆ. ಭಾರತದ ಪ್ರಧಾನಮಂತ್ರಿಗಳೇ ಅವರ ರಿಮೋಟ್ ಕಂಟ್ರೋಲ್ ಆಗಿದ್ದಾರೆ. ಅವರ ದಾಕ್ಷಿಣ್ಯದಲ್ಲಿ ಪ್ರಧಾನಿಯೇ ಇದ್ದಾರೆ ಎಂದು ಕಟು ಪದಗಳಲ್ಲಿ ಟೀಕಿಸಿದ್ದರು. ಇದೇ ಕಾರಣಕ್ಕೆ ಮೆಹುವಾ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎನ್ನಲಾಗ್ತಿದೆ.
ಅಕ್ಟೋಬರ್‌ಗೆ ದೂರು.. 25 ದಿನದಲ್ಲಿ ತನಿಖೆ ಮುಕ್ತಾಯ..!
ನಮ್ಮ ದೇಶದಲ್ಲಿ ಯಾವ ಮಟ್ಟದಲ್ಲಿ ತನಿಖೆ ವೇಗ ಪಡೆದಿದೆ ಎನ್ನುವುದನ್ನು ಮೆಹುವಾ ಪ್ರಕರಣದಲ್ಲಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬಹುದು. ಅಕ್ಟೋಬರ್ 14ರಂದು ಸಿಬಿಐಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ದೂರು ನೀಡಿದ್ದರು. ಆ ಬಳಿಕ ಸ್ಪೀಕರ್ ಓಂ ಬಿರ್ಲಾ ಅವರಿಗೂ ಅಕ್ಟೋಬರ್ 15 ರಂದು ದೂರು ನೀಡಲಾಗಿತ್ತು. ಸ್ಪೀಕರ್ ನೈತಿಕ ಸಮಿತಿ ರಚಿಸಿ ತನಿಖೆಗೆ ಆದೇಶ ಮಾಡಿದ್ದರು. ಅಕ್ಟೋಬರ್ 20ರಂದು ಉದ್ಯಮಿ ಹೀರಾನಂದಾನಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿತ್ತು. ದುಬೈನಲ್ಲೂ ಮೆಹುವಾ ಐಡಿ ಬಳಕೆಯಾಗಿದೆ. ಒಟ್ಟು 47 ಬಾರಿ ವೆಬ್ ಪೋರ್ಟಲ್ ತೆರೆಯಲಾಗಿದೆ ಎಂದು ದುಬೆ ಆರೋಪ. ಅಕ್ಟೋಬರ್ 26ರಂದು ಮೆಹುವಾ ಅವರಿಗೆ ನೋಟಿಸ್ ಕೊಟ್ಟ ನೀತಿ ಸಮಿತಿ, ಅಕ್ಟೋಬರ್ 31ರಂದು ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಆದರೆ ನಿಗದಿತ ಕಾರ್ಯಗಳು ಇರುವ ಕಾರಣಕ್ಕೆ ಅಂದು ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆ ನಂತರ ನವೆಂಬರ್ 2ರಂದು ಹಾಜರಾಗಲು ಸೂಚಿಸಲಾಗಿತ್ತು. ವಿಚಾರಣೆಗೆ ಹಾಜರಾದಾಗ ನಿಂದನೆಯ ಮಾತುಗಳು ಹಾಗು ವೈಯಕ್ತಿಕ ಮಾತುಗಳಿಂದ ನೊಂದು ವಿರೋಧ ಪಕ್ಷದ ನಾಯಕರು ಹಾಗು ಮೆಹುವಾ ಮೊಯಿತ್ರಾ ವಿಚಾರಣೆ ಬಹಿಷ್ಕಾರ ಮಾಡಿ ಹೊರ ಬಂದಿದ್ದರು. ನವೆಂಬರ್ 9ರಂದು ವರದಿ ನೀಡಿದ ನೀತಿ ಸಮಿತಿ ಉಚ್ಛಾಟನೆ ಮಾಡುವಂತೆ ಶಿಫಾರಸು ಮಾಡಿತ್ತು. ಕೇವಲ 24 ದಿನದಲ್ಲಿ ವಿಚಾರಣೆಯೇ ಮಾಡದೆ ವರದಿ ಕೊಟ್ಟಿತ್ತು. ಈಗ ಲೋಕಸಭೆ ಅಂಗೀಕರಿಸಿದೆ. ಇದು ಸಾಮಾಜಿಕ ನ್ಯಾಯದ ವಿರುದ್ಧ ಎನ್ನುವುದು ಎಲ್ಲರ ವಾದ.
ಕೃಷ್ಣಮಣಿ