ದುಬೈ/ಕುವೈತ್ ಸಿಟಿ: ದಕ್ಷಿಣ ಅಹ್ಮದಿ ಗವರ್ನರೇಟ್‌ನಲ್ಲಿ 46 ಭಾರತೀಯರು ಸೇರಿದಂತೆ 50 ಜನರ ಸಾವಿಗೆ ಕಾರಣವಾದ ಬೆಂಕಿ ದುರಂತದ ಸಂತ್ರಸ್ತರ ಕುಟುಂಬಗಳಿಗೆ ಕುವೈತ್ ಸರ್ಕಾರವು ತಲಾ 12,50,437.50 ($ 15,000) ಪರಿಹಾರವನ್ನು ನೀಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. .
ಕುವೈತ್ ಅಧಿಕಾರಿಗಳ ಪ್ರಕಾರ, ಜುಲೈ 12 ರಂದು ಮಂಗಾಫ್ ನಗರದ ಏಳು ಅಂತಸ್ತಿನ ಕಟ್ಟಡದಲ್ಲಿ ಕಟ್ಟಡದ ನೆಲ ಮಹಡಿಯಲ್ಲಿರುವ ಗಾರ್ಡ್ ಕೋಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೃಹತ್ ಪ್ರಮಾಣದ ಬೆಂಕಿ ದುರಂತ ಸಂಭವಿಸಿತು. ಈ ಕಟ್ಟಡದಲ್ಲಿ 196 ವಲಸೆ ಕಾರ್ಮಿಕರು ನೆಲೆಸಿದ್ದು ಅದರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದರು.
ಕುವೈತ್‌ನ ದೊರೆ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆದೇಶದ ಮೇರೆಗೆ, ಸಂತ್ರಸ್ತರ ಕುಟುಂಬಗಳು ರೂ 12.5 ಲಕ್ಷ ($ 15,000) ಪರಿಹಾರವನ್ನು ಪಡೆಯುತ್ತವೆ ಎಂದು ಅರಬ್ ಟೈಮ್ಸ್ ಪತ್ರಿಕೆ ಮಂಗಳವಾರ ವರದಿ ಮಾಡಿದೆ. ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ, ಪರಿಹಾರ ಪಾವತಿಗಳನ್ನು ಪ್ರಕ್ರಿಯೆಗೊಳಿಸಿ ಸಂತ್ರಸ್ತರ ಆಯಾ ದೇಶಗಳ ರಾಯಭಾರ ಕಚೇರಿಗಳಿಗೆ ತಲುಪಿಸಲಾಗುವುದು ಎಂದು ಪತ್ರಿಕೆ ಹೇಳಿದೆ. ಮೃತರಾಗಿರುವವರಲ್ಲಿ ಇತರ ಮೂವರು ಫಿಲಿಪಿನೋಸ್ ಆಗಿದ್ದು, ಸಂತ್ರಸ್ಥರ ಒಬ್ಬರ ಗುರುತನ್ನು ಇನ್ನೂ ಪತ್ತೆ ಹಚ್ಚಲು ಸಾದ್ಯವಾಗಿಲ್ಲ.
ಸಂಬಂಧಿತ ರಾಯಭಾರ ಕಚೇರಿಗಳು ಬೆಂಕಿಯಿಂದ ಮ್ಥರಾದ ಸಂತ್ರಸ್ತರ ಕುಟುಂಬಗಳಿಗೆ ಹಣವನ್ನು ವಿತರಿಸುವುದನ್ನು ಖಚಿತಪಡಿಸಿಕೊಳ್ಳುತ್ತವೆ, ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತವೆ ಮತ್ತು ಸಹಾಯವು ಸಂತ್ರಸ್ತರ ಕುಟುಂಬಗಳಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವುದನ್ನು ಖಚಿತಪಡಿಸುತ್ತದೆ ಎಂದು ವರದಿ ಹೇಳಿದೆ. “ಈ ಆರ್ಥಿಕ ನೆರವು ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ” ಎಂದು ಪತ್ರಿಕೆ ಹೇಳಿದೆ.
ಭಾರೀ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯ ಪ್ರಜೆಗಳ ಕುಟುಂಬಗಳಿಗೆ ಭಾರತ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಅಗ್ನಿ ದುರಂತದಲ್ಲಿ ಮೃತಪಟ್ಟ ರಾಜ್ಯದ ಜನರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಕೇರಳ ಸರ್ಕಾರ ಕಳೆದ ವಾರ ಹೇಳಿತ್ತು. ದುರಂತದಲ್ಲಿ ಮೃತಪಟ್ಟ ಭಾರತೀಯರಲ್ಲಿ 24 ಮಲಯಾಳಿಗಳೂ ಸೇರಿದ್ದಾರೆ.
ಘಟನೆಯ ಕುರಿತು ಕುವೈತ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ತನಿಖೆ ಆರಂಭಿಸಿದ್ದಾರೆ. ತನಿಖೆಯು ಈ ಭಾರೀ ಬೆಂಕಿ ದುರಂತದ ಘಟನೆಯ ಕಾರಣವನ್ನು ಬಹಿರಂಗಪಡಿಸುವ ಗುರಿಯನ್ನು ಹೊಂದಿದೆ ಮತ್ತು ಇದರಿಂದ ಮುಂದಕ್ಕೆ ಹೆಚ್ಚಿನ ಜಾಗರೂಕತೆಯನ್ನು ವಹಿಸಲು ಸಾದ್ಯವಾಗುತ್ತದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು.
ಅಗ್ನಿ ಅವಘಡದ ನಂತರ ಭದ್ರತಾ ಮತ್ತು ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯದಿಂದಾಗಿ ಸಾವು ಮತ್ತು ನೋವಿಗೆ ಕಾರಣವಾದ ಆರೋಪಗಳಿಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕ ಕುವೈತ್ ಪ್ರಜೆ ಮತ್ತು ಹಲವಾರು ವಿದೇಶಿಯರನ್ನು ಬಂಧಿಸಲಾಗಿದೆ.