
ಮಳೆಗಾಲದಲ್ಲಿ ಭಾಗಮಂಡಲ ಸೇರಿದಂತೆ ಸುತ್ತಮುತ್ತ ಹತ್ತಾರು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡು ದ್ವೀಪದಂತೆ ಭಾಸವಾಗ್ತಿತ್ತು. ಜನರು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ಮನೆಯಲ್ಲೇ ಇರುವ ಪರಿಸ್ಥಿತಿ ಇತ್ತು. ಭೂಕುಸಿತ, ಪ್ರವಾಹ ಎದುರಾದರೆ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳಲು ಹರಸಹಾಸ ಮಾಡಬೇಕಿತ್ತು. ಇದೀಗ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಜಿಲ್ಲೆಯ ಮೊಟ್ಟ ಮೊದಲ ಹಾಗು ಏಕೈಕ ಮೇಲ್ಸೇತುವೆ ನಿರ್ಮಾಣಗೊಂಡಿದೆ. ಬರೋಬ್ಬರಿ 6 ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯವಾಗಿದ್ದು, ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲೇ ಈ ಯೋಜೆನೆ ಚಾಲನೆ ಸಿಕ್ಕಿತ್ತು ಎನ್ನುವುದು ವಿಶೇಷ. ಈಗಾಗಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಲೋಕಸಭಾ ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಉದ್ಘಾಟನೆ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಿಂದ ಹರಿದು ಬರುವ ಕಾವೇರಿ, ತ್ರಿವೇಣಿ ಸಂಗಮದಲ್ಲಿ ರಸ್ತೆಯನ್ನು ಮುಳುಗಿಸಿಕೊಂಡು ಹರಿಯುತ್ತಿತ್ತು. ಇದರಿಂದ ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. 2018ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಜಾರ್ಜ್, ಮೇಲ್ಸೇತುವೆ ನಿರ್ಮಾಣದ ಬಗ್ಗೆ ಸರ್ಕಾರದ ಗಮನ ಸೆಳೆದು ಯೋಜನೆಗೆ ಭೂಮಿ ಪೂಜೆ ನೆರವೇರಿಸಿದ್ರು. ಆ ಬಳಿಕ 5 ವರ್ಷಗಳ ಕಾಲ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲೇ ಸಂಫೂರ್ಣವಾಗಿದೆ.

ಕೊಡಗಿನಲ್ಲಿ ಮಳೆಗಾಲದಲ್ಲಿ ಅನಾಹುತಗಳಿಗೆ ಕಡಿಮೆ ಏನಿಲ್ಲ. 2019ರಲ್ಲಿ ಕೋರಂಗಾಲದಲ್ಲಿ ಭೂಕುಸಿತ ನಡೆದು ಐವರು ಭೂಸಮಾಧಿಯಾಗಿದ್ರು. 2020ರಲ್ಲೂ ಗಜಗಿರಿ ಬೆಟ್ಟ ಕುಸಿದಿತ್ತು. ಆ ವೇಳೆ ರಕ್ಷಾಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳಲು ಪರದಾಡುವಂತಾಗಿತ್ತು. ಇದೀಗ ಮೇಲ್ಸೇತುವೆ ನಿರ್ಮಾಣವಾಗಿದ್ದು, ಭಾಗಮಂಡಲ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಅನುಕೂಲವಾಗಲಿದೆ. ಭಾಗಮಂಡಲ, ಅಯ್ಯಂಗೇರಿ, ಸಣ್ಣಪುಲಿಕೋಟು, ತಾವೂರು, ತಣ್ಣಿಮಾನಿ, ಚೇರಂಗಾಲ, ಕೋರಂಗಾಲ ಗ್ರಾಮದ ಮಕ್ಕಳು ಶಾಲಾ ಕಾಲೇಜಿಗೆ ತೆರಳಲು ಯಾವುದೇ ಸಮಸ್ಯೆ ಇಲ್ಲದಂತಾಗಿದೆ.

ಕೆಜೆ ಜಾರ್ಜ್ ಅವರ ಗಟ್ಟಿ ನಿರ್ಧಾರದಿಂದ ಕೊಡಗು ಜಿಲ್ಲೆಗೆ ಮೊದಲ ಮೇಲ್ಸೇತುವೆ ಆಗುವಂತೆ ಮಾಡಿದೆ. ಹಲವಾರು ದಶಕಗಳ ಮಡಿಕೇರಿ ಜನರ ಕನಸು ನನಸಾಗಿದೆ. ಪ್ರತಿ ಮಳೆಗಾಲದಲ್ಲೂ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಗಿದೆ. ಭಾಗಮಂಡಲದ ಭಗಂಡೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರೂ ಕೂಡ ಖುಷ್ ಆಗುವಂತೆ ಆಗಿದೆ.