• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ನಿರಾಯುಧ ಜೀವಗಳೂ ಶತಾಯುಧ ಕಿರಾತಕರೂ

ಪ್ರತಿಧ್ವನಿ by ಪ್ರತಿಧ್ವನಿ
May 12, 2024
in Uncategorized, ಅಂಕಣ, ಅಭಿಮತ, ಇತರೆ / Others, ಇದೀಗ
0
ನಿರಾಯುಧ ಜೀವಗಳೂ ಶತಾಯುಧ ಕಿರಾತಕರೂ
Share on WhatsAppShare on FacebookShare on Telegram

ನಿರಾಯುಧ ಜೀವಗಳೂ ಶತಾಯುಧ ಕಿರಾತಕರೂ

ADVERTISEMENT

ಲೇಖಕರು
—–ನಾ ದಿವಾಕರ ——


ಹಿಂಸೆಯನ್ನು ಸಹಿಸಿಕೊಳ್ಳುವ ಸಮಾಜ ಕ್ರೌರ್ಯವನ್ನೂ ಸಹಜ ಕ್ರಿಯೆಯಂತೆಯೆ ಕಾಣುತ್ತದೆ


ಶತಮಾನಗಳ ಆಧ್ಯಾತ್ಮಿಕ ಚರಿತ್ರೆಯನ್ನು ಹೊಂದಿರುವ ಭಾರತದಲ್ಲಿ ಮನುಷ್ಯ ಜೀವಿಯನ್ನು ಪರಸ್ಪರ ಪ್ರೀತಿಸುವ ನಾಗರಿಕ ಲಕ್ಷಣ ಸಹಜವಾಗಿಯೇ ರೂಪುಗೊಳ್ಳಬೇಕಿತ್ತು. ಮನುಕುಲದ ಅಭ್ಯುದಯದ ಹಾದಿಯಲ್ಲಿ ಅತಿ ಹೆಚ್ಚು ಸಮಾಜ ಸುಧಾರಕರು ಹಾಗೂ ದಾರ್ಶನಿಕ ಚಿಂತಕರನ್ನು ಕಂಡಿರುವ ಭಾರತೀಯ ಸಮಾಜ ತನ್ನೊಳಗಿನ ಜಾತಿಪೀಡಿತ ಕ್ರೌರ್ಯ-ಸಾಂಸ್ಕೃತಿಕ ಅಹಮಿಕೆಗಳ ಹೊರತಾಗಿಯೂ, ಒಂದು ಮಾನವೀಯ ಸಮಾಜವನ್ನು ಕಟ್ಟಿಕೊಳ್ಳಬೇಕಿತ್ತು. ಆದರೆ 21ನೆಯ ಶತಮಾನದ ಮೂರನೆಯ ದಶಕದಲ್ಲಿ, ತಂತ್ರಜ್ಞಾನ ಯುಗದ ಶಿಖರವನ್ನು ತಲುಪಿರುವ ವಾತಾವರಣದಲ್ಲಿ ನಿಂತು ನೋಡಿದಾಗ ಯಾವುದೇ ಪ್ರಜ್ಞಾವಂತ ಕಣ್ಣುಗಳಿಗೆ ಕಾಣುವುದು ಪ್ರಾಚೀನ ಸಮಾಜದ ದೌರ್ಜನ್ಯ, ತಾರತಮ್ಯ, ಹಿಂಸೆ ಹಾಗೂ ಪಾಶವೀ ಪ್ರವೃತ್ತಿಗಳ ಲೋಕ. ನಾಗರಿಕರಾಗಿ ನಮ್ಮ ಒಳಗಣ್ಣಿಗೆ ಪೊರೆ ಬಂದಿಲ್ಲ ಎಂದಾದರೆ ಅಥವಾ ನಮ್ಮ ಕಣ್ಣೋಟವನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸುತ್ತಿಲ್ಲ ಎಂದಾದರೆ, ವಾಸ್ತವ ಸನ್ನಿವೇಶ ನಮ್ಮನ್ನು ಗಾಢವಾದ ಚಿಂತೆಗೆ ದೂಡಲೇಬೇಕು.


ಏಕೆಂದರೆ ಕಳೆದ ಮೂರು ನಾಲ್ಕು ದಶಕಗಳ ಜಾತಿ ರಾಜಕಾರಣ, ಮತೀಯವಾದ, ಕೋಮುವಾದ, ಮತಾಂಧತೆ ಹಾಗೂ ಅಧಿಕಾರ ರಾಜಕಾರಣದ ಸ್ವಾರ್ಥತೆಯು ಮನುಷ್ಯ ಜೀವದ ಮೌಲ್ಯವನ್ನು ಮೂರಾಬಟ್ಟೆ ಮಾಡಿಬಿಟ್ಟಿದೆ. ಮನುಷ್ಯ ತನ್ನ ಪಯಣವನ್ನು ಮುಗಿಸುವ ಕೊನೆಯ ಹಂತ ನಿಶ್ಚಿತ ಸಾವು. ಸಾವನ್ನು ಸಹ ಶ್ರೇಣೀಕರಣಗೊಳಿಸಿ, ಪ್ರತ್ಯೇಕಿಸಿ, ವರ್ಗೀಕರಿಸಿರುವ ನಮ್ಮ ಸಮಾಜದಲ್ಲಿ ಗಣ್ಯ-ನಗಣ್ಯರ ಸ್ಥಾನಮಾನಗಳಿಗೆ ಅನುಗುಣವಾಗಿ ಸಾವನ್ನೂ ಬಣ್ಣಿಸಲಾಗುತ್ತದೆ. ಹಾಗೆಯೇ ನಿತ್ಯ ಸಾರ್ವಜನಿಕ ಬದುಕಿನಲ್ಲಿ ಸಂಭವಿಸುವ ಅಸಹಜ-ಅತಾರ್ಕಿಕ ಸಾವುಗಳೂ ಸಹ ಜಾತಿ ಧರ್ಮಗಳ ನೆಲೆಯಲ್ಲಿ ಸಾಪೇಕ್ಷತೆಯನ್ನು ಪಡೆದುಕೊಂಡು, ಪ್ರತ್ಯೇಕೀಕರಣಕ್ಕೊಳಗಾಗುತ್ತಿದೆ. 1980ರ ದಶಕದವರೆಗೂ ಒಂದು ಸಾಮಾಜಿಕ ಪ್ರಕ್ರಿಯೆ ಎನಿಸಿಕೊಂಡಿದ್ದ ಈ ಧೋರಣೆ ರಾಜಕೀಯವಾಗಿ ರೂಪಾಂತರ ಹೊಂದಿದ್ದು ಸಾವಿನ ಸುತ್ತ Narratives ಗಳನ್ನು ಸೃಷ್ಟಿಸುವ ಮೂಲಕ, ಎಂತಹ ಸಾವು ಸಂಭವಿಸಿದರೂ ಸಹನೀಯವಾಗುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ.


ಸಾಮಾಜಿಕ ಕ್ಷೋಭೆಯ ನಡುವೆ

ಮತೀಯ ರಾಜಕಾರಣದಲ್ಲಿ , ಜಾತಿ ವೈಷಮ್ಯ-ಮಹಿಳಾ ದೌರ್ಜನ್ಯಗಳ ಸಾಮಾಜಿಕ ನೆಲೆಗಳಲ್ಲಿ ಸಹಜೀವಿಯ ಸಾವು ಸಾಪೇಕ್ಷತೆಯನ್ನು ಪಡೆಯುವ ಒಂದು ಸಾಂಸ್ಕೃತಿಕ ರಾಜಕಾರಣ ನಮ್ಮನ್ನು ನಿರ್ದೇಶಿಸುತ್ತಿದೆ. 1990ರ ನಂತರದ ಈ ಬೆಳವಣಿಗೆಯೇ ಹಂತಕರನ್ನೂ, ಹತರಾದವರನ್ನೂ ಶ್ರೇಣೀಕರಿಸಿ, ಪ್ರತ್ಯೇಕಿಸಿ ನೋಡುವ ಒಂದು ವಿಧಾನವನ್ನೂ ಸೃಷ್ಟಿಸಿದೆ. ಸೋದರತ್ವ-ನಾಗರಿಕತೆಯ ಸೋಗಿನ ನಡುವೆಯೇ ಎಲ್ಲರೊಳಗೂ ಹೊಕ್ಕು ʼಅನ್ಯʼರನ್ನು ಸೃಷ್ಟಿಸುವ ಮೂಲಕ ಮತೀಯ ರಾಜಕಾರಣವು, ಸಹಮಾನವರಿಂದ ಹತ್ಯೆಗೀಡಾಗುವ ಅಮಾಯಕ ಜೀವಿಗಳನ್ನೂ ಸಹ ಜಾತಿ, ಧರ್ಮ ಅಥವಾ ಸಾಮುದಾಯಿಕ ಅಸ್ಮಿತೆಗಳ ನೆಲೆಯಲ್ಲಿ ವಿಂಗಡಿಸಿ ಪ್ರತ್ಯೇಕಿಸುವ ವಿಧಾನವನ್ನೂ ಸಹ ಸೃಷ್ಟಿಸಿದೆ. ಈ ರೂಪಾಂತರಗೊಂಡ ಸಮಾಜದಲ್ಲಿ ಹಂತಕರನ್ನು ಜಿಹಾದಿ, ಮನುವಾದಿ ಮುಂತಾದ ನಾಮವಿಶೇಷಣಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅತ್ಯಾಚಾರಿಗಳನ್ನು ಸಂಸ್ಕಾರವಂತರು ಎಂದೂ ಗೌರವಿಸಲಾಗುತ್ತದೆ. ಆದರೆ ಈ ಮಾನವ ವಿರೋಧಿ ಮನಸ್ಥಿತಿಯ ಸಾಮಾಜಿಕ-ಸಾಂಸ್ಕೃತಿಕ ಆಯಾಮವನ್ನು ಮರುವಿಮರ್ಶೆಗೊಳಪಡಿಸಲು ಸಮಾಜ ನಿರಾಕರಿಸುತ್ತಲೇ ಬಂದಿದೆ.


ಹಾಗಾಗಿಯೇ ಹುಬ್ಬಳ್ಳಿಯ ನೇಹಾ ರಾಜಕೀಯ ವಸ್ತುವಾಗುತ್ತಾಳೆ. ಕೊಡಗಿನ ಮೀನಾ ದಿಕ್ಕಿಲ್ಲದ ಅನಾಥಳಾಗುತ್ತಾಳೆ. ದೌರ್ಜನ್ಯಕ್ಕೀಡಾಗಿ ಸಾವಿಗೀಡಾದ ವ್ಯಕ್ತಿಯ ಶವಸಂಸ್ಕಾರಕ್ಕೆ ಮುನ್ನವೇ ಮರಣೋತ್ತರ ಪರೀಕ್ಷೆಗಾಗಿ ಧಾವಿಸುವ ಸಾಂಸ್ಕೃತಿಕ ರಾಜಕಾರಣದ ವಾರಸುದಾರರು, ಅತ್ಯಾಚಾರ-ಹತ್ಯೆಗೀಡಾದ ಮಹಿಳೆಯ ತೊಗಲು, ಚಿಹ್ನೆ, ಲಾಂಛನಗಳನ್ನಾಧರಿಸಿ ತಮ್ಮ ಧ್ವನಿ ಎತ್ತರಿಸುವುದು ವರ್ತಮಾನ ಭಾರತದ ರಾಜಕೀಯ ಲಕ್ಷಣ. ಹಂತಕ ವ್ಯಕ್ತಿಯಲ್ಲಿ ಅಡಗಿರುವ ಕ್ರೌರ್ಯ, ಅಹಿಂಸೆ ಮತ್ತು ಕಿರಾತಕ ಮನಸ್ಥಿತಿಗಿಂತಲೂ ಅವನ ಧಾರ್ಮಿಕ ಚಿಹ್ನೆಗಳು ಆತನನ್ನು ಜಿಹಾದಿ, ಮನುವಾದಿ, ಉಗ್ರವಾದಿ, ಭಯೋತ್ಪಾದಕ ಅಥವಾ ಮಾನಸಿಕ ರೋಗಿ ಎಂಬ ವಿಂಗಡನೆಗೆ ಒಳಪಡಿಸುತ್ತದೆ. ಈ ರಾಜಕೀಯ ಪರಿಭಾಷೆಯನ್ನೇ ಪುನರುಚ್ಛರಿಸುವ ಮೂಲಕ ಮುಖ್ಯವಾಹಿನಿಗಳು ಸಾರ್ವಜನಿಕ ವಲಯದಲ್ಲಿ ಹುಟ್ಟುಹಾಕುವ ನಿರೂಪಣೆಗಳು (Narratives) ಸಮಾಜದಲ್ಲಿ ಬೇರೂರುತ್ತಿರುವ ಕ್ರೌರ್ಯ ಮತ್ತು ಹಿಂಸೆಯ ಸಮಾಜಶಾಸ್ತ್ರೀಯ ಆಯಾಮಗಳನ್ನು ಮೂಲೆಗೆ ತಳ್ಳಿಬಿಡುತ್ತವೆ.


ನಾಗರಿಕರಾಗಿ ನಾವು ಯೋಚನೆ ಮಾಡಬೇಕಿರುವುದು ಈ ಆಯಾಮಗಳನ್ನು. ದಿನದಿಂದ ದಿನಕ್ಕೆ ಅತ್ಯಾಚಾರ, ಕೊಲೆಗಳು ಹೆಚ್ಚಾಗುತ್ತಿವೆ. ಅತ್ಯಾಚಾರಿಗಳು-ಹಂತಕರೆಲ್ಲರೂ ಯುವಕರು ಅಥವಾ ಮಧ್ಯವಯಸ್ಕರಾಗಿರುತ್ತಾರೆ. ಕೊಡಗು ಮತ್ತು ಹುಬ್ಬಳ್ಳಿಯ ಘಟನೆಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡಿದಾಗ ಕಾಣುವ ಒಂದು ಸಮಾನ ಎಳೆ ಎಂದರೆ ಮಹಿಳೆಯ ನಿರಾಕರಿಸುವ/ಧಿಕ್ಕರಿಸುವ ಹಕ್ಕನ್ನು ಕಸಿದುಕೊಳ್ಳುವ ಅಥವಾ ನಿರಾಕರಿಸುವ ಒಂದು ಪುರುಷ ಸಮಾಜ ನಮ್ಮೊಳಗೇ ರೂಪುಗೊಳ್ಳುತ್ತಿರುವುದು ಕಾಣುತ್ತದೆ. ಈ ಪ್ರಕರಣಗಳಲ್ಲಿ ಸಾವು ಎನ್ನುವುದೂ ವಿಂಗಡನೆಗೊಳಗಾಗಿದ್ದು ಒಂದು ಧಾರ್ಮಿಕ ಸ್ವರೂಪ ಪಡೆದರೆ ಮತ್ತೊಂದು ಕೌಟುಂಬಿಕ ರೂಪ ಪಡೆಯುತ್ತದೆ. ಕೊಡಗಿನ ಮೀನಾ ಎಂಬ ಎಳೆಬಾಲೆ ಅಪಾಯದಲ್ಲಿರುವ ಹಿಂದೂಗಳ ಒಂದು ಭಾಗವಾಗಿ ಕಾಣುವುದಿಲ್ಲ. ಏಕೆಂದರೆ ಅಲ್ಲಿ ಹಂತಕನಲ್ಲಿ ʼಅನ್ಯʼರನ್ನು ಕಾಣಲಾಗುವುದಿಲ್ಲ. ನೇಹಾ ಮತ್ತು ಮೀನಾ, ಇವರಿಬ್ಬರ ನಡುವೆ ಯಾವುದೇ ವ್ಯತ್ಯಾಸ ಇಲ್ಲದಿದ್ದರೂ, ಅವರ ಸಾವಿನಲ್ಲಿ ವರ್ಗೀಕರಣಕ್ಕೊಳಗಾಗಿಬಿಡುತ್ತಾರೆ.


ಹಂತಕ ಮನಸ್ಥಿತಿಯ ಸಾಂಸ್ಥೀಕರಣ

ಈ ರಾಜಕೀಯ ಸಾಪೇಕ್ಷತೆಯಿಂದಾಚೆಗೆ ಯೋಚಿಸುವ ವಿವೇಕವನ್ನು ಕಳೆದುಕೊಂಡಿರುವ ಸಮಾಜದಲ್ಲಿ ನಾವಿದ್ದೇವೆ. ಹುಬ್ಬಳ್ಳಿಯ ಮತ್ತು ಕೊಡಗಿನಲ್ಲಿ ನಡೆದ ಹತ್ಯೆಗಳ ನಡುವೆ ಇರುವ ಹಂತಕ ಮನಸ್ಥಿತಿ ಮತ್ತು ಕ್ರೌರ್ಯದ ಸಾಮ್ಯತೆಯನ್ನು ಗುರುತಿಸಲು ಈ ಸಮಾಜ ವಿಫಲವಾಗುತ್ತಿದೆ. ಸಮಾಜಶಾಸ್ತ್ರೀಯ ನೆಲೆಯಲ್ಲಿ ನಿಂತು ಈ ಕ್ರೂರ ಮನಸ್ಥಿತಿಯು ಸಮಾಜದ ಮೇಲ್‌ ಸ್ತರದಿಂದ ತಳಮಟ್ಟದವರೆಗೂ ವಿಸ್ತರಿಸಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಶ್ರದ್ಧಾ ವಾಲ್ಕರ್‌ ಘಟನೆಯಿಂದ ಕೊಡಗಿನ ಘಟನೆಯವರೆಗೆ ಗಮನಿಸಿದಾಗ, ಅಧೀನತೆಯನ್ನು ಒಲ್ಲದ ಮಹಿಳೆಯನ್ನು ತುಂಡರಿಸಿ ಎಸೆಯುವ ಒಂದು ಪುರುಷ ಕ್ರೌರ್ಯವನ್ನು ಗುರುತಿಸಬಹುದು. ಇಂತಹ ಹೇಯ ಕೃತ್ಯಗಳಿಗೆ ಅತಿಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುವುದು ಮಹಿಳೆಯೇ ಎನ್ನುವುದು ಹೆಚ್ಚು ಚರ್ಚಿತವಾಗಬೇಕಾದ ವಿಚಾರ. ಮತೀಯವಾದ-ಜಾತಿ ವೈಷಮ್ಯದ ನೆಲೆಯಲ್ಲಿ ಮಹಿಳೆಯರ ಮೇಲೆ ನಡೆಯುವ ಕ್ರೂರ ಹಿಂಸೆಗೂ ಪಿತೃಪ್ರಧಾನ ವ್ಯವಸ್ಥೆಯ ಪುರುಷಾಹಮಿಕೆಗೂ ನೇರ ಸಂಬಂಧ ಇರುತ್ತದೆ ಎನ್ನುವುದು ನಿರ್ವಿವಾದ ಅಂಶ.


ಈ ಹೀನ ಮನಸ್ಥಿತಿ ಹಾಗೂ ಹೇಯ ಕೃತ್ಯಗಳಿಗೆ ಅವಕಾಶ ಮಾಡಿಕೊಡುವ ಅಥವಾ ಅವುಗಳನ್ನು ಕೇವಲ ಬಗೆಹರಿಸಬಹುದಾದ ಸಾಮಾಜಿಕ/ಕಾನೂನಾತ್ಮಕ ʼಸಮಸ್ಯೆʼ ಎಂದು ಪರಿಭಾವಿಸುವ ಬೌದ್ಧಿಕ ವಾತಾವರಣದಲ್ಲಿ ನಾವಿದ್ದೇವೆ. ಈ ಹಿಂಸೆ ಮತ್ತು ಕ್ರೌರ್ಯವನ್ನೂ ಸಹ ನಿರ್ದಿಷ್ಟ ಮತ, ಧರ್ಮ, ಜಾತಿ ಅಥವಾ ಪ್ರಾದೇಶಿಕ ಅಸ್ಮಿತೆಯ ನೆಲೆಗಳಲ್ಲಿ ವ್ಯಾಖ್ಯಾನಿಸುತ್ತಿದ್ದೇವೆ. ಲವ್‌ ಜಿಹಾದ್‌ ಎಂಬ ಅರ್ಥಹೀನ ಪರಿಭಾಷೆ ಇಂತಹ ವ್ಯಾಖ್ಯಾನಗಳ ನಡುವೆ ಹುಟ್ಟಿಕೊಳ್ಳುತ್ತದೆ. ಈ ಎಲ್ಲೆಗಳನ್ನು ದಾಟಿ ನೋಡಿದಾಗ ಸಾಮಾಜಿಕವಾಗಿ ನಾವು ಮನುಜ ಸೂಕ್ಷ್ಮಗಳನ್ನು ಹೇಗೆ ಶಿಥಿಲಗೊಳಿಸುತ್ತಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ಬೌದ್ಧಿಕ ಸಂಕಥನಗಳಲ್ಲಿ ಬಳಸಲಾಗುತ್ತಿರುವ ಪರಿಭಾಷೆಯತ್ತ ಒಮ್ಮೆ ಗಮನಹರಿಸಿದರೆ ಇದರ ಪರಿಚಯವಾಗುತ್ತದೆ. ಚುನಾವಣೆಗಳ ಸಂದರ್ಭದಲ್ಲೇ ಸಾಮಾಜಿಕ-ವಿದ್ಯುನ್ಮಾನ-ಮುದ್ರಣ ಮಾಧ್ಯಮಗಳಲ್ಲಿ ಬಳಸುವ ಮತಬೇಟೆ, ರಣಾಂಗಣ, ರಣಕಹಳೆ, ತೊಡೆ ತಟ್ಟುವುದು, ಪಂಥಾಹ್ವಾನ ಮುಂತಾದ ಹಲವಾರು ಪದಗಳು ಯುದ್ಧಪರಂಪರೆಯ ದ್ಯೋತಕವಾಗಿದ್ದು ಈ ಪದಕೋಶಗಳ ಒಳಗೇ ಹಿಂಸೆ ಮತ್ತು ಕ್ರೌರ್ಯ ಭಾವನಾತ್ಮಕವಾಗಿ ಅಡಗಿರುತ್ತವೆ.

ಮತ್ತೊಂದೆಡೆ 1990ರ ನಂತರ ತೀವ್ರತೆ ಪಡೆದುಕೊಂಡಿರುವ ಮತೀಯ ರಾಜಕಾರಣದಲ್ಲಿ ಹಿಂದೂ-ಮುಸ್ಲಿಂ ಮೂಲಭೂತವಾದಿಗಳು ಹುಟ್ಟುಹಾಕಿದ ʼಧರ್ಮರಕ್ಷಣೆʼಯ ನಿರೂಪಣೆಗಳು ಯುವ ಸಮೂಹಗಳನ್ನು ಭ್ರಮಾಧೀನವಾಗಿಸುತ್ತಿದ್ದು ತಮ್ಮ ಗುರಿ ಮುಟ್ಟಲು ಯಾವುದೇ ರೀತಿಯ ಹಿಂಸಾತ್ಮಕ ಮಾರ್ಗವನ್ನಾದರೂ ಅನುಸರಿಸುವ ಮನಸ್ಥಿತಿಯನ್ನು ಹುಟ್ಟುಹಾಕಿವೆ. ಒಂದು ನೆಲೆಯಲ್ಲಿ ಸಾಂಘಿಕವಾಗಿ ಧೃವೀಕರಣಕ್ಕೊಳಗಾಗುವ ಯುವ ಸಮೂಹ ಮತ್ತೊಂದು ನೆಲೆಯಲ್ಲಿ ಸಾಂಸ್ಥಿಕವಾಗಿ ಹಿಂಸಾತ್ಮಕ ಮಾರ್ಗದತ್ತ ಸಾಗುತ್ತಿರುವುದು ಕಳೆದ ಮೂರು ದಶಕಗಳಲ್ಲಿ ಕಾಣಬಹುದಾದ ವಿದ್ಯಮಾನ. ಈ ಸಾಂಸ್ಥೀಕರಣದ ನಡುವೆ ಒಂದು ಬೃಹತ್‌ ಸಮೂಹವನ್ನು ಶಸ್ತ್ರೀಕರಣಗೊಳಿಸಲಾಗಿರುವುದನ್ನು (Weaponisation) ಗಂಭೀರವಾಗಿ ಗಮನಿಸಬೇಕಿದೆ. ಹೀಗೆ ಶಸ್ತ್ರೀಕರಣಕ್ಕೊಳಗಾದ ಯುವ ಮನಸುಗಳ ಮೇಲೆ ಹತೋಟಿ ಸಾಧಿಸುವಂತಹ ಸಾಂಸ್ಥಿಕ ಪ್ರಯತ್ನಗಳು ಇಲ್ಲವಾದಾಗ, ಅಲ್ಲಿ ಇದೇ ಶಸ್ತ್ರಗಳ ಬಳಕೆಯಲ್ಲಿ ಪಳಗಿದ ಮನಸುಗಳು ಗುಂಪುಹಲ್ಲೆ, ಗುಂಪುಥಳಿತ, ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗಳಿಗೆ ಮುಂದಾಗುತ್ತವೆ.

ಭವಿಷ್ಯದ ಸಮಾಜವನ್ನು ಸದೃಢಗೊಳಿಸುವ ಜವಾಬ್ದಾರಿ ಇರುವ ವರ್ತಮಾನದ ಪೀಳಿಗೆಯನ್ನು ಹೀಗೆ ಭ್ರಷ್ಟಗೊಳಿಸಿ, ಹಿಂಸಾತ್ಮಕ ಅಥವಾ ಅಮಾನುಷ ಮಾರ್ಗದಲ್ಲಿ ಕೊಂಡೊಯ್ಯುವ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಗಳನ್ನು ಮತ್ತು ಸಂಘಟನೆಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸಬೇಕಿದೆ. ಶಸ್ತ್ರೀಕರಣಗೊಂಡ ( Weaponised) ಒಂದು ಯುವ ಮನಸ್ಸು ತನ್ನ ಮಾನಸಿಕ ಹತೋಟಿ ಕಳೆದುಕೊಂಡಾಗ, ಭಾವಾವೇಶಕ್ಕೊಳಗಾದಾಗ ಅಥವಾ ವೈಫಲ್ಯಗಳನ್ನೆದುರಿಸಿದಾಗ, ಸಹಜೀವಿಗಳನ್ನೂ ಎದುರಾಳಿಯಾಗಿ, ಶತ್ರುವಾಗಿ ಕಾಣುವಂತೆ ಪ್ರಚೋದನೆಗೊಳಗಾಗುತ್ತದೆ. ಈ ಪ್ರಚೋದನೆಯೇ ಹತ್ಯೆಯಲ್ಲಿ ಅಥವಾ ಅತ್ಯಾಚಾರದಲ್ಲಿ ಕೊನೆಯಾಗುತ್ತದೆ. ಈ ಮನಸ್ಥಿತಿಗೆ ಯಾವುದೇ ಅಸ್ಮಿತೆಯನ್ನು ಅಂಟಿಸದೆ, ಸಮಾಜಶಾಸ್ತೀಯ ನೆಲೆಯಲ್ಲಿಟ್ಟು ನೋಡಿದಾಗ ನಮಗೆ ಹಿಂಸೆ-ಕ್ರೌರ್ಯ ಮತ್ತು ದಬ್ಬಾಳಿಕೆಯ ಸಾಮಾಜಿಕ ವ್ಯಸನ ಕಂಡುಬರುತ್ತದೆ. ಈ ವ್ಯಸನಕ್ಕೆ ತುತ್ತಾಗುವವರು ಯಾರು ?

ನಿರಾಯುಧ ಬಲಿಪಶುಗಳು


ಇಲ್ಲಿ ಶೋಷಿತ ಸಮುದಾಯಗಳು, ಮಹಿಳೆಯರು, ಆದಿವಾಸಿಗಳು, ನಗರಗಳಲ್ಲಿರುವ ಸ್ಲಂ ನಿವಾಸಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ, ಸಾಮಾಜಿಕವಾಗಿ ದುರ್ಬಲರಾದ ಜನತೆ ಹೆಚ್ಚು ದೌರ್ಜನ್ಯಕ್ಕೊಳಗಾಗುವುದನ್ನು ಗಮನಿಸಬೇಕಿದೆ. ಕಾನೂನು ಕ್ರಮಗಳು, ಕಠಿಣ ಕಾಯ್ದೆಗಳು ಇಂತಹ ಕ್ರೂರ ಘಟನೆಗಳನ್ನು ಮರುಕಳಿಸದಂತೆ ನಿಯಂತ್ರಿಸುವ ಸಾಧನಗಳೇನೋ ಹೌದು ಆದರೆ ಮೂಲತಃ ಯುವಕರಲ್ಲಿ ಆಳವಾಗಿ ಬೇರೂರಿರುವ ಹಿಂಸಾತ್ಮಕ ಧೋರಣೆ ಮತ್ತು ಕ್ರೂರ ಮನಸ್ಥಿತಿಯನ್ನು ಯಾವ ಕಾನೂನು ಸಹ ಹೋಗಲಾಡಿಸಲಾಗುವುದಿಲ್ಲ. ಇದನ್ನು ತೊಡೆದುಹಾಕುವುದು ಸಮಾಜದ ಆದ್ಯತೆಯಾಗಬೇಕು, ಶೈಕ್ಷಣಿಕ ವ್ಯವಸ್ಥೆಯ ಆಯ್ಕೆಯಾಗಬೇಕು, ಮುಂದುವರೆದ ಕಲಿತ ಸಮುದಾಯಗಳ ಮಾರ್ಗವಾಗಬೇಕು. ದುರಂತ ಎಂದರೆ ಈ ಮೂರೂ ನೆಲೆಗಳಲ್ಲಿ ರಾಜಕೀಯ-ಸೈದ್ಧಾಂತಿಕ ಧೃವೀಕರಣದ ಪರಿಣಾಮವಾಗಿ ಬೌದ್ಧಿಕ ದಾರಿದ್ರ್ಯ ಆಳವಾಗಿ ಬೇರೂರುತ್ತಿದೆ.
ಧಾರ್ಮಿಕ ಧೃವೀಕರಣ ಮತ್ತು ಜಾತಿ ಸಮೀಕರಣದ ಚೌಕಟ್ಟಿನೊಳಗೆ ಈ ಮೂರೂ ನೆಲೆಗಳು ಮನುಷ್ಯ ಸಮಾಜವನ್ನು ನಿರಂತರವಾಗಿ ವಿಂಗಡಿಸುತ್ತಲೇ ಹೋಗುತ್ತಿವೆ. ಹೆಣದ ಮೇಲಿನ ರಾಜಕಾರಣವೂ ಈ ವಿಂಗಡನೆಯ ಒಂದು ಭಾಗವಾಗಿದೆ. ಹತ್ಯೆ-ಅತ್ಯಾಚಾರಗಳನ್ನು ಮೌನವಾಗಿ ಸಮ್ಮತಿಸುವ ಒಂದು ಕಲಿತ ವಿದ್ವತ್‌ ವಲಯವೂ ಸಹ ಈ ಸಮಾಜದಲ್ಲಿ ಸೃಷ್ಟಿಯಾಗಿರುವುದು ಅನಾಗರಿಕತೆಯ ಲಕ್ಷಣ ಅಲ್ಲವೇ ? ಇಲ್ಲಿ ಸೃಷ್ಟಿಯಾಗುವ ಅರಾಜಕತೆಯೇ ಅಸ್ಮಿತೆಗಳ ರಾಜಕಾರಣಕ್ಕೆ ಬಂಡವಾಳವೂ ಆಗುತ್ತದೆ. ಬೌದ್ಧಿಕವಾಗಿ ಅತ್ಯುನ್ನತ ಗುಣಮಟ್ಟವನ್ನು ಸಾಧಿಸಿರುವ ಒಂದು ಆಧುನಿಕ ಸಮಾಜ ಈ ಬಂಡವಾಳದ ಭಾಗವಾಗಕೂಡದು. ಆಗ ಮಾತ್ರ ಹಂತಕ, ಅತ್ಯಾಚಾರಿ, ಸಂತ್ರಸ್ತ ವ್ಯಕ್ತಿಗಳೆಲ್ಲರೂ ಮನುಷ್ಯರಾಗಿ ಕಾಣಿಸಲು ಸಾಧ್ಯ. ಅಲ್ಲಿ ಅಮಾನುಷತೆ ಗೋಚರಿಸಲು ಸಾಧ್ಯ.


ಯುವ ಸಮೂಹವನ್ನು ತಮ್ಮದೇ ಆದ ಸ್ವಾರ್ಥ ಸಾಧನೆಗಾಗಿ ಶಸ್ತ್ರೀಕರಣಗೊಳಿಸುತ್ತಿರುವ ಸಮಾಜವೇ ಈ ಅಮಾನುಷ ಲೋಕವನ್ನು ಸಹ ಅನಾವರಣಗೊಳಿಸುತ್ತಿದೆ. ಇಲ್ಲಿ ನಿರಾಯುಧರು ಸಂತ್ರಸ್ತರಾಗುತ್ತಾರೆ. ನೇಹ, ಮೀನ, ನಿರ್ಭಯ, ಧಾನಮ್ಮ, ಲಯಸ್ಮಿತಾ ಈ ಎಲ್ಲ ನಿರಾಯುಧ ಮಹಿಳೆಯರು ಬಲಿಯಾಗಿರುವುದೂ ಇಂತಹ ಒಂದು ಕ್ರೂರ ಸಮಾಜಕ್ಕೆ ಅಲ್ಲವೇ ? ಮೀನಾಳನ್ನು ಕೊಂದ ಪ್ರಕಾಶ, ನೇಹಾಳನ್ನು ಕೊಂದ ಫಯಾಜ್‌, ರುಕ್ಸಾನಾಳನ್ನು ಕೊಂದ ಪ್ರದೀಪ, ಫರೀದಾಳನ್ನು ಕೊಂದ ಗಿರೀಶ ಇವರೆಲ್ಲರೂ ಇದೇ ಕ್ರೂರ ಸಮಾಜದ ಕೂಸುಗಳಲ್ಲವೇ ? ಈ ಶಿಶುಗಳ ಕೈಗೆ ಶಸ್ತ್ರಗಳನ್ನು ನೀಡಿದ ಸಮಾಜ ಎಂತಹುದು ? ಈ ಶಸ್ತ್ರ ಬಳಕೆಗೆ ತರಬೇತಿ ನೀಡುವ ಸಮಾಜ ಎಂತಹುದು ? ಆಡಳಿತ ಪರಿಭಾಷೆಗೆ ನಿಲುಕದ ಈ ಹಿಂಸಾತ್ಮಕ ಯುವ ಮನಸುಗಳಿಗೆ ಉತ್ತರದಾಯಿ ಯಾರು ? ಸಮಾಜವೋ, ಸಮುದಾಯವೋ, ಆಳ್ವಿಕೆಯೋ ಅಥವಾ ಇವರನ್ನು ನಿರ್ದೇಶಿಸುವ ಸಾಂಘಿಕ-ಸಾಂಸ್ಥಿಕ ನೆಲೆಗಳೋ ?


ಈ ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ. ಆಧುನಿಕತೆಯ ನೆರಳಲ್ಲಿ ನಾವೇ ಪೋಷಿಸಿ ಬೆಳೆಸಿರುವ ಸಮಾಜ ಇದು. ಕೆಲವೊಮ್ಮೆ ಮೌನ ವಹಿಸಿ, ಕೆಲವೆಡೆ ಉಗ್ರವಾಗಿ ಪ್ರತಿಭಟಿಸಿ, ಇನ್ನು ಕೆಲವೆಡೆ ನಿರ್ಲಕ್ಷಿಸಿ ಕೊನೆಗೆ ಈ ವಿದ್ಯಮಾನಗಳನ್ನು ʼ ಸಮಸ್ಯೆ ʼ ಗಳನ್ನಾಗಿ ಕಾಣುವ ಮೂಲಕ ನಾಗರಿಕ ಸಮಾಜ ನೈತಿಕವಾಗಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದೆ. ಈ ನೈತಿಕ ಅವನತಿ ಮತ್ತು ಸಾಂಸ್ಕೃತಿಕ ಅಧಃಪತನವನ್ನು ತಡೆಗಟ್ಟುವ ದೊಡ್ಡ ಜವಾಬ್ದಾರಿ ನೈಜ ಸೆಕ್ಯುಲರ್‌ ಸಮಾಜದ ಮೇಲಿದೆ. ಈ ಸಮಾಜವನ್ನು ಪ್ರತಿನಿಧಿಸಬೇಕಾದ ಸಾಹಿತ್ಯಕ ವಲಯ, ಬೌದ್ಧಿಕ ನೆಲೆಗಳು ತಮ್ಮ ಜವಾಬ್ದಾರಿಯನ್ನರಿತು, ಯುವ ಸಮೂಹವನ್ನು ಸರಿದಾರಿಯಲ್ಲಿ ಕರೆದೊಯ್ಯುವ ಸಂಕಲ್ಪ ಮಾಡಬೇಕಿದೆ. ಇಲ್ಲವಾದರೆ ವರ್ತಮಾನ ನಮ್ಮನ್ನು ತುಚ್ಛವಾಗಿ ಕಾಣುತ್ತದೆ. ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ಭವಿಷ್ಯದಲ್ಲಿ ನಮ್ಮ ಗುರುತುಗಳೇ ಅಳಿಸಿಹೋಗುತ್ತವೆ. ಈ ಎಚ್ಚರ ನಮ್ಮಲ್ಲಿದ್ದರೆ ಸಾಕು.
-೦-೦-೦-

Previous Post

ಪೆನ್ ಡ್ರೈವ್ ಹಂಚಿದ್ದೇ ಆ ಜೆಡಿಎಸ್ ಶಾಸಕ ! ಎ.ಮಂಜು ವಿರುದ್ಧ ಬಾಂಬ್ ಸಿಡಿಸಿದ ನವೀನ್ ಗೌಡ !

Next Post

ಭರ್ಜರಿ ಗೆಲುವು ಸಾಧಿಸಿದ ಚೆನ್ನೈ; ಪ್ಲೇ ಆಫ್ ಹತ್ತಿರ

Related Posts

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 
Top Story

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

by Chetan
July 4, 2025
0

ಏಪ್ರಿಲ್ 26 ರಂದು ಬೆಳಗಾವಿಯ (Belagum) ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯರಿಂದ (Cm siddaramaiah) ಸಾರ್ವಜನಿಕವಾಗಿ ಅವಮಾನಕ್ಕೆ ಒಳಗಾಗಿದ್ದ ASP ನಾರಾಯಣ ಬರಮನಿ (Narayana bharamani) ಈ ಘಟನೆಯಿಂದ...

Read moreDetails
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025
Next Post
ಭರ್ಜರಿ ಗೆಲುವು ಸಾಧಿಸಿದ ಚೆನ್ನೈ; ಪ್ಲೇ ಆಫ್ ಹತ್ತಿರ

ಭರ್ಜರಿ ಗೆಲುವು ಸಾಧಿಸಿದ ಚೆನ್ನೈ; ಪ್ಲೇ ಆಫ್ ಹತ್ತಿರ

Please login to join discussion

Recent News

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 
Top Story

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

by Chetan
July 4, 2025
ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

July 4, 2025
ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada