ನಾಲ್ಕು ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿಯು ಸಂತ್ರಸ್ತ ಮಗುವನ್ನು ಕೊಲ್ಲದೇ ಬಿಟ್ಟಿದ್ದ ಎನ್ನುವುದನ್ನು ಗಮನಿಸಿ ಮಧ್ಯಪ್ರದೇಶ ಹೈಕೋರ್ಟ್ ಆತನಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಜೈಲುಶಿಕ್ಷೆಗೆ ತಗ್ಗಿಸಿದೆ ಎಂದು ವರದಿಯಾಗಿದೆ.
ಆತನ ಅಪರಾಧ ರಾಕ್ಷಸೀಯವಾಗಿದ್ದರೂ,ಆತ ಬಾಲಕಿಯನ್ನು ಜೀವಂತ ಬಿಡುವಷ್ಟು ’ಕರುಣೆ ’ ಹೊಂದಿದ್ದ, ಹೀಗಾಗಿ ಆತನ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಸುಬೋಧ ಅಭಯಂಕರ್ ಮತ್ತು ಎಸ್.ಕೆ.ಸಿಂಗ್ ಅವರ ಪೀಠವು ಹೇಳಿದೆ.
ತನ್ನನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ ಎಂದು ವಾದಿಸಿದ್ದ ಆರೋಪಿಯು, ಪ್ರಾಸಿಕ್ಯೂಷನ್ ಫೋರೆನ್ಸಿಕ್ ವರದಿಯನ್ನು ಮಂಡಿಸಿರಲಿಲ್ಲ ಹಾಗು ತಾನು ಈಗಾಗಲೇ ಕೆಲ ಸಮಯವನ್ನು ಜೈಲಿನಲ್ಲಿ ಕಳೆದಿರುವುದರಿಂದ ತನ್ನ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ವಾದಿಸಿದ್ದ.

ಫೊರೆನ್ಸಿಕ್ ವರದಿ ಸಲ್ಲಿಸದ್ದಕ್ಕಾಗಿ ಪೊಲೀಸರ ನಿರ್ಲಕ್ಷವನ್ನು ಪೀಠವು ಬೆಟ್ಟು ಮಾಡಿತಾದರೂ, ವರದಿ ಇಲ್ಲವೆಂಬ ಮಾತ್ರಕ್ಕೆ ನ್ಯಾಯಾಲಯವು ದಾಖಲೆಯಲ್ಲಿರುವ ಇತರ ಸಾಕ್ಷ್ಯಗಳನ್ನು ಪರಶೀಲಿಸಲು ಅಡ್ಡಿಯಾಗುವುದಿಲ್ಲ. ಈ ಪ್ರಕರಣದಲ್ಲಿಯೂ ಸಾಕ್ಷಿಗಳ ಹೇಳಿಕೆ ಮತ್ತು ವೈದ್ಯಕೀಯ ತಪಾಸಣೆ ವರದಿ ಆರೋಪಿಯು ಘೋರ ಅಪರಾಧವೆಸಗಿದ್ದಾನೆ ಎನ್ನುವುದನ್ನು ಸಾಬೀತುಗೊಳಿಸಿವೆ ಎಂದು ಸ್ಪಷ್ಟಪಡಿಸಿದೆ.
ಆ ವ್ಯಕ್ತಿ ಸಂತ್ರಸ್ತ ಹುಡುಗಿಯ ಕುಟುಂಬದ ಗುಡಿಸಲಿನ ಬಳಿ ಟೆಂಟ್‌ನಲ್ಲಿ ವಾಸಿಸುತ್ತಿದ್ದನು, ಅವರೆಲ್ಲರೂ ಕೂಲಿ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಯು ಒಂದು ರುಪಾಯಿ ನೀಡುವ ಆಮಿಷ ನೀಡಿ ಬಾಲಕಿಯನ್ನು ಕರೆದು ಅತ್ಯಾಚಾರ ಎಸಗಿದ್ದ. ಆ ವ್ಯಕ್ತಿ ಅತ್ಯಾಚಾರ ನಡೆಸುತ್ತಿರುವುದನ್ನು ಬಾಲಕಿಯ ಅಜ್ಜಿ ಕಂಡಿದ್ದಾರೆ. ಆಕೆಯ ಸಾಕ್ಷ್ಯ ಮತ್ತು ವೈದ್ಯಕೀಯ ಪುರಾವೆಗಳು ಹುಡುಗಿಯನ್ನು ನಿಜವಾಗಿಯೂ ಅತ್ಯಾಚಾರವೆಸಗಿದೆ ಎಂದು ಸಾಬೀತುಪಡಿಸಿತು.