ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ನಿನ್ನೆಯಷ್ಟೇ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ರುದ್ರೇಶ್‌ಗೆ ಟಿಕೆಟ್ ಕೈತಪ್ಪಿರುವ ಬೆನ್ನಲ್ಲೇ, ಇಂದು ಅವರು ಸುದ್ದಿಗೋಷ್ಠಿ ನಡೆಸಿದರು. ಮಾಧ್ಯಮದವರೊಂದಿಗೆ ಮಾತ್ನಾಡಿದ ರುದೇಶ್, ವಿ.ಸೋಮಣ್ಣ ಚುನಾವಣೆಯಲ್ಲಿ ಸ್ಪರ್ಧೆಸುತ್ತಿರೋದನ್ನ ರುದ್ರೇಶ್ ನೇರವಾಗಿ ಖಂಡಿಸಿದರು.

ಸೋಮಣ್ಣ ನವರ ಆಯ್ಕೆಯನ್ನ ಮರುಪರಿಶೀಲಿಸಬೇಕು ಅಂತ ಬಿಎಸ್ ಯಡಿಯೂರಪ್ಪನವರ ಆಪ್ತ ಎಂ. ರುದ್ರೇಶ್ ಹೇಳಿದರು. ಚಾಮರಾಜನಗರ ಮತ್ತು ವರುಣಾ ಕ್ಷೇತ್ರಕ್ಕೆ ಸೋಮಣ್ಣ ಅವರನ್ನ ಅಭ್ಯರ್ಥಿಯಾಗಿ ಪಕ್ಷ ಕಣಕ್ಕಿಳಿಸಿದೆ. ಈ ನಿರ್ಧಾರದ ಹಿಂದೆ ಕೆಲವು ಅನುಮಾನಗಳಿವೆ. ವಿ.ಸೋಮಣ್ಣ ಆಯ್ಕೆ ನೋವು ತರಿಸಿದೆ. ಸೋಮಣ್ಣ ಅವರ ವರ್ತನೆ ಕುರಿತು ಹೈಕಮಾಂಡ್ ಗಮನಕ್ಕೆ ತರುತ್ತೇನೆ.

ಬಿಜೆಪಿ ಬಿಟ್ಟು ಒಂದು ಕಾಲು ಹೊರಗಿಟ್ಟು ಬ್ಲಾಕ್ ಮೇಲ್ ತಂತ್ರ ಅನುಸರಿಸಿದ್ದರು. ರಾಮನಗರ ಜಿಲ್ಲೆಯಲ್ಲೂ ಕೂಡ ಪಕ್ಷ ಸಂಘಟನೆಗೆ ಕೈ ಜೋಡಿಸಿಲ್ಲ. ಆದರೂ ನಮ್ಮ ನಾಯಕ ಅಂತ ತಿಳಿದು ಕೆಲಸ ಮಾಡ್ತಿದ್ದೇವೆ. ಸೋಮಣ್ಣನವರಿಂದ ಪಕ್ಷ ಕಟ್ಟಲು ಯಾವುದೇ ಕೆಲಸ ಆಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ. ಕಳೆದ ಬಾರಿ ಚಾಮರಾಜನಗರದಲ್ಲಿ ಬಿಜೆಪಿಯನ್ನ ಸೋಲಿಸಲು ಸೋಮಣ್ಣ ಪ್ರಯತ್ನ ಮಾಡಿದ್ದರು. ಇಂತವರು ಗೆದ್ದು ಬಿಜೆಪಿಯಲ್ಲಿ ಉಳಿಯುತ್ತಾರೆ ಅನ್ನೋದು ಅನುಮಾನ.

ಸಿದ್ದರಾಮಯ್ಯ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಸೇರ್ತಾರೆ ಅನ್ನೋ ಅನುಮಾನ ಕಾಡ್ತಿದೆ. ಪಕ್ಷ ಕಟ್ಟಿದ ಮಹಾನ್ ವ್ಯಕ್ತಿ ಯಡಿಯೂರಪ್ಪನವರ ಕುರಿತು ಏಕವಚನದಲ್ಲಿ ಮಾತಾಡಿದ್ದಾರೆ. ಮುಂದೆ ಇಂತದಕ್ಕೆಲ್ಲ ಕಡಿವಾಣ ಹಾಕ್ಬೇಕು. ಸೋಮಣ್ಣ ಲಿಂಗಾಯತ ನಾಯಕರನ್ನ ತುಳಿದುಕೊಂಡು ಬಂದಿದ್ದಾರೆ. ಬೆಂಕಿಮಹದೇವಪ್ಪ, ಗುರುಸ್ವಾಮಿ, ಮಲ್ಲಿಕಾರ್ಜುನಪ್ಪ ಹೀಗೆ ಈಗ ನನ್ನ ತಲೆ ಮೇಲೆ ಕಾಲಿಡೋಕೆ ಬಂದಿದ್ದಾರೆ.

ಐದಾರು ತಿಂಗಳ ಹಿಂದೆ ಇಲ್ಲಿ ಪಕ್ಷ ಸಂಘಟಿಸಲು ನನ್ನ ಇಲ್ಲಿಗೆ ವರಿಷ್ಠರು ಕಳಿಸಿದ್ದಾರೆ. ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಕುರಿತು ಹಗುರವಾಗಿ ಮಾತಾಡಿದ್ದಾರೆ. ಇದೆಲ್ಲ ರೆಕಾರ್ಡ್ ಗಳು ನನ್ನ ಬಳಿ ಇದೆ. ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡ್ತಿನಿ. ವರುಣಾದಲ್ಲಿ ಅವರು ನಾಮಪತ್ರ ಮಾತ್ರ ಸಲ್ಲಿಸುತ್ತಾರೆ. ಚಾಮರಾಜನಗರದಲ್ಲಿ ಊಟ ತಯಾರಿದೆ, ಅದನ್ನ ತಿನ್ನುವುದಕ್ಕೆ ಮಾತ್ರ ಬರ್ತಿದಾರೆ ಅಂತ ಎಂ. ರುದೇಶ್ ಸೋಮಣ್ಣ ವಿರುದ್ಧ ಕಿಡಿಕಾರಿದರು.









