ಬಾಗಲಕೋಟೆ: ಮಹಿಳೆಯು ಮನೆಯ ಬಾಗಿಲು ತೆರೆಯದಿರುವ ಹಿನ್ನೆಲೆಯಲ್ಲಿ ಕೋಪಗೊಂಡ ಪ್ರಿಯಕರ ಆಸಿಡ್ ಎರಚಿರುವ ಘಟನೆ ನಡೆದಿದೆ.
ಬಾಗಲಕೋಟೆ(Bagalakote) ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಮೌನೇಶ್ ಪತ್ತಾರ ಎಂಬ ವ್ಯಕ್ತಿಯೇ ಆಸಿಡ್ ಎರಚಿದ ಕಿರಾತಕ. ಘಟನೆಯಲ್ಲಿ ಲಕ್ಷ್ಮಿ ಬಡಿಗೇರ ಎಂಬ ಮಹಿಳೆಯ ಎಡಗಣ್ಣು ಮತ್ತು ಮುಖದ ಮೇಲೆ ಗಾಯವಾಗಿದೆ. ಜೊತೆಗೆ ಆಕೆಯ ಎಂಟು ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಆಸಿಡ್ ತಗುಲಿದೆ. ಸದ್ಯ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಹಾಗೂ ಮೌನೇಶ್ ಇಬ್ಬರೂ ವಿಜಯಪುರ ಜಿಲ್ಲೆಯವರಾಗಿದ್ದರು. ಮೌನೇಶ್ ಮೂರ್ತಿ ತಯಾರಿಕೆ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಬೇರೆ ಮದುವೆಯಾಗಿದ್ದರೂ ಲೀವಿಂಗ್ ಟುಗೆದರ್ ನಲ್ಲಿದ್ದರು. ಆದರೆ, ಮಾನೇಶ್ ಸಂಶಯ ಪಡುತ್ತಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಜಗಳವಾಗಿದ್ದರಿಂದಾಗಿ ಮಹಿಳೆ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಮೌನೇಶ್ ಸಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.