ಇಂಧನ ಬೆಲೆ ಏರಿಕೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘ ನಿರ್ಧರಿಸಿದೆ. ರಾಜ್ಯಾದ್ಯಂತ ಲಾರಿ ಮುಷ್ಕರದ ಬಗ್ಗೆ ಲಾರಿ ಮಾಲೀಕರ ಸಂಘ ಅಕ್ಟೋಬರ್ 23ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಅಕ್ಟೋಬರ್ 23ರ ರೊಳಗೆ ರಾಜ್ಯ ಸರ್ಕಾರ ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡದಿದ್ದರೆ ಲಾರಿ ಮುಷ್ಕರ ನಡೆಸುವುದಾಗಿ ಲಾರಿ ಮಾಲಿಕರ ಸಂಘ ತಿಳಿಸಿದೆ. ಒಂದು ವೇಳೆ ವ್ಯಾಟ್ ಕಡಿಮೆ ಮಾಡದಿದ್ದರೆ ಸರಕು ಸಾಗಾಣಿಕೆಯ ವಾಹನಗಳು ರಾಜ್ಯಾದ್ಯಂತ ಓಡಾಟ ನಿಲ್ಲಿಸುತ್ತದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರಕ್ಕೆ ಮುಂದಿನ ವಾರದ ವರೆಗೆ ಲಾರಿ ಮಾಲೀಕರ ಸಂಘ ಅಂತಿಮ ಗಡುವು ನೀಡಿದೆ. ಕಳೆದ ಒಂದು ವರ್ಷದಲ್ಲಿ ಡೀಸೆಲ್ 26 ರೂ. ಹೆಚ್ಚಳವಾಗಿದೆ. ಇದು ಲಾರಿ ಮಾಲಕರ ಅಸಮಾಧಾನಕ್ಕೆ ಗುರಿಯಾಗಿದೆ.
ಒಂದು ವೇಳೆ ಲಾರಿ ಮುಷ್ಕರವಾದರೆ ಜನಜೀವನ ಅಸ್ತವ್ಯಸ್ತವಾಗುವುದು ಖಚಿತ. ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಹೆಚ್ಚಾಗಿರುವುದರಿಂದ, ಗೂಡ್ಸ್ ಲಾರಿಗಳು ಕೂಡಾ ಓಡಾಟ ಸ್ಥಗಿತಗೊಳಿಸಿದರೆ ಎಲ್ಲ ರೀತಿಯ ವಸ್ತುಗಳ ಸರಬರಾಜಿಗೆ ಹೊಡೆತ ಬೀಳಲಿದೆ, ಇದು ಅನಿವಾರ್ಯವಾಗಿ ವಸ್ತುಗಳ ಕೊರತೆ ಹಾಗೂ ಬೇಡಿಕೆ ಹೆಚ್ಚಾಗಲಿದೆ. ಇದರಿಂದಾಗಿ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ.