ಲೋಕಸಭಾ ಚುನಾವಣೆ ಕೊನೆಯ ಹಂತಕ್ಕೆ ಬಂದು ನಿಂತಿದೆ. ಏಪ್ರಿಲ್ 19ರಿಂದ ದೇಶದಲ್ಲಿ ಚುನಾವಣೆ ಆರಂಭವಾಗಿತ್ತು. 7 ಹಂತಗಳಲ್ಲಿ ಮತದಾನ ಪ್ರಕ್ರಿಯೆಗೆ ಚುನಾವಣಾ ಆಯೋಗ ಮುಂದಾಗಿತ್ತು. ಈಗಾಗಲೇ 6 ಹಂತಗಳಲ್ಲಿ ಮತದಾನ ಮುಗಿದಿದ್ದು, ಇಂದು ಸಂಜೆ 7ನೇ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
![](https://pratidhvani.com/wp-content/uploads/2024/05/images-92.jpg)
ಏಳನೇ ಹಾಗೂ ಕೊನೆಯ ಹಂತದ ಮತದಾನ ಜೂನ್ 1 ರಂದು ನಡೆಯಲಿದೆ. ಹೀಗಾಗಿ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಕೊನೆಯ ಹಂತದಲ್ಲಿ 8 ರಾಜ್ಯಗಳ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಉತ್ತರ ಪ್ರದೇಶದ 13, ಪಂಜಾಬ್ ನ 13, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್ ನ 3 ಮತ್ತು ಚಂಡೀಗಢದ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.
![](https://pratidhvani.com/wp-content/uploads/2024/05/narendra-modi-16-1024x576.webp)
ಪ್ರಧಾನಿ ನರೇಂದ್ರ ಮೋದಿ ಕೂಡ ಇಂದು ತಮ್ಮ ಮತಬೇಟೆಗೆ ಅಂತ್ಯ ಹಾಡಲಿದ್ದಾರೆ. ಪಂಜಾಬ್ ನ ಹೋಶಿಯಾರ್ ಪುರದಲ್ಲಿ ತಮ್ಮ ಕೊನೆಯ ಸಾರ್ವಜನಿಕ ಸಭೆ ಮುಗಿಸಲಿದ್ದಾರೆ. ರಾಹುಲ್ ಗಾಂಧಿ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶಿಮ್ಲಾ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಸುಲ್ತಾನಪುರಿ ಪರವಾಗಿ ಕೊನೆಯ ಭಾಷಣ ಮಾಡಲಿದ್ದಾರೆ.
![](https://pratidhvani.com/wp-content/uploads/2024/05/rahul-gandhi-pti1-1681645429-1024x576.jpg)
ಕೊನೆಯ ಹಂತದ ಮತದಾನದಲ್ಲಿ 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕಕ್ಕೆ ತೆರಳಲಿದ್ದಾರೆ. ಅಲ್ಲಿ ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ.