ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆ ಬರೆಯುತ್ತಿವೆ. ಸಾವಿನ ಸಂಖ್ಯೆ ಕೂಡ ಏರುಗತಿಯಲ್ಲಿದೆ.
ಸೋಂಕು ತಡೆ, ನಿಯಂತ್ರಣ, ಸೋಂಕಿತರ ಚಿಕಿತ್ಸೆ, ಲಸಿಕೆ ನೀಡಿಕೆ ಸೇರಿದಂತೆ ಕೋವಿಡ್ ಸಂಬಂಧಿಸಿದ ಯಾವುದೇ ವಿಷಯದಲ್ಲಿಯೂ ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರ ಯಾವುದೇ ಪಾಠ ಕಲಿತಂತಿಲ್ಲ. ಭವಿಷ್ಯದ ಪರಿಸ್ಥಿತಿ ಎದುರಿಸಲು, ಕೋವಿಡ್ ಎರಡನೇ ಅಲೆ ನಿಭಾಯಿಸಲು ಸಜ್ಜಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ, ದೇಶ-ವಿದೇಶದ ವಿವಿಧ ಆರೋಗ್ಯ ಮತ್ತು ಸಾಂಕ್ರಾಮಿಕ ತಜ್ಞರ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರ, ಅಂತಹ ಯಾವ ತಯಾರಿಗಳನ್ನು ಮಾಡಿಕೊಂಡಿಲ್ಲ. ಹಾಗಾಗಿ ಇದೀಗ, ಸೋಂಕಿನ ಪ್ರಮಾಣ ಕೈಮೀರಿ ಹೋಗುತ್ತಿರುವುದರಿಂದ ದಿಕ್ಕೆಟ್ಟಿರುವ ಆಡಳಿತಗಳು, ಏನು ಮಾಡಬೇಕು ಎಂದು ತೋಚದೆ, ಹಿಂದಿನ ವರ್ಷದ ಕರೋನಾ ಮೊದಲ ಅಲೆಯ ಸಂದರ್ಭದಲ್ಲಿ ವಿವೇಚನಾರಹಿತವಾಗಿ ಜಾರಿಗೆ ತಂದ ಕ್ರಮಗಳನ್ನೇ ಮತ್ತೆ ಒಂದೊಂದಾಗಿ ಜಾರಿಗೆ ತರತೊಡಗಿವೆ.
ಹಾಗಾಗಿ ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ್, ದೆಹಲಿ, ಉತ್ತರಪ್ರದೇಶ ಸೇರಿದಂತೆ ಪ್ರಕರಣಗಳು ಹೆಚ್ಚು ವ್ಯಾಪಕವಾಗಿರುವ ರಾಜ್ಯಗಳಲ್ಲಿ ಸಂಪೂರ್ಣ ಅಥವಾ ಭಾಗಶಃ (ನಗರ ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ) ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇತರೆಡೆ ಕೂಡ ಹಂತಹಂತವಾಗಿ ಜನಸಂಚಾರ ನಿರ್ಬಂಧ, ದೈಹಿಕ ಅಂತರ, ಸಭೆ ಸಮಾರಂಭ ನಿಷೇಧ, ಸಾರ್ವಜನಿಕ ಸಾರಿಗೆ ಸ್ಥಗಿತ, ಮತ್ತು ಅಂತಿಮವಾಗಿ ಅದೇ ಆಘಾತಕಾರಿ ಲಾಕ್ ಡೌನ್ ಕೂಡ ಜಾರಿಗೊಳಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಕೂಡ ಬೇರೆ ದಾರಿ ತೋಚದೆ ಅದೇ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ. ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕೆಲವು ಸಂಪುಟ ಸಹೋದ್ಯೋಗಿಗಳೂ ಕ್ವಾರಂಟೈನ್ಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದಂತೆ, ಬಹುತೇಕ ಸರ್ಕಾರವೇ ಐಸಿಯುಗೆ ದಾಖಲಾದಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.
ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ, ದೇಶದಲ್ಲಿ ಸದ್ಯ ಸಂಪೂರ್ಣ ಲಾಕ್ ಡೌನ್ ಇಲ್ಲ ಎನ್ನುವ ಮೂಲಕ ಭಾಗಶಃ ಲಾಕ್ ಡೌನ್ ಅಥವಾ ಪ್ರದೇಶವಾರು ಲಾಕ್ ಡೌನ್ ಸಾಧ್ಯತೆಯ ಸೂಚನೆ ನೀಡಿದ್ದಾರೆ. ಅಲ್ಲದೆ, ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳು, ಕೋವಿಡ್ ನಿಯಂತ್ರಣ, ನಿರ್ವಹಣೆಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ಜನಾಕ್ರೋಶದಿಂದ ಪಾರಾಗಲು ಲಾಕ್ ಡೌನ್ ಅನ್ನೇ ಒಂದು ರಾಜಕೀಯ ಅಸ್ತ್ರವಾಗಿ ಬಳಸಿದ್ದನ್ನು ಈ ಹಿಂದೆ ಕಂಡಿದ್ದೇವೆ. ಈಗಲೂ ಅಂತಹದ್ದೇ ಕ್ರಮಗಳು ಗುಜರಾತ್, ಉತ್ತರಪ್ರದೇಶ ಮತ್ತಿತರ ಕಡೆ ಜಾರಿಗೆ ಬಂದಿದೆ. ಕರ್ನಾಟಕ ಕೂಡ ಆ ಹಾದಿಯಲ್ಲಿದೆ.
ಇಂತಹ ಸೂಕ್ಷ್ಮಗಳನ್ನು ಅರಿತಿರುವ ನಗರದ ಕಾರ್ಮಿಕರು, ದಿನಗೂಲಿಗಳು, ಸಣ್ಣಪುಟ್ಟ ವ್ಯಾಪಾರಸ್ಥರು ಮತ್ತೆ ತಮ್ಮ ಊರುಗಳತ್ತ ವಲಸೆ ಆರಂಭಿಸಿದ್ದಾರೆ. ಮುಂಬೈ, ದೆಹಲಿ, ಅಹಮದಾಬಾದ್, ಲಖನೌ ಮತ್ತಿತರ ಕಡೆ ವಲಸೆ ಕಾರ್ಮಿಕರು ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ತಮ್ಮ ಗಂಟುಮೂಟೆ ಸಹಿತ ಜಮಾಯಿಸಿದ್ದಾರೆ.
ಬೆಂಗಳೂರಿನಲ್ಲಂತೂ ಈಗಾಗಲೇ ಅರ್ಧಕ್ಕರ್ಧ ಗ್ರಾಮೀಣ ಹಿನ್ನೆಲೆಯ ಜನ ನಗರ ತೊರೆದಿದ್ದಾರೆ. ಕಳೆದ ಬಾರಿಯಂತೆ ದಿಢೀರ್ ಲಾಕ್ ಡೌನ್ ಹೇರಿ, ಏಕಾಏಕಿ ಜನ ಆತಂಕಗೊಂಡು ದಿಢೀರನೇ ರಸ್ತೆಗೆ ಬಿದ್ದಿಲ್ಲವಾದ್ದರಿಂದ ವಲಸೆಯ ದೃಶ್ಯಾವಳಿಗಳು ಕಣ್ಣಿಗೆ ಢಾಳಾಗಿ ರಾಚುತ್ತಿಲ್ಲವಷ್ಟೆ. ಆದರೆ, ನಗರಗಳಲ್ಲಿ ಜನ ಸಂಚಾರದ ವಿರಳತೆ ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ವಾಹನ ದಟ್ಟಣೆಯನ್ನು ಗಮನಿಸಿದರೆ, ವಲಸೆಯ ಪ್ರಮಾಣದ ಅಂದಾಜು ಸಿಗದೇ ಇರದು.
ಒಂದು ಕಡೆ ಪ್ರದೇಶವಾರು ನಿರ್ಬಂಧ, ಅಂಗಡಿ, ಮಾಲ್ ಬಂದ್, ಉದ್ಯಮ, ಕಾರ್ಖಾನೆ ಸ್ಥಗಿತದಂತಹ ಕ್ರಮಗಳು, ಜನ ದುಡಿಮೆ ಇಲ್ಲದೆ ಅನಿವಾರ್ಯವಾಗಿ ನಗರ ತೊರೆಯುವಂತೆ ಮಾಡಿದ್ದರೆ, ಮತ್ತೊಂದು ಕಡೆ ಕಳೆದ ಬಾರಿಯಂತೆ ದಿಢೀರ್ ಲಾಕ್ ಡೌನ್ ಹೇರಿ ಬದುಕನ್ನೇ ಕಿತ್ತುಕೊಳ್ಳಬಹುದು ಎಂದು ಆತಂಕ ಕೂಡ ಜನರನ್ನು ಚಿಂತೆಗೀಡು ಮಾಡಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಜನ ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಊರಿನ ದಾರಿ ಹಿಡಿದಿದ್ದಾರೆ.
ಈ ವಲಸೆ, ನಗರಗಳನ್ನು ನಿರ್ಜನಗೊಳಿಸಿ, ಸ್ತಬ್ಧಗೊಳಿಸಿ ಕರೋನಾ ನಿಯಂತ್ರಿಸುವ ಆಳುವ ಮಂದಿಯ ಲೆಕ್ಕಾಚಾರಗಳನ್ನು ಸಫಲಗೊಳಿಸುವುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಆಳುವ ಮಂದಿ ಮತ್ತು ಸರ್ಕಾರಗಳು ಹೀಗೆ ವಲಸೆ ಹೋಗುವವರ ಯಾವ ವಿವರವನ್ನು ದಾಖಲಿಸುವ, ಮಾಹಿತಿ ಪಡೆಯುವ ಆಸಕ್ತಿ ವಹಿಸುತ್ತಿಲ್ಲ. ವಲಸೆ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡರೆ, ಅದಕ್ಕೆ ಹಲವು ಹೊಣೆಗಾರಿಕೆಗಳು ಹೆಗಲೇರುತ್ತವೆ ಎಂಬ ಭೀತಿ ಸರ್ಕಾರಗಳ ಈ ಜಾಣಕುರುಡು ನಿಲುವಿನ ಹಿಂದಿದೆ. ಆದರೆ, ಹಾಗೆ ವಲಸೆ ಹೋದ ಮಂದಿ ನಗರಗಳನ್ನು ಕೋವಿಡ್ ಅಪಾಯದಿಂದ ಪಾರು ಮಾಡುವುದಕ್ಕಿಂತ ಹೆಚ್ಚಾಗಿ, ಕಡಿಮೆ ಸೋಂಕು ಇರುವ ಗ್ರಾಮೀಣ ಪ್ರದೇಶಗಳನ್ನು ಸೋಂಕಿನ ಅಪಾಯಕ್ಕೆ ಈಡುಮಾಡುತ್ತಾರೆ ಎಂಬ ಆತಂಕ ಕೂಡ ಇದೆ. ಕಳೆದ ವರ್ಷ ಕೂಡ ಇಂತಹದ್ದೇ ವಲಸೆಯ ಬಳಿಕವೇ ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ದಿಢೀರನೇ ಹೆಚ್ಚಳವಾಗಿದ್ದವು. ಸೂಕ್ತ ಆರೋಗ್ಯ ವ್ಯವಸ್ಥೆಗಳಿಲ್ಲದ, ಸಾರಿಗೆ ಸೌಲಭ್ಯಗಳಿಲ್ಲದ ಗ್ರಾಮೀಣ ಭಾಗದಲ್ಲಿ ಈ ಅಪಾಯ ತಂದೊಡ್ಡಬಹುದಾದ ಭೀಕರ ಪರಿಸ್ಥಿತಿಯ ಬಗ್ಗೆ ಈಗ ತಜ್ಞರು ಆತಂಕ ವ್ಯಕ್ತಪಡಿಸತೊಡಗಿದ್ಧಾರೆ.
ಮತ್ತೊಂದು ಕಡೆ, ಗ್ರಾಮೀಣ ಪ್ರದೇಶಕ್ಕೆ ಆಗುತ್ತಿರುವ ಈ ಮರು ವಲಸೆ ಕೃಷಿ ವಲಯದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಲಿದೆ. ಆ ಪೈಕಿ, ಕೃಷಿ ಕೆಲಸಕ್ಕೆ ಮಾನವ ಸಂಪನ್ಮೂಲ ಲಭ್ಯತೆ, ಬಂಡವಾಳ ಹರಿವು ಮುಂತಾದವು, ಕೂಲಿ ಸಮಸ್ಯೆ ಮತ್ತು ಹಣಕಾಸಿನ ಬಿಕ್ಕಟ್ಟಿನಲ್ಲಿ ನಲುತ್ತಿರುವ ಗ್ರಾಮೀಣ ಕೃಷಿ ವಲಯಕ್ಕೆ ಒಂದಿಷ್ಟು ಹುರುಪು ತರಬಹುದು. ಆದರೆ, ಅದೇ ಹೊತ್ತಿಗೆ ಈ ವಲಸೆ ಕೃಷಿ ಮತ್ತು ಅರಣ್ಯದ ಮೇಲೆ ಹಲವು ಒತ್ತಡಗಳನ್ನು ತರಲಿದೆ ಎಂಬುದನ್ನು ತಳ್ಳಿಹಾಕಲಾಗದು. ಆ ನಿಟ್ಟಿನಲ್ಲಿ ಮೊದಲ ಒತ್ತಡ ಬೀಳುವುದು ಕೃಷಿ ಒಳಸುರಿಗಳ ಮೇಲೆ! ಈಗಾಗಲೇ ಗೊಬ್ಬರದ ಬೆಲೆ ದುಬಾರಿಯಾಗಿದ್ದು, ದುಬಾರಿ ಬೆಲೆಗೆ ಮಾರಾಟ ಮಾಡುವ ದುರುದ್ದೇಶದಿಂದ ಕಾಳಸಂತೆ ದಾಸ್ತಾನು ಹೆಚ್ಚಾಗಿ ರಸಗೊಬ್ಬರ ಲಭ್ಯತೆಯೇ ಇಲ್ಲದಂತಾಗಿದೆ. ಹಾಗೇ ಬೀಜ, ಕೀಟನಾಶಕಗಳ ವಿಷಯದಲ್ಲೂ ಕೆಲವೇ ದಿನಗಳಲ್ಲಿ ಇಂತಹದ್ದೇ ಹಾಕಾಕಾರವಾಗುವ ಸಾಧ್ಯತೆಗಳಿವೆ.
ವಾರ್ಷಿಕ ಅಂದಾಜು ಬಿತ್ತನೆಯ ಲೆಕ್ಕಾಚಾರದಲ್ಲಿ ಈಗಾಗಲೇ ಮುಂಗಾರು ಹಂಗಾಮಿಗೆ ಬೀಜ, ಗೊಬ್ಬರ, ಕೀಟನಾಶಕ ದಾಸ್ತಾನು ಮಾಡಲಾಗಿರುತ್ತದೆ. ಈ ನಡುವೆ, ವಲಸಿಗರು ಹಳ್ಳಿಗೆ ಹೋಗಿ ಕೃಷಿ ವಿಸ್ತರಣೆ, ಬೆಳೆ ಬದಲಾವಣೆ(ಸಾಂಪ್ರದಾಯಿಕ ಬೆಳೆ ಬದಲು ಶುಂಠಿ, ತರಕಾರಿ, ಬಾಳೆ, ಅಡಿಕೆಯಂತಹ ವಾಣಿಜ್ಯ ಬೆಳೆಗೆ) ಮುಂತಾದ ಕಾರಣಗಳಿಂದಾಗಿ ಗೊಬ್ಬರ, ಬೀಜ, ಕೀಟನಾಶಕಗಳ ಜೊತೆಗೆ ವಿದ್ಯುತ್ ಬೇಡಿಕೆಯ ಮೇಲೆಯೂ ಒತ್ತಡ ಹೆಚ್ಚಲಿದೆ. ಇನ್ನು ಮಲೆನಾಡು ಭಾಗದಲ್ಲಿ ಹಣ ಮತ್ತು ಜನಬಲದ ಮೇಲೆ ಸಾಗುವಳಿ ಜಮೀನು ಅಂಚಿನ ಸರ್ಕಾರಿ ಬೀಳು ಮತ್ತು ಅರಣ್ಯ ಪ್ರದೇಶಗಳ ಒತ್ತುವರಿ ಕೂಡ ಆಗುವ ಸಾಧ್ಯತೆಗಳಿವೆ.
ವಲಸೆಯ ಈ ಪರಿಣಾಮಗಳು ಕೇವಲ ಕರೋನಾ, ಕೃಷಿಗೆ ಮಾತ್ರವಲ್ಲದೆ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ರಾಜಕಾರಣದ ಮೇಲೂ ಆಗಲಿದೆ. ಕಳೆದ ಬಾರಿಯ ಕರೋನಾ ಮೊದಲ ಅಲೆಯ ಪರಿಣಾಮವಾಗಿ ಜಾರಿಗೆ ಬಂದ್ ಲಾಕ್ ಡೌನ್ ವೇಳೆ ವಲಸೆ ಬಂದವರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ವಹಿಸಿದ ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳಿವೆ. ಬಹಳಷ್ಟು ಪಂಚಾಯ್ತಿಗಳಲ್ಲಿ ನಗರಗಳಿಂದ ವಾಪಸು ಬಂದವರೇ ಬಹುಪಾಲು ಚುನಾಯಿತರಾಗಿ ಅಧಿಕಾರ ಹಿಡಿದಿರುವ ಉದಾಹರಣೆಗಳು ಹೇರಳವಾಗಿವೆ. ಇದೇ ಪರಿಸ್ಥಿತಿ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲೂ ಪುನರಾವರ್ತನೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಹಣ ಮತ್ತು ಶಿಕ್ಷಣದ ಬಲ ಹೊಂದಿರುವ ಮರು ವಲಸಿಗರು ಹೀಗೆ ಗ್ರಾಮೀಣ ಕೃಷಿ, ರಾಜಕಾರಣ ಸೇರಿದಂತೆ ಒಟ್ಟಾರೆ ಬದುಕಿನ ಹಲವು ಸ್ಥಿತ್ಯಂತರಗಳಿಗೆ ಕಾರಣವಾಗಲಿದ್ದಾರೆ. ಹಾಗಾಗಿ ಗ್ರಾಮೀಣರು ಊರಿಗೆ ಮರಳಿ ಬರುವವರೊಂದಿಗೆ ಬರುವ ಕರೋನಾ ವೈರಸ್ ಜೊತೆಗೆ ಇಂತಹ ಸವಾಲುಗಳನ್ನು ಎದುರಿಸಲೂ ಸಜ್ಜಾಗಬೇಕಿದೆ.