ಕರೋನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದು ಸರ್ಕಾರವಾಗಿ ಪ್ರತಿ ಹಂತದಲ್ಲೂ ವಿಫಲವಾಗಿರುವ ಬಿಜೆಪಿ ಸರ್ಕಾರಕ್ಕೆ ಈಗ ಉಳಿದಿರುವುದು- ಜನರ ಬದುಕು ಬಲಿ ಕೊಟ್ಟಾದರೂ ಸರಿ- ಕಠಿಣ ಲಾಕ್ ಡೌನ್ ಹೇರಿ ಕೈಕಟ್ಟಿ ಕೂರುವುದೊಂದೇ ದಾರಿ!
ರಾಜ್ಯದಲ್ಲಿ ಈಗಾಗಲೇ ಇರುವ ಬಿಗಿ ಲಾಕ್ ಡೌನ್, ಇಂದಿನಿಂದ ಇನ್ನಷ್ಟು ಬಿಗಿಯಾಗಲಿದೆ. ಆಯಾ ಜಿಲ್ಲೆಗಳ ಕರೋನಾ ಸ್ಥಿತಿಗತಿಗೆ ಅನುಗುಣವಾಗಿ ಬಿಗಿ ಕ್ರಮಗಳ ಸ್ವರೂಪವನ್ನು ನಿರ್ಧರಿಸಲು ಜಿಲ್ಲಾಡಳಿತಗಳಿಗೆ ಅಧಿಕಾರ ನೀಡಲಾಗಿದೆ.
ಹಾಗಾಗಿ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದಲೇ ಜಾರಿಯಲ್ಲಿದ್ದ ಕಠಿಣ ಲಾಕ್ ಡೌನ್ ಮತ್ತು ಸಂಪೂರ್ಣ ಜನಸಂಚಾರ ನಿಷೇಧ ಇನ್ನೂ ಒಂದು ವಾರ ಮುಂದುವರಿಯಲಿದೆ. ಖರೀದಿ ಮತ್ತು ಜನಸಂಚಾರಕ್ಕೆ ಕೆಲ ವಿನಾಯ್ತಿ ನೀಡಲಾಗಿದ್ದ ಜಿಲ್ಲೆಗಳಲ್ಲೂ ಬಹುತೇಕ ಇಂದಿನಿಂದ ಜೂನ್ 7ರವರೆಗೆ ಹಾಲು, ಔಷಧ ಹೊರತುಪಡಿಸಿ ಉಳಿದೆಲ್ಲಾ ಸರಕು ಮತ್ತು ಸೇವೆಗಳು ಬಂದ್ ಆಗಲಿವೆ ಎಂದು ಹೇಳಲಾಗಿದೆ.
ಸೋಮವಾರ ಬೆಳಗ್ಗೆ 10ಗಂಟೆಯಿಂದ ಸಂಪೂರ್ಣ ಬಿಗಿ ಲಾಕ್ ಡೌನ್ ಜಾರಿಯ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಮತ್ತು ಸೋಮವಾರ ಬೆಳಗ್ಗೆ ಕೆಲ ಸಮಯ ಅಗತ್ಯ ವಸ್ತು ಖರೀದಿಗೆ ಕೆಲ ಕಾಲ ಅವಕಾಶ ನೀಡಲಾಗಿತ್ತು. ಶಿವಮೊಗ್ಗ ಸೇರಿದಂತೆ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿ ಮೇ 28ರಿಂದಲೇ ಕೆಲವು ತಾಲೂಕು ಮತ್ತು ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕರ್ಫ್ಯೂ ಮಾದರಿಯ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಮೇ.31ರಿಂದ ಜೂನ್ 7ವರೆಗೆ ಸಂಪೂರ್ಣ ಕರ್ಫ್ಯೂ(ಅಧಿಕೃತವಾಗಿ ಕರ್ಫ್ಯೂ ಪದ ಬಳಸಿಲ್ಲದಿದ್ದರೂ ವಾಸ್ತವವಾಗಿ ಕಟ್ಟುನಿಟ್ಟಿನ ಕ್ರಮ ಯಥಾವತ್ತು ಇದೆ) ಜಾರಿಗೊಳಿಸಲಾಗಿದೆ. ಹಾಗಾಗಿ ಜಿಲ್ಲೆಯ ಸಾಗರ ತಾಲೂಕು ಸೇರಿದಂತೆ ಕೆಲವು ಕಡೆ ಈಗಾಗಲೇ ಈಗಾಗಲೇ ವಾರದಿಂದ ಜಾರಿಯಲ್ಲಿರುವ ಕರ್ಫ್ಯೂ ಜೊತೆಗೆ ಇನ್ನೊಂದು ವಾರವೂ ಅದೇ ಸ್ಥಿತಿ ಮುಂದುವರಿಯಲಿದೆ.
ಮೈಸೂರಿನಲ್ಲಿ ವಾರದಲ್ಲಿ ಎರಡು ದಿನ ಮಧ್ಯಾಹ್ನ 12 ಗಂಟೆಯವರೆಗೆ ಖರೀದಿಗೆ ಅವಕಾಶ ನೀಡಲಾಗಿದ್ದು, ಉಳಿದಂತೆ ತರಕಾರಿ ಮಾರಾಟಕ್ಕೂ ಅವಕಾಶವಿಲ್ಲ. ಹಾಲು ಮತ್ತು ಔಷಧಿ ಮಾರಾಟ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ಹಾಗೇ ಮಂಡ್ಯದಲ್ಲಿ ಸೋಮವಾರದಿಂದ ನಾಲ್ಕು ದಿನ ಕಠಿಣ ಲಾಕ್ ಡೌನ್ ಜಾರಿಮಾಡಲಾಗಿದ್ದು, ಹಾಲು ಔಷಧಿ ಹೊರತುಪಡಿಸಿ ಉಳಿದೆಲ್ಲಾ ಮಾರಾಟ- ಖರೀದಿ ನಿಷೇಧಿಸಲಾಗಿದೆ. ಬಳ್ಳಾರಿಯಲ್ಲಿ ಸೋಮವಾರ ಮತ್ತು ಮಂಗಳವಾರ ಮಧ್ಯಾಹ್ನದ ವರೆಗೆ ಖರೀದಿಗೆ ಅವಕಾಶ ನೀಡಲಾಗಿದ್ದು, ಆ ಬಳಿಕ ಜೂನ್ 7ರವರೆಗೆ ಸಂಪೂರ್ಣ ಜನಜೀವನ ಸ್ತಬ್ಧಗೊಳ್ಳಲಿದೆ. ಹಾಸನದಲ್ಲಿ ಜೂನ್7ರವರೆಗೆ ಕಠಿಣ ಲಾಕ್ ಡೌನ್ ಹೇರಿದ್ದರೂ, ದಿನ ಬಿಟ್ಟು ದಿನ ಬೆಳಗ್ಗೆ 6ರಿಂದ 10ರವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಹಾವೇರಿ, ಮಡಿಕೇರಿಯಲ್ಲಿ ಕೂಡ ಇದೇ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಜೂನ್ 3ರಿಂದ ಸಂಪೂರ್ಣ ಲಾಕ್ ಡೌನ್, ಧಾರವಾಡದಲ್ಲಿ ಜೂನ್ 7ರವರೆಗೆ ಕಠಿಣ ಲಾಕ್ ಡೌನ್ ಮತ್ತು ನಿತ್ಯ ಬೆಳಗ್ಗೆ 6ರಿಂದ 8ರವರೆಗೆ ಖರೀದಿಗೆ ಅವಕಾಶ. ದಾವಣಗೆರೆಯಲ್ಲಿ ಸೋಮವಾರ ಮತ್ತು ಜೂನ್ 3ರಂದು ಬೆಳಗ್ಗೆ 12ರವರೆಗೆ ಖರೀದಿಗೆ ಅವಕಾಶ, ಉಳಿದಂತೆ ಜೂನ್ 7ರವರೆಗೆ ಕಠಿಣ ಲಾಕ್ ಡೌನ್ ಜಾರಿಯಾಗಿದೆ.
ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಜೂನ್ 7ರವರೆಗೆ ರಾಜ್ಯ ಸರ್ಕಾರದ ಆದೇಶದಂತೆ ಕಠಿಣ ಲಾಕ್ ಡೌನ್ ಮತ್ತು ಪ್ರತಿನಿತ್ಯ ಬೆಳಗ್ಗೆ 10ರವರೆಗೆ ಖರೀದಿಗೆ ಅವಕಾಶ ಮುಂದುವರಿಯಲಿದೆ.
ಈ ನಡುವೆ, ಒಂದು ಕಡೆ ಕಠಿಣ ಲಾಕ್ ಡೌನ್ ಜಾರಿಗೊಳಿಸುವುದಾಗಿ ಹೇಳಿ, ದಿನದ ಕೆಲ ಸಮಯದ ಮುಕ್ತ ಖರೀದಿಗೆ ಅವಕಾಶ ನೀಡಿದ ಜಿಲ್ಲಾಡಳಿತಗಳು, ಅಂತಹ ನಿರ್ಧಾರವನ್ನು ಕನಿಷ್ಟು ನಾಲ್ಕಾರು ದಿನಗಳ ಮುಂಚಿತವಾಗಿ ಪ್ರಕಟಿಸುವ ಬದಲು, ಕೊನೇ ಕ್ಷಣದಲ್ಲಿ ಘೋಷಿಸಿದ ಪರಿಣಾಮವಾಗಿ, ಕೊನೇ ಕ್ಷಣದಲ್ಲಿ ಜನ ಮುಗಿಬಿದ್ದು ಖರೀದಿಗೆ ನುಗ್ಗಿದ್ದರಿಂದ ಬಹುತೇಕ ಕಡೆ ಭಾನುವಾರ ಮತ್ತು ಸೋಮವಾರ ಜನಜಾತ್ರೆಗಳೇ ನಡೆದ ವರದಿಗಳಾಗಿವೆ. ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ ಸೇರಿದಂತೆ ಹಲವು ಕಡೆ ಹೀಗೆ ಜನ ಏಕಾಏಕಿ ವಾರಕ್ಕಾಗುಷ್ಟು ದಿನಸಿ, ತರಕಾರಿ, ಹಣ್ಣು ಹಂಪಲು ಖರೀದಿಗೆ ಮುಗಿಬಿದ್ದಿದ್ದು, ಕರೋನಾ ಸೋಂಕು ತಡೆಯ ಮೂಲ ಆಶಯವನ್ನೇ ಅಣಕಿಸುವಂತಿತ್ತು.
ಇನ್ನೂ ಲಾಕ್ ಡೌನ್ ಆರಂಭದಿಂದಲೂ ಸರ್ಕಾರ ಕೃಷಿ ಚಟುವಟಿಕೆಗಳಿಗೆ, ಕೃಷಿ ಉತ್ಪನ್ನ ಮತ್ತು ಪರಿಕರ ಮಾರಾಟಕ್ಕೆ ಬೆಳಗ್ಗೆ 10ರವರೆಗೆ ಅವಕಾಶವಿದೆ ಎನ್ನುತ್ತಲೇ ಇದ್ದರೂ, ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಕ್ರಮಗಳಿಂದ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ವಿನಾಯ್ತಿ ನೀಡಲಾಗಿಲ್ಲ. ಇದೀಗ ಲಾಕ್ ಡೌನ್ ಬಿಗಿಗೊಳಿಸಿರುವುದರಿಂದ ನೇರವಾಗಿ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಹಣ್ಣು ತರಕಾರಿಗಳ ದೈನಂದಿನ ಮಾರಾಟಕ್ಕೂ ಅವಕಾಶವಿಲ್ಲದಂತಾಗಿದೆ. ಜೊತೆಗೆ ಮುಂಗಾರು ಹಂಗಾಮಿನ ಬಿತ್ತನೆ ಮತ್ತು ಕೃಷಿ ಚಟುವಟಿಕೆಗಳಿಗೆ ಕೂಡ ಭಾರೀ ಅಡ್ಡಿಯಾಗಿದ್ದು, ಬೀಜ, ಗೊಬ್ಬರ, ಪೈಪ್, ಮೋಟಾರು ಮುಂತಾದ ನೀರಾವರಿ ಸಲಕರಣೆಗಳ ಖರೀದಿ ಸಾಧ್ಯವಿಲ್ಲದೆ ರೈತರು ಕೈಕಟ್ಟಿ ಕೂರುವಂತಾಗಿದೆ. ಜೊತೆಗೆ ಸಹಕಾರ ಸಂಘ ಮತ್ತು ಕೃಷಿ ಸಂಬಂಧಿತ ಹಣಕಾಸು ಚಟುವಟಿಕೆಗಳಿಗೂ ಲಾಕ್ ಡೌನ್ ಅನ್ವಯಮಾಡಿರುವುದರಿಂದ ಹಲವು ಕಡೆ ಕೃಷಿ ಸಾಲ ಮಂಜೂರಾತಿ ಮತ್ತು ಸಾಲ ಪಡೆದು ಚಟುವಟಿಕೆ ನಿರ್ವಹಿಸುವುದು ಕೂಡ ಕಷ್ಟಸಾಧ್ಯವಾಗಿದೆ.
ಈ ನಡುವೆ, ಸರ್ಕಾರ ಲಾಕ್ ಡೌನ್ ನಿಂದ ದುಡಿಮೆ ಕಳೆದುಕೊಂಡು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಕಂಗಾಲಾಗಿರುವ ಬಡ ಕುಟುಂಬಗಳಿಗೆ ಈವರೆಗೆ ಯಾವುದೇ ರೀತಿಯ ನೇರ ಪರಿಹಾರ ಕ್ರಮಗಳನ್ನು ಪ್ರಕಟಿಸಿಲ್ಲ. ಬಡವರಿಗೆ ಕನಿಷ್ಟ ಪ್ರಮಾಣದ ದಿನಸಿ, ಹಾಲು, ತರಕಾರಿ ಪೂರೈಕೆಯ ತನ್ನ ಹೊಣೆಗಾರಿಕೆಯನ್ನು ಕೈಚೆಲ್ಲಿರುವ ರಾಜ್ಯ ಬಿಜೆಪಿ ಸರ್ಕಾರ, ತಾನು ಕೇವಲ ಲಾಕ್ ಡೌನ್ ಹೇರುವುದಕ್ಕೆ ಮಾತ್ರ ಸೀಮಿತ. ಜನರ ಮೇಲೆ ಲಾಠಿ ಬೀಸಲು, ಕೇಸು ಹಾಕಿ ದಂಡ ವಸೂಲಿ ಮಾಡಲು ಮತ್ತು ಸರ್ಕಾರದ ಹೊಣೆಗೇಡಿತನ ಪ್ರಶ್ನಿಸುವವರನ್ನು ಲಾಕ್ ಡೌನ್ ನಿಯಮ ಉಲ್ಲಂಘನೆಯ ನೆಪದಲ್ಲಿ ಜೈಲಿಗೆ ಹಾಕಲು ಮಾತ್ರ ತಾನಿರುವುದು ಎಂಬುದನ್ನು ಸರ್ಕಾರ ಪರೋಕ್ಷವಾಗಿ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ.
ಕರೋನಾ ಪ್ರಕರಣಗಳನ್ನು ನಿಭಾಯಸುವ ನಿಟ್ಟಿನಲ್ಲಿ ಆರಂಭದಿಂದಲೂ ತೋರುತ್ತಿರುವ ನಿರ್ಲಕ್ಷ್ಯವನ್ನು ಈಗಲೂ ಮುಂದುವರಿಸಿರುವ ಸರ್ಕಾರ, ಕನಿಷ್ಟ ಎರಡನೇ ಅಲೆ ಆರಂಭವಾಗಿ ಈ ಮೂರು ತಿಂಗಳಲ್ಲಿ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕೂಡ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳನ್ನಾಗಲೀ, ವೈದ್ಯಕೀಯ ಸಿಬ್ಬಂದಿಯನ್ನಾಗಲೀ ವ್ಯವಸ್ಥೆ ಮಾಡಿದ ನಿದರ್ಶನಗಳಿಲ್ಲ. ಇನ್ನು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡಿರುವ ಸೋಂಕನ್ನು ನಿಭಾಯಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಲೂ ಅದೇ ಮುರಿದ ಹಾಸಿಗೆ, ದುರ್ನಾತದ ವಾರ್ಡುಗಳು, ವೈದ್ಯರೇ ಇಲ್ಲದೆ ದುರವಸ್ಥೆ ಮುಂದುವರಿದಿದೆ.
ವೈದ್ಯಕೀಯ ಚಿಕಿತ್ಸೆಯ ಮೂಲಕ ಕರೋನಾ ಹಿಮ್ಮೆಟ್ಟಿಸುವಲ್ಲಿ ಹೀನಾಯವಾಗಿ ಸೋತಿರುವ ಕರ್ನಾಟಕದ ಬಿಜೆಪಿ ಸರ್ಕಾರದ ಸಾಧನಗೆ ತಿಂಗಳುಗಟ್ಟಲೆ ಲಾಕ್ ಡೌನ್ ಬಳಿಕವೂ ನಿಯಂತ್ರಣಕ್ಕೆ ಸಿಗದ ಸೋಂಕು ಮತ್ತು ಸಾವಿನ ಪ್ರಮಾಣಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಇನ್ನು ಕನಿಷ್ಟ ಪ್ರಮಾಣದ ಜನರಿಗಾದರೂ ಎರಡೂ ಡೋಸ್ ಲಸಿಕೆ ನೀಡುವ ಮೂಲಕ ಸಾಮುದಾಯಿಕ ರೋಗನಿರೋಧಕತೆ(ಹರ್ಡ್ ಇಮ್ಯುನಿಟಿ) ಗಳಿಸಿ ಕರೋನಾ ವಿರುದ್ಧ ಮೇಲುಗೈ ಸಾಧಿಸುವ ವಿಷಯದಲ್ಲಾದರೂ ಈ ಸರ್ಕಾರ ಮುಂದಿದೆಯೇ ಎಂದರೆ, ಲಸಿಕಾ ಅಭಿಯಾನ ಆರಂಭವಾಗಿ ಐದೂವರೆ ತಿಂಗಳು ಕಳೆದರೂ ಕನಿಷ್ಟ ಪ್ರಮಾಣದ ಲಸಿಕೆ ವ್ಯವಸ್ಥೆ ಮಾಡುವ ಮೂಲಕ ದೈನಂದಿನ ಲಸಿಕಾ ಪ್ರಗತಿ ಕುಂಠಿತವಾಗದಂತೆ ನೋಡಿಕೊಳ್ಳುವಲ್ಲೂ ಹೀನಾಯ ಸೋಲಾಗಿದೆ. ಈಗಲೂ ರಾಜ್ಯದ 45 ಮತ್ತು 60 ವರ್ಷ ಮೇಲ್ಪಟ್ಟವರು ಕೂಡ ಕನಿಷ್ಟ ಎರಡನೇ ಡೋಸ್ ಲಸಿಕೆ ಸಕಾಲಕ್ಕೆ ಸಿಗದೆ ಲಸಿಕಾ ಕೇಂದ್ರಗಳಿಗೆ ಅಲೆಯುತ್ತಿದ್ದಾರೆ.
ಹೀಗೆ ಕರೋನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದು ಸರ್ಕಾರವಾಗಿ ಪ್ರತಿ ಹಂತದಲ್ಲೂ ವಿಫಲವಾಗಿರುವ ಬಿಜೆಪಿ ಸರ್ಕಾರಕ್ಕೆ ಈಗ ಉಳಿದಿರುವುದು- ಜನ ಬದುಕು ಬಲಿ ಕೊಟ್ಟಾದರೂ ಸರಿ- ಕಠಿಣ ಲಾಕ್ ಡೌನ್ ಹೇರಿ ಕೈಕಟ್ಟಿ ಕೂರುವುದೊಂದೇ ದಾರಿ!
—